ಪ್ರತಿ ಬಾರಿ ಯಾವುದಾದರೂ ರಾಜ್ಯದಲ್ಲಿ ವಿರೋಧ ಪಕ್ಷವೊಂದು ಗೆದ್ದು ಅಧಿಕಾರಕ್ಕೆ ಬಂದಾಗ ಮಾಧ್ಯಮಗಳು ಸೇರಿ ವಿಶ್ಲೇಷಕರು ಒಂದು ಪ್ರಯತ್ನ ಮಾಡುತ್ತಾರೆ. ಅದೇನೆಂದರೆ, ಆ ರಾಜ್ಯದಲ್ಲಿ ನಡೆದ ಪ್ರಯೋಗವನ್ನು ಲೋಕಸಭಾ ಚುನಾವಣೆಯಲ್ಲೂ ಮಾಡಿದರೆ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಸೋಲಿಸಬಹುದು. ಇಂದು ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ ಮೂರನೇ ಬಾರಿ ಅಧಿಕಾರಕ್ಕೆ ಬರುವುದು ಪಕ್ಕಾ ಆಗುತ್ತಿದ್ದಂತೆಯೇ ಕೆಲವು ಇಂಗ್ಲಿಷ್ ಪತ್ರಿಕೆಗಳ ಆನ್ಲೈನ್ ಅವೃತ್ತಿಯಲ್ಲಿ ಖ್ಯಾತನಾಮರು ಇದೇ ರೀತಿಯ ಲೇಖನ ಬರೆಯಲಾರಂಭಿಸಿದ್ದಾರೆ. ಬಂಗಾಲದ ವಿಧಾನಸಭಾ ಚುನಾವಣೆಯ ಉದಾಹರಣೆ ಹೇಗೆ ಬಿಜೆಪಿ ಸೋಲಿಸುವ ಸೂತ್ರ ಬಿಡಿಸಲು ಸಹಾಯಕ ಆಗುತ್ತದೆ ಎಂದು ಹೇಳಲಾರಂಭಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಪತ್ರಕರ್ತ ಆಶುತೋಶ್ ಈಗಾಗಲೇ ಇಂಥದೊಂದು ಲೇಖನ ಬರೆದಿದ್ದಾರೆ.
ಅವರು ಹೇಳುವುದೇನು?
ಅವರ ಪ್ರಕಾರ ಮಮತಾ ಬ್ಯಾನರ್ಜಿ ತಾನು ಹಿಂದು ಎಂದು ಹೇಳಿದ್ದಷ್ಟೇ ಅಲ್ಲ, ತಾನು ಬ್ರಾಹ್ಮಣ ಕುಟುಂಬಕ್ಕೆ ಸೇರಿದಾಕೆ ಎಂದು ಹೇಳುವುದರ ಮೂಲಕ ಬಿಜೆಪಿಯ ಹಿಂದುತ್ವವನ್ನು ಸೋಲಿಸಿದ್ದಾರೆ. ಏಕೆಂದರೆ ಬಿಜೆಪಿಯ ಹಿಂದುತ್ವದ ಹಿಂದೆ ಬರೀ ಹಿಂದೂಗಳಿದ್ದಾರೆ. ಈ ವಿರೋಧ ಪಕ್ಷಗಳ ನಾಯಕರ ಹಿಂದೂ ಅಸ್ಮಿತೆಯ ಹಿಂದೆ ಬೇರೆ ವರ್ಗ ಕೂಡ ಇದೆ. ಹಾಗಾಗಿ ಬಿಜೆಪಿಯನ್ನು ಸೋಲಿಸಬಹುದು ಎಂದು ಹೇಳಿದ್ದಾರೆ.
ಕೆಲವು ಇಂಗ್ಲಿಷ್ ಸುದ್ದಿ ವಾಹಿನಿಗಳ ಆ್ಯಂಕರ್ಗಳು ಕೂಡ ಇದೇ ರೀತಿಯ ವಾದ ಮಂಡಿಸುತ್ತಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಇನ್ನು ಟಿಎಂಸಿಗೆ ಕೆಲಸ ಮಾಡಿ ಇಂದು ನಿವೃತ್ತಿ ಘೋಷಿಸಿರುವ ಪ್ರಶಾಂತ್ ಕಿಶೋರ್ ಮಾತನಾಡಿ, ಭಾರತದಲ್ಲಿ ಪ್ರಜಾಪ್ರಭುತ್ವ ತುಂಬಾ ಸಂಕಷ್ಟದಲ್ಲಿದೆ ಎಂದು ಹೇಳಿದ್ದಾರೆ. ಈಗ ದೇಶದ ಜನರ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಳ್ಳದ ಕೇಂದ್ರ ಸರಕಾರ ಜನವಿರೋಧಿ ನೀತಿಯಿಂದ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದರಿಂದ ಭಾರತಕ್ಕೆ ಸಂಕಷ್ಟ ಕಾದಿದೆ ಎನ್ನುವ ಧ್ವನಿಯಲ್ಲಿ ಮಾತನಾಡಿದ್ದಾರೆ.
ಬಂಗಾಲ ಬೇರೆ ಹೇಗೆ?
ವಿರೋಧ ಪಕ್ಷಗಳು ಗೆದ್ದರೆ ಮಾತ್ರ ಪ್ರಜಾಪ್ರಭುತ್ವ ಸರಿಯಾದ ದಾರಿಯಲ್ಲಿದೆ ಎಂದು ಹೇಳುವ ಎಲ್ಲರ ಕಣ್ಣು ಮೋದಿ ಮೇಲೆ ವಿನಃ ಆ ರಾಜ್ಯಗಳ ಬೆಳವಣಿಗೆ ಅಥವಾ ಅಭಿವೃದ್ಧಿಯ ಕುರಿತಾದದ್ದು ಅಲ್ಲ ಎಂಬುದನ್ನು ಪಶ್ಚಿಮ ಬಂಗಾಲದ ರಾಜಕೀಯವನ್ನು ಸೂಕ್ಷ್ಮವಾಗಿ ನೋಡಿದಾಗ ಗೊತ್ತಾಗುತ್ತದೆ. ಪೀಪಲ್ಸ್ ಪಲ್ಸ್ ಎಂಬ ಸಂಸ್ಥೆಯ ಸಜ್ಜನ್ ಕುಮಾರ್ ಅವರು ಟೈಮ್ಸ್ ಆಫ್ ಇಂಡಿಯಾದಲ್ಲಿ ಬರೆದ ಲೇಖನಗಳನ್ನು ಓದಿದಾಗ ಆಶ್ಚರ್ಯವುಂಟಾಗುತ್ತದೆ.
ಯಾವ ಕಾರಣಕ್ಕೆ ಒಂದು ವರ್ಗ ಮೋದಿಯವರನ್ನು ವಿರೋಧಿಸುತ್ತದೆಯೋ ಅದಕ್ಕೂ ಮೀರಿದ ಪ್ರಜಾಪ್ರಭುತ್ವ ವಿರೋಧಿ ತಂತ್ರಗಾರಿಕೆಯನ್ನು ದೀದಿ ಪಡೆ ಒಂದು ವರ್ಷದ ಹಿಂದೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವರೀತಿಯ ಹಿಂಸಾಚಾರ ನಡೆಸಿತ್ತು ಎಂಬುದನ್ನು ಸವಿವರವಾಗಿ ಬರೆದಿದ್ದಾರೆ. ಏಕೆಂದರೆ ಈ ರೋಮ್ಯಾಂಟಿಕ್ ಪ್ರಜಾಪ್ರಭುತ್ವವಾದಿಗಳು ಮೋದಿ ಸೋಲಿಸುವ ಬಗ್ಗೆ ಬರೆದಷ್ಟನ್ನು ಪಶ್ಚಿಮ ಬಂಗಾಲದಂಥ ಒಂದು ರಾಜ್ಯದ ಅಭಿವೃದ್ಧಿ ಬಗ್ಗೆಯಾಗಲೀ ಅಥವಾ ಅಲ್ಲಿನ ಪ್ರಜಾಪ್ರಭುತ್ವದ ಜೀವಂತಿಕೆಯನ್ನು ವಿಮರ್ಶೆ ಮಾಡದಿರುವುದು ವ್ಯಂಗ್ಯವಲ್ಲದೇ ಇನ್ನೇನು?
ಬಂಗಾಲದ ರಾಜಕೀಯ ಧ್ರುವೀಕರಣ
ಈ ಮೊದಲು ಪಶ್ಚಿಮ ಬಂಗಾಲವನ್ನು ಆಳಿದ ಕಮ್ಯುನಿಷ್ಟರು ಇರಬಹುದು ಆಮೇಲೆ ಬಂದ ಮಮತಾ ಬ್ಯಾನರ್ಜಿ ಇರಬಹುದು, ಅವರ ರಾಜಕೀಯದ ಗುಟ್ಟೇನು ಎಂದರೆ ಮೇಲ್ವರ್ಗದ ಜನರ ಕೈಯಲ್ಲಿ ಅಧಿಕಾರವನ್ನು ಇರುವಂತೆ ನೋಡಿಕೊಂಡಿರುವುದು. ಬಿಜೆಪಿ ಮತ್ತು ಮೋದಿ ಬಗ್ಗೆ ಇದೇ ಮಾತನ್ನು ಹೇಳುವ ವಿಶ್ಲೇಷಕರು ದೀದಿ ಬಗ್ಗೆ ಈ ರೀತಿ ಹೇಳದಿರುವುದು ಅವರ ಟೊಳ್ಳು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಪ್ರಚುರಪಡಿಸುತ್ತದೆ.
ಈ ಬಾರಿ ಚುನಾವಣೆಯ ಸುದೀರ್ಘ ವಿಶ್ಲೇಷಣೆಗೆ ಚುನಾವಣಾ ಆಯೋಗ ಮತಗಳ ವಿವರವನ್ನು ಬಿಡುಗಡೆ ಮಾಡಬೇಕು. ಆದರೆ ಬಂಗಾಲವನ್ನು ಕುತೂಹಲದಿಂದ ನೋಡುತ್ತಿರುವವರು ಎರಡು ಪ್ರಮುಖ ಅಂಶಗಳನ್ನು ಎತ್ತಿ ತೋರಿಸುತ್ತಾರೆ. ಒಂದು, ಬಂಗಾಲದಲ್ಲಿ ಬಿಜೆಪಿ ಕೆಳವರ್ಗದ ಅಂದರೆ ಎಸ್ಸಿ, ಎಸ್ಟಿ ವರ್ಗದ ಜನರನ್ನು ಮತ್ತು ನಾಯಕರನ್ನು ಆಕರ್ಷಿಸುತ್ತಿದ್ದುದು ನಿಜ. ಇನ್ನೊಂದು ಅಂಶ, ಕಮ್ಯುನಿಸ್ಟರು ಬಿಟ್ಟಿರುವ ರಾಜಕೀಯ ನಿರ್ವಾತದಲ್ಲಿ ಈಗ ಬಿಜೆಪಿ ಬೇರು ಬಿಡುತ್ತಿದೆ. ಮೇಲ್ನೋಟಕ್ಕೆ ಲಕ್ಷಾಂತರ ಕಮ್ಯೂನಿಸ್ಟ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿಲ್ಲ. ಬೆಂಗಾಲಿ ಪತ್ರಕರ್ತ ರಿತ್ವಿಕ್ ಮುಖರ್ಜಿ ಟಿವಿ9 ಡಿಜಿಟಲ್ಗೆ ಹೇಳಿದ ಪ್ರಕಾರ, ಕೋಮುವಾದದ ಆಧಾರವಿಟ್ಟುಕೊಂಡು ಕಮ್ಯೂನಿಸ್ಟ್ ಕಾರ್ಯಕರ್ತರು ಟಿಎಂಸಿಗೆ ಮತ ಹಾಕಿದಂತೆ ಕಾಣುತ್ತಿದೆ. ಅಂದರೆ, ಮಮತಾ ಬ್ಯಾನರ್ಜಿ ಹಿಂದೂ ಎಂದು ಹೇಳಿದ್ದಾಗಲಿ, ತಾನು ಬ್ರಾಹ್ಮಣ ಎಂದು ಹೇಳಿದ್ದಾಗಲೀ ಕೆಲಸ ಮಾಡಿಲ್ಲ ಎಂದಾಯಿತು. ಅದರ ಜೊತೆಗೆ ಮುಸ್ಲಿಂ ಮತಗಳು ಕೂಡ ದೀದಿಗೆ ಬಂದಿವೆ. ಹಾಗಾಗಿ ಟಿಎಂಸಿ 200ರ ಗಡಿ ದಾಟಿರಬಹುದು ಎಂಬ ಪ್ರಾಥಮಿಕ ಮಾಹಿತಿ ಹಂಚಿಕೊಂಡಿದ್ದಾರೆ.
ಚುನಾವಣಾ ಆಯೋಗದ ಪಾತ್ರ
ಚುನಾವಣಾ ಆಯೋಗ ಬಿಜೆಪಿಯ ಬಿ ಟೀಂನಂತೆ ಕೆಲಸ ಮಾಡಿದೆ ಎಂಬ ಆರೋಪ ಇದೆ. ಆದರೆ, ಎಂಟು ಹಂತದಲ್ಲಿ ನಡೆದ ಚುನಾವಣೆಯಲ್ಲಿ ಕೊಲ್ಕೊತ್ತಾ ಬಿಟ್ಟು ಹೊರಗಿನ ಕ್ಷೇತ್ರಗಳಲ್ಲಿ ಶೇ 85ರಷ್ಟು ಮತದಾನ ನಡೆದಿತ್ತು. ಅದರ ಅರ್ಥ ಮತದಾರರು ಖುಷಿಯಿಂದ ಭಯ ಬಿಟ್ಟು ಮತಗಟ್ಟೆಗೆ ಬಂದು ಮತ ಹಾಕಿದ್ದರು. ಹಾಗೆ ಬಂದ ಕಮ್ಯುನಿಸ್ಟ್ ಕಾರ್ಯಕರ್ತರಲ್ಲಿ ಜಾಸ್ತಿ ಜನ ಟಿಎಂಸಿಗೆ ಮತ ಹಾಕಿರುವಂತಿದೆ ಎಂದು ಮುಖರ್ಜಿ ಹೇಳುತ್ತಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಸಾಧನೆ
ಇದನ್ನೂ ಓದಿ: Prashant Kishore: ರಾಜಕೀಯ ಪಕ್ಷಗಳಿಗೆ ಸಲಹೆ ನೀಡುವ ಕೆಲಸಕ್ಕೆ ಗುಡ್ಬೈ ಹೇಳಿದ ಪ್ರಶಾಂತ್ ಕಿಶೋರ್
(Communists and upper caste Hindus and Muslims help Mamata Banerjee win third time in West Bengal assembly elections 2021)
Published On - 9:54 pm, Sun, 2 May 21