Navjot Singh Sidhu: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ನಾಳೆ ಪಟಿಯಾಲ ಜೈಲಿನಿಂದ ಬಿಡುಗಡೆ

ರಸ್ತೆ ರಂಪಾಟ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾದ ನಂತರ ಕಳೆದ ವರ್ಷ ಮೇ 20 ರಂದು ಜೈಲು ಶಿಕ್ಷೆಗೊಳಗಾದ ಸಿಧು ಅವರ ಉತ್ತಮ ಒಳ್ಳೆಯ ನಡವಳಿಕೆಯಿಂದ ಅವರನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಲಾಗುತ್ತಿದೆ

Navjot Singh Sidhu: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ನಾಳೆ ಪಟಿಯಾಲ ಜೈಲಿನಿಂದ ಬಿಡುಗಡೆ
ನವಜೋತ್ ಸಿಂಗ್ ಸಿಧು

Updated on: Mar 31, 2023 | 2:58 PM

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು (Navjot Singh Sidhu) ಶನಿವಾರ ಪಟಿಯಾಲ ಜೈಲಿನಿಂದ(Patiala Jail ) ಬಿಡುಗಡೆಯಾಗಲಿದ್ದಾರೆ ಎಂದು ಪಂಜಾಬ್ (Punjab) ಮಾಜಿ ಸಚಿವರ ಅಧಿಕೃತ ಹ್ಯಾಂಡಲ್‌ನ ಟ್ವಿಟರ್ ಪೋಸ್ಟ್ ಶುಕ್ರವಾರ ತಿಳಿಸಿದೆ. ಸರ್ದಾರ್ ನವಜೋತ್ ಸಿಂಗ್ ಸಿಧು ಅವರು ನಾಳೆ ಪಟಿಯಾಲಾ ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಈ ಮೂಲಕ ಎಲ್ಲರಿಗೂ ತಿಳಿಸುತ್ತಿದ್ದೇವೆ ಎಂದು ಎಂದು ಟ್ವೀಟ್ ನಲ್ಲಿ ಹೇಳಲಾಗಿದೆ.ರಸ್ತೆ ರಂಪಾಟ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾದ ನಂತರ ಕಳೆದ ವರ್ಷ ಮೇ 20 ರಂದು ಜೈಲು ಶಿಕ್ಷೆಗೊಳಗಾದ ಸಿಧು ಅವರ ಉತ್ತಮ ಒಳ್ಳೆಯ ನಡವಳಿಕೆಯಿಂದ ಅವರನ್ನು ಅವಧಿಗೆ ಮುನ್ನ ಬಿಡುಗಡೆ ಮಾಡಲಾಗುತ್ತಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಜೈಲು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಅವರು ಮೇ 16 ರಂದು ಬಿಡುಗಡೆಯಾಗಬೇಕಿತ್ತು ಎಂದು ವರದಿ ತಿಳಿಸಿದೆ.

ಪಂಜಾಬ್ ಜೈಲ್ ಮ್ಯಾನುಯಲ್ ಪ್ರಕಾರ, ಪ್ರತಿ ಖೈದಿಗಳಿಗೆ ತಿಂಗಳಿಗೆ ನಾಲ್ಕು ದಿನಗಳ ಶಿಕ್ಷೆ ಕಡಿಮೆ ನೀಡಬಹುದು ಎಂದು ಜೈಲು ಅಧಿಕಾರಿಯನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಇದು ಮಾರ್ಚ್ ಅಂತ್ಯದ ವೇಳೆಗೆ ಸಿಧುಗೆ ಕನಿಷ್ಠ 40 ದಿನಗಳ ಕಡಿಮೆ ಶಿಕ್ಷೆ ನೀಡುತ್ತದೆ.

ಡಿಸೆಂಬರ್ 27, 1988 ರಂದು, ಸಿಧು ಮತ್ತು ಅವರ ಸ್ನೇಹಿತ ರೂಪಿಂದರ್ ಸಿಂಗ್ ಸಂಧು, 65 ವರ್ಷದ ಗುರ್ನಾಮ್ ಸಿಂಗ್ ಎಂಬ ವ್ಯಕ್ತಿಯೊಂದಿಗೆ ಜಗಳವಾಡಿದರು. ಕೋಪದ ಭರದಲ್ಲಿ ಸಿಧು ಗುರ್ನಾಮ್ ಸಿಂಗ್ ನನ್ನು ಥಳಿಸಿ ಸ್ಥಳದಿಂದ ಪರಾರಿಯಾಗಿದ್ದರು. ಇದಾದ ನಂತರ ಗುರ್ನಾಮ್ ಸಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಇದನ್ನೂ ಓದಿ:Telangana Assembly Elections: ಕಡಿಮೆ ಅಂತರದಿಂದ ಬಿಆರ್​ಎಸ್ ಗೆದ್ದಿದ್ದ 34 ವಿಧಾನಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟ ಕೆಸಿಆರ್

ಏನಿದು ಪ್ರಕರಣ?
ಡಿಸೆಂಬರ್ 27, 1988 ರಂದು ಸಿಧು ಪಟಿಯಾಲ ನಿವಾಸಿ ಗುರ್ನಾಮ್ ಸಿಂಗ್ ಅವರೊಂದಿಗೆ ಪಾರ್ಕಿಂಗ್ ಸ್ಥಳದ ಬಗ್ಗೆ ಜಗಳವಾಡಿದರು. ಸಿಧು ಮತ್ತು ಅವರ ಸಹವರ್ತಿ ರೂಪಿಂದರ್ ಸಿಂಗ್ ಸಂಧು ಅವರು ಗುರ್ನಾಮ್ ಸಿಂಗ್ ಅವರನ್ನು ಅವರ ಕಾರಿನಿಂದ ಎಳೆದುಕೊಂಡು ಹೊಡೆದಿದ್ದುಗುರ್ನಾಮ್ ಸಾವಿಗೀಡಾಗಿದ್ದರು. 1999 ರಲ್ಲಿ, ಪಟಿಯಾಲದ ಸೆಷನ್ಸ್ ನ್ಯಾಯಾಲಯವು ಸಿಧು ಮತ್ತು ಅವರ ಸಹಚರರನ್ನು ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಖುಲಾಸೆ ಮಾಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ಮೇಲೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ 2006 ರಲ್ಲಿ ಸಿಧುವನ್ನು ತಪ್ಪಿತಸ್ಥ ನರಹತ್ಯೆಯ ಅಪರಾಧಿ ಎಂದು ಘೋಷಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. 2018 ರಲ್ಲಿ ಸಿಧು ಸುಪ್ರೀಂಕೋರ್ಟ್‌ ಮೊರೆ ಹೋದರು. ಒಂದೇ ಏಟಿಗೆ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಯಾವುದೇ ಪುರಾವೆಗಳಿಲ್ಲ ಎಂದು ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದ ಸುಪ್ರೀಂಕೋರ್ಟ್ ಹಿರಿಯ ನಾಗರಿಕರಿಗೆ ನೋವುಂಟು ಮಾಡಿದ ಕಾರಣಕ್ಕೆ ಸಿಧುವನ್ನು ತಪ್ಪಿತಸ್ಥ ಎಂದು ಪರಿಗಣಿಸಿತು. ಸಿಧುಗೆ ಜೈಲು ಶಿಕ್ಷೆ ಮತ್ತು ₹ 1,000 ದಂಡ ವಿಧಿಸಲಾಯಿತು.

ಸಿಧು ಅವರ ಸಹಾಯಕ ರೂಪಿಂದರ್ ಸಂಧು ಅವರು ಸ್ಥಳದಲ್ಲಿ ಹಾಜರಿದ್ದಕ್ಕೆ ಸರಿಯಾದ ಪುರಾವೆಗಳಿಲ್ಲ ಎಂದು ಸುಪ್ರೀಂಕೋರ್ಟ್ ಅವರನ್ನು ಎಲ್ಲಾ ಆರೋಪಗಳಿಂದ ಖುಲಾಸೆಗೊಳಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:39 pm, Fri, 31 March 23