ದೆಹಲಿಯಲ್ಲಿ ಕೊವಿಡ್ ಪ್ರಕರಣ ಹೆಚ್ಚಳ, ಮೇ 3ರವರೆಗೆ ಲಾಕ್​ಡೌನ್ ವಿಸ್ತರಣೆ: ಅರವಿಂದ್ ಕೇಜ್ರಿವಾಲ್

|

Updated on: Apr 25, 2021 | 1:45 PM

Delhi Lockdown: ಲಾಕ್​ಡೌನ್ ನಿಯಮಗಳೆಲ್ಲವೂ ಹಿಂದಿನಂತೆಯೇ ಇರಲಿದೆ. ಅಗತ್ಯ ವಸ್ತುಗಳು ಮತ್ತು ಸರ್ಕಾರಿ ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸಲಿದೆ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಮನೆಯಿಂದಲೇ ಕೆಲಸ ಮಾಡಬೇಕು. ಮಾಲ್,ಸ್ಪಾ, ಜಿಮ್ ಮತ್ತು ಆಡಿಟೊರಿಯಂ ಮುಚ್ಚಲಾಗುವುದು. ಆಹಾರ ವಸ್ತು, ದವಸ ಧಾನ್ಯ ಮತ್ತು ಹಾಲಿನ ಅಂಗಡಿ ತೆರೆದಿರಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿಯಲ್ಲಿ ಕೊವಿಡ್ ಪ್ರಕರಣ ಹೆಚ್ಚಳ, ಮೇ 3ರವರೆಗೆ ಲಾಕ್​ಡೌನ್ ವಿಸ್ತರಣೆ: ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Follow us on

ದೆಹಲಿ: ರಾಷ್ಚ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹೇರಿರುವ ಲಾಕ್​ಡೌನ್ ನಿರ್ಬಂಧವನ್ನು ಮೇ 3ರವರೆಗೆ ವಿಸ್ತರಿಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಹೇಳಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್ ,ದೆಹಲಿಯಲ್ಲಿ ಕೊವಿಡ್ 19 ವ್ಯಾಪಕವಾಗಿ ಹರಡುತ್ತಿದೆ. ಇದನ್ನು ಗಮನದಲ್ಲಿರಿಸಿ, ನಾವು 6 ದಿನಗಳ ಲಾಕ್ ಡೌನ್ ಘೋಷಿಸಿದ್ದೆವು. ಅದು ನಾಳೆ ಬೆಳಗ್ಗೆ 5ಗಂಟೆಗೆ ಮುಕ್ತಾಯಗೊಳ್ಳಲಿದೆ. ಕೊವಿಡ್-19 ವಿರುದ್ಧದ ಹೋರಾಟದಲ್ಲಿ ಲಾಕ್​ಡೌನ್ ಕೊನೆಯ ಅಸ್ತ್ರ. ಪ್ರಸ್ತುತ ಇಲ್ಲಿನ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಲಾಕ್​ಡೌನ್ ವಿಸ್ತರಣೆ ಮಾಡಬೇಕು ಎಂದು ಹಲವಾರು ಮಂದಿ ಸಲಹೆ ನೀಡಿದ್ದಾರೆ. ಹಾಗಾಗಿ ಲಾಕ್​ಡೌನ್ ಇನ್ನೊಂದು ವಾರ ಅಂದರೆ ಮೇ 3 ಸೋಮವಾರ ಬೆಳಗ್ಗೆ 5 ಗಂಟೆಯ ವರೆಗೆ ವಿಸ್ತರಣೆ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಲಾಕ್​ಡೌನ್ ನಿಯಮಗಳೆಲ್ಲವೂ ಹಿಂದಿನಂತೆಯೇ ಇರಲಿದೆ. ಅಗತ್ಯ ವಸ್ತುಗಳು ಮತ್ತು ಸರ್ಕಾರಿ ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸಲಿದೆ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಮನೆಯಿಂದಲೇ ಕೆಲಸ ಮಾಡಬೇಕು. ಮಾಲ್,ಸ್ಪಾ, ಜಿಮ್ ಮತ್ತು ಆಡಿಟೊರಿಯಂ ಮುಚ್ಚಲಾಗುವುದು. ಆಹಾರ ವಸ್ತು, ದವಸ ಧಾನ್ಯ ಮತ್ತು ಹಾಲಿನ ಅಂಗಡಿ ತೆರೆದಿರಲಿದೆ.

ಭಾನುವಾರ ದೆಹಲಿಯಲ್ಲಿ ಕೊವಿಡ್ ಪಾಸಿಟಿವಿಟಿ ದರ ಶೇ 36- 37ಕ್ಕೇರಿದೆ. ಕಳೆದ ಒಂದೆರಡು ದಿನಗಳಲ್ಲಿ ಪಾಸಿಟಿವಿಟಿ ದರ ಶೇ 30ಕ್ಕಿಂತ ಕೆಳಗೆಹೋಗಿತ್ತು. ಕೊವಿಡ್ 19 ಮುಗಿಯಿತು ಎಂದು ನಾನು ಹೇಳುವುದಿಲ್ಲ. ನಾವು ಇನ್ನಷ್ಟು ದಿನಗಳ ಕಾಲ ನಿಗಾ ವಹಿಸಬೇಕಿದೆ. ಪಾಸಿಟಿವಿಟಿ ದರ ಮೇಲೇರಬಹುದು ,ಕೆಳಗಿಳಿಯಲೂ ಬಹುದು ಎಂದಿದ್ದಾರೆ ಕೇಜ್ರಿವಾಲ್.

ಕಳೆದ ಕೆಲವು ದಿನಗಳಿಂದ ರಾಷ್ಟ್ರ ರಾಜಧಾನಿ ಎದುರಿಸುತ್ತಿರುವ ತೀವ್ರ ಪ್ರಮಾಣದ ಆಮ್ಲಜನಕದ ಕೊರತೆಯನ್ನು ಉಲ್ಲೇಖಿಸಿದ ಕೇಜ್ರಿವಾಲ್, ಪ್ರಸ್ತುತ 700 ಟನ್ (ಮೆಟ್ರಿಕ್ ಟನ್) ಆಮ್ಲಜನಕದ ಅಗತ್ಯವಿದೆ. ಕೇಂದ್ರ ಸರ್ಕಾರ ಈವರೆಗೆ 490 ಟನ್ ಹಂಚಿಕೆ ಮಾಡಿದೆ. ಆದರೆ, ಪೂರ್ಣ ಹಂಚಿಕೆ ಇನ್ನೂ ದೆಹಲಿಗೆ ತಲುಪಿಲ್ಲ. ನಿನ್ನೆ, 330-335 ಟನ್ ಆಮ್ಲಜನಕ ದೆಹಲಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ. 700 ಟನ್ ಅವಶ್ಯಕತೆಯಿದೆ ಮತ್ತು ಇದುವರೆಗೆ ಕೇವಲ 330-335 ಟನ್ ಮಾತ್ರ ಬಂದಿದೆ. ಆಸ್ಪತ್ರೆಗಳಲ್ಲಿನ ಆಮ್ಲಜನಕದ ಕೊರತೆಗೆ ಇದು ಒಂದು ಪ್ರಮುಖ ಕಾರಣವಾಗಿದೆ ಎಂದಿದ್ದಾರೆ.


ಆಮ್ಲಜನಕದ ಪೂರೈಕೆಯ ಉತ್ತಮ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ದೆಹಲಿ ಸರ್ಕಾರವು ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಇದನ್ನು ಆಮ್ಲಜನಕ ತಯಾರಕರು, ಪೂರೈಕೆದಾರರು ಮತ್ತು ಆಸ್ಪತ್ರೆಗಳು ಅಪ್ ಡೇಟ್ ಮಾಡುತ್ತವೆ.


ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ ದೆಹಲಿಯಲ್ಲಿ ಇದುವರೆಗೆ 1,004,782 ಕೊವಿಡ್ -19 ರೋಗ ಪ್ರಕರಣಗಳು ವರದಿ ಆಗಿದ್ದು 13,898 ಸಾವು ಸಂಭವಿಸಿದೆ. ಶನಿವಾರ 357 ಸಾವುಗಳು ವರದಿಯಾಗಿವೆ. ಇದು ಕಳೆದ ವರ್ಷ ಸಾಂಕ್ರಾಮಿಕ ರೋಗದ ಪ್ರಾರಂಭದಿಂದೀಚೆಗೆ ಒಂದೇ ದಿನದಲ್ಲಿ ಅತೀ ಹೆಚ್ಚು ಪ್ರಕರಣ ವರದಿಯಾದ ದಿನವಾಗಿದೆ. 24,103 ಜನರಿಗೆ ಕೊವಿಡ್ ದೃಢಪಟ್ಟಿದ್ದು, 898,000 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿ ಸಕ್ರಿಯ ಪ್ರಕರಣಗಳು 93,080 ಕ್ಕೆ ಏರಿದೆ.

ಇದನ್ನೂ ಓದಿ: Coronavirus in India Update: ಸತತ ನಾಲ್ಕನೇ ದಿನ ದೇಶದಲ್ಲಿ 3 ಲಕ್ಷ ದಾಟಿದ ಹೊಸ ಕೊವಿಡ್ ಪ್ರಕರಣ, 2,767 ಮಂದಿ ಸಾವು

(Coronavirus Delhi extends Covid 19 Lockdown till May 3 says CM Arvind Kejriwal)