ಕಳೆದ ವರ್ಷ ಪರಿಚಯಿಸಲಾದ ವಾಟ್ಸಾಪ್‌ನ (WhatsApp) ಗೌಪ್ಯತೆ ನೀತಿಯ ಕುರಿತು ಭಾರತೀಯ ಸ್ಪರ್ಧಾ ಆಯೋಗ (CCI) ಆದೇಶಿಸಿದ ತನಿಖೆಗೆ ತಡೆಯಾಜ್ಞೆ ನೀಡಲು ದೆಹಲಿ ಹೈಕೋರ್ಟ್ ಗುರುವಾರ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ವಿಭಾಗೀಯ ಪೀಠವು ವಾಟ್ಸಾಪ್ ಮತ್ತು ಅದರ ಮಾತೃ ಸಂಸ್ಥೆ ಫೇಸ್‌ಬುಕ್‌ನ ಮನವಿಗಳನ್ನು ವಜಾಗೊಳಿಸಿದೆ.ಈ ಹಿಂದೆ ತನಿಖೆಯನ್ನು ಸ್ಥಗಿತಗೊಳಿಸಲು ನಿರಾಕರಿಸಿದ್ದ ಏಕಸದಸ್ಯ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ವಾಟ್ಸಾಪ್ ಮತ್ತು ಫೇಸ್‌ಬುಕ್ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದವು. ಸರ್ವಪಕ್ಷಗಳ ವ್ಯಾಪಕ ವಾದವನ್ನು ಆಲಿಸಿದ ವಿಭಾಗೀಯ ಪೀಠ ಜುಲೈ 25ರಂದು ತನ್ನ ಆದೇಶಗಳನ್ನು ಕಾಯ್ದಿರಿಸಿತ್ತು.
ಜನವರಿಯಲ್ಲಿ, ಸ್ಪರ್ಧಾ ಆಯೋಗವು ವಾಟ್ಸಾಪ್‌ನ ಹೊಸ ಗೌಪ್ಯತೆ ನೀತಿಯ ಮೇಲೆ ಭದ್ರತಾ ಕಾಳಜಿಗಳನ್ನು ಉಲ್ಲೇಖಿಸಿ ಸಲ್ಲಿಸಲಾದ ಮಾಧ್ಯಮ ವರದಿಗಳ ಆಧಾರದ ಮೇಲೆ ಸಾಮಾಜಿಕ ಮಾಧ್ಯಮ ದೈತ್ಯರ ವಿರುದ್ಧ ತನ್ನದೇ ಆದ ತನಿಖೆಯನ್ನು ಪ್ರಾರಂಭಿಸಿತು.
ಈ ವರದಿಗಳಲ್ಲಿ ಅತಿಯಾದ ಮಾಹಿತಿ ಸಂಗ್ರಹಣೆ ಮತ್ತು ಗ್ರಾಹಕರ ಮಾಹಿತಿಯ ಅನಧಿಕೃತ ಹಂಚಿಕೆ ಆರೋಪಗಳನ್ನು ಮಾಡಲಾಗಿದೆ. ವಾಟ್ಸಾಪ್ ಮತ್ತು ಅದರ ಮಾತೃಸಂಸ್ಥೆ ಫೇಸ್‌ಬುಕ್ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಸಿಸಿಐ ಆರೋಪಿಸಿತ್ತು.
2021 ರಲ್ಲಿ ವಾಟ್ಸಾಪ್‌ನ ಹೊಸ ನವೀಕರಿಸಿದ ಗೌಪ್ಯತೆ ನೀತಿಯ ಕುರಿತು ಮಾರ್ಚ್‌ನಲ್ಲಿ ಆದೇಶಿಸಲಾದ ತನಿಖೆಗೆ ಸಂಬಂಧಿಸಿದಂತೆ ಕೆಲವು ಮಾಹಿತಿಯನ್ನು ಒದಗಿಸುವಂತೆ ವಾಟ್ಸಾಪ್ ನ್ನು ಸಿಸಿಐ ಹೊರಡಿಸಿದ ನೋಟಿಸ್‌ಗೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿತ್ತು. ಜುಲೈ 22 ರಂದು ನಡೆದ ಕೊನೆಯ ವಿಚಾರಣೆಯಲ್ಲಿ, ಮೆಟಾ (ಹಿಂದೆ ಫೇಸ್‌ಬುಕ್) ಇತ್ತೀಚಿನ ವಾಟ್ಸಾಪ್ ಗೌಪ್ಯತಾ ನೀತಿಯ ಸಿಸಿಐ ತನಿಖೆಯನ್ನು ವಿರೋಧಿಸಿ, ತ್ವರಿತ ಸಂದೇಶ ಕಳುಹಿಸುವ ವೇದಿಕೆಯನ್ನು ಹೊಂದಿರುವ ಕಾರಣ ಮಾತ್ರ ಸಿಸಿಐ ಈ ವಿಷಯವನ್ನು ತನಿಖೆ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ಗೆ ತಿಳಿಸಿತ್ತು.
ವಿಚಾರಣೆಯ ಸಂದರ್ಭದಲ್ಲಿ ಮೆಟಾ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ ಎರಡು ವೇದಿಕೆಗಳು ವಿಭಿನ್ನ ಘಟಕಗಳಾಗಿವೆ, 2014 ರಲ್ಲಿ ಫೇಸ್‌ಬುಕ್ ವಾಟ್ಸಾಪ್ ಅನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಹೇಳಿದ್ದರು. ಈ ವಿಷಯದಲ್ಲಿ ಫೇಸ್‌ಬುಕ್‌ಗೆ ಸಂಬಂಧಿಸಿದಂತೆ ಯಾವುದೇ ವಿಷಯ ಇಲ್ಲ ಎಂದು ವಾದಿಸಿದ ರೋಹ್ಟಗಿ, ಇದು ಸುಮೊಟೊ ನ್ಯಾಯವ್ಯಾಪ್ತಿ ಮತ್ತು ತನಿಖೆಯನ್ನು ಪ್ರಾರಂಭಿಸಲು ಯಾವುದೇ ವಿಷಯವಿಲ್ಲ ಎಂದು ಹೇಳಿದ್ದಾರೆ.
Published On - 10:56 am, Thu, 25 August 22