ಮಗನೇ ನಮ್ಮ ಪ್ರಪಂಚ, ಅವನೇ ಇಲ್ಲದ ಮೇಲೆ ನಾವ್ಯಾಕೆ, ಮಗನ ಸಾವಿನ ನೋವಿನಿಂದ ದಂಪತಿ ಆತ್ಮಹತ್ಯೆ

ಛತ್ತೀಸ್‌ಗಢದಲ್ಲಿ ಮಗನ ಸಾವಿನ ದುಃಖ ತಾಳಲಾರದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಸ್ತೆ ಅಪಘಾತದಲ್ಲಿ ತಮ್ಮ 21 ವರ್ಷದ ಮಗ ಆದಿತ್ಯನನ್ನು ಕಳೆದುಕೊಂಡ ಕೃಷ್ಣ ಮತ್ತು ರಮಾ ಬಾಯಿ, "ಅವನೇ ನಮ್ಮ ಪ್ರಪಂಚ" ಎಂದು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಅಸಹನೀಯ ನೋವು ಮತ್ತು ಭರಿಸಲಾಗದ ನಷ್ಟದ ಈ ಘಟನೆ ಸಮಾಜದಲ್ಲಿ ಸಂಚಲನ ಮೂಡಿಸಿದೆ.

ಮಗನೇ ನಮ್ಮ ಪ್ರಪಂಚ, ಅವನೇ ಇಲ್ಲದ ಮೇಲೆ ನಾವ್ಯಾಕೆ, ಮಗನ ಸಾವಿನ ನೋವಿನಿಂದ ದಂಪತಿ ಆತ್ಮಹತ್ಯೆ
ಮೃತ ದಂಪತಿ
Image Credit source: NDTV

Updated on: Feb 17, 2026 | 9:59 AM

ಛತ್ತೀಸ್​ಗಢ, ಫೆಬ್ರವರಿ 17: ಮಗನ ಸಾವಿನ ನೋವಿನಿಂದ ಹೊರಬರಲಾರದೆ ಪೋಷಕರು ಆತ್ಮಹತ್ಯೆ(Suicide)ಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಛತ್ತೀಸ್​ಗಢದಲ್ಲಿ ನಡೆದಿದೆ. ಅಪಘಾತವೊಂದರಲ್ಲಿ ಈ ದಂಪತಿ ಮಗನನ್ನು ಕಳೆದುಕೊಂಡಿದ್ದರು. ಆತನೇ ನಮ್ಮ ಪ್ರಪಂಚವಾಗಿದ್ದ, ಈಗ ಅವನೇ ಇಲ್ಲದ ಮೇಲೆ ನಾವು ಬದುಕಿ ಪ್ರಯೋಜನವೇನು ಎಂದು ಡೆತ್ ನೋಟ್ ಬರೆದಿಟ್ಟು ದಂಪತಿ ಸಾವಿಗೆ ಶರಣಾಗಿದ್ದಾರೆ.

ಮನೆಯ ಅಂಗಳದ ಬೇವಿನ ಮರದಲ್ಲಿ ಕೃಷ್ಣ ಪಟೇಲ್ ಮತ್ತು ಅವರ ಪತ್ನಿ ರಮಾ ಬಾಯಿ ಅವರ ಶವಗಳು ನೇತಾಡುತ್ತಿದ್ದವು. ಕೇವಲ ಅವರ ಕುತ್ತಿಗೆ ಸೀರೆಯ ಕುಣಿಕೆಯಿಂದ ಬಂಧಿಸಲ್ಪಟ್ಟಿರಲಿಲ್ಲ, ಬದಲಾಗಿ ಅವರು ಇನ್ನು ಮುಂದೆ ಹೊರಲು ಸಾಧ್ಯವಾಗದ ದುಃಖದಿಂದ ಬಂಧಿಸಲ್ಪಟ್ಟಿದ್ದವು.

ಜಂಜ್‌ಗೀರ್-ಚಂಪಾ ಜಿಲ್ಲೆಯ ಶಿವರಿನಾರಾಯಣ ಪೊಲೀಸ್ ಠಾಣೆ ಪ್ರದೇಶದಲ್ಲಿ, ಈ ಘಟನೆ ನಡೆದಿದೆ. ಮನೆಯಲ್ಲಿ ನಿಶ್ಯಬ್ಧತೆ ಇತ್ತು. ಜನರು ಒಟ್ಟುಗೂಡಿದರು ಮನೆಯ ಹೊರಗೆ ಇಬ್ಬರ ಶವ ಕಂಡು ಬೆಚ್ಚಿಬಿದ್ದಿದ್ದರು. ದಂಪತಿ ನಾಲ್ಕು ಪುಟಗಳ ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದರು. ಜತೆಗೆ ವಿಡಿಯೋ ಸಂದೇಶವನ್ನು ಕೂಡ ಮಾಡಿಟ್ಟಿದ್ದರು. ಅವರ ಮಾತುಗಳು ಇಡೀ ಕುಟುಂಬದವರನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ.

ಅವರಿಗೆ ಇದ್ದಿದ್ದು ಒಬ್ಬನೇ ಮಗ ಆತನಿಗೆ 21 ವರ್ಷ ವಯಸ್ಸಾಗಿತ್ತು, 2024ರಲ್ಲಿ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ವೃತ್ತಿಯಲ್ಲಿ ಮೇಸ್ತ್ರಿ ಆಗಿದ್ದ ಕೃಷ್ಣ (48) ಮತ್ತು ರಮಾ ಬಾಯಿ (47)ಗೆ ಆದಿತ್ಯನೇ ಪ್ರಪಂಚವಾಗಿದ್ದ. ಅಪಘಾತದ ಬಳಿಕ ಮನೆಗೆ ಬರ ಸಿಡಿಲು ಬಡಿದಂತಾಗಿತ್ತು. ಆದಿತ್ಯ ದೇವಸ್ಥಾನದ ಕೆಲಸ ಮತ್ತು ಯಜ್ಞಕ್ಕೆ ಸಹಾಯ ಮಾಡಲು ಗ್ರಾಮದ ಪುರೋಹಿತರೊಂದಿಗೆ ಹೊರಗೆ ಹೋದ ದಿನದ ಬಗ್ಗೆ ಕೃಷ್ಣ ಬರೆದಿದ್ದಾರೆ.

ಮತ್ತಷ್ಟು ಓದಿ: ಮೂರು ಮಕ್ಕಳ ಕೊಂದು ಶಿಕ್ಷೆ ಅನುಭವಿಸಿ ಬಂದಿದ್ದ ವ್ಯಕ್ತಿ, ಮಹಿಳೆಯ ಕೊಂದು ರೈಲಿನೆದುರು ಹಾರಿ ಆತ್ಮಹತ್ಯೆ

ಆದಿತ್ಯ ಅಂದು ಹೋಗುವುದಿಲ್ಲ ಎಂದರೂ ತಾನೇ ಬಲವಂತವಾಗಿ ಅವನನ್ನು ಕಳುಹಿಸಿಕೊಟ್ಟು ತಪ್ಪು ಮಾಡಿದೆ. ಮಗ ಶಾಶ್ವತವಾಗಿ ನಮ್ಮನ್ನು ಬಿಟ್ಟು ಹೋಗಿದ್ದಾನೆ. ಆದರೆ ನಾವು ಮಾತ್ರ ಜೀವಂತವಾಗಿದ್ದೇವೆ ಎಂದು ಬರೆದಿದ್ದಾರೆ. ದಂಪತಿ ಭಾನುವಾರ ತಡರಾತ್ರಿ ತಮ್ಮ ಅಂಗಳದಲ್ಲಿರುವ ಬೇವಿನ ಮರಕ್ಕೆ ಸೀರೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ .

ಘಟನಾ ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿದೆ ಎಂದು ಹೊರಠಾಣೆ ಉಸ್ತುವಾರಿ ಸತ್ಯಂ ಚೌಹಾಣ್ ತಿಳಿಸಿದ್ದಾರೆ. ತಮ್ಮ ಏಕೈಕ ಮಗನನ್ನು ಕಳೆದುಕೊಂಡ ಅಸಹನೀಯ ದುಃಖವು ಈ ತಪ್ಪು ಹೆಜ್ಜೆ ಇಡಲು ಕಾರಣವಾಯಿತು.
ಮಗನನ್ನು ಕಳೆದುಕೊಂಡಾಗಿನಿಂದ ಆ ದಂಪತಿ ಮುಖದಲ್ಲಿ ನಗುವೇ ಇರಲಿಲ್ಲ, ದೀರ್ಘಕಾಲದ ನೋವಿನ ನಂತರ, ನನ್ನ ಮನಸ್ಸು ಈಗ ಶಾಂತವಾಗಿದೆ. ನಾನು ಕೂಡ ಆತನೊಂದಿಗೆ ಹೋಗುತ್ತಿದ್ದೇನೆ ಎಂದು ಬರೆದಿದ್ದಾರೆ.

ವಿಡಿಯೋವನ್ನು ಕೂಡಾ ರೆಕಾರ್ಡ್​ ಮಾಡಿದ್ದಾರೆ. ಆದಿತ್ಯನ ಅಪಘಾತದ ನಂತರ ಬಂದ ಪರಿಹಾರದ ಹಣವನ್ನು ತಮ್ಮ ಹಿರಿಯ ಸಹೋದರರಾದ ಕುಲಭರ ಪಟೇಲ್ ಮತ್ತು ಜಲಭರ ಪಟೇಲ್‌ಗೆ ವರ್ಗಾಯಿಸಬೇಕೆಂದು ಅವರು ವಿನಂತಿಸಿದ್ದಾರೆ. ನಾವು ಪ್ರಜ್ಞಾಪೂರ್ವಕವಾಗಿ ಮತ್ತು ಸ್ವಇಚ್ಛೆಯಿಂದ ನಮ್ಮನ್ನು ಶಿವನಿಗೆ ಅರ್ಪಿಸಿಕೊಳ್ಳುತ್ತಿದ್ದೇವೆ. ಇದಕ್ಕೆ ಯಾರೂ ಹೊಣೆಯಲ್ಲ, ಸಂತೋಷದಿಂದ ನಮ್ಮನ್ನು ಕಳುಹಿಸಿಕೊಡಿ ಎಂದು ಬರೆದಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ