ಸಿಬಿಎಸ್‌ಇ ತ್ರಿಭಾಷಾ ನೀತಿ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಿಬಿಎಸ್‌ಇ ತ್ರಿಭಾಷಾ ನೀತಿ ಕುರಿತ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಈ ನಿಯಮವು ಈ ವರ್ಷದಿಂದ 6ನೇ ತರಗತಿಗೆ ಸೇರುವ ಹೊಸ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಪ್ರಸ್ತುತ ವಿದ್ಯಾರ್ಥಿಗಳು ತಮ್ಮ ಭಾಷಾ ವಿಷಯಗಳನ್ನು ಬದಲಾಯಿಸುವ ಅಗತ್ಯವಿಲ್ಲ. ವಿದೇಶಿ ಭಾಷೆಗಳನ್ನು ನಾಲ್ಕನೇ ಆಯ್ಕೆಯಾಗಿ ಕಲಿಯಬಹುದು. ಪಠ್ಯಪುಸ್ತಕ ಮತ್ತು ಶಿಕ್ಷಕರ ಕೊರತೆ ಉಂಟಾಗುವುದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ.

ಸಿಬಿಎಸ್‌ಇ ತ್ರಿಭಾಷಾ ನೀತಿ ಗೊಂದಲಕ್ಕೆ ತೆರೆ ಎಳೆದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್

Updated on: Jun 26, 2026 | 12:25 PM

ಮುಖ್ಯಾಂಶಗಳು

  • ಸಿಬಿಎಸ್​ಇ ತ್ರಿಭಾಷಾ ನಿಯಮ ಕೇವಲ ಆರನೇ ತರಗತಿಯ ಹೊಸ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯ
  • ಆಯ್ಕೆ ಮಾಡುವ ಮೂರು ಭಾಷೆಗಳಲ್ಲಿ ಎರಡು ಸ್ಥಳೀಯ ಭಾರತೀಯ ಭಾಷೆಯಾಗಿರಬೇಕು
  • ವಿದೇಶಿ ಭಾಷೆಗಳನ್ನು ಹೆಚ್ಚುವರಿಯಾಗಿ ನಾಲ್ಕನೇ ವಿಷಯವಾಗಿ ಆಯ್ಕೆ ಮಾಡಲು ಅವಕಾಶ

ನವದೆಹಲಿ, ಜೂನ್ 26: ಸಿಬಿಎಸ್‌ಇ (CBSE) ಶಾಲೆಗಳಲ್ಲಿ ಮೂರು ಭಾಷೆಗಳನ್ನು ಕಡ್ಡಾಯವಾಗಿ ಕಲಿಯುವ ‘ತ್ರಿಭಾಷಾ ನೀತಿ’ಯ ಸುತ್ತ ಎದ್ದಿದ್ದ ಗೊಂದಲ ಮತ್ತು ಆತಂಕಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪೂರ್ಣವಿರಾಮ ಇಟ್ಟಿದ್ದಾರೆ. ಈ ಹೊಸ ನಿಯಮವು ಕೇವಲ ಈ ವರ್ಷದಿಂದ 6 ನೇ ತರಗತಿಗೆ ದಾಖಲಾಗುವ ಹೊಸ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ 7, 8 ಮತ್ತು 9 ನೇ ತರಗತಿಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಮ್ಮ ಭಾಷಾ ವಿಷಯಗಳನ್ನು ಬದಲಾಯಿಸುವ ಅಗತ್ಯವಿಲ್ಲ.

ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್

ಸಿಬಿಎಸ್‌ಇ ನೀಡಿದ್ದ ಹಿಂದಿನ ಸೂಚನೆ ಅಸ್ಪಷ್ಟವಾಗಿದ್ದರಿಂದ, ಈಗ ಓದುತ್ತಿರುವ ಮಕ್ಕಳೂ ಭಾಷೆ ಬದಲಾಯಿಸಬೇಕೇ ಎಂಬ ಆತಂಕ ಪೋಷಕರಲ್ಲಿ ಮನೆಮಾಡಿತ್ತು. ಆದರೆ ಈಗ ನೀಡಿರುವ ಸ್ಪಷ್ಟೀಕರಣದ ಪ್ರಕಾರ, ಪ್ರಸ್ತುತ ಎರಡು ವಿದೇಶಿ ಭಾಷೆಗಳನ್ನು ಕಲಿಯುತ್ತಿರುವ ವಿದ್ಯಾರ್ಥಿಗಳು ತಮ್ಮ 10 ನೇ ತರಗತಿಯ ಬೋರ್ಡ್ ಪರೀಕ್ಷೆಯವರೆಗೆ ಅದೇ ವಿಷಯಗಳೊಂದಿಗೆ ಮುಂದುವರಿಯಬಹುದು. ಸಿಬಿಎಸ್‌ಇ ಶೀಘ್ರದಲ್ಲೇ ಈ ಬಗ್ಗೆ ಪರಿಷ್ಕೃತ ಅಧಿಕೃತ ಆದೇಶ ಹೊರಡಿಸಲಿದೆ.

ಏನಿದು R1, R2 ಮತ್ತು R3 ಭಾಷಾ ಚೌಕಟ್ಟು?

ಹೊಸ ಶಿಕ್ಷಣ ನೀತಿಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಭಾಷೆಗಳನ್ನು 3 ಹಂತಗಳಾಗಿ ವಿಂಗಡಿಸಲಾಗಿದೆ

R1 (ಪ್ರಥಮ ಭಾಷೆ): ಇದು ಶಾಲೆಯ ಮುಖ್ಯ ಬೋಧನಾ ಮಾಧ್ಯಮವಾಗಿರುತ್ತದೆ (ಉದಾಹರಣೆಗೆ: ಇಂಗ್ಲಿಷ್ ಅಥವಾ ಹಿಂದಿ).

R2 (ದ್ವಿತೀಯ ಭಾಷೆ): ಇದು ಮೊದಲ ಭಾಷೆಯನ್ನು ಹೊರತುಪಡಿಸಿ ಮತ್ತೊಂದು ಭಾಷೆಯಾಗಿರುತ್ತದೆ.

R3 (ಮೂರನೇ ಭಾಷೆ): ಇದು ಮೊದಲ ಎರಡು ಭಾಷೆಗಳಿಗಿಂತ ಸಂಪೂರ್ಣ ಭಿನ್ನವಾಗಿರುತ್ತದೆ.

ಮುಖ್ಯ ನಿಯಮ: ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವ ಈ 3 ಭಾಷೆಗಳಲ್ಲಿ ಕನಿಷ್ಠ 2 ಭಾಷೆಗಳು ಕಡ್ಡಾಯವಾಗಿ ಸ್ಥಳೀಯ ಭಾರತೀಯ ಭಾಷೆಗಳೇ ಆಗಿರಬೇಕು.

ಮತ್ತಷ್ಟು ಓದಿ: NCERT ಮತ್ತು CBSE ಪಠ್ಯದಲ್ಲಿ ಕೇಸರೀಕರಣ ವಿವಾದ: ಬಿಜೆಪಿ ವಿರುದ್ಧ ಮಧು ಬಂಗಾರಪ್ಪ ಕಿಡಿ

ವಿದೇಶಿ ಭಾಷೆಗಳ ಮೇಲೆ ನಿಷೇಧವಿಲ್ಲ; ನಾಲ್ಕನೇ ಆಪ್ಷನ್

ಶಾಲೆಗಳಿಂದ ಜರ್ಮನ್, ಫ್ರೆಂಚ್ ನಂತಹ ವಿದೇಶಿ ಭಾಷೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತಿದೆ ಎಂಬ ಪೋಷಕರ ಕಳವಳವನ್ನು ಸಚಿವರು ತಳ್ಳಿಹಾಕಿದ್ದಾರೆ. ವಿದೇಶಿ ಭಾಷೆಗಳ ಮೇಲೆ ಯಾವುದೇ ನಿಷೇಧವಿಲ್ಲ. ವಿದ್ಯಾರ್ಥಿಗಳು ಕಡ್ಡಾಯವಾಗಿರುವ ಮೂರು ಪ್ರಾಥಮಿಕ ಭಾಷೆಗಳ ಜೊತೆಗೆ, ಹೆಚ್ಚುವರಿಯಾಗಿ ನಾಲ್ಕನೇ ಭಾಷೆಯಾಗಿ ವಿದೇಶಿ ಭಾಷೆಯನ್ನು ಆರಿಸಿಕೊಳ್ಳಬಹುದು. ದೇಶದ ಸ್ಥಳೀಯ ಭಾಷೆಗಳನ್ನು ಬಲಪಡಿಸುವುದೇ ಈ ನಿಯಮದ ಮುಖ್ಯ ಉದ್ದೇಶವಾಗಿದೆ.

ಪುಸ್ತಕ ಮತ್ತು ಶಿಕ್ಷಕರ ಕೊರತೆ ಎದುರಾಗಲ್ಲ

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಅಡಿಯಲ್ಲಿ ಈ ನಿಯಮ ಜಾರಿಯಾಗುತ್ತಿರುವುದರಿಂದ ಪಠ್ಯಪುಸ್ತಕ ಹಾಗೂ ಶಿಕ್ಷಕರ ಕೊರತೆಯ ಭೀತಿ ಎದುರಾಗಿತ್ತು. ಈ ವಿಷಯ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು.

ಈ ಬಗ್ಗೆ ಭರವಸೆ ನೀಡಿರುವ ಶಿಕ್ಷಣ ಸಚಿವರು, ದೇಶದ 22 ಅಧಿಕೃತ ಭಾರತೀಯ ಭಾಷೆಗಳಲ್ಲಿ ಹೊಸ ಪಠ್ಯಪುಸ್ತಕಗಳು ಸಮಯಕ್ಕೆ ಸರಿಯಾಗಿ ಲಭ್ಯವಾಗಲಿವೆ. ಶಾಲೆಗಳಲ್ಲಿ ಅಗತ್ಯವಿರುವಷ್ಟು ಅರ್ಹ ಶಿಕ್ಷಕರು ಮತ್ತು ಸಂಪನ್ಮೂಲಗಳನ್ನು ಖಚಿತಪಡಿಸಿಕೊಳ್ಳುವುದು ಸಿಬಿಎಸ್‌ಇಯ ಜವಾಬ್ದಾರಿಯಾಗಿದೆ, ಯಾರೂ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ದೇಶದ ಸುಮಾರು ಶೇ. 90 ವಿದ್ಯಾರ್ಥಿಗಳು ಈಗಾಗಲೇ ಮೂರು ಭಾಷೆಗಳನ್ನು ಕಲಿಯುತ್ತಿದ್ದು, ಸಿಬಿಎಸ್‌ಇ ಯಲ್ಲಿ ಕೇವಲ ಶೇ. 1.3 ವಿದ್ಯಾರ್ಥಿಗಳು ಮಾತ್ರ ಎರಡು ವಿದೇಶಿ ಭಾಷೆಗಳನ್ನು ಓದುತ್ತಿರುವುದರಿಂದ ಈ ಬದಲಾವಣೆಯಿಂದ ಯಾರಿಗೂ ದೊಡ್ಡ ಮಟ್ಟದ ಸಮಸ್ಯೆಯಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us