ಪ್ರತಿ ಬೀದಿಯೂ ಜಂತರ್ ಮಂತರ್, ಅ. 23ರಂದು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನಾ ಮೆರವಣಿಗೆ, ಅಭಿಜಿತ್, ನೇಹಾ ಬೋರಾ ಭಾಗಿ

ಪೀಪಲ್ ಅಗೇನ್ಸ್ಟ್ ಎಸ್‌ಐಆರ್ ಒಕ್ಕೂಟವು ಅಕ್ಟೋಬರ್ 23ರಂದು ದೆಹಲಿ ಸೇರಿದಂತೆ ಹಲವೆಡೆ ಹರ್ ಗಲಿ ಜಂತರ್ ಮಂತರ್ ಪ್ರತಿಭಟನೆ ಆಯೋಜಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆ ರದ್ದುಗೊಳಿಸುವಿಕೆ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾ ಇವರ ಪ್ರಮುಖ ಬೇಡಿಕೆ. ಅಭಿಜಿತ್ ದಿಪ್ಕೆ, ನೇಹಾ ಬೋರಾ, ಪ್ರಶಾಂತ್ ಭೂಷಣ್ ಮುಂತಾದವರು ಭಾಗವಹಿಸಲಿದ್ದು, ಪೊಲೀಸರ ಅನುಮತಿ ಇಲ್ಲದೆ ಶಾಂತಿಯುತ ಮೆರವಣಿಗೆಗೆ ಸಿದ್ಧತೆ ನಡೆದಿದೆ.

ಪ್ರತಿ ಬೀದಿಯೂ ಜಂತರ್ ಮಂತರ್, ಅ. 23ರಂದು ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನಾ ಮೆರವಣಿಗೆ, ಅಭಿಜಿತ್, ನೇಹಾ ಬೋರಾ ಭಾಗಿ
ನೇಹಾ, ದಿಪ್ಕೆ
Image Credit source: India TV

Updated on: Oct 22, 2026 | 11:55 AM

ನವದೆಹಲಿ, ಅಕ್ಟೋಬರ್ 22: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ರದ್ದುಗೊಳಿಸಲು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಒತ್ತಾಯಿಸಿ ಪೀಪಲ್ ಅಗೇನ್ಸ್ಟ್ ಎಸ್‌ಐಆರ್ ಎಂಬ ಒಕ್ಕೂಟವು ನವದೆಹಲಿ ಸೇರಿದಮತೆ ದೇಶದ ಹಲವು ಭಾಗಗಳಲ್ಲಿ ಹರ್ ಗಲಿ ಜಂತರ್ ಮಂತರ್ ಎಂಬ ಪ್ರತಿಭಟನಾ ಮೆರವಣಿಗೆಯನ್ನು ಅಕ್ಟೋಬರ್ 23ರಂದು ಆಯೋಜಿಸಿದೆ. ವಿದ್ಯಾರ್ಥಿ ಸಂಘಟನೆಗಳು, ರೈತ ಮುಖಂಡರು ಹಾಗೂ ನಾಗರಿಕ ಸಮಾಜದ ವಿವಿಧ ಹಕ್ಕುಗಳ ಸಂಘಟನೆಗಳು ಒಗ್ಗೂಡಿ ರಚಿಸಿಕೊಂಡಿರುವ ‘ಪೀಪಲ್ ಅಗೇನ್ಸ್ಟ್ ಎಸ್‌ಐಆರ್’ ಒಕ್ಕೂಟವು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜೀತ್ ದಿಪ್ಕೆ, ಐಸಾ (AISA) ಅಧ್ಯಕ್ಷೆ ನೇಹಾ ಬೋರಾ, ಜೆಎನ್‌ಯು ವಿದ್ಯಾರ್ಥಿ ನಾಯಕಿ ಐಷೆ ಘೋಷ್, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಅರ್ಥಶಾಸ್ತ್ರಜ್ಞ ಪರಕಲಾ ಪ್ರಭಾಕರ್ (ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ), ನಟ-ಕಾರ್ಯಕರ್ತ ಪ್ರಕಾಶ್ ರಾಜ್, ರೈತ ನಾಯಕ ರಾಕೇಶ್ ಟಿಕಾಯತ್ ಮತ್ತು ಲೇಖಕ ತುಷಾರ್ ಗಾಂಧಿ ಅವರಿಗೆ ಆಹ್ವಾನ ನೀಡಲಾಗಿದೆ. ಜೊತೆಗೆ ‘ಇಂಡಿ’ ಒಕ್ಕೂಟದ ಪಕ್ಷಗಳಿಗೂ ಬೆಂಬಲ ನೀಡುವಂತೆ ಕೋರಲಾಗಿದೆ.

“ಹರ್ ಗಲಿ ಜಂತರ್ ಮಂತರ್, ಹರ್ ಗಾಂವ್ ಜಂತರ್ ಮಂತರ್, ಮೇರಾ ಘರ್ ಜಂತರ್ ಮಂತರ್” ಎಂಬ ಶೀರ್ಷಿಕೆಯಡಿ ಈ ಅಭಿಯಾನ ರೂಪಿಸಲಾಗಿದೆ. ಪ್ರಜಾಪ್ರಭುತ್ವವನ್ನು ಮರಳಿ ಪಡೆಯುವ ಈ ನಾಗರಿಕ ಮಾರ್ಚ್‌ಗೆ ನಾವು ಪೊಲೀಸರ ಅನುಮತಿಯನ್ನು ಕೋರುವುದಿಲ್ಲ ಎಂದು ವೇದಿಕೆ ಈಗಾಗಲೇ ಸ್ಪಷ್ಟಪಡಿಸಿದ್ದು, ಶಾಂತಿಯುತ ಪ್ರತಿಭಟನಾಕಾರರ ಮೇಲೆ ಬಲಪ್ರಯೋಗ ಮಾಡದಂತೆ ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ:

ವೋಟ್ ಬಚಾವೋ, ದೇಶ್ ಬಚಾವೋ: ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ದೇಶವ್ಯಾಪಿ ಅಭಿಯಾನ

 

ಮೆರವಣಿಗೆಯ ಹಾದಿ: ನವದೆಹಲಿಯ ಕನ್ನಾಟ್ ಪ್ಲೇಸ್ ಸಮೀಪದ ಬಾಂಗ್ಲಾ ಸಾಹಿಬ್ ಗುರುದ್ವಾರದಿಂದ ಪಟೇಲ್ ಚೌಕ್‌ನಲ್ಲಿರುವ ಕೇಂದ್ರ ಚುನಾವಣಾ ಆಯೋಗದ (ECI) ಮುಖ್ಯ ಕಚೇರಿಯವರೆಗೆ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ. ಪೊಲೀಸರು ಬ್ಯಾರಿಕೇಡ್ ಹಾಕಿ ಮಾರ್ಗವನ್ನು ತಡೆದರೆ, ಪ್ರತಿಭಟನಾಕಾರರು ಸ್ಥಳದಲ್ಲೇ ಕುಳಿತು ‘ಜನರ ಸಂಸತ್ತು’ ನಡೆಸಿ, ನಿರ್ಣಯಗಳನ್ನು ಕೈಗೊಂಡು, ರಾಷ್ಟ್ರಗೀತೆ ಹಾಡಿದ ನಂತರ ಚದುರಿಹೋಗುವುದಾಗಿ ಸಂಘಟಕರು ತಿಳಿಸಿದ್ದಾರೆ.

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳೇನು?
ಮತದಾರರ ಪಟ್ಟಿಯ ಎಸ್‌ಐಆರ್ (SIR) ಪ್ರಕ್ರಿಯೆ ಕಾನೂನುಬಾಹಿರವಾಗಿದ್ದು, ಅದನ್ನು ರದ್ದುಪಡಿಸಿ 2024ರ ಮೊದಲಿನ ಪಟ್ಟಿಗೆ ಮರುಹೊಂದಿಸಬೇಕು. ಸಾಂವಿಧಾನಿಕ ಜವಾಬ್ದಾರಿ ಉಲ್ಲಂಘಿಸಿರುವ ಆರೋಪದ ಮೇಲೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಿ, ವಿಚಾರಣೆಗೆ ಒಳಪಡಿಸಬೇಕು.

ಭಾರತದ ಚುನಾವಣಾ ಆಯೋಗ ಹೊಂದಿರುವ ಕಾನೂನಾತ್ಮಕ ವಿನಾಯಿತಿಗಳನ್ನು ರದ್ದುಪಡಿಸಿ, ಪಾರದರ್ಶಕ ವ್ಯವಸ್ಥೆ ಜಾರಿಗೆ ತರಬೇಕು.ಆಡಳಿತ ಮತ್ತು ಆಯೋಗದ ನಿಲುವುಕೇಂದ್ರ ಚುನಾವಣಾ ಆಯೋಗ ಮತ್ತು ಆಡಳಿತಾರೂಢ ಬಿಜೆಪಿ ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿವೆ. ಮತದಾರರ ಪಟ್ಟಿಯ ಪರಿಷ್ಕರಣೆಯು ಕೇವಲ ದೋಷರಹಿತ ಹಾಗೂ ನಕಲಿ ಮತದಾರರನ್ನು ತೆಗೆದುಹಾಕುವ ನಿಯಮಬದ್ಧ ಪ್ರಕ್ರಿಯೆಯಾಗಿದೆ ಎಂದು ಸ್ಪಷ್ಟಪಡಿಸಿವೆ. ಅನುಮತಿಯಿಲ್ಲದೆ ಮೆರವಣಿಗೆ ನಡೆಸಲು ಮುಂದಾಗಿರುವುದರಿಂದ, ರಾಜಧಾನಿ ದೆಹಲಿಯಲ್ಲಿ ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿದ್ದು, ಮತ್ತೆ ಸಂಘರ್ಷ ಮತ್ತು ಬಿಗಿ ಪೊಲೀಸ್ ಕ್ರಮ ಜರುಗುವ ಸಾಧ್ಯತೆ ದಟ್ಟವಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us