ಇಎಸ್​ಐ- ಆಯುಷ್ಮಾನ್ ಭಾರತ್ ಪಿಎಂಜೆಎವೈ ಒಗ್ಗೂಡಿಸಿದ ಕೇಂದ್ರ; 1.35 ಕೋಟಿ ಜನರಿಗೆ ಅನುಕೂಲ

|

Updated on: Mar 12, 2021 | 2:51 PM

ಎಂಪ್ಲಾಯೀಸ್ ಸ್ಟೇಟ್ ಇನ್ಷೂರೆನ್ಸ್ ಅನ್ನು ಆಯುಷ್ಮಾನ್ ಭಾರತ್ ಜತೆಗೆ ಒಗ್ಗೂಡಿಸಲಾಗಿದೆ. ಇದರಿಂದ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳ 113 ಜಿಲ್ಲೆಗಳಲ್ಲಿ 1.35 ಲೋಟಿ ಜನರಿಗೆ ಅನುಕೂಲ ಆಗಲಿದೆ.

ಇಎಸ್​ಐ- ಆಯುಷ್ಮಾನ್ ಭಾರತ್ ಪಿಎಂಜೆಎವೈ ಒಗ್ಗೂಡಿಸಿದ ಕೇಂದ್ರ; 1.35 ಕೋಟಿ ಜನರಿಗೆ ಅನುಕೂಲ
ಸಾಂದರ್ಭಿಕ ಚಿತ್ರ
Follow us on

ಎಂಪ್ಲಾಯೀಸ್ ಸ್ಟೇಟ್ ಇನ್ಷೂರೆನ್ಸ್ (ಇಎಸ್​ಐ) ಅನ್ನು ಆಯುಷ್ಮಾನ್ ಭಾರತ್ ಪಿಎಂಜೆಎವೈ ಜತೆ ಒಟ್ಟು ಮಾಡುವುದಾಗಿ ಕೇಂದ್ರ ಕಾರ್ಮಿಕ ಇಲಾಖೆ ಘೋಷಣೆ ಮಾಡಿದೆ. ಇದರಿಂದ ನಾಲ್ಕು ರಾಜ್ಯಗಳ- ಕರ್ನಾಟಕ, ಛತ್ತೀಸ್​ಗಢ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ 113 ಜಿಲ್ಲೆಗಳ 1.35 ಕೋಟಿ ಜನರಿಗೆ ಇದರಿಂದ ಸಹಾಯ ಆಗುತ್ತದೆ. ಆಯುಷ್ಮಾನ್ ಭಾರತ್ ಅಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ನಗದುರಹಿತವಾಗಿ (ಕ್ಯಾಶ್​ಲೆಸ್) ವೈದ್ಯಕೀಯ ಚಿಕಿತ್ಸೆ ದೊರೆಯುತ್ತದೆ. “ಇಎಸ್​ಐಸಿ ಒಗ್ಗೂಡುವುದರಿಂದ ಇಂಥ ಜಿಲ್ಲೆಗಳಲ್ಲಿ ಇರುವ 1.35 ಕೋಟಿ ಇಎಸ್​ಐ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಪಿಎಂ- ಜೆಎವೈ ಆಸ್ಪತ್ರೆಗಳ ಮೂಲಕ ನಗದುರಹಿತ ಚಿಕಿತ್ಸೆಯು ದೊರೆಯುತ್ತದೆ. ಇದಕ್ಕೆ ಯಾವ ರೆಫರಲ್ ಅಗತ್ಯ ಇಲ್ಲ,” ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಫಲಾನುಭವಿಗಳು ಇಎಸ್ಐಸಿ ಇ-ಪೆಹಚಾನ್ ಕಾರ್ಡ್ ಅಥವಾ ಹೆಲ್ತ್ ಪಾಸ್​ಬುಕ್ ಹಾಗೂ ಜತೆಗೆ ಆಧಾರ್ ಕಾರ್ಡ್ ಸಹ ತೆಗೆದುಕೊಂಡು ಹೋಗಬೇಕು. 113 ಜಿಲ್ಲೆಗಳಲ್ಲಿ ಯಾವ್ಆವ ಆಸ್ಪತ್ರೆಗಳು ಒಳಗೊಂಡಿವೆ ಎಂಬುದರ ಮಾಹಿತಿ ಇಎಸ್​ಐಸಿ ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಿದೆ. “ಪಿಎಂ- ಜೆಎವೈ ಫಲಾನುಭವಿಗಳು ಸಹ ಕಡಿಮೆ ಬಳಕೆ ಆಗುವ ಬಿಹಾರ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ಉತ್ತರಪ್ರದೇಶದ 15 ಇಎಸ್​ಐಸಿ ಆಸ್ಪತ್ರೆ/ವೈದ್ಯಕೀಯ ಕಾಲೇಜುಗಳಲ್ಲಿ ನಗದುರಹಿತ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸದ್ಯಕ್ಕೆ ದೇಶದಲ್ಲಿ ಒಟ್ಟಾರೆಯಾಗಿ 1520 ಇಎಸ್​ಐ ಡಿಸ್ಪೆನ್ಸರಿಗಳು ಮತ್ತು 159 ಆಸ್ಪತ್ರೆಗಳು ಇವೆ. ಅವುಗಳಲ್ಲಿ 45 ಡಿಸ್ಪೆನ್ಸರಿಗಳನ್ನು ನೇರವಾಗಿ ಇಎಸ್​ಐಸಿ ನಡೆಸುತ್ತದೆ. ಉಳಿದವು ರಾಜ್ಯ ಸರ್ಕಾರಗಳ ಅಡಿಯಲ್ಲಿ ಬರುತ್ತವೆ.

ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳು
1. ಇಎಸ್​ಐ ಫಲಾನುಭವಿಗಳಿಗೆ ಆಯುಷ್ಮಾನ್ ಭಾರತ್ ಪಿಎಂ- ಜೆಎವೈ ಆಸ್ಪತ್ರೆಗಳಲ್ಲಿ ಆರೋಗ್ಯ ರಕ್ಷಣೆ ವ್ಯವಸ್ಥೆಗಳು ದೊರೆಯುತ್ತವೆ.
2. ಆಯುಷ್ಮಾನ್ ಭಾರತ್ ಪಿಎಂ- ಜೆಎವೈ ಫಲಾನುಭವಿಗಳಿಗೆ ಇಎಸ್​ಐಸಿ ಅಡಿಯಲ್ಲಿ ಬರುವ ಆಸ್ಪತ್ರೆಗಳಲ್ಲಿ ಆರೋಗ್ಯ ವ್ಯವಸ್ಥೆಗಳು ಸಿಗುತ್ತವೆ.
3. ಇಎಸ್​ಐಸಿ ಫಲಾನುಭವಿಗಳಿಗೆ ಇಎಸ್​ಐಎಸ್ ಕಾರ್ಡ್ ಮೂಲಕ ಮಾತ್ರ ಆಯುಷ್ಮಾನ್ ಭಾರತ್ ಪಿಎಂ- ಜೆಎವೈ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಾಗುತ್ತದೆ.
4. ಅದೇ ರೀತಿ ಆಯುಷ್ಮಾನ್ ಭಾರತ್ ಪಿಎಂ- ಜೆಎವೈ ಫಲಾನುಭವಿಗಳು ಇಎಸ್​ಐಸಿ ಅಡಿಯಲ್ಲಿ ಬರುವ ಆಸ್ಪತ್ರೆಗಳು ಆರೋಗ್ಯ ವ್ಯವಸ್ಥೆ ಅನುಕೂಲಗಳನ್ನು ಪಡೆಯಬಹುದು.

ಈ ಎಲ್ಲ ಸೇವೆಗಳಿಗಾಗಿ ಇಎಸ್​ಐ ಇ-ಐಡಿ ಕಾರ್ಡ್ ಅಥವಾ ಹೆಲ್ತ್ ಕಾರ್ಡ್ ಅಥವಾ ಆಧಾರ್ ಅಗತ್ಯ. ಈ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದಲ್ಲಿ ಟೋಲ್ ಫ್ರೀ ಸಹಾಯವಾಣಿ 1800 112 526/1800 113 839 ಸಂಪರ್ಕಿಸಬಹುದು. ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗ್ವರ್ ನವದೆಹಲಿಯಲ್ಲಿ ಈ ಯೋಜನೆಗಳ ಒಗ್ಗೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ:ಆಯುಷ್ಮಾನ್ ಭಾರತ್: 112 ಜಿಲ್ಲೆಗಳಲ್ಲಿ ಹೊಸ ಆಸ್ಪತ್ರೆಗಳ ನಿರ್ಮಾಣ ಗುರಿ