
ಮೇಘಾಲಯ, ಸೆಪ್ಟೆಂಬರ್ 30: ಕೇಂದ್ರ ಸರ್ಕಾರದ ಪ್ರಸ್ತಾವಿತ ವಿದೇಶಿ ಕೊಡುಗೆ (ನಿಯಂತ್ರಣ) ತಿದ್ದುಪಡಿ ಮಸೂದೆ–2026 ಇದೀಗ ಅಂತಾರಾಷ್ಟ್ರೀಯ ಮಟ್ಟದ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಮೇಘಾಲಯದ ತುರಾ ಕ್ಷೇತ್ರದ ಕಾಂಗ್ರೆಸ್ ಸಂಸದ ಸಲೆಂಗ್ ಎ. ಸಂಗ್ಮಾ ಅವರು ಈ ಮಸೂದೆಯನ್ನು ಹಿಂಪಡೆಯುವಂತೆ ಭಾರತ ಸರ್ಕಾರದ ಮೇಲೆ ಒತ್ತಡ ಹೇರಲು ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳ ಮುಖಂಡರು ಮತ್ತು ನಿಯೋಗಗಳ ಹಸ್ತಕ್ಷೇಪವನ್ನು ಕೋರಿರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಈಶಾನ್ಯದ ಪ್ರಮುಖ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಸಂಸದ ಸಂಗ್ಮಾ, ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಯ ನಿಯಮಗಳು ಸಮಾಜಸೇವೆ ಮತ್ತು ಧಾರ್ಮಿಕ ಸಂಸ್ಥೆಗಳ ಹಿತಾಸಕ್ತಿಗೆ ವಿರುದ್ಧವಾಗಿವೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದೇಶಿ ನಿಯೋಗಗಳ ಭೇಟಿ: ಮಸೂದೆಯನ್ನು ರದ್ದುಗೊಳಿಸಲು ನವದೆಹಲಿ ಮೇಲೆ ರಾಜತಾಂತ್ರಿಕವಾಗಿ ಮನವಿ ಸಲ್ಲಿಸುವಂತೆ ಯುಎಸ್, ಯುಕೆ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಮೆಕ್ಸಿಕೊ ಮತ್ತು ಆಫ್ರಿಕಾದ ಹಲವು ದೇಶಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಕೋರಿರುವುದಾಗಿ ಅವರು ಸ್ಪಷ್ಟಪಡಿಸಿದರು.
ರಾಷ್ಟ್ರಪತಿ, ಸಚಿವರಿಗೆ ಮನವಿ: ಈ ವಿಚಾರವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಹಾಗೂ ಕೇಂದ್ರ ಸಚಿವರನ್ನು ಭೇಟಿ ಮಾಡಿ ಈಶಾನ್ಯ ರಾಜ್ಯಗಳ ಜನರ ಕಳವಳಗಳನ್ನು ತಿಳಿಸಿರುವುದಾಗಿ ಹೇಳಿದರು. ಆದರೆ, ದೇಶದ ಆಂತರಿಕ ಕಾನೂನು ಪ್ರಕ್ರಿಯೆಯಲ್ಲಿ ವಿದೇಶಗಳ ಮಧ್ಯಪ್ರವೇಶ ಕೋರಿರುವುದು ರಾಷ್ಟ್ರೀಯ ಸಾರ್ವಭೌಮತ್ವದ ದೃಷ್ಟಿಯಿಂದ ಭಾರಿ ರಾಜಕೀಯ ಆಕ್ಷೇಪಕ್ಕೆ ಗುರಿಯಾಗಿದೆ.
ಮತ್ತಷ್ಟು ಓದಿ: ಕಾಂಗ್ರೆಸ್ ಮುಖಂಡನ ಮನೆ ಮುಂದೆ ವಾಮಾಚಾರ: ಲಗ್ನ ಪತ್ರಿಕೆಯೊಂದಿಗೆ ನವದಂಪತಿಗೆ ಕೆಡುಕು ಮಾಡಲು ಯತ್ನ
ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆಯು ಕೇಂದ್ರದ ವ್ಯಾಪ್ತಿಗೆ ಬರುತ್ತದೆಯಾದರೂ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಮಿಜೋರಾಂನಂತಹ ಕ್ರಿಶ್ಚಿಯನ್ ಬಹುಸಂಖ್ಯಾತ ಈಶಾನ್ಯ ರಾಜ್ಯಗಳಲ್ಲಿ ಇದು ತೀವ್ರ ಪರಿಣಾಮ ಬೀರಿದೆ. ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೋಮ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸ್ಥಳೀಯ ಸಂಸ್ಥೆಗಳ ಆತಂಕಗಳ ಕುರಿತು ಜ್ಞಾಪಕ ಪತ್ರ ಸಲ್ಲಿಸಿದರು.
ಇದೇ ವೇಳೆ ಮಿಜೋರಾಂ ಚರ್ಚ್ ಮಂಡಳಿಯ ನಿಯೋಗವೂ ಗೃಹ ಸಚಿವರನ್ನು ಭೇಟಿಯಾಯಿತು. ಮಂಡಳಿಯ ಪ್ರಧಾನ ಕಾರ್ಯದರ್ಶಿ ರೆವರೆಂಡ್ ಲಾಲ್‌ಮಂಗೈಹಾ ಮಾತನಾಡಿ, ವಿದೇಶಿ ಅನುದಾನವನ್ನು ಸಂಪೂರ್ಣವಾಗಿ ಕಾನೂನುಬದ್ಧವಾಗಿ ಬಳಸಿದ ನಂತರವೂ, ಮುಂದೆ ಸಂಸ್ಥೆಯ ಎಫ್‌ಸಿಆರ್‌ಎ ಪರವಾನಗಿ ರದ್ದಾದರೆ ಅಥವಾ ಬಿಟ್ಟುಕೊಟ್ಟರೆ ಸರ್ಕಾರ ಆ ಸ್ವತ್ತುಗಳನ್ನು ವಶಪಡಿಸಿಕೊಳ್ಳುವ ಕಠಿಣ ನಿಬಂಧನೆ ಮಸೂದೆಯಲ್ಲಿದೆ. ನಿಯಮ ಪಾಲಿಸಿದ ಸಂಸ್ಥೆಗಳ ಆಸ್ತಿ ಮುಟ್ಟುಗೋಲು ಹಾಕುವುದು ಅನ್ಯಾಯ ಎಂದು ಆಕ್ಷೇಪಿಸಿದರು.
ವಿದೇಶಿ ದೇಣಿಗೆಯಲ್ಲಿ ಕ್ರಿಶ್ಚಿಯನ್ ಸಂಸ್ಥೆಗಳ ಪಾಲು: ಭಾರತದಲ್ಲಿ ಪ್ರಸ್ತುತ ನೋಂದಾಯಿತವಾಗಿರುವ ಒಟ್ಟು ಎಫ್‌ಸಿಆರ್‌ಎ ಪರವಾನಗಿದಾರರ ಪೈಕಿ ಕ್ರಿಶ್ಚಿಯನ್ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ಶೇಕಡಾ 12 ರಷ್ಟಿವೆ. ಆದರೆ, ಭಾರತಕ್ಕೆ ಹರಿದುಬರುವ ಒಟ್ಟು ವಿದೇಶಿ ದೇಣಿಗೆಯ ಬರೋಬ್ಬರಿ ಶೇಕಡಾ 60 ರಷ್ಟು ನಿಧಿ ಈ ಸಂಸ್ಥೆಗಳಿಗೆ ಲಭ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳಲ್ಲಿ ನಡೆಸಲಾಗುತ್ತಿರುವ ಶಾಲೆಗಳು, ಆಸ್ಪತ್ರೆಗಳು ಮತ್ತು ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಈ ಕಾನೂನಿನಿಂದ ಹೊಡೆತ ಬೀಳಬಹುದು ಎಂಬುದು ಸ್ಥಳೀಯರ ವಾದ.
ವಿದೇಶಿ ಅನುದಾನವನ್ನು ಮತಾಂತರ, ದೇಶವಿರೋಧಿ ಚಟುವಟಿಕೆಗಳು ಅಥವಾ ಆರ್ಥಿಕ ಅಕ್ರಮಗಳಿಗೆ ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಕೇಂದ್ರ ಗೃಹ ಸಚಿವಾಲಯವು 2020 ರಿಂದಲೂ ಎಫ್‌ಸಿಆರ್‌ಎ ನಿಯಮಗಳನ್ನು ಕಟ್ಟುನಿಟ್ಟಾಗಿಸುತ್ತಿದೆ. ಪ್ರತಿ ಎನ್‌ಜಿಒ ತನ್ನ ಲೆಕ್ಕಪತ್ರವನ್ನು ಪಾರದರ್ಶಕವಾಗಿ ಇಡಬೇಕು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನವದೆಹಲಿ ಮುಖ್ಯ ಶಾಖೆಯಲ್ಲೇ ಅಧಿಕೃತ ಖಾತೆಯನ್ನು ಹೊಂದಿರಬೇಕು ಎಂಬುದು ಕಡ್ಡಾಯ ನಿಯಮವಾಗಿದೆ.
ದೇಶದ ಆಂತರಿಕ ವಿಚಾರದಲ್ಲಿ ವಿದೇಶಿ ಹಸ್ತಕ್ಷೇಪದ ವಿವಾದ: ಭಾರತೀಯ ಸಂಸತ್ತಿನಲ್ಲಿ ಅಂಗೀಕಾರವಾಗುವ ಅಥವಾ ಚರ್ಚೆಯಾಗುವ ಶಾಸನಗಳ ಕುರಿತು ವಿದೇಶಿ ಸರ್ಕಾರಗಳು ಅಥವಾ ರಾಜತಾಂತ್ರಿಕರ ಬಳಿ ದೂರು ಕೊಂಡೊಯ್ಯುವುದನ್ನು ಭಾರತ ಸರ್ಕಾರ ಸಾರ್ವಭೌಮತ್ವದ ಉಲ್ಲಂಘನೆ ಎಂದು ಬಣ್ಣಿಸುತ್ತದೆ. ಹಿಂದಿನಿಂದಲೂ ಸಿಎಎ, ಕೃಷಿ ಕಾಯ್ದೆಗಳ ಸಂದರ್ಭದಲ್ಲಿ ಇಂತಹ ವಿದೇಶಿ ಹೇಳಿಕೆಗಳನ್ನು ನವದೆಹಲಿ ಕಟುವಾಗಿ ತಿರಸ್ಕರಿಸಿತ್ತು. ಇದೀಗ ಕಾಂಗ್ರೆಸ್ ಸಂಸದರ ಹೇಳಿಕೆಗೆ ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ