ಫ್ಲಿಪ್​ಕಾರ್ಟ್​ನಲ್ಲಿ ಬುಕ್ ಮಾಡಿದ್ದು ಐಫೋನ್, ಬಂದಿದ್ದು ಗಡ್ಡಕ್ಕೆ ಹಚ್ಚುವ ಎಣ್ಣೆ, 1.8 ಲಕ್ಷ ರೂ. ಪರಿಹಾರಕ್ಕೆ ಗ್ರಾಹಕ ನ್ಯಾಯಾಲಯ ಆದೇಶ

ಆನ್‌ಲೈನ್‌ನಲ್ಲಿ ಐಫೋನ್ ಆರ್ಡರ್ ಮಾಡಿದ್ದ ಗ್ರಾಹಕನಿಗೆ ಫ್ಲಿಪ್‌ಕಾರ್ಟ್ ಗಡ್ಡದ ಎಣ್ಣೆ ತಲುಪಿಸಿದ ಪ್ರಕರಣದಲ್ಲಿ ಮುಂಬೈ ಗ್ರಾಹಕ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ಫ್ಲಿಪ್‌ಕಾರ್ಟ್‌ಗೆ 1.80 ರೂ. ಲಕ್ಷ ಪರಿಹಾರ ಪಾವತಿಸಲು ನಿರ್ದೇಶಿಸಿದೆ. ಇದರಲ್ಲಿ ಐಫೋನ್ ಬೆಲೆ, ಬಡ್ಡಿ, ಮಾನಸಿಕ ಯಾತನೆಗೆ ಹಾಗೂ ಕಾನೂನು ವೆಚ್ಚಕ್ಕೆ ಪರಿಹಾರ ಸೇರಿದೆ. ಇ-ಕಾಮರ್ಸ್ ಸಂಸ್ಥೆಗಳ ಅನ್ಯಾಯದ ವ್ಯಾಪಾರ ಪದ್ಧತಿಗಳಿಗೆ ಇದು ಎಚ್ಚರಿಕೆಯಾಗಿದೆ.

ಫ್ಲಿಪ್​ಕಾರ್ಟ್​ನಲ್ಲಿ ಬುಕ್ ಮಾಡಿದ್ದು ಐಫೋನ್, ಬಂದಿದ್ದು ಗಡ್ಡಕ್ಕೆ ಹಚ್ಚುವ ಎಣ್ಣೆ, 1.8 ಲಕ್ಷ ರೂ. ಪರಿಹಾರಕ್ಕೆ ಗ್ರಾಹಕ ನ್ಯಾಯಾಲಯ ಆದೇಶ
ಮೊಬೈಲ್

Updated on: Jul 24, 2026 | 12:01 PM

ಮುಂಬೈ,ಜುಲೈ 24: ಆನ್‌ಲೈನ್‌ನಲ್ಲಿ ಲಕ್ಷಾಂತರ ರೂಪಾಯಿ ಕೊಟ್ಟು ಪ್ರೀಮಿಯಂ ಐಫೋನ್ ಆರ್ಡರ್ ಮಾಡಿದ ಗ್ರಾಹಕನಿಗೆ ಫೋನ್ ಬದಲಿಗೆ ‘ಗಡ್ಡಕ್ಕೆ ಬೆಳೆಸುವ ಎಣ್ಣೆ’ ತಲುಪಿಸಿದ್ದ ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್(Flipkart)​ಗೆ ಮುಂಬೈನ ಗ್ರಾಹಕ ನ್ಯಾಯಾಲಯ ಭಾರಿ ದಂಡ ವಿಧಿಸಿದೆ. ಗ್ರಾಹಕನಿಗೆ ಫೋನ್‌ನ ಪೂರ್ಣ ಮೊತ್ತ 1.11 ಲಕ್ಷ ರೂ. ವನ್ನು ಬಡ್ಡಿ ಸಮೇತ ಮರುಪಾವತಿಸುವುದರ ಜೊತೆಗೆ, ಅನುಭವಿಸಿದ ಮಾನಸಿಕ ಯಾತನೆ ಹಾಗೂ ಕಾನೂನು ವೆಚ್ಚವಾಗಿ 70,000 ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ ಏನು?
ಏಪ್ರಿಲ್ 2023ರಲ್ಲಿ ಮುಂಬೈನ ಪೊವೈ ನಿವಾಸಿಯೊಬ್ಬರು ಫ್ಲಿಪ್‌ಕಾರ್ಟ್ ಮೂಲಕ ನೋ-ಕಾಸ್ಟ್ ಇಎಂಐ ಯೋಜನೆಯಡಿ 1,11,793 ರೂ. ವೆಚ್ಚ ಮಾಡಿ ಆ್ಯಪಲ್ ಐ-ಫೋನ್ 14 ಪ್ರೊ (128 GB) ಬುಕ್ ಮಾಡಿದ್ದರು. ಫೋನ್‌ಗಾಗಿ ಆರ್ಡರ್ ಮಾಡಿದ್ದ ಚಾರ್ಜರ್ ಮತ್ತು ಕವರ್ ಸರಿಯಾಗಿ ತಲುಪಿದ್ದರೂ, ಮುಖ್ಯ ಪಾರ್ಸೆಲ್ ಓಪನ್ ಮಾಡಿದಾಗ ಐಫೋನ್ ಬದಲಿಗೆ ಬಾಕ್ಸ್‌ನಲ್ಲಿ ‘ಗಡ್ಡದ ಬೆಳವಣಿಗೆಗೆ ಬಳಸುವ ಎಣ್ಣೆ’ ಮತ್ತು ಪ್ಯಾಕಿಂಗ್ ಸಾಮಗ್ರಿಗಳಿರುವುದು ಕಂಡುಬಂದಿತ್ತು.

ಗ್ರಾಹಕ ತಕ್ಷಣವೇ ಅಗತ್ಯ ಸಾಕ್ಷ್ಯಗಳೊಂದಿಗೆ ಫ್ಲಿಪ್‌ಕಾರ್ಟ್ ಗ್ರಾಹಕ ಸೇವೆಯನ್ನು ಸಂಪರ್ಕಿಸಿದರೂ, ಸಂಸ್ಥೆಯು ಯಾವುದೇ ಹಣ ಮರುಪಾವತಿ ಅಥವಾ ಹೊಸ ಫೋನ್ ನೀಡದೇ, ದೂರನ್ನು ಪರಿಹರಿಸಲಾಗಿದೆ ಎಂದು ಪದೇ ಪದೇ ಕ್ಲೋಸ್ ಮಾಡಿದೆ. ಸಮಸ್ಯೆ ಬಗೆಹರಿಯದಿದ್ದಾಗ ಗ್ರಾಹಕರು ಮುಂಬೈನ ಹೆಚ್ಚುವರಿ ಗ್ರಾಹಕ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಪೀಠವು ಈ ಕೆಳಗಿನ ಪ್ರಮುಖ ಆದೇಶಗಳನ್ನು ನೀಡಿದೆ.

ಮತ್ತಷ್ಟು ಓದಿ: Amazon Summer Sale: ಅಮೆಜಾನ್​ನಲ್ಲಿ ಶುರುವಾಗುತ್ತಿದೆ ಸಮ್ಮರ್ ಸೇಲ್: ಫ್ಲಿಪ್​ಕಾರ್ಟ್​ನಲ್ಲಿ ಸಾಸಾ ಲೇಲೆ ಸೇಲ್

ಐಫೋನ್‌ನ ಪೂರ್ಣ ಮೊತ್ತ 1,11,793 ರೂ.ವನ್ನು ವಾರ್ಷಿಕ ಶೇಕಡಾ 9 ರಷ್ಟು ಬಡ್ಡಿಯೊಂದಿಗೆ ಹಿಂತಿರುಗಿಸಬೇಕು. ಜೊತೆಗೆ ಗ್ರಾಹಕನಿಗೆ ಉಂಟಾದ ಮಾನಸಿಕ ಕಿರುಕುಳಕ್ಕೆ 50,000 ರೂ. ಹಾಗೂ ವ್ಯಾಜ್ಯದ ವೆಚ್ಚವಾಗಿ 20,000 ರೂ.ವನ್ನು 45 ದಿನಗಳ ಒಳಗೆ ಪಾವತಿಸಬೇಕು.

ಗ್ರಾಹಕರಿಗೆ ತಪ್ಪು ವಸ್ತು ತಲುಪಿದಾಗ ಇ-ಕಾಮರ್ಸ್ ಸಂಸ್ಥೆಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಸೂಕ್ತ ತನಿಖೆ ನಡೆಸದೆ ದೂರನ್ನು ಮುಚ್ಚುವುದು “ಅನ್ಯಾಯದ ವ್ಯಾಪಾರ ಪದ್ಧತಿ” ಎಂದು ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಈ ಪ್ರಕರಣದಲ್ಲಿ ತಯಾರಕ ಕಂಪನಿಯಾದ ‘ಆ್ಯಪಲ್ ಇಂಡಿಯಾ’ ಪಾತ್ರವೇನೂ ಇಲ್ಲದಿರುವುದರಿಂದ, ಅದರ ವಿರುದ್ಧದ ದೂರನ್ನು ಆಯೋಗ ವಜಾಗೊಳಿಸಿದೆ. ಪ್ಯಾಕಿಂಗ್ ಮತ್ತು ವಿತರಣೆಯ ಸಂಪೂರ್ಣ ತಪ್ಪು ಫ್ಲಿಪ್‌ಕಾರ್ಟ್ ಮತ್ತು ಅದರ ಮಾರಾಟಗಾರ ಸಂಸ್ಥೆಯದ್ದಾಗಿದೆ ಎಂದು ಸ್ಪಷ್ಟಪಡಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us