
ದೆಹಲಿ, ಅ.3: ದುಬೈನಿಂದ ಇಸ್ರೇಲ್‌ನ ತೆಲ್ ಅವೀವ್‌ಗೆ ಸಾಗುತ್ತಿದ್ದ ‘ಫ್ಲೈದುಬೈ’ (flydubai) ಸಂಸ್ಥೆಯ ವಿಮಾನವನ್ನು ಹೈಜಾಕ್ ಗೆ ಯತ್ನಿಸಿ, ಅದನ್ನು ತಡೆದ ಭಾರತೀಯ ಮೂಲದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಮೇಲೆ ಭೀಕರ ಚಾಕು ದಾಳಿ ನಡೆಸಿದ್ದ ಕೋ-ಪೈಲಟ್ ಜಿಹಾದಿ ಹಿನ್ನೆಲೆಯುಳ್ಳ ಉಗ್ರವಾದಿಯಾಗಿದ್ದು, ಈ ಹಿಂದೆ ಓಮನ್ ದೇಶದಲ್ಲೇ ಆತನ ವಿಮಾನ ಹಾರಾಟವನ್ನು ನಿಷೇಧಿಸಲಾಗಿತ್ತು ಎಂಬ ಆಘಾತಕಾರಿ ವಿಷಯ ‘ದಿ ವಾಲ್ ಸ್ಟ್ರೀಟ್ ಜರ್ನಲ್’ (WSJ) ವರದಿಯಿಂದ ಬಹಿರಂಗವಾಗಿದೆ. ಆತನನ್ನು ಓಮನ್ ತಂದೆ ಹಾಗೂ ಸಿರಿಯನ್ ತಾಯಿಗೆ ಯುಎಇಯಲ್ಲಿ ಜನಿಸಿದ್ದ ಓಮನ್ ಪ್ರಜೆ ಹಮಾಮ್ ಅಲ್-ಹಮಾಮಿ ಎಂದು ಗುರುತಿಸಲಾಗಿದೆ.
ಇಲ್ಲಿದೆ ನೋಡಿ ವಿಡಿಯೋ:
ವರದಿಯ ಪ್ರಕಾರ, ಹಮಾಮ್ ಅಲ್-ಹಮಾಮಿ ಸಿರಿಯಾದಲ್ಲಿದ್ದಾಗ ಉಗ್ರವಾದಿ ಐಡಿಯಾಲಜಿಯಿಂದ ಪ್ರಭಾವಿತಗೊಂಡಿದ್ದ, 2024 ರಲ್ಲಿ ‘ಓಮನ್ ಏರ್’ ಸಂಸ್ಥೆಯಲ್ಲಿ ಕೋ-ಪೈಲಟ್ ಟ್ರೈನಿಯಾಗಿದ್ದಾಗ ಈತನ ಬಳಿ ಅತ್ಯಂತ ಅಪಾಯಕಾರಿ ಉಗ್ರವಾದಿ ಸಾಹಿತ್ಯ ಹಾಗೂ ವೀಡಿಯೋಗಳು ಪತ್ತೆಯಾಗಿದ್ದವು. ಭದ್ರತಾ ಬೆದರಿಕೆಯ ಹಿನ್ನೆಲೆಯಲ್ಲಿ ಓಮನ್ ಆತನನ್ನು ಯಾವುದೇ ವಿಮಾನ ಹಾರಿಸದಂತೆ ಸಂಪೂರ್ಣವಾಗಿ ನಿಷೇಧಿಸಿ, ಕೇವಲ ಆಡಳಿತಾತ್ಮಕ ಹುದ್ದೆಗೆ ಸೀಮಿತಗೊಳಿಸಿತ್ತು.
ಓಮನ್ ವಿಧಿಸಿದ್ದ ಬ್ಯಾನ್ ಗಣನೆಗೆ ತೆಗೆದುಕೊಳ್ಳದೆ, ದುಬೈ ಮೂಲದ ‘ಫ್ಲೈದುಬೈ’ ಸಂಸ್ಥೆಯು ಎಂಟು ತಿಂಗಳ ಹಿಂದೆಯಷ್ಟೇ ಆತನನ್ನು ಕೆಲಸಕ್ಕೆ ಸೇರಿಸಿಕೊಂಡಿತ್ತು. ಪರಿಣಾಮ, ಅತ್ಯಂತ ಸೂಕ್ಷ್ಮ ಪ್ರದೇಶವಾದ ಯುಎಇ ಮತ್ತು ಇಸ್ರೇಲ್ ನಡುವಿನ ವಿಮಾನ ಹಾರಾಟದ ಹೊಣೆಯನ್ನು ಆತನಿಗೆ ವಹಿಸಲಾಗಿತ್ತು. ಆತ ಇಸ್ರೇಲ್ ನೆಲದಲ್ಲಿ 170ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಈ ಬೋಯಿಂಗ್ 737 ವಿಮಾನವನ್ನು ಪತನಗೊಳಿಸುವ ಪಕ್ಕಾ ಸಂಚು ರೂಪಿಸಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
#BREAKING: As per Arabic Media, Omani pilot linked to the Fly Dubai incident is named “Hamam Al-Hammami”. He was fired by Oman Air in 2024-2025 for browsing extremist websites regularly. Without background check hired by FlyDubai. Mother of Syrian origin. Official word awaited.
— Aditya Raj Kaul (@AdityaRajKaul) October 2, 2026
ಘಟನೆ ನಡೆದ ಕೇವಲ 9 ಗಂಟೆಗಳ ಅಂತರದಲ್ಲಿ ಆತನ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳಲ್ಲಿ ಉಗ್ರವಾದಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿತ್ತು. ಬೋಯಿಂಗ್ 737 ಕಾಕ್‌ಪಿಟ್‌ನಿಂದ ಇಸ್ರೇಲ್‌ನ ‘ಎಲ್ ಅಲ್’ ವಿಮಾನವನ್ನು ಜೂಮ್ ಮಾಡಿ ತೆಗೆದ ವೀಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, ವೀಡಿಯೋದ ಕೊನೆಯಲ್ಲಿ ಅಲ್ ಖೈದಾ ಮಾಜಿ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿ ಹಾಗೂ 2009 ರ ಅಮೆರಿಕ ದಾಳಿಯ ಆತ್ಮಹತ್ಯಾ ಬಾಂಬರ್ ಹುಮಾಮ್ ಖಲೀಲ್ ಅಬು-ಮುಲಾಲ್ ಅಲ್-ಬಲಾವಿ ಚಿತ್ರಗಳನ್ನು ಹಾಕಿದ್ದ. CNN ವರದಿಯ ಪ್ರಕಾರ, ಆತನ ಅಕೌಂಟ್‌ಗಳಲ್ಲಿ ತೀವ್ರ ಕೋಮುವಾದಿ ಹಾಗೂ ಮಹಿಳಾವಿರೋಧಿ ಆಲೋಚನೆಗಳಿದ್ದವು.
ಇದನ್ನೂ ಓದಿ: 174 ಪ್ರಯಾಣಿಕರ ಜೀವ ಉಳಿಸಿದ ವೀರ ಕ್ಯಾಪ್ಟನ್ ಸ್ಮಿತ್ ಮಚ್ಚರ್‌ಗೆ ‘ಅಶೋಕ ಚಕ್ರ’ ನೀಡಲು ದೇಶಾದ್ಯಂತ ಆಗ್ರಹ
ವಿಮಾನವು 34,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಅಲ್-ಹಮಾಮಿ ವಿಮಾನದ ನಿಯಂತ್ರಣ ತಪ್ಪಿಸಿ, ಪ್ರತಿ ನಿಮಿಷಕ್ಕೆ 23,000 ಅಡಿಗಳಷ್ಟು ವೇಗದಲ್ಲಿ ಕೆಳಕ್ಕೆ ಧುಮುಕುವಂತೆ ಮಾಡಿದ್ದ. ಇದನ್ನು ತಡೆಯಲು ಬಂದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಹಮಾಮ್ ಚಾಕುವಿನಿಂದ ಇರಿದಿದ್ದ. ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಾಗಿದ್ದರೂ ಧೈರ್ಯಗುಂದದ ಕ್ಯಾಪ್ಟನ್ ಸ್ಮಿತ್, ಕಾಕ್‌ಪಿಟ್ ಬಾಗಿಲನ್ನು ಅನ್‌ಲಾಕ್ ಮಾಡಿದರು. ಒಳಗಡೆ ಬಂದ ಪ್ರಯಾಣಿಕ ಯಾನಿವ್ ಹಯೂನ್ ಹಾಗೂ ಸಿಬ್ಬಂದಿ ದಾಳಿಕೋರನನ್ನು ತಡೆದು ಬಂಧಿಸಿದರು. ಅಷ್ಟರಲ್ಲಿ ವಿಮಾನದಲ್ಲಿದ್ದ ದಂತ ವೈದ್ಯರೊಬ್ಬರು (Dentist) ರಕ್ತದ ಮಡುವಿನಲ್ಲಿ ಬಿದ್ದಿದ್ದ ಕ್ಯಾಪ್ಟನ್ ಸ್ಮಿತ್ ಅವರಿಗೆ ತುರ್ತು ಪ್ರಥಮ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದರು. ಹಿಂಭಾಗದ ಸೀಟಿನಲ್ಲಿದ್ದ ಇಬ್ಬರು ರಿಲೀಫ್ ಪೈಲಟ್‌ಗಳು ತಕ್ಷಣ ಕಾಕ್‌ಪಿಟ್ ಪ್ರವೇಶಿಸಿ ವಿಮಾನವನ್ನು ಸೌದಿ ಅರೇಬಿಯಾದ ‘ತಬುಕ್’ (Tabuk) ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದರು. ಇದೀಗ ಈ ವಿಚಾರ ಎಲ್ಲ ಮೆಚ್ಚುಗೆಗೆ ಪಾತ್ರವಾಗಿದೆ. ನೆನ್ನೆ (ಅ.2)ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆಯಲ್ಲಿ “ನನಗೆ ಗಾಯಗಳಾಗಿದ್ದವು, ಆದರೆ 170ಕ್ಕೂ ಹೆಚ್ಚು ಅಮಾಯಕ ಪ್ರಯಾಣಿಕರನ್ನು ಸಾಲಾಗಿ ಸಾಯಲು ಬಿಡಲು ನನ್ನ ಮನಸ್ಸು ಬರಲಿಲ್ಲ” ಎಂದು ಕ್ಯಾಪ್ಟನ್ ಸ್ಮಿತ್ ಹೇಳಿಕೊಂಡಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:20 am, Sat, 3 October 26