ಹೊಸದಾಗಿ ಅಸ್ತಿತ್ವಕ್ಕೆ ಬರಲಿವೆ 1100 ರೈತ ಉತ್ಪಾದಕ ಸಂಸ್ಥೆಗಳು; ಕೇಂದ್ರ ಸಹಕಾರ ಸಚಿವಾಲಯದಿಂದ ಕ್ರಮ

|

Updated on: May 17, 2023 | 10:44 PM

ಪ್ರಧಾನಿ ನರೇಂದ್ರ ಮೋದಿಯವರ ‘ಸಹಕಾರ್ ಸೇ ಸಮೃದ್ಧಿ’ ಆಶಯದಡಿ ಸಹಕಾರಿ ಕ್ಷೇತ್ರದಲ್ಲಿ ಹೊಸದಾಗಿ 1,100 ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲಾಗುವುದು ಎಂದು ಅಮಿತ್ ಶಾ ನೇತೃತ್ವದ ಸಹಕಾರ ಸಚಿವಾಲಯ ಬುಧವಾರ ತಿಳಿಸಿದೆ.

ಹೊಸದಾಗಿ ಅಸ್ತಿತ್ವಕ್ಕೆ ಬರಲಿವೆ 1100 ರೈತ ಉತ್ಪಾದಕ ಸಂಸ್ಥೆಗಳು; ಕೇಂದ್ರ ಸಹಕಾರ ಸಚಿವಾಲಯದಿಂದ ಕ್ರಮ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ‘ಸಹಕಾರ್ ಸೇ ಸಮೃದ್ಧಿ’ ಆಶಯದಡಿ ಸಹಕಾರಿ ಕ್ಷೇತ್ರದಲ್ಲಿ (Cooperative Sector) ಹೊಸದಾಗಿ 1,100 ರೈತ ಉತ್ಪಾದಕ ಸಂಸ್ಥೆಗಳನ್ನು (FPOs) ಸ್ಥಾಪಿಸಲಾಗುವುದು ಎಂದು ಅಮಿತ್ ಶಾ ನೇತೃತ್ವದ ಸಹಕಾರ ಸಚಿವಾಲಯ ಬುಧವಾರ ತಿಳಿಸಿದೆ. ಕೃಷಿ ಸಚಿವಾಲಯವು 6,865 ಕೋಟಿ ರೂಪಾಯಿಗಳ ಬಜೆಟ್ ಅನುದಾನದೊಂದಿಗೆ 2021ರ ಫೆಬ್ರವರಿಯಿಂದ, 10,000 ರೈತ ಉತ್ಪಾದಕ ಸಂಸ್ಥೆಗಳ (FPO) ರಚನೆ ಮಾಡಿದೆ.

ಯೋಜನೆಯಡಿಯಲ್ಲಿ, 1,100 ಹೆಚ್ಚುವರಿ ಎಫ್‌ಪಿಒಗಳನ್ನು ಸ್ಥಾಪಿಸುವ ಗುರಿಯನ್ನು ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮಕ್ಕೆ (ಎನ್‌ಸಿಡಿಸಿ) ನಿಗದಿಪಡಿಸಲಾಗಿದೆ ಎಂದು ಸಹಕಾರ ಸಚಿವಾಲಯದ ಅಧಿಕೃತ ಹೇಳಿಕೆ ತಿಳಿಸಿದೆ. ಯೋಜನೆಯಡಿಯಲ್ಲಿ ಪ್ರತಿ ಎಫ್‌ಪಿಒಗೆ 33 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಇದಲ್ಲದೆ, ಕ್ಲಸ್ಟರ್ ಆಧಾರಿತ ವ್ಯಾಪಾರ ಸಂಸ್ಥೆಗಳಿಗೆ ಪ್ರತಿ ಎಫ್​​ಪಿಒಗೆ 25 ಲಕ್ಷ ರೂಪಾಯಿಗಳ ಹಣಕಾಸಿನ ನೆರವು ನೀಡಲಾಗುತ್ತದೆ.

ಸಹಕಾರ ಸಚಿವಾಲಯದ ಪ್ರಕಾರ, ಸುಮಾರು 13 ಕೋಟಿ ರೈತರನ್ನು ಹೊಂದಿರುವ ಪ್ರಾಥಮಿಕ ಕೃಷಿ ಸಾಲ ಸಂಘಗಳು ಪ್ರಾಥಮಿಕವಾಗಿ ಅಲ್ಪಾವಧಿಯ ಸಾಲ, ಬೀಜಗಳು ಮತ್ತು ರಸಗೊಬ್ಬರಗಳ ವಿತರಣೆಯಲ್ಲಿ ತೊಡಗಿಸಿಕೊಂಡಿವೆ. ಇದೀಗ ಹೊಸ ಎಫ್​ಪಿಒಗಳ ಸ್ಥಾಪನೆಯೊಂದಿಗೆ ಇತರ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಸಹಕಾರ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: PLI scheme: ಮೋದಿ ಸರ್ಕಾರದಿಂದ ಐಟಿ ಕ್ಷೇತ್ರಕ್ಕೆ ಪಿಎಲ್​ಐ ಯೋಜನೆಯಡಿ 17,000 ಕೋಟಿ ರೂ; ಅಶ್ವಿನಿ ವೈಷ್ಣವ್

ಪ್ರಾಥಮಿಕ ಕೃಷಿ ಸಾಲ ಸಂಘಗಳು ಜೇನುಸಾಕಣೆ, ಅಣಬೆ ಕೃಷಿ ಮತ್ತು ಇತರ ಕೃಷಿ ವಿಧಾನಗಳಿಂದ ಹೆಚ್ಚಿನ ಆದಾಯವನ್ನು ಉತ್ಪಾದಿಸುವ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹ ನೀಡುತ್ತವೆ. ಈ ಉಪಕ್ರಮವು ರೈತರಿಗೆ ಅಗತ್ಯವಾದ ಮಾರುಕಟ್ಟೆ ಸಂಪರ್ಕಗಳನ್ನು ಒದಗಿಸುವ ಮೂಲಕ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಖಚಿತಪಡಿಸುತ್ತದೆ ಎಂದು ಸಚಿವಾಲಯ ಹೇಳಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ