ನದಿಯ ದಡದಲ್ಲಿ ಸುಟ್ಟ ಕಾರು, ಒಳಗೊಂದು ಅಸ್ಥಿಪಂಜರ; ಬಯಲಾಯ್ತು ಪೊಲೀಸ್ ಸಿಬ್ಬಂದಿಯ ಕರಾಳ ಕಹಾನಿ

ಗುಜರಾತ್‌ನಲ್ಲಿ ಪೊಲೀಸ್ ಪ್ರೇಮ ಪ್ರಕರಣ ಭೀಕರ ಕೊಲೆಯಲ್ಲಿ ಅಂತ್ಯವಾಗಿದೆ. ಹೆಡ್‌ಕಾನ್‌ಸ್ಟೆಬಲ್ ಎಎಸ್‌ಐ ಅಧಿಕಾರಿಯನ್ನು ಪ್ರೇಮ ಸಂಬಂಧದ ಮನಸ್ತಾಪದಿಂದ ಹತ್ಯೆ ಮಾಡಿ, ಆತನ ಶವವನ್ನು ಕಾರಿನಲ್ಲಿಟ್ಟು ನದಿಯ ದಡದಲ್ಲಿ ಸುಟ್ಟು ಹಾಕಿದ್ದಾರೆ. ಸುಟ್ಟ ಕಾರಿನಲ್ಲಿ ಅಸ್ಥಿಪಂಜರ ಪತ್ತೆಯಾಗಿದ್ದು, ತನಿಖೆ ಬಳಿಕ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ನದಿಯ ದಡದಲ್ಲಿ ಸುಟ್ಟ ಕಾರು, ಒಳಗೊಂದು ಅಸ್ಥಿಪಂಜರ; ಬಯಲಾಯ್ತು ಪೊಲೀಸ್ ಸಿಬ್ಬಂದಿಯ ಕರಾಳ ಕಹಾನಿ
ಕಾರು
Image Credit source: IANS

Updated on: Nov 18, 2026 | 12:22 PM

ಅರವಳ್ಳಿ, ನವೆಂಬರ್ 18: ಪ್ರೀತಿ, ಸಂಬಂಧ, ಮನಸ್ತಾಪ ಕೊನೆಗೆ ಭೀಕರ ಘಟನೆಯೊಂದಕ್ಕೆ ಕಾರಣವಾಗಿದೆ. ಗುಜರಾತ್‌ನ ಅರವಳ್ಳಿ ಜಿಲ್ಲೆಯಲ್ಲಿ ಮಹಿಳಾ ಹೆಡ್‌ಕಾನ್‌ಸ್ಟೆಬಲ್ ಒಬ್ಬರು ತಮ್ಮ ಸಹೋದ್ಯೋಗಿ ಸಹಾಯಕ ಸಬ್‌ಇನ್ಸ್‌ಪೆಕ್ಟರ್ (ಎಎಸ್‌ಐ) ಅವರನ್ನು ಹತ್ಯೆ ಮಾಡಿದ ಆರೋಪ ಕೇಳಿಬಂದಿದೆ. ಬಳಿಕ ತನ್ನ ಸಹೋದರ ಮತ್ತು ಇಬ್ಬರು ಪರಿಚಿತರ ಸಹಾಯದಿಂದ ಶವವನ್ನು ಕಾರಿನಲ್ಲಿಟ್ಟು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

45 ವರ್ಷದ ಎಎಸ್‌ಐ ತಬಿಯಾದ್ ಮೃತರು, ಅವರು ಸಬರ್ಕಾಂತ ಜಿಲ್ಲೆಯ ಚಿಥೋಡಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ಪೊಲೀಸ್ ಠಾಣೆಯಲ್ಲಿ 37 ವರ್ಷದ ಮಹಿಳಾ ಹೆಡ್‌ಕಾನ್‌ಸ್ಟೆಬಲ್ ಅಲ್ಫಾಬೆನ್ ಕೂಡ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಪ್ರೇಮ ಸಂಬಂಧವಿತ್ತು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

Loading...

ಆದರೆ ಇತ್ತೀಚೆಗೆ ಅಲ್ಫಾಬೆನ್ ಈ ಸಂಬಂಧವನ್ನು ಕೊನೆಗೊಳಿಸಲು ನಿರ್ಧರಿಸಿದ್ದರು ಎನ್ನಲಾಗಿದೆ. ಇದಕ್ಕೆ ತಬಿಯಾದ್ ಒಪ್ಪದೆ ಸಂಬಂಧ ಮುಂದುವರಿಸುವಂತೆ ಒತ್ತಡ ಹೇರುತ್ತಿದ್ದರು ಎಂಬ ಆರೋಪವಿದೆ. ಇದೇ ವಿಚಾರ ಇಬ್ಬರ ನಡುವೆ ಮನಸ್ತಾಪಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

 

ಬಾಡಿಗೆ ಮನೆಗೆ ಕರೆಸಿ ಹತ್ಯೆ
ನವೆಂಬರ್ 8ರ ರಾತ್ರಿ ಅಲ್ಫಾಬೆನ್ ಅವರು ತಬಿಯಾದ್ ಅವರನ್ನು ಚಿಥೋಡಾದಲ್ಲಿರುವ ತಮ್ಮ ಬಾಡಿಗೆ ಮನೆಗೆ ಬರುವಂತೆ ಕರೆದಿದ್ದಾರೆ. ತಬಿಯಾದ್ ತಮ್ಮ ಬಿಳಿ ಮಾರುತಿ ಎರ್ಟಿಗಾ ಕಾರಿನಲ್ಲಿ ಅಲ್ಲಿಗೆ ಬಂದಿದ್ದರು. ಇದೇ ವೇಳೆ ಅಲ್ಫಾಬೆನ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಮರುದಿನ ಅಂದರೆ ನವೆಂಬರ್ 9ರಂದು ಅಲ್ಫಾಬೆನ್ ತಮ್ಮ ಸಹೋದರ ಕಲ್ಪೇಶ್‌ಗೆ ಕರೆ ಮಾಡಿದ್ದಾರೆ. ಬಳಿಕ 36 ವರ್ಷದ ಕಲ್ಪೇಶ್ ತನ್ನ 28 ವರ್ಷದ ಸೋದರಸಂಬಂಧಿ ಪಂಕಜ್ ಕುಮಾರ್ ಜೊತೆ ಬಿಳಿ ಮಾರುತಿ ಇಕೋ ಕಾರಿನಲ್ಲಿ ಮನೆಗೆ ಬಂದಿದ್ದಾರೆ. ಮೂವರು ಸೇರಿ ತಬಿಯಾದ್ ಅವರ ಶವವನ್ನು ಚೀಲದಲ್ಲಿ ತುಂಬಿ ಮನೆಯೊಳಗೆ ಇರಿಸಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ:

ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ

 

ಶವವನ್ನು ವಿಲೇವಾರಿ ಮಾಡಲು ಸಂಚು
ಶವವನ್ನು ವಿಲೇವಾರಿ ಮಾಡಲು ಆರೋಪಿಗಳು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಮೊದಲು ಪಂಕಜ್ ತಬಿಯಾದ್ ಅವರ ಎರ್ಟಿಗಾ ಕಾರನ್ನು ಕನಾದರ್ ಗ್ರಾಮದ ಹೊರವಲಯದಲ್ಲಿರುವ ಧರಿತ್ರಿ ಮಾತಾ ದೇವಸ್ಥಾನದ ಬಳಿಯ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ಅಲ್ಲಿಂದ ವಾಪಸ್ ಬಂದಿದ್ದಾನೆ.

ಇತ್ತ ಕಲ್ಪೇಶ್ ತನ್ನ ಸ್ನೇಹಿತ 33 ವರ್ಷದ ಮನೋಜ್‌ಕುಮಾರ್ ನಿನಾಮನ ಸಹಾಯ ಪಡೆದಿದ್ದಾನೆ. ಇಬ್ಬರೂ ವಿಜಯನಗರದ ಪೆಟ್ರೋಲ್ ಬಂಕ್‌ಗೆ ತೆರಳಿ ಕ್ಯಾನ್‌ನಲ್ಲಿ ಪೆಟ್ರೋಲ್ ಖರೀದಿಸಿದ್ದಾರೆ. ನಂತರ ಅಲ್ಫಾಬೆನ್, ಕಲ್ಪೇಶ್ ಮತ್ತು ಮನೋಜ್ ಸೇರಿ ಶವವನ್ನು ಕಾರಿನಲ್ಲಿ ಸಾಗಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿದ್ದ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ
ನವೆಂಬರ್ 9ರ ರಾತ್ರಿ ಆರೋಪಿಗಳು ಶವವಿದ್ದ ಚೀಲವನ್ನು ಇಕೋ ಕಾರಿನಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಬಳಿಕ ಅದನ್ನು ಎರ್ಟಿಗಾ ಕಾರಿಗೆ ವರ್ಗಾಯಿಸಿ, ಮನೋಜ್ ಕಾರು ಚಾಲನೆ ಮಾಡಿದ್ದಾನೆ. ಅಲ್ಫಾಬೆನ್ ಮತ್ತು ಕಲ್ಪೇಶ್ ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿದ್ದಾರೆ.

ಹಠ್ಮತಿ ನದಿಯ ಸಮೀಪದ ಪದ್ರಾ ಗ್ರಾಮದ ಹೊರವಲಯಕ್ಕೆ ತಲುಪಿದ ಬಳಿಕ ಎರ್ಟಿಗಾ ಕಾರಿನೊಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ಶವದ ಜೊತೆಗೆ ಕಾರನ್ನೂ ಸುಟ್ಟು ಹಾಕುವ ಮೂಲಕ ಸಾಕ್ಷ್ಯ ನಾಶಪಡಿಸಲು ಆರೋಪಿಗಳು ಪ್ರಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ಹಚ್ಚುವಾಗ ಮಹಿಳಾ ಪೊಲೀಸ್ ಅಧಿಕಾರಿಗೂ ಗಾಯ
ಕಾರಿಗೆ ಬೆಂಕಿ ಹಚ್ಚುವ ಸಂದರ್ಭದಲ್ಲಿ ಜ್ವಾಲೆ ಏಕಾಏಕಿ ಹರಡಿದೆ. ಇದರಿಂದ ಅಲ್ಫಾಬೆನ್ ಅವರ ಮುಖ, ಕೈಗಳು ಮತ್ತು ದೇಹದ ಮುಂಭಾಗ ಸುಟ್ಟಿದೆ. ಬಳಿಕ ಅವರು ಚಿಥೋಡಾ, ವಿಜಯನಗರ ಮತ್ತು ಹಿಮತ್‌ನಗರದಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಸುಟ್ಟ ಕಾರಿನಿಂದ ಪ್ರಕರಣ ಬಯಲಿಗೆ
ನವೆಂಬರ್ 10ರಂದು ಭಿಲೋಡಾ ತಾಲೂಕಿನ ಪದ್ರಾ ಗ್ರಾಮದ ಹೊರವಲಯದಲ್ಲಿರುವ ಹಠ್ಮತಿ ನದಿಯ ಬಳಿ ಸಂಪೂರ್ಣ ಸುಟ್ಟುಹೋದ ಮಾರುತಿ ಎರ್ಟಿಗಾ ಕಾರು ಪತ್ತೆಯಾಗಿತ್ತು. ಕಾರಿನೊಳಗೆ ಮಾನವ ಅಸ್ಥಿಪಂಜರವೂ ಪತ್ತೆಯಾಗಿತ್ತು. ಆರಂಭದಲ್ಲಿ ಪೊಲೀಸರು ಆಕಸ್ಮಿಕ ಸಾವು ಎಂದು ತನಿಖೆ ಆರಂಭಿಸಿದ್ದರು.

ಈ ನಡುವೆ ನವೆಂಬರ್ 8ರಂದು ಕರ್ತವ್ಯಕ್ಕೆ ತೆರಳಿದ್ದ ತಮ್ಮ ಮಗ ಮನೆಗೆ ವಾಪಸ್ ಬಂದಿಲ್ಲ ಎಂದು ತಬಿಯಾದ್ ಅವರ ತಂದೆ ಬಾಬುಭಾಯ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುಟ್ಟುಹೋದ ಕಾರಿನಲ್ಲಿ ಪತ್ತೆಯಾದ ಅಸ್ಥಿಪಂಜರ ತಮ್ಮ ಮಗನದ್ದಾಗಿರಬಹುದು ಎಂಬ ಅನುಮಾನದಿಂದ ಪೊಲೀಸರನ್ನು ಸಂಪರ್ಕಿಸಿದ್ದರು. ಬಳಿಕ ತನಿಖೆ ನಡೆಸಿದ ಪೊಲೀಸರು ಮೃತ ವ್ಯಕ್ತಿಯನ್ನು ತಬಿಯಾದ್ ಎಂದು ಗುರುತಿಸಿದ್ದಾರೆ.

ನಾಲ್ವರು ಆರೋಪಿಗಳ ಬಂಧನ
ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಮಹಿಳಾ ಹೆಡ್‌ಕಾನ್‌ಸ್ಟೆಬಲ್ ಅಲ್ಫಾಬೆನ್, ಆಕೆಯ ಸಹೋದರ ಕಲ್ಪೇಶ್, ಸೋದರಸಂಬಂಧಿ ಪಂಕಜ್ ಕುಮಾರ್ ಮತ್ತು ಸ್ನೇಹಿತ ಮನೋಜ್‌ಕುಮಾರ್ ನಿನಾಮ ಅವರನ್ನು ಬಂಧಿಸಿದ್ದಾರೆ. ಸಂಬಂಧದ ವಿಚಾರವಾಗಿ ಆರಂಭವಾದ ಸಂಘರ್ಷವೇ ಈ ಘಟನೆಗೆ ಕಾರಣವಾಯಿತೇ ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us