
ಗಾಂಧಿನಗರ, ಅಕ್ಟೋಬರ್ 22: ಗುಜರಾತ್ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳ ಆವರಣಕ್ಕೆ ಹೊರಗಿನ ವ್ಯಕ್ತಿಗಳ ಅನಧಿಕೃತ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ ಶಿಕ್ಷಣ ಇಲಾಖೆಯು ಕಠಿಣ ಸುತ್ತೋಲೆಯನ್ನು ಹೊರಡಿಸಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸುರಕ್ಷತೆ, ಘನತೆ, ಗೌಪ್ಯತೆ ಮತ್ತು ಶಾಲೆಯ ಶೈಕ್ಷಣಿಕ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ ಈ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ವಿರೋಧ ಪಕ್ಷಗಳ ಮುಖಂಡರು, ಸಂಘಟನೆಗಳು ಹಾಗೂ ಸಾರ್ವಜನಿಕರು ಅನುಮತಿಯಿಲ್ಲದೆ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವುದು ಮತ್ತು ವಿಡಿಯೋ ರೆಕಾರ್ಡ್ ಮಾಡಿ ಹಂಚಿಕೊಳ್ಳುತ್ತಿರುವುದು ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದೆ.
ಲಿಖಿತ ಅನುಮತಿ ಕಡ್ಡಾಯ: ಶಾಲಾ ಮುಖ್ಯಸ್ಥರು ಅಥವಾ ಪ್ರಾಂಶುಪಾಲರ ಪೂರ್ವ ಲಿಖಿತ ಅನುಮತಿಯಿಲ್ಲದೆ ಯಾವುದೇ ಹೊರಗಿನ ವ್ಯಕ್ತಿಗೆ ಶಾಲಾ ಆವರಣ ಪ್ರವೇಶಿಸಲು ಅವಕಾಶವಿಲ್ಲ. ಅನುಮತಿ ಪಡೆದ ಪ್ರತಿಯೊಬ್ಬ ವ್ಯಕ್ತಿಯೂ ಶಾಲೆಯ ಮುಖ್ಯ ದ್ವಾರದಲ್ಲಿರುವ ಸಂದರ್ಶಕರ ರಿಜಿಸ್ಟರ್‌ನಲ್ಲಿ ತಮ್ಮ ಸಂಪೂರ್ಣ ವಿವರ ನಮೂದಿಸಬೇಕು.
ತರಗತಿ ಕೊಠಡಿಗಳಿಗೆ ಪ್ರವೇಶ ನಿರ್ಬಂಧ: ಕ್ಲಾಸ್‌ರೂಮ್‌ಗಳು, ಪ್ರಯೋಗಾಲಯಗಳು, ಹಾಸ್ಟೆಲ್‌ಗಳು, ಆಟದ ಮೈದಾನ ಹಾಗೂ ಶೌಚಾಲಯಗಳಂತಹ ವಿದ್ಯಾರ್ಥಿಗಳಿರುವ ಸೂಕ್ಷ್ಮ ಸ್ಥಳಗಳಿಗೆ ಹೊರಗಿನವರು ಪ್ರವೇಶಿಸುವಂತಿಲ್ಲ. ಒಂದು ವೇಳೆ ಅನುಮತಿ ನೀಡಿದ್ದರೂ, ಶಾಲಾ ಶಿಕ್ಷಕರು ಅಥವಾ ಅಧಿಕೃತ ಸಿಬ್ಬಂದಿ ಜೊತೆಯಲ್ಲಿಯೇ ಇರಬೇಕು.
ವಿಡಿಯೋಗ್ರಫಿ ಹಾಗೂ ಫೋಟೋಗ್ರಫಿ ಸಂಪೂರ್ಣ ಬ್ಯಾನ್: ಪ್ರಾಂಶುಪಾಲರ ಒಪ್ಪಿಗೆಯಿಲ್ಲದೆ ವಿದ್ಯಾರ್ಥಿಗಳು, ಶಿಕ್ಷಕರು ಅಥವಾ ಶಾಲಾ ಚಟುವಟಿಕೆಗಳ ಛಾಯಾಗ್ರಹಣ, ವಿಡಿಯೋ ಚಿತ್ರೀಕರಣ, ಸಂದರ್ಶನ, ಆಡಿಯೋ ರೆಕಾರ್ಡಿಂಗ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಮಕ್ಕಳ ವೈಯಕ್ತಿಕ ಮಾಹಿತಿ ಸಂಗ್ರಹಿಸುವುದಕ್ಕೂ ನಿರ್ಬಂಧ ಹೇರಲಾಗಿದೆ.
ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮಶಾಲೆಗಳ ಶಿಸ್ತು ಅಥವಾ ಭದ್ರತೆಗೆ ಧಕ್ಕೆಯುಂಟುಮಾಡುವ ಯಾವುದೇ ವ್ಯಕ್ತಿಗೆ ಪ್ರವೇಶ ನಿರಾಕರಿಸುವ ಸಂಪೂರ್ಣ ಅಧಿಕಾರವನ್ನು ಪ್ರಾಂಶುಪಾಲರಿಗೆ ನೀಡಲಾಗಿದೆ. ನಿಯಮ ಮೀರಿ ಯಾರಾದರೂ ಅಕ್ರಮವಾಗಿ ಶಾಲೆಗೆ ನುಗ್ಗಿದರೆ, ಆವರಣ ತೊರೆಯಲು ನಿರಾಕರಿಸಿದರೆ ಅಥವಾ ಅನಧಿಕೃತ ವಿಡಿಯೋ ಚಿತ್ರೀಕರಣಕ್ಕೆ ಯತ್ನಿಸಿದರೆ, ಶಾಲಾ ಆಡಳಿತವು ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮತ್ತು ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ (DEO) ದೂರು ನೀಡಬೇಕು.
ಇದನ್ನೂ ಓದಿ: ಮಕ್ಕಳಿಲ್ಲದೆ ಖಾಲಿಯಾಗುತ್ತಿವೆ ಸರ್ಕಾರಿ ಶಾಲೆಗಳು: ಕೇವಲ 1 ಮಗುವಿನೊಂದಿಗೆ ನಡೆಯುತ್ತಿದೆ ಈ ಪ್ರಾಥಮಿಕ ಶಾಲೆ!
ಅಂತಹ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (BNS), ಮಕ್ಕಳ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (POCSO), ಬಾಲಾಪರಾಧ ನ್ಯಾಯ ಕಾಯ್ದೆ (JJ Act) ಹಾಗೂ ಐಟಿ ಕಾಯ್ದೆಯಡಿ (IT Act) ಕಠಿಣ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಕಾನೂನಾತ್ಮಕ ಸಮರ್ಥನೆಮಕ್ಕಳ ಪೋಷಕರ ಸ್ಥಾನದಲ್ಲಿ ನಿಂತು ಅವರ ಹಿತರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಜತೆಗೆ ಸಂವಿಧಾನದ 21ನೇ ವಿಧಿ ಹಾಗೂ ಸುಪ್ರೀಂ ಕೋರ್ಟ್‌ನ ಮಹತ್ವದ ಪುಟ್ಟಸ್ವಾಮಿ ತೀರ್ಪಿನಲ್ಲಿ ನೀಡಲಾದ ‘ಗೌಪ್ಯತೆಯ ಹಕ್ಕು ಮಕ್ಕಳಿಗೂ ಅನ್ವಯಿಸುವುದರಿಂದ ಈ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ