ಮದುವೆ ಖರ್ಚಿಗೆ ಹಣವಿಲ್ಲದೆ ಕಳ್ಳತನದ ಹಾದಿ: ಹೈದರಾಬಾದ್‌ನಲ್ಲಿ ಸರಗಳ್ಳತನಕ್ಕಿಳಿದ ಪ್ರೇಮಿಗಳು ಅರೆಸ್ಟ್

ಹೈದರಾಬಾದ್‌ನಲ್ಲಿ ಮದುವೆ ಖರ್ಚಿಗೆ ಹಣವಿಲ್ಲದೆ, ನಿರುದ್ಯೋಗಿಗಳಾಗಿದ್ದ ಪ್ರೇಮಿಗಳ ಜೋಡಿ ಸರಗಳ್ಳತನಕ್ಕಿಳಿದು ಬಂಧನಕ್ಕೊಳಗಾಗಿದೆ. ದೇವಸ್ಥಾನದಲ್ಲಿ ವೃದ್ಧೆಯ ಚಿನ್ನದ ಸರ ಕಸಿದಿದ್ದ ಈ ಜೋಡಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿ ಪೊಲೀಸರ ಬಲೆಗೆ ಬಿದ್ದಿದೆ. ಮೊದಲ ಬಾರಿಗೆ ಅಪರಾಧ ಎಸಗಿದ ಇವರ ಬಳಿಯಿಂದ ಕದ್ದ ಚಿನ್ನ ಮತ್ತು ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.

ಮದುವೆ ಖರ್ಚಿಗೆ ಹಣವಿಲ್ಲದೆ ಕಳ್ಳತನದ ಹಾದಿ: ಹೈದರಾಬಾದ್‌ನಲ್ಲಿ ಸರಗಳ್ಳತನಕ್ಕಿಳಿದ ಪ್ರೇಮಿಗಳು  ಅರೆಸ್ಟ್
ಆರೋಪಿಗಳು
Image Credit source: NDTV

Updated on: Oct 22, 2026 | 10:50 AM

ಹೈದರಾಬಾದ್, ಅಕ್ಟೋಬರ್ 22: ಇಬ್ಬರೂ ನಿರುದ್ಯೋಗಿಗಳು, ಒಬ್ಬರೊನ್ನಬ್ಬರು ತುಂಬಾ ಪ್ರೀತಿಸುತ್ತಿದ್ದರು ಆದರೆ ಮದುವೆಯಾಗಲು ಹಣವಿರಲಿಲ್ಲ, ಹೀಗಾಗಿ ಸರಗಳ್ಳತನಕ್ಕಿಳಿದಿದ್ದ ಜೋಡಿಯನ್ನು ಪೊಲೀಸರು ಬಂಧಿಸಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಬಂಧಿತರನ್ನು ಆಂಧ್ರಪ್ರದೇಶ ಮೂಲದ ಅನ್ನಪುರೆಡ್ಡಿ ದುರ್ಗಾ ರಮಣ ರೆಡ್ಡಿ (23) ಮತ್ತು ತೆಂಕ ವರಲಕ್ಷ್ಮಿ (24) ಎಂದು ಗುರುತಿಸಲಾಗಿದೆ.

ಹೈದರಾಬಾದ್‌ಗೆ ಆಗಮನ: ಕಳೆದ ಒಂದೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಉದ್ಯೋಗ ಹುಡುಕಿಕೊಂಡು ಒಂದು ತಿಂಗಳ ಹಿಂದೆ ಹೈದರಾಬಾದ್‌ಗೆ ಬಂದು ಗುರ್ರಾಮಗುಡ ಪ್ರದೇಶದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ನಗರದಲ್ಲಿ ಎಷ್ಟು ಹುಡುಕಿದರೂ ಸೂಕ್ತ ಕೆಲಸ ಸಿಗಲಿಲ್ಲ. ಅತ್ತ ಮದುವೆಯಾಗಲು ಕುಟುಂಬದ ಬೆಂಬಲ ಮತ್ತು ಕೈಯಲ್ಲಿ ಹಣವಿಲ್ಲದೆ ಕಂಗಾಲಾದ ಇವರು, ಸುಲಭವಾಗಿ ಹಣ ಸಂಪಾದಿಸಲು ಅಪರಾಧದ ಹಾದಿ ತುಳಿದರು.

ಅಕ್ಟೋಬರ್ 18 ರಂದು ಬೆಳಗ್ಗೆ ಸುಮಾರು 6 ಗಂಟೆಗೆ ವೆಂಕಟ ರಮಣ ಕಾಲೋನಿಯ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಂದ ಈ ಜೋಡಿ, ದೇವಸ್ಥಾನವನ್ನು ಸ್ವಚ್ಛಗೊಳಿಸುತ್ತಿದ್ದ 65 ವರ್ಷದ ಅಂಡುಗುಲ ರಾಮುಲಮ್ಮ ಎಂಬ ವೃದ್ಧೆಯನ್ನು ಗುರಿಯಾಗಿಸಿಕೊಂಡಿದ್ದರು. ಕೆಲಸದಲ್ಲಿ ಸಹಾಯ ಮಾಡುವ ನೆಪದಲ್ಲಿ ಹತ್ತಿರ ಹೋದ ವರಲಕ್ಷ್ಮಿ, ವೃದ್ಧೆಯ ಬಾಯಿ ಮುಚ್ಚಿ ಹಿಡಿದುಕೊಂಡಿದ್ದಾಳೆ. ಅದೇ ಸಮಯಕ್ಕೆ ರಮಣ ರೆಡ್ಡಿ ಆಕೆಯ ಕುತ್ತಿಗೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನದ ಸರವನ್ನು (ತಾಳಿ ಸರ) ಬಲವಂತವಾಗಿ ಕಿತ್ತುಕೊಂಡಿದ್ದಾನೆ. ನಂತರ ಇಬ್ಬರೂ ತಮ್ಮ ಆಕ್ಟಿವಾ ಸ್ಕೂಟರ್‌ನಲ್ಲಿ ಪರಾರಿಯಾಗಿದ್ದರು.

ಮತ್ತಷ್ಟು ಓದಿ: ‘ಮದುವೆ ಮಾಡಿಸಿ ಸಾರ್’ ಎಂದು ಶಾಸಕರಿಗೆ ಯುವಕನ ಅರ್ಜಿ! ಎ ಮಂಜು ಕೊಟ್ಟರು ಅಚ್ಚರಿಯ ಸಲಹೆ

ಸಿಸಿಟಿವಿ ನೆರವಿನಿಂದ ಪೊಲೀಸರ ಬಲೆಗೆ
ಘಟನೆ ನಡೆದ ತಕ್ಷಣ ದೇವಸ್ಥಾನದ ಸುತ್ತಮುತ್ತಲಿನ ಹಲವು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ ತನಿಖಾಧಿಕಾರಿಗಳು ಆರೋಪಿಗಳ ಚಲನವಲನವನ್ನು ಪತ್ತೆಹಚ್ಚಿದರು.

ಬುಧವಾರ ಬೆಳಿಗ್ಗೆ ವನಸ್ಥಲಿಪುರಂನ ಕಮಲಾ ನಗರದಲ್ಲಿರುವ ಆಭರಣ ಅಂಗಡಿಯೊಂದರಲ್ಲಿ ಕದ್ದ ಚಿನ್ನವನ್ನು ಮಾರಾಟ ಮಾಡಲು ಬಂದಿದ್ದಾಗ ಪೊಲೀಸರು ಇಬ್ಬರನ್ನೂ ಸುತ್ತುವರಿದು ಬಂಧಿಸಿದರು. ಆರೋಪಿಗಳಿಂದ 30 ಗ್ರಾಂ ಚಿನ್ನದ ಸರ, ಎರಡು ಮೊಬೈಲ್ ಫೋನ್‌ಗಳು ಮತ್ತು ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಮೊದಲ ಬಾರಿಗೆ ಅಪರಾಧ ಕೃತ್ಯ ಎಸಗಿರುವುದು ತಿಳಿದುಬಂದಿದೆ. ಇವರ ವಿರುದ್ಧ ಈ ಹಿಂದೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ. ಸದ್ಯ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us