ಅಲೋಪಥಿ ವಿರುದ್ಧ ಹೇಳಿಕೆ ನೀಡಿದ್ದ ಯೋಗಗುರು ಬಾಬಾ ರಾಮ್ ದೇವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯವನ್ನು ಒತ್ತಾಯಿಸಿದ್ದ ಭಾರತೀಯ ವೈದ್ಯಕೀಯ ಸಂಘ (IMA), ಅವರ ವಿರುದ್ಧ ಮಾನನಷ್ಟ 1000 ಕೋಟಿ ರೂಪಾಯಿಯ ಮೊಕದ್ದಮೆಯನ್ನೂ ಹೂಡಿದೆ. ಅಷ್ಟಕ್ಕೂ ಸುಮ್ಮನಾಗದೆ ಇದೀಗ ಪ್ರಧಾನಿ ನರೇಂದ್ರ ಮೋದಿಯವರಿಗೇ ಪತ್ರ ಬರೆದು, ಬಾಬಾ ರಾಮ್ದೇವ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ಅಲೋಪಥಿ ವೈದ್ಯಕೀಯ ಪದ್ಧತಿ ಮತ್ತು ವೈದ್ಯರ ವಿರುದ್ಧ ಬಾಬಾ ರಾಮ್ದೇವ್ ಕೆಟ್ಟದಾಗಿ ಮಾತನಾಡಿದ್ದಾರೆ. ಎರಡೂ ಡೋಸ್ ಲಸಿಕೆ ಪಡೆದಿದ್ದರೂ 10,000ಕ್ಕೂ ಹೆಚ್ಚು ಮೃತಪಟ್ಟಿದ್ದಾರೆ ಎಂದು ತಪ್ಪು ಮಾಹಿತಿಯನ್ನು ಜನರಿಗೆ ತಿಳಿಸಿದ್ದಾರೆ. ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡಬೇಕು ಎಂದೂ ಆಗ್ರಹಿಸಿದೆ.
ಬಾಬಾ ರಾಮ್ ದೇವ್ ಮಾತನಾಡಿರುವ, 140 ಸೆಕೆಂಡ್ಗಳ ವಿಡಿಯೋವೊಂದು ಕಳೆದ ವಾರದಿಂದಲೂ ವೈರಲ್ ಆಗುತ್ತಿದೆ. ಅದರಲ್ಲಿ ಅವರು ಅಲೋಪಥಿಕ್ ವೈದ್ಯಕೀಯ ಪದ್ಧತಿಯ ವಿರುದ್ಧ ಮಾತನಾಡಿದ್ದಾರೆ. ಕೊವಿಡ್ 19 ಸೋಂಕಿಗೆ ಬಳಸಲಾಗುತ್ತಿರುವ ಕೆಲವು ಔಷಧಿಗಳ ಬಗ್ಗೆಯೂ ಪ್ರಶ್ನೆ ಎತ್ತಿದ್ದರು. ಅದನ್ನು ನೋಡಿದ ಭಾರತೀಯ ವೈದ್ಯಕೀಯ ಸಂಘ ಇದನ್ನು ಆರೋಗ್ಯ ಸಚಿವರ ಗಮನಕ್ಕೆ ತಂದಿತ್ತು. ಹಾಗೇ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಕೂಡ ಇದನ್ನು ಖಂಡಿಸಿದ್ದರು. ನಿಮ್ಮ ಹೇಳಿಕೆಗಳನ್ನು ವಾಪಸ್ ಪಡೆಯಿರಿ, ಅಲೋಪಥಿಕ್ ವಿರುದ್ಧ ಮಾತನಾಡಿ ಇಡೀ ದೇಶದ ಭಾವನೆಗೆ ಧಕ್ಕೆ ತಂದಿದ್ದೀರಿ ಎಂದೂ ಹೇಳಿದ್ದರು.
ಆದರೆ ಈ ಬಗ್ಗೆ ಸಮರ್ಥನೆ ನೀಡಿದ್ದ ಪತಂಜಲಿ ಟ್ರಸ್ಟ್, ಬಾಬಾ ರಾಮ್ದೇವ್ ಅವರಿಗೆ ಅಲೋಪಥಿ ಬಗ್ಗೆ ತುಂಬ ಗೌರವ ಇದೆ. ಅವರು ವಾಟ್ಸ್ಆ್ಯಪ್ನಲ್ಲಿ ಬಂದಿದ್ದ ಒಂದು ಸಂದೇಶವನ್ನು ಓದುತ್ತಿದ್ದ ವಿಡಿಯೋ ಅದು ಎಂದು ಹೇಳಿತ್ತು. ಆದರೆ ಐಎಂಎ ಸದ್ಯಕ್ಕೆ ವಿಷಯವನ್ನು ಬಿಡುತ್ತಿಲ್ಲ. ಐಎಂಎ ಉತ್ತರಖಾಂಡ್ ಕಾರ್ಯದರ್ಶಿ ಅಜಯ್ ಕುಮಾರ್ ಅವರು ಸುಮಾರು 6 ಪೇಜ್ಗಳುಳ್ಳ ನೋಟಿಸ್ನ್ನು ವಕೀಲ ನೀರಜ್ ಪಾಂಡೆ ಮೂಲಕ ಕಳಿಸಿದ್ದಾರೆ.
ಇದನ್ನು ಓದಿ: ‘ದಿ ಫ್ಯಾಮಿಲಿ ಮ್ಯಾನ್ 2’ ವಿವಾದದ ಬಗ್ಗೆ ಮೌನ ಮುರಿದ ಮನೋಜ್ ಬಾಜಪೇಯ್