ಈಗೀಗಂತೂ ದೇಶದಲ್ಲಿ ಮಾದಕ ವಸ್ತುಗಳ (Drugs) ಬಳಕೆ, ಸಾಗಾಟ, ಪ್ರಕರಣಗಳು ಹೆಚ್ಚುತ್ತಿವೆ. ಉಡ್ತಾ ಪಂಜಾಬ್ ಎಂಬುದು ಈ ಮೊದಲೇ ಭರ್ಜರಿ ಸುದ್ದಿ ಮಾಡಿದ ಪ್ರಕರಣ. ಆದರೆ ಈಗೀಗ ಕರ್ನಾಟಕದ ಸ್ಯಾಂಡಲ್ವುಡ್, ದೇಶದ ಹಿಂದಿ ಚಿತ್ರೋದ್ಯಮವಾದ ಬಾಲಿವುಡ್, ರಾಜಕಾರಣಿಗಳ ಮನೆಯಂಗಳದಿಂದಲೂ ಡ್ರಗ್ಸ್ ಸುದ್ದಿ ಕೇಳಿಬರುತ್ತಿದೆ. ದೊಡ್ಡದೊಡ್ಡ ಗಣ್ಯರ ಹೆಸರೇ ಇದರಲ್ಲಿ ಕೇಳಿಬರುತ್ತಿದೆ. ಹಾಗೇ, ಇನ್ನೊಂದೆಡೆ ಈ ಮಾದಕ ವಸ್ತುಗಳನ್ನು ಕೇಂದ್ರದ ತನಿಖಾ ಪಡೆಗಳು ವಶಪಡಿಸಿಕೊಳ್ಳುವ ಪ್ರಮಾಣವೂ ಜಾಸ್ತಿಯಾಗಿದೆ. ಈ ಬಗ್ಗೆ ಎನ್ಸಿಬಿ ( Narcotics Control Bureau-ಮಾದಕ ವಸ್ತು ನಿಯಂತ್ರಣ ಮಂಡಳಿ) ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (DRI)ದ ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ನ್ಯೂಸ್ 18 ವರದಿ ಮಾಡಿದೆ.
2018ರಿಂದ 2021ರವರೆಗೆ ಅಂದರೆ ಕೇವಲ ನಾಲ್ಕು ವರ್ಷದಲ್ಲಿ ಹೆರಾಯಿನ್ ವಶಪಡಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿದೆ. 2018ರಲ್ಲಿ ಒಂದು ಬಾರಿಗೆ 8-9 ಕೆಜಿ ಪ್ರಮಾಣದಲ್ಲಿ ವಶಪಡಿಸಿಕೊಳ್ಳಲಾಗುತ್ತಿತ್ತು. ಆದರೆ ಈಗ 2021ರಲ್ಲಿ ಒಂದು ಸಲಕ್ಕೇ 3 ಸಾವಿರ ಕೆಜಿಯಷ್ಟು ಪ್ರಮಾಣದಲ್ಲಿ ಹೆರಾಯಿನ್ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಬರೀ ನಾಲ್ಕೇ ವರ್ಷದಲ್ಲಿ ಭಾರತದಲ್ಲಿ ಜಪ್ತಿಯಾಗುವ ಮಾದಕ ವಸ್ತುವಿನ ಪ್ರಮಾಣ ಮಿತಿಮೀರಿದೆ ಎಂದು ಹೇಳಿದ್ದಾರೆ. ಯಾವುದೇ ವಸ್ತುಗಳ ಕಳ್ಳಸಾಗಣೆಯ ಮೇಲೆ ಈ ಗುಪ್ತಚರ ಕಂದಾಯ ಇಲಾಖೆ ನಿಗಾ ಇಡುತ್ತದೆ. ಹಾಗೇ, ಎನ್ಸಿಬಿ ಮಾದಕ ವಸ್ತುಗಳ ಕಳ್ಳಸಾಗಣೆ ನಿಯಂತ್ರಣ ಸಂಸ್ಥೆಯಾಗಿದೆ. ಈ ಎರಡೂ ಸಂಸ್ಥೆಗೆ ಸಂಬಂಧಪಟ್ಟ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಕೊವಿಡ್ 19 ಸಾಂಕ್ರಾಮಿಕದಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಯಾಣದ ಮೇಲೆ ನಿರ್ಬಂಧ ಹೇರಿದ್ದರೂ ಕೂಡ ಈ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಮಾಣ ಹೆಚ್ಚಾಗಿದ್ದಾಗಿ ಮಾಹಿತಿ ನೀಡಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹೆರಾಯಿನ್ ಸ್ಮಗ್ಲಿಂಗ್ನಲ್ಲಿ ಶಾಕಿಂಗ್ ಎನ್ನಿಸುವಷ್ಟರ ಮಟ್ಟಿಗೆ ಹೆಚ್ಚಳವಾಗಿದೆ. ಇದರಿಂದಾಗಿ ಭಾರತವು ಕಳ್ಳಸಾಗಣೆದಾರರ ಸಾಗಣೆ ಕೇಂದ್ರವಾದಂತೆ ಭಾಸವಾಗುತ್ತಿದೆ ಎಂದು ಡಿಆರ್ಐ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಹೆರಾಯನ್ ಜಪ್ತಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂಬುದನ್ನು ಎನ್ಸಿಬಿ ಕೂಡ ದೃಢಪಡಿಸಿದೆ. 2017ರಲ್ಲಿ ದೇಶದಲ್ಲಿ ವಿವಿಧ ಪೊಲೀಸ್ ಪಡೆಗಳು ಸುಮಾರು 875 ಕೆಜಿಯಷ್ಟು ಹೆರಾಯಿನ್ನ್ನು ವಶಪಡಿಸಿಕೊಂಡಿದ್ದವು. ಅದು 2018ರ ಹೊತ್ತಿಗೆ 913 ಕೆಜಿಗೆ ಏರಿತು. 2019ರಲ್ಲಿ ಒಟ್ಟಾರೆ 2308 ಕೆಜಿ ವಶಪಡಿಸಿಕೊಳ್ಳಲಾಯಿತು. ಅದೇ 2020ರ ಹೊತ್ತಿಗೆ ಶೇ.41ರಷ್ಟು ಹೆಚ್ಚಳವಾಗಿ ಒಟ್ಟಾರೆ 3276 ಕೆಜಿ ಹೆರಾಯಿನ್ ಜಪ್ತಿ ಮಾಡಲಾಗಿದೆ. 2021ರಕ್ಕೂ ಈ ಪ್ರಮಾಣ ಮುಂದುವರಿದಿದೆ ಎಂದು ಎನ್ಸಿಬಿ ಡಾಟಾ ಬಿಡುಗಡೆ ಮಾಡಿದೆ.
ಭಾರತದ ಮಾರ್ಗದಲ್ಲಿ ಕಳ್ಳಸಾಗಣೆ
ಈ ಮೊದಲು ಇರಾನ್ ಮತ್ತು ಇರಾಕ್ ಮಾರ್ಗದಲ್ಲಿ ಮಾದಕ ವಸ್ತುಗಳ ಕಳ್ಳಸಾಗಣೆ ಆಗುತ್ತಿತ್ತು. ಆದರೆ ಈಗೀಗ ಭಾರತವೇ ಕಳ್ಳಸಾಗಣೆಯ ಕೇಂದ್ರವಾಗುತ್ತಿದೆ ಎಂದು ಪಂಜಾಬ್ನ ಮಾಜಿ ಡಿಜಿಪಿ ಶಶಿಕಾಂತ್ ಶರ್ಮಾ ಹೇಳಿದ್ದಾರೆ. ಮಾದಕ ವಸ್ತು ಇರಲಿ ಅಥವಾ ಇನ್ಯಾವುದೇ ವಸ್ತು ಇರಲಿ ಕಳ್ಳಸಾಗಣೆ ಮಾಡುವವರು ಆಗಾಗ ಮಾರ್ಗವನ್ನು ಬದಲಿಸುತ್ತಾರೆ. ಮೊದಲೆಲ್ಲ ಇರಾನ್, ಇರಾಕ್ ಮಾರ್ಗವಾಗಿ ಸ್ಮಗ್ಲಿಂಗ್ ನಡೆಯತ್ತಿತ್ತು. ಆದರೆ ಬರುಬರುತ್ತ ಅಲ್ಲೆಲ್ಲ ನಿರ್ಬಂಧಗಳನ್ನು ವಿಧಿಸಲು ಶುರು ಮಾಡಲಾಯಿತು. ಮತ್ತೆ ಅಂಥ ರಾಷ್ಟ್ರಗಳೊಂದಿಗೆ ಪಾಕಿಸ್ತಾನ ತನ್ನ ಸಂಬಂಧ ಹಾಳು ಮಾಡಿಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಭಾರತದ ಮೂಲಕವೇ ಈಗ ಡ್ರಗ್ಸ್ ಸಾಗಣೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಸದ್ಯ ಎನ್ಸಿಬಿ, ಡಿಆರ್ಐ ಮೂಲಗಳು ಹೇಳುವ ಪ್ರಕಾರ ಈ ಮಾದಕ ವಸ್ತುಗಳ ಕಳ್ಳಸಾಗಣೆ ಭಾರತದ ಸಾಗರ ಮಾರ್ಗಗಳ ಮೂಲಕ ನಡೆಯುತ್ತಿದೆ. ಭಾರತದ ಕರಾವಳಿ ತೀರಗಳು ಹಲವು ಚಿಕ್ಕಚಿಕ್ಕ ಬಂದರುಗಳನ್ನು ಹೊಂದಿರುವುದರಿಂದ ಸಾಗಣೆದಾರರಿಗೆ ಅನುಕೂಲವಾಗಿದೆ. ಇತ್ತೀಚಿನ ದಿನಗಳಲ್ಲಿ ಗಲ್ಫ್ ದೇಶಗಳಿಂದ ದೋಣಿ, ಹಡಗುಗಳ ಮೂಲಕ ಡ್ರಗ್ಸ್ ಸಾಗಣೆ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಮಾದಕವಸ್ತುಗಳ ರವಾನೆಯನ್ನು ತಡೆಹಿಡಿಯುವುದು ಭಾರತೀಯ ಏಜೆನ್ಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸಮುದ್ರ ಮಾರ್ಗಗಳ ಮೂಲಕ ಬರುವ ಎಲ್ಲ ಔಷಧಿಗಳನ್ನೂ ಪರಿಶೀಲಿಸಿಯೇ ಮುಂದೆ ಕಳಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಅಮೆರಿಕದ ಕೆಂಟಕಿ ಸೇರಿ ಹಲವೆಡೆ ಸುಂಟರಗಾಳಿ ಆರ್ಭಟ; 50ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆಂದ ಗವರ್ನರ್