ದೆಹಲಿ, ಸೆ.18: ಇಂದಿನಿಂದ ಐದು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ (Parliament Special Session) ನಡೆಯಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು 11.00 ಗಂಟೆಗೆ ಸಂಸತ್ನಲ್ಲಿ ಭಾಷಣ ಮಾಡಲಿದ್ದಾರೆ. ಈಗಾಗಲೇ ಸಂಸತ್ ಅಧಿವೇಶಕ್ಕೆ ಆಗಮಿಸಿದ ಮೋದಿ, ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಭಾರತದ ಚಂದ್ರಯಾನ-3 ನಮ್ಮ ತಿರಂಗವನ್ನು ಎತ್ತಿ ಹಿಡಿದಿದೆ. ಶಿವಶಕ್ತಿ ಪಾಯಿಂಟ್ ಹೊಸ ಸ್ಫೂರ್ತಿಯ ಕೇಂದ್ರವಾಗಿದೆ. ಇದು ನಮ್ಮಲ್ಲಿ ಹೆಮ್ಮೆಯನ್ನು ತುಂಬುತ್ತಿದೆ. ಇಂತಹ ಸಾಧನೆಯನ್ನು ಮಾಡಿದಾಗ, ಜಗತ್ತು ನಮ್ಮ ಆಧುನಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಾಥ್ ನೀಡುತ್ತದೆ. ಈ ಸಾಮರ್ಥ್ಯವು ಪ್ರಪಂಚದ ಮುಂದೆ ಇಟ್ಟಾಗ ಹಲವಾರು ಅವಕಾಶಗಳು ಭಾರತದ ಬಾಗಿಲುಗಳನ್ನು ತಟ್ಟುತ್ತವೆ ಎಂದು ಹೇಳಿದರು.
ಇನ್ನು ಮೋದಿ ಅವರು ಜಿ-20 ಯಶಸ್ವಿನ ಬಗ್ಗೆಯು ಮಾಧ್ಯಮಗಳೊಂದಿದೆ ಮಾತನಾಡಿದರು. ಜಿ-20 ಶೃಂಗಸಭೆಯು ಜಾಗತಿಕ ದಕ್ಷಿಣದ ಧ್ವನಿಯಾಗಿದೆ. ಈ ಸಭೆಯಲ್ಲಿ ಆಫ್ರಿಕನ್ ಯೂನಿಯನ್ ಜಿ-20ಯಲ್ಲಿ ಖಾಯಂ ಸದಸ್ಯತ್ವ ಪಡೆದಿದೆ. ಇದೆಲ್ಲವೂ ಭಾರತದ ಉಜ್ವಲ ಭವಿಷ್ಯದ ಸಂಕೇತವಾಗಿದೆ. ಇನ್ನು ನಿನ್ನೆ ‘ಯಶೋಭೂಮಿ’ ಅಂತರಾಷ್ಟ್ರೀಯ ಸಮಾವೇಶ ಕೇಂದ್ರವನ್ನು ದೇಶಕ್ಕೆ ಸಮರ್ಪಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಇಂದಿನಿಂದ ಐದು ದಿನಗಳ ಕಾಲ ಸಂಸತ್ ವಿಶೇಷ ಅಧಿವೇಶನ
ಇಂದು ನಡೆಯುವ ಅಧಿವೇಶನ ಚಿಕ್ಕದ್ದು, ಆದರೆ ಇದರ ಸಮಯ ದೊಡ್ಡದು, ಇದು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿವೇಶನವಾಗಿದೆ. ಈ ಅಧಿವೇಶನ ಒಂದು ವಿಶೇಷತೆ ಎಂದರೆ 75 ವರ್ಷಗಳ ಪ್ರಯಾಣ. ಇನ್ನು ಈ ಹೊಸ ಗಮ್ಯಸ್ಥಾನ ಈ ಪ್ರಯಾಣವನ್ನು ಮಾಡಲಿದೆ. ಅಂದರೆ ಹೊಸ ಸಂಸತ್ ಭವನಕ್ಕೆ ಹೋಗುತ್ತಿದೆ. 2047ರ ವೇಳೆ ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿ ಮಾಡಬೇಕು. ಇದಕ್ಕಾಗಿ ಮುಂದೆ ಎಲ್ಲ ನಿರ್ಧಾರವನ್ನು ಹೊಸ ಸಂಸತ್ ಭವನದಲ್ಲಿ ತೆಗೆದುಕೊಳ್ಳಲಾಗುತ್ತದೆ.
ನಾಳೆ ಗಣೇಶ ಚತುರ್ಥಿ, ಈ ಶುಭ ದಿನದಂದು ನಮ್ಮ ಎಲ್ಲ ವಿಚಾರಗಳ ಜತೆಗೆ ಹೊಸ ಸಂಸತ್ತಿಗೆ ತೆರಳಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಣಪತಿಯನ್ನು ವಿಘ್ನಹರ್ತ ಎಂದೂ ಕರೆಯಲಾಗುತ್ತದೆ, ಈಗ ದೇಶದ ಅಭಿವೃದ್ಧಿಯಲ್ಲಿ ಯಾವುದೇ ಅಡೆತಡೆಗಳಿಲ್ಲದೆ, ನಿರ್ವಿಘ್ನವಾಗಿ ಭಾರತದ ಎಲ್ಲ ಸಂಕಲ್ಪ ಪರಿಪೂರ್ಣಗೊಳ್ಳಬೇಕು. ಸಂಸತ್ತಿನ ಈ ಅಧಿವೇಶನವು ಚಿಕ್ಕದಾಗಿರಬಹುದು, ಆದರೆ ಇದು ಐತಿಹಾಸಿಕವಾಗಿದೆ ಎಂದು ಹೇಳಿದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:04 am, Mon, 18 September 23