ಈ ರೀತಿ ಪ್ರೇಮ ನಿವೇದನೆ ಎಲ್ಲಾದ್ರೂ ನೋಡಿದ್ದೀರಾ, ಸೇನಾ ಹೆಲಿಕಾಪ್ಟರ್ ಎದುರು ತನ್ನ ಗೆಳತಿಯ ಬೆರಳಿಗೆ ಉಂಗುರ ತೊಡಿಸಿದ ಪೈಲಟ್

ನಾಸಿಕ್‌ನಲ್ಲಿ, ತರಬೇತಿ ಮುಗಿಸಿದ ನಂತರ, ಸೇನಾ ಪೈಲಟ್ ಕ್ಯಾಪ್ಟನ್ ಭಾರತ್ ಭಾರದ್ವಾಜ್ ತಮ್ಮ ಪ್ರೇಯಸಿ ಆರುಷಿಗೆ ಮಿಲಿಟರಿ ಹೆಲಿಕಾಪ್ಟರ್ ಮುಂದೆ ಅನಿರೀಕ್ಷಿತವಾಗಿ ಪ್ರೇಮ ನಿವೇದನೆ ಮಾಡಿದರು. ಐದು ವರ್ಷಗಳ ಪ್ರೀತಿಗೆ ಈ ಮೂಲಕ ವಿಶಿಷ್ಟ ತಿರುವು ನೀಡಿದರು. ಈ ಹೃದಯಸ್ಪರ್ಶಿ ಮತ್ತು ಸಿನಿಮೀಯ ಕ್ಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಅಪಾರ ಮೆಚ್ಚುಗೆ ಗಳಿಸಿದೆ, ಇದು ಪ್ರೀತಿ ಮತ್ತು ಶೌರ್ಯದ ಸಂಕೇತವಾಗಿ ಹೊರಹೊಮ್ಮಿದೆ.

ಈ ರೀತಿ ಪ್ರೇಮ ನಿವೇದನೆ ಎಲ್ಲಾದ್ರೂ ನೋಡಿದ್ದೀರಾ, ಸೇನಾ ಹೆಲಿಕಾಪ್ಟರ್ ಎದುರು ತನ್ನ ಗೆಳತಿಯ ಬೆರಳಿಗೆ ಉಂಗುರ ತೊಡಿಸಿದ ಪೈಲಟ್
ಪೈಲಟ್ ಪ್ರೇಮ ನಿವೇದನೆ

Updated on: Jun 03, 2026 | 8:49 AM

ನಾಸಿಕ್, ಜೂನ್ 03: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಯುದ್ಧ ಸೇನಾ ವಾಯುಯಾನ ತರಬೇತಿ ಶಾಲೆಯ (CAATS) ರನ್‌ವೇ ಇತ್ತೀಚೆಗೆ ಕೇವಲ ಮಿಲಿಟರಿ ಶಿಸ್ತಿಗಷ್ಟೇ ಅಲ್ಲ, ಹೃದಯಸ್ಪರ್ಶಿ ಪ್ರೇಮ ನಿವೇದನೆಯೊಂದಕ್ಕೂ ಸಾಕ್ಷಿಯಾಯಿತು. ದೀರ್ಘ ಹಾಗೂ ಕಠಿಣ ತರಬೇತಿಯನ್ನು ಮುಗಿಸಿ ಭಾರತೀಯ ಸೇನೆಯ ವಾಯುಯಾನ ವಿಭಾಗದ ಪೈಲಟ್(Pilot) ಆಗಿ ಹೊರಹೊಮ್ಮಿದ ಕ್ಯಾಪ್ಟನ್ ಭರತ್ ಭಾರದ್ವಾಜ್, ತಮ್ಮ ವೃತ್ತಿಜೀವನದ ಅತ್ಯುನ್ನತ ಯಶಸ್ಸಿನ ದಿನವನ್ನೇ ತಮ್ಮ ಜೀವನದ ಅತ್ಯಂತ ಸುಂದರ ಕ್ಷಣವನ್ನಾಗಿಯೂ ಬದಲಾಯಿಸಿಕೊಂಡರು.

ಪಾಸಿಂಗ್-ಔಟ್ ಪೆರೇಡ್ ಮತ್ತು ರೋಮಾಂಚಕ ವಾಯುಯಾನ ಪ್ರದರ್ಶನ ಮುಗಿದ ತಕ್ಷಣ, ಕ್ಯಾಪ್ಟನ್ ಭಾರದ್ವಾಜ್ ಎಲ್ಲರ ಸಮ್ಮುಖದಲ್ಲೇ ತಮ್ಮ ಗೆಳತಿ ಆರುಷಿಗೆ ವಿಶಿಷ್ಟವಾಗಿ ಪ್ರೊಪೋಸ್ ಮಾಡಿ ಇಡೀ ಆವರಣದಲ್ಲಿ ಸಂಭ್ರಮದ ಅಲೆ ಎಬ್ಬಿಸಿದರು.

ರನ್‌ವೇ ಮೇಲೊಂದು ಸಿನಿಮೀಯ ಕ್ಷಣ
ತಮ್ಮ ಮಿಲಿಟರಿ ಸಮವಸ್ತ್ರವನ್ನು ಧರಿಸಿದ್ದ ಕ್ಯಾಪ್ಟನ್ ಭರತ್, ರನ್‌ವೇ ಮೇಲೆ ನಿಲ್ಲಿಸಲಾಗಿದ್ದ ಬೃಹತ್ ಸೇನಾ ಹೆಲಿಕಾಪ್ಟರ್‌ನ ಮುಂಭಾಗಕ್ಕೆ ಆರುಷಿಯನ್ನು ಕರೆತಂದರು. ಅಲ್ಲಿದ್ದ ಅಧಿಕಾರಿಗಳು ಹಾಗೂ ಕುಟುಂಬಸ್ಥರು ಕುತೂಹಲದಿಂದ ನೋಡುತ್ತಿರುವಾಗಲೇ, ಆರುಷಿಯ ಎದುರು ಮೊಣಕಾಲೂರಿ ಕುಳಿತು ನಿಶ್ಚಿತಾರ್ಥದ ಉಂಗುರವನ್ನು ನೀಡಿ ಪ್ರೇಮ ನಿವೇದನೆ ಮಾಡಿದರು.

ಈ ಅನಿರೀಕ್ಷಿತ ಸರ್ಪ್ರೈಸ್‌ನಿಂದ ಆರುಷಿ ಭಾವುಕರಾದರು. ಅವರು ಸಂತಸದಿಂದ ಒಪ್ಪಿಗೆ ಸೂಚಿಸುತ್ತಿದ್ದಂತೆ, ಸುತ್ತಲೂ ಸೇರಿದ್ದ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳು ಚಪ್ಪಾಳೆ ಹಾಗೂ ಹರ್ಷೋದ್ಗಾರಗಳ ಮೂಲಕ ಈ ಜೋಡಿಯನ್ನು ಹರಸಿದರು.

ಮತ್ತಷ್ಟು ಓದಿ: ಅಜಿತ್ ಪವಾರ್ ವಿಮಾನ ಅಪಘಾತ ಆಕಸ್ಮಿಕವಲ್ಲ, ವ್ಯವಸ್ಥಿತ ಕೊಲೆ? ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲು

ಐದು ವರ್ಷಗಳ ಪ್ರೀತಿ, ಕಠಿಣ ಪರಿಶ್ರಮಕ್ಕೆ ಸಿಕ್ಕ ಫಲ
ತಮ್ಮ ಜೀವನದ ಈ ಅಪೂರ್ವ ಕ್ಷಣದ ಕುರಿತು ಕ್ಯಾಪ್ಟನ್ ಭರತ್ ಭಾರದ್ವಾಜ್ ಅವರು ಸುದ್ದಿ ಸಂಸ್ಥೆ ಎಎನ್​ಐಯೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ನಾವು ಇಂದು ಕಠಿಣ ತರಬೇತಿ ಮುಗಿಸಿ ಪೈಲಟ್‌ಗಳಾಗಿದ್ದೇವೆ. ನಮ್ಮ ಕಠಿಣ ಪರಿಶ್ರಮಕ್ಕೆ ಇಂದು ದೊಡ್ಡ ಗೌರವ ಸಿಕ್ಕಿದೆ. ನಾನು ಮತ್ತು ಆರುಷಿ ಕಳೆದ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದೇವೆ. ನನ್ನ ವೃತ್ತಿಜೀವನ ಹಾಗೂ ನನ್ನ ಕುಟುಂಬಕ್ಕೆ ಇದು ಎಷ್ಟು ಮಹತ್ವದ ದಿನವೋ, ಅಷ್ಟೇ ಮೌಲ್ಯಯುತವಾಗಿ ಈ ದಿನವನ್ನು ನನ್ನ ಪ್ರೇಯಸಿಗೂ ಜೀವಮಾನದ ನೆನಪಾಗಿಸಬೇಕು ಎಂಬುದು ನನ್ನ ಆಲೋಚನೆಯಾಗಿತ್ತು ಎಂದಿದ್ದಾರೆ.

ವಿಡಿಯೋ

ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮತ್ತು ಮೆಚ್ಚುಗೆ
ಈ ಅಪರೂಪದ ಪ್ರಸ್ತಾವನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಲಕ್ಷಾಂತರ ಜನರ ಹೃದಯ ಗೆದ್ದಿದೆ. ಬಹುತೇಕ ನೆಟ್ಟಿಗರು ಇದನ್ನು ನಿಜ ಜೀವನದ ಸಿನಿಮೀಯ ಕ್ಷಣ ಎಂದು ಶ್ಲಾಘಿಸಿದ್ದು, ದೇಶ ಕಾಯುವ ಸೈನಿಕನೊಬ್ಬ ತನ್ನ ಯಶಸ್ಸಿನ ಉತ್ತುಂಗದಲ್ಲಿ ಪ್ರೀತಿಪಾತ್ರರನ್ನು ಗೌರವಿಸಿದ ರೀತಿಗೆ ಮನಸೋತಿದ್ದಾರೆ.

ಇದೇ ವೇಳೆ, ಸೇನೆಯ ಕಟ್ಟುನಿಟ್ಟಾದ ಶಿಸ್ತಿನ ಚೌಕಟ್ಟಿನೊಳಗೆ ಇಂತಹ ವೈಯಕ್ತಿಕ ಆಚರಣೆಗಳು ಎಷ್ಟು ಸೂಕ್ತ ಎಂಬ ಬಗ್ಗೆ ಅಂತರ್ಜಾಲದಲ್ಲಿ ಸಣ್ಣ ಮಟ್ಟದ ಚರ್ಚೆಗಳೂ ನಡೆದಿವೆ. ಆದಾಗ್ಯೂ, ತರಬೇತಿ ಮುಗಿಸಿದ ಯುವ ಅಧಿಕಾರಿಗಳ ಸಂಭ್ರಮದ ನಡುವೆ ಮೂಡಿಬಂದ ಈ ಸುಂದರ ಮಾನವೀಯ ಸಂಬಂಧದ ಕಥೆ ಪ್ರಸ್ತುತ ಎಲ್ಲೆಡೆ ಭಾರಿ ಸೌಂಡ್ ಮಾಡುತ್ತಿದ್ದು, ನವಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us