ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 350ಕ್ಕೆ ಹೆಚ್ಚಿಸುವ ಗುರಿ: ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣದ ಭರವಸೆ

ಭಾರತವು ಪ್ರಸ್ತುತ ವಿಶ್ವದ ಮೂರನೇ ಅತಿದೊಡ್ಡ ವಿಮಾನಯಾನ ಮಾರುಕಟ್ಟೆಯಾಗಿ, 2047ರ ವೇಳೆಗೆ 350 ವಿಮಾನ ನಿಲ್ದಾಣಗಳನ್ನು ಹೊಂದುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ. ಸಣ್ಣ ನಗರಗಳ ಸಂಪರ್ಕ, ಆರ್ಥಿಕ ಚಟುವಟಿಕೆಗಳ ಕೇಂದ್ರಗಳ ಅಭಿವೃದ್ಧಿ ಹಾಗೂ ನಿರ್ವಹಣೆ (MRO) ಕ್ಷೇತ್ರದಲ್ಲಿ ಜಾಗತಿಕ ನಾಯಕತ್ವ ಸಾಧಿಸುವುದು ಪ್ರಮುಖ ಉದ್ದೇಶವಾಗಿದೆ. ಇದು ಕರ್ನಾಟಕ ಸೇರಿದಂತೆ ರಾಜ್ಯಗಳಲ್ಲಿ ಪ್ರವಾಸೋದ್ಯಮ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ.

ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ 350ಕ್ಕೆ ಹೆಚ್ಚಿಸುವ ಗುರಿ: ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣದ ಭರವಸೆ
ಸಾಂದರ್ಭಿಕ ಚಿತ್ರ

Updated on: Jan 24, 2026 | 1:37 PM

ದೆಹಲಿ,ಜ.24: ಭಾರತವು ಪ್ರಸ್ತುತ ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿ (India aviation market) ಹೊರಹೊಮ್ಮಿದೆ. ಅಮೇರಿಕಾ ಮತ್ತು ಚೀನಾದ ನಂತರ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ದಿನದಿಂದ ದಿನಕ್ಕೆ ವಿಮಾನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ. ವಿಮಾನಯಾನ ಕ್ಷೇತ್ರದ ಭವಿಷ್ಯದ ಬಗ್ಗೆ ಅತ್ಯಂತ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ತುಂಬುವ (2047 – ವಿಕಸಿತ ಭಾರತ) ವೇಳೆಗೆ ದೇಶದಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆಯನ್ನು 350ಕ್ಕೆ ಹೆಚ್ಚಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದ್ದಾರೆ.

ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಜಾಗತಿಕ ಪಾಲುದಾರರನ್ನುದ್ದೇಶಿಸಿ ಮಾತನಾಡಿದ ರಾಮ್ ಮೋಹನ್ ನಾಯ್ಡು, ಕಳೆದ 10 ವರ್ಷಗಳಲ್ಲಿ ಭಾರತದ ವಿಮಾನ ನಿಲ್ದಾಣಗಳ ಸಂಖ್ಯೆ 74 ರಿಂದ 157ಕ್ಕೆ ಏರಿಕೆಯಾಗಿದೆ. ದೇಶದ ಪ್ರತಿಯೊಂದು ಸಾಮಾನ್ಯ ಪ್ರಜೆಗೂ ವಿಮಾನ ಪ್ರಯಾಣ ಲಭ್ಯವಾಗುವಂತೆ ಮಾಡುವುದು ಮತ್ತು ಸಣ್ಣ ನಗರಗಳನ್ನು ವಾಯುಮಾರ್ಗದ ಮೂಲಕ ಸಂಪರ್ಕಿಸುವುದು, ನಮ್ಮ ಪ್ರಮುಖ ಗುರಿಯಾಗಿದೆ. ಕೇವಲ ಮೆಟ್ರೋ ನಗರಗಳಲ್ಲದೆ, ಎರಡನೇ ಮತ್ತು ಮೂರನೇ ಶ್ರೇಣಿಯ ನಗರಗಳಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ವಿಮಾನ ನಿಲ್ದಾಣಗಳನ್ನು ಕೇವಲ ಪ್ರಯಾಣದ ಕೇಂದ್ರಗಳನ್ನಾಗಿ ಮಾಡದೆ, ಅವುಗಳನ್ನು ಆರ್ಥಿಕ ಚಟುವಟಿಕೆಗಳ ಕೇಂದ್ರಗಳನ್ನಾಗಿ (Aviation Hubs) ಪರಿವರ್ತಿಸುವ ಕೆಲಸವನ್ನು ಕೂಡ ಮಾಡಲಾಗುವುದು.

ಗುಡ್ಡಗಾಡು ಮತ್ತು ದುರ್ಗಮ ಪ್ರದೇಶಗಳಿಗೆ ಹೆಲಿಕಾಪ್ಟರ್ ಮತ್ತು ಸಣ್ಣ ವಿಮಾನಗಳ ಸೇವೆಯನ್ನು ವಿಸ್ತರಿಸುವುದು ಎಂದು ಹೇಳಿದ್ದಾರೆ. 2047 ರ ವೇಳೆಗೆ ದೇಶವು ತನ್ನ ವಿಮಾನ ನಿಲ್ದಾಣ ಜಾಲವನ್ನು ಪ್ರಸ್ತುತ 164 ರಿಂದ 350 ವಿಮಾನ ನಿಲ್ದಾಣಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ, ಆದರೆ ಭಾರತೀಯ ವಾಹಕಗಳು ಸುಮಾರು 1,700 ಹೊಸ ವಿಮಾನಗಳಿಗೆ ಆದೇಶಗಳನ್ನು ನೀಡಿವೆ, ಇದು ಬಲವಾದ ಬೇಡಿಕೆ ಮತ್ತು ಸಾಮರ್ಥ್ಯ ವಿಸ್ತರಣೆಯನ್ನು ಪ್ರತಿಬಿಂಬಿಸುತ್ತದೆ.  ಭಾರತದಲ್ಲಿ ವಿಮಾನ ಘಟಕಗಳ ಉತ್ಪಾದನೆ ಮತ್ತು ನಿರ್ವಹಣೆ, ದುರಸ್ತಿ ಬಗ್ಗೆಯೂ ಹೆಚ್ಚಿನ ಗಮನ ನೀಡಲಾಗುತ್ತಿದೆ.

ಇದನ್ನೂ ಓದಿ: ‘ಟ್ರಾಫಿಕ್​​​ ಕಾರಣದಿಂದ ನಾನು ಹುಟ್ಟಿ ಬೆಳೆದ ಬೆಂಗಳೂರನ್ನು ಬಿಡುತ್ತಿದ್ದೇನೆ’: ಮಂಗಳೂರಿಗೆ ಹೋಗುವ ನಿರ್ಧಾರ ಮಾಡಿದ ಉದ್ಯಮಿ

ಕರ್ನಾಟಕದ ಮೇಲಾಗುವ ಪರಿಣಾಮ:

ಹೊಸ ನಿಲ್ದಾಣಗಳು: ಶಿವಮೊಗ್ಗ, ವಿಜಯಪುರ ನಿಲ್ದಾಣಗಳು ಈಗಾಗಲೇ ಕಾರ್ಯಾರಂಭ ಮಾಡಿದ್ದು, ರಾಯಚೂರು, ಕಾರವಾರ ಮತ್ತು ಚಿಕ್ಕಮಗಳೂರಿನಂತಹ ಕಡೆಗಳಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ವೇಗ ಸಿಗಲಿದೆ.

ಪ್ರವಾಸೋದ್ಯಮ: ಹಂಪಿ, ಕೊಡಗು ಮತ್ತು ಕರಾವಳಿ ಭಾಗಗಳಿಗೆ ವಿಮಾನ ಸಂಪರ್ಕ ಸುಲಭವಾಗುವುದರಿಂದ ಪ್ರವಾಸೋದ್ಯಮ ಬೆಳೆಯಲಿದೆ.2047 ರ ವೇಳೆಗೆ ಭಾರತವು ಕೇವಲ ಪ್ರಯಾಣಿಕರಲ್ಲದೆ, ‘ವಿಮಾನ ದುರಸ್ತಿ ಮತ್ತು ನಿರ್ವಹಣೆ’ (MRO) ಕ್ಷೇತ್ರದಲ್ಲೂ ಜಾಗತಿಕ ಕೇಂದ್ರವಾಗಲಿದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ