Chandrayaan-3: ರಾಷ್ಟ್ರದ ಭರವಸೆಯನ್ನು ಹೊತ್ತು ಚಂದಿರನೂರಿಗೆ ಪಯಣ, ಶ್ರೀಹರಿಕೋಟಾದಿಂದ ಚಂದ್ರಯಾನ-3 ಉಡ್ಡಯನ

ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆಯಾದ ಚಂದ್ರಯಾನ- 3 ಮಿಷನ್​​ನ ಈ ಪ್ರಯಾಣವು 40 ದಿನಗಳದ್ದಾಗಿದ್ದು, ಆಗಸ್ಟ್ 23 ರಂದು ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಸ್ಪರ್ಶಿಸುವ ನಿರೀಕ್ಷೆಯಿದೆ.

Chandrayaan-3: ರಾಷ್ಟ್ರದ ಭರವಸೆಯನ್ನು ಹೊತ್ತು ಚಂದಿರನೂರಿಗೆ ಪಯಣ, ಶ್ರೀಹರಿಕೋಟಾದಿಂದ ಚಂದ್ರಯಾನ-3 ಉಡ್ಡಯನ
ಚಂದ್ರಯಾನ-3 ನಭಕ್ಕೆ ಚಿಮ್ಮಿದ ಕ್ಷಣ

Updated on: Jul 14, 2023 | 2:58 PM

ದೆಹಲಿ ಜುಲೈ 14: ಇಡೀ ರಾಷ್ಟ್ರದ ಭರವಸೆಯನ್ನು ಹೊತ್ತು ಭಾರತದ ಚಂದ್ರಯಾನ-3 (Chandrayaan-3) ಇಂದು(ಶುಕ್ರವಾರ) ಮಧ್ಯಾಹ್ನ 2.35ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ(Sriharikota) ಉಡಾವಣೆಯಾಗಿದೆ. ಮಿಷನ್ ಯಶಸ್ವಿಯಾದರೆ ಚಂದ್ರನ ಮೇಲೆ ಇಳಿದ ನಾಲ್ಕನೇ ರಾಷ್ಟ್ರವಾಗಲಿದೆ ಭಾರತ. ಬಾಹುಬಲಿ ರಾಕೆಟ್ ಎಂದು ಕರೆಯಲ್ಪಡುವ ಜಿಎಸ್‌ಎಲ್‌ವಿ ಮಾರ್ಕ್ 3 ಹೆವಿ ಲಿಫ್ಟ್ ಉಡಾವಣಾ ವಾಹನದಲ್ಲಿ ಚಂದ್ರನ ಲ್ಯಾಂಡರ್ ವಿಕ್ರಮ್ ಅನ್ನು ಕೂರಿಸಲಾಗಿದೆ. ಇದನ್ನು ಲಾಂಚ್ ವೆಹಿಕಲ್ ಮಾರ್ಕ್ 3 (LM-3) ಎಂದು ಮರುನಾಮಕರಣ ಮಾಡಲಾಗಿದ್ದು, ಈ GSLV 43.5 ಮೀಟರ್ ಎತ್ತರವಿದೆ. ಈ ಪ್ರಯಾಣವು 40 ದಿನಗಳದ್ದಾಗಿದ್ದು, ಆಗಸ್ಟ್ 23 ರಂದು ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಸ್ಪರ್ಶಿಸುವ ನಿರೀಕ್ಷೆಯಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಜುಲೈ 2019 ರಲ್ಲಿ ನಡೆಸಿದ ಚಂದ್ರಯಾನ- 2 ಕೊನೇ ಹಂತದಲ್ಲಿ ವಿಫಲವಾಗಿತ್ತು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ  ಮಿಷನ್ ಉಡಾವಣೆ ಮಾಡಿದ್ದು, ಚಂದ್ರಯಾನ-3 ಲ್ಯಾಂಡರ್, ರೋವರ್ ಮತ್ತು ಪ್ರೊಪಲ್ಷನ್ ಮಾಡ್ಯೂಲ್ ಅನ್ನು ಹೊಂದಿದೆ. ಇದು ಸುಮಾರು 3,900 ಕಿಲೋಗ್ರಾಂಗಳಷ್ಟು ಭಾರವಿದೆ

ಮೊದಲ ಬಾರಿಗೆ, ಭಾರತದ ಈ ಮಿಷನ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ. ಅಲ್ಲಿ ನೀರಿನ ಅಣುಗಳು ಕಂಡುಬಂದಿವೆ. 2008 ರಲ್ಲಿ ಭಾರತದ ಮೊದಲ ಚಂದ್ರಯಾನದ ಸಮಯದಲ್ಲಿ ಕಂಡುಬಂದ ಈ ಸಂಶೋಧನೆಯು ಜಗತ್ತನ್ನು ಬೆಚ್ಚಿ ಬೀಳಿಸಿತ್ತು.

ಇದನ್ನೂ ಓದಿ: Chandrayaan 3: ಚಂದ್ರಯಾನ-3 ಹಿಂದಿರುವ ಮಾಸ್ಟರ್ ಮೈಂಡ್ ವೀರಾ ಮುತ್ತುವೆಲ್ ಯಾರು ಗೊತ್ತೇ?

ವಿಕ್ರಮ್ ಸುರಕ್ಷಿತ, ಮೃದುವಾದ ಲ್ಯಾಂಡಿಂಗ್  ಮಾಡುವಂತೆ ಮಾಡಲಾಗಿದೆ. ಲ್ಯಾಂಡರ್ ನಂತರ ರೋವರ್ ಪ್ರಗ್ಯಾನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ಚಂದ್ರನ ದಿನಕ್ಕೆ ಚಂದ್ರನ ಮೇಲ್ಮೈಯಲ್ಲಿ ಸಂಚರಿಸಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುತ್ತದೆ. ಇದು ಚಂದ್ರನ ಮಣ್ಣನ್ನು ವಿಶ್ಲೇಷಿಸುತ್ತದೆ, ಚಂದ್ರನ ಮೇಲ್ಮೈಯ ಸುತ್ತಲೂ ತಿರುಗಿ ಚಂದ್ರನ ಕಂಪನ ದಾಖಲಿಸಲಿದೆ.

ಚಂದ್ರಯಾನ ಲೈವ್  ಇಲ್ಲಿ ವೀಕ್ಷಿಸಿ

 

Published On - 2:36 pm, Fri, 14 July 23