ಅಮೇರಿಕಾದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳು ಅವರ ಶೈಕ್ಷಣಿಕ ಅವಧಿ ಪ್ರಾರಂಭವಾಗುವ ಒಂದು ವರ್ಷದ ಮೊದಲು ವೀಸಾಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಬೈಡೆನ್ ಸರ್ಕಾರ ಘೋಷಿಸಿದೆ. ಆದರೆ ವಿದ್ಯಾರ್ಥಿಗಳು ಸ್ಟೂಡೆಂಟ್ ವೀಸಾ ಅಥವಾ ವಿಸಿಟಿಂಗ್ (ಬಿ) ವೀಸಾ ಹೊಂದಿರುವವರಾಗಿದ್ದಲ್ಲಿ ತಮ್ಮ ಕೋರ್ಸ್ ಪ್ರಾರಂಭಕ್ಕೆ 30 ದಿನಗಳ ಮುಂಚಿತವಾಗಿ ಅಮೇರಿಕಾ ಪ್ರವೇಶಿಸಲು ಸಾಧ್ಯ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಎರಡು ವರ್ಗಗಳ US ವೀಸಾಗಳನ್ನು (F and M) ನೀಡಲಾಗುತ್ತದೆ. ಶೈಕ್ಷಣಿಕ ಸಂಸ್ಥೆಗಳು ನೀಡುವ I-20 ಫಾರ್ಮ್ ಅನ್ನು ಆಧರಿಸಿ ವಿದ್ಯಾರ್ಥಿಗಳಿಗೆ ಅಮೇರಿಕಾದ ರಾಯಭಾರ ಕಚೇರಿಗಳು ಸ್ಟೂಡೆಂಟ್ ವೀಸಾವನ್ನು ನೀಡುತ್ತದೆ.
ಎಲ್ಲಾ ವಿದ್ಯಾರ್ಥಿಗಳು ವಿದ್ಯಾರ್ಥಿ ಮತ್ತು ವಿನಿಮಯ ಸಂದರ್ಶಕ ವ್ಯವಸ್ಥೆಯಲ್ಲಿ (SEVIS) ನೋಂದಾಯಿಸಿಕೊಳ್ಳುವುದನ್ನು ವಿದೇಶಾಂಗ ಇಲಾಖೆ ಕಡ್ಡಾಯಗೊಳಿಸಿದೆ. ವಿದ್ಯಾರ್ಥಿಯ ಸಂಗಾತಿ ಮತ್ತು ಅಪ್ರಾಪ್ತ ಮಕ್ಕಳು, ವಿದ್ಯಾರ್ಥಿಯೊಂದಿಗೆ ಅಮೇರಿಕಾದಲ್ಲಿ ವಾಸಿಸಲು ಬಯಸಿದರೆ, ವಿದ್ಯಾರ್ಥಿಯ ಶೈಕ್ಷಣಿಕ ಸಂಸ್ಥೆಯಿಂದ ಪ್ರತಿಯೊಬ್ಬರೂ ವೈಯಕ್ತಿಕ ಫಾರ್ಮ್ I-20 ಅನ್ನು ಸಲ್ಲಿಸಬೇಕಾಗುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ವಿದೇಶಾಂಗ ಸಚಿವಾಲಯದ ಪ್ರಕಾರ, ಎಫ್ ವೀಸಾಗಳನ್ನು ಹೊಂದಿ ಅಮೆರಿಕಾದಲ್ಲಿ ಅಧ್ಯಯನ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ಫಾರ್ಮ್ I-20 ನಲ್ಲಿ ಪಟ್ಟಿ ಮಾಡಲಾದ ಕೋರ್ಸ್ ಅಂತಿಮ ದಿನಾಂಕದ ನಂತರ 60 ದಿನಗಳಲ್ಲಿ US ನಿಂದ ನಿರ್ಗಮಿಸಬೇಕು. ಹೊಸ ಪ್ರಕಟಣೆಯ ಪ್ರಕಾರ ವಿಶ್ವವಿದ್ಯಾನಿಲಯಗಳು ಅವಧಿಯ ಸಮಯಕ್ಕಿಂತ 12-14 ತಿಂಗಳ ಮೊದಲು I-20 ಫಾರ್ಮ್‌ಗಳನ್ನು ಸ್ವೀಕರಿಸಬಹುದು ಮತ್ತು ನೀಡಬಹುದು.
ಮೊದಲು, I-20 ಫಾರ್ಮ್ ಅರ್ಜಿಗಳನ್ನು ಕೋರ್ಸ್ ಪ್ರಾರಂಭವಾಗುವ 4-6 ತಿಂಗಳ ಮೊದಲು ಸಲ್ಲಿಸಲು ಅವಕಾಶವಿತ್ತು ಹಾಗೆಯೇ ವೀಸಾ ಸಂದರ್ಶನಗಳನ್ನು 120 ದಿನಗಳ ಮೊದಲು ನಿಗದಿಪಡಿಸಲು ಅವಕಾಶವಿತ್ತು. “ಭಾರತದಲ್ಲಿ ವೀಸಾಗಾಗಿ ದೀರ್ಘಕಾಲ ಕಾಯುವ ಸಮಯವನ್ನು ತಡೆಯಲು ಅಮೇರಿಕಾ ತಕ್ಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಅದೇ ಕಾರಣಕ್ಕೆ ಈ ನೀತಿಯನ್ನು ನಾವು ನವೀಕರಿಸಿದ್ದೇವೆ” ಎಂದು ವೀಸಾ ಸೇವೆಗಳ ಉಪ ಸಹಾಯಕ ಕಾರ್ಯದರ್ಶಿ ಜೂಲಿ ಸ್ಟಫ್ಟ್ ಪಿಟಿಐಗೆ ಹೇಳಿದರು. ಭಾರತವು ಕಳೆದ ವರ್ಷ ಅತಿ ಹೆಚ್ಚು ವಿದ್ಯಾರ್ಥಿ ವೀಸಾಗಳ ದಾಖಲೆಯನ್ನು ಹಿಂದಿಕ್ಕಿದೆ ಮತ್ತು ಈ ವರ್ಷವೂ ಈ ದಾಖಲೆಯನ್ನು ಉತ್ತಮಪಡಿಸುವ ಸಾಧ್ಯತೆಯಿದೆ ಎಂದು ಸ್ಟಫ್ಟ್ ತಿಳಿಸಿದರು. ಅಮೆರಿಕ ಬರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಭಾರತವು ಈಗ ವಿಶ್ವದಲ್ಲೇ ಎರಡನೇ ಸ್ಥಾನ ಪಡೆದಿದೆ.
ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೇಲೆ ಖಲಿಸ್ತಾನಿಗಳಿಂದ ದಾಳಿ
ಭಾರತದಿಂದ ಮೊದಲ ಬಾರಿಗೆ US ವೀಸಾ ಅರ್ಜಿದಾರರಿಗೆ, ವಿಶೇಷವಾಗಿ B1 (ವ್ಯಾಪಾರ) ಮತ್ತು B2 (ಪ್ರವಾಸಿ) ವರ್ಗಗಳ ಅಡಿಯಲ್ಲಿ ಅರ್ಜಿ ಸಲ್ಲಿಸುವವರಿಗೆ ದೀರ್ಘಕಾಲ ಕಾಯಬೇಕಾಗುತ್ತದೆ. ಕಳೆದ ಅಕ್ಟೋಬರ್‌ನಲ್ಲಿ ಭಾರತದಲ್ಲಿ B1/B2 ವೀಸಾ ಅರ್ಜಿದಾರರ ಕಾಯುವ ಅವಧಿ ಮೂರು ವರ್ಷಗಳಷ್ಟಿತ್ತು. ಕೋವಿಡ್-19 ಸಂಬಂಧಿತ ಪ್ರಯಾಣ ನಿರ್ಬಂಧಗಳನ್ನು ಸಡಿಲಗೊಳಿಸಿದ ನಂತರ ಯುಎಸ್ ವೀಸಾಗಾಗಿ ಅತಿಹೆಚ್ಚು ಅರ್ಜಿಗಳನ್ನು ಸಲ್ಲಿಸಿದ ರಾಷ್ಟ್ರಗಳ ಪೈಕಿ ಭಾರತವೂ ಒಂದಾಗಿದೆ.