
ನೀವು ಬೃಹತ್ ಸಾರ್ವಜನಿಕ ರಂಗದ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (IOCL) ಜೊತೆ ಕೆಲಸ ಮಾಡಲು ಬಯಸಿದರೆ ನಿಮಗೊಂದು ಉತ್ತಮ ಅವಕಾಶ ಇಲ್ಲಿದೆ. ಇಂಡಿಯನ್ ಆಯಿಲ್ ತನ್ನ ಪಶ್ಚಿಮ ಪ್ರದೇಶದ ಮಾರ್ಕೆಟಿಂಗ್ ವಿಭಾಗದಲ್ಲಿ ವಿವಿಧ ಹುದ್ದೆಗಳ ಅಪ್ರೆಂಟಿಸ್‌ಶಿಪ್‌ಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 12 ತಿಂಗಳ ಉಚಿತ ತರಬೇತಿ ಹಾಗೂ ಗೌರವಧನ (Stipend) ದೊರೆಯಲಿದ್ದು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಆಸಕ್ತರು ನವೆಂಬರ್ 4 ರವರೆಗೆ ಅರ್ಜಿ ಸಲ್ಲಿಸಬಹುದು.
ಇಂಡಿಯನ್ ಆಯಿಲ್‌ನ ಪಶ್ಚಿಮ ಪ್ರದೇಶದ ವಿಭಾಗಗಳಾದ ಮಹಾರಾಷ್ಟ್ರ, ಗುಜರಾತ್, ಗೋವಾ, ಮಧ್ಯಪ್ರದೇಶ, ಛತ್ತೀಸ್‌ಗಢ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ಡಿಯು ಪ್ರದೇಶಗಳಲ್ಲಿ ಒಟ್ಟು 335 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇವುಗಳಲ್ಲಿ 174 ಗ್ರಾಜುಯೇಟ್ ಅಪ್ರೆಂಟಿಸ್, 99 ತಂತ್ರಜ್ಞ (Technician) ಅಪ್ರೆಂಟಿಸ್, 40 ಟ್ರೇಡ್ (Trade) ಅಪ್ರೆಂಟಿಸ್ ಮತ್ತು 22 ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳು ಸೇರಿವೆ.
ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಗಳನ್ನು ನಿಗದಿಪಡಿಸಲಾಗಿದೆ. ತಂತ್ರಜ್ಞ ಹುದ್ದೆಗಳಿಗೆ ಸಂಬಂಧಿತ ಎಂಜಿನಿಯರಿಂಗ್ ವಿಭಾಗದಲ್ಲಿ 3 ವರ್ಷಗಳ ಡಿಪ್ಲೊಮಾ ಅಗತ್ಯವಿದೆ. ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ 10ನೇ ತರಗತಿಯೊಂದಿಗೆ 2 ವರ್ಷಗಳ ಐಟಿಐ (ITI) ಪೂರ್ಣಗೊಳಿಸಿರಬೇಕು. ಗ್ರಾಜುಯೇಟ್ ಹುದ್ದೆಗಳಿಗೆ ಬಿಎ, ಬಿಕಾಂ, ಬಿಎಸ್ಸಿ ಅಥವಾ ಬಿಬಿಎ ಪದವಿ ಹೊಂದಿರಬೇಕು. ಹಾಗೆಯೇ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗೆ 12ನೇ ತರಗತಿ (PUC) ಉತ್ತೀರ್ಣರಾಗಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ ವಯಸ್ಸು 24 ವರ್ಷವಾಗಿರಬೇಕು. ಅಭ್ಯರ್ಥಿಗಳ ವಯೋಮಿತಿಯನ್ನು ಸೆಪ್ಟೆಂಬರ್ 30, 2026 ಕ್ಕೆ ಅನ್ವಯಿಸುವಂತೆ ಲೆಕ್ಕಹಾಕಲಾಗುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಡಿಪ್ಲೊಮಾದಲ್ಲಿ ಕನಿಷ್ಠ ಶೇ. 50 ಅಂಕಗಳನ್ನು ಹೊಂದಿರಬೇಕಿದ್ದರೆ, ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಕನಿಷ್ಠ ಶೇ. 45 ಅಂಕಗಳ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: ಎಸ್‌ಬಿಐ ನೇಮಕಾತಿ: ವಾರ್ಷಿಕ 97 ಲಕ್ಷ ರೂ.ವರೆಗೆ ವೇತನ; 207 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಇಂಡಿಯನ್ ಆಯಿಲ್ ಅಪ್ರೆಂಟಿಸ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆಗಳಲ್ಲಿ ಗಳಿಸಿದ ಅಂಕಗಳ ಶೇಕಡಾವಾರು (Merit) ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಹೀಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ಹಂತದಲ್ಲಿ ದಾಖಲೆ ಪರಿಶೀಲನೆ (Document Verification) ಮತ್ತು ವೈದ್ಯಕೀಯ ಫಿಟ್‌ನೆಸ್ ಪರೀಕ್ಷೆ ನೆರವೇರಲಿದೆ.
ಅರ್ಜಿಗಳನ್ನು NAPS ಆನ್‌ಲೈನ್ ಪೋರ್ಟಲ್ ಮೂಲಕ ಮಾತ್ರ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಗಳು ಮೊದಲು ಪೋರ್ಟಲ್‌ನಲ್ಲಿ ತಮ್ಮ ಪ್ರೊಫೈಲ್ ರಚಿಸಿಕೊಂಡು, ನಂತರ “IOCL Marketing Division, Western Region” ಅಪ್ರೆಂಟಿಸ್ ಹುದ್ದೆಗಳಿಗೆ ಹುಡುಕಿ ಅರ್ಜಿ ಸಲ್ಲಿಸಬೇಕು. ನವೆಂಬರ್ 4, 2026 ಸಂಜೆ 5:00 ಗಂಟೆಯವರೆಗೆ ಅರ್ಜಿ ಸಲ್ಲಿಸಲು ಸಮಯವಿದ್ದು, ಸೀಟುಗಳು ಸೀಮಿತವಾಗಿರುವುದರಿಂದ ಅರ್ಹರು ತಕ್ಷಣವೇ ಅರ್ಜಿ ಸಲ್ಲಿಸುವುದು ಸೂಕ್ತ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ