ಉಡ್ಡಯನಕ್ಕೆ ಸಿದ್ಧವಿರುವ ಇಸ್ರೋ ಎಸ್ಎಸ್ಎಲ್ವಿ ಉಪಗ್ರಹ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (Indian Space Research Organisation – ISRO) ಸಣ್ಣ ಉಪಗ್ರಹ ಉಡ್ಡಯನ ವಾಹನದ (Small Satellite Launch Vehicle – SSLV) ಕಾರ್ಯಾರಂಭಕ್ಕೆ ಕ್ಷಣಗಣನೆ (Countdown) ಆರಂಭಿಸಿದೆ. ಎಸ್ಎಸ್ಎಲ್ವಿ ಮೂಲಕ 500 ಕೆಜಿವರೆಗೆ ತೂಕವಿರುವ ಉಪಗ್ರಹಗಳನ್ನು ಭೂಮಿಯ ಕೆಳ ಹಂತದ ಕಕ್ಷೆಗೆ ಸೇರಿಸುವ ಮಹತ್ವದ ಪ್ರಯತ್ನಕ್ಕೆ ಇಸ್ರೋ ಚಾಲನೆ ನೀಡಿದೆ. ಇಂದು (7ನೇ ಆಗಸ್ಟ್, ಭಾನುವಾರ) ಬೆಳಿಗ್ಗೆ 09:18ಕ್ಕೆ ರಾಕೆಟ್ ಹಾರಿಸುವ ವಿಧಿಗಳು ಆರಂಭವಾಗುತ್ತವೆ. 08:30ರಿಂದಲೇ ಲೈವ್ ನೋಡಬಹುದಾಗಿದೆ. ಮೊದಲ ಉಡ್ಡಯನದಲ್ಲಿ ಭೂ ನಿಗಾ ಉಪಕರಣವಿರುವ ಉಪಗ್ರಹದೊಂದಿಗೆ ವಿದ್ಯಾರ್ಥಿಗಳು ರೂಪಿಸಿರುವ ಕೆಲ ಉಪಗ್ರಹಗಳನ್ನು ಇಸ್ರೋ ಬಾಹ್ಯಾಕಾಶ ಕಕ್ಷೆಗೆ ಸೇರಿಸಲಿದೆ. ಈ ಮಹತ್ವದ ಬೆಳವಣಿಗೆಗೆ ಸಂಬಂಧಿಸಿದ 10 ಮುಖ್ಯಾಂಶಗಳು ಇಲ್ಲಿದೆ.
- SSLV-D1/EOS-02 ಯೋಜನೆಯ ಕೌಂಟ್ಡೌನ್ 02:26ಕ್ಕೆ ಆರಂಭವಾಗಿದೆ ಎಂದು ಇಸ್ರೋ ತನ್ನ ವೆಬ್ಸೈಟ್ನಲ್ಲಿ ಭಾನುವಾರ ಘೋಷಿಸಿದೆ. EOS-02 ಮತ್ತು ಆಜಾದಿಸ್ಯಾಟ್ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ ಸೇರಿಸುವುದು ಇಸ್ರೋದ ಮುಖ್ಯ ಉದ್ದೇಶವಾಗಿದೆ.
- ಮುಂಜಾನೆ 09:18ಕ್ಕೆ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ (Satish Dhawan Space Centre – SHAR) ಉಪಗ್ರಹ ಹೊತ್ತ ರಾಕೆಟ್ ನಭಕ್ಕೆ ಚಿಮ್ಮಲಿದೆ.
- AzaadiSAT ಮೂಲಕ ತಲಾ 50 ಗ್ರಾಂ ತೂಕದ 75 ಪೇಲೋಡ್ಗಳನ್ನು (ಸಣ್ಣ ಉಪಗ್ರಹಗಳು) ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ. ಇಸ್ರೋ ಮಾರ್ಗದರ್ಶನದಲ್ಲಿ ದೇಶದ ವಿವಿಧೆಡೆಯ ಗ್ರಾಮೀಣ ವಿದ್ಯಾರ್ಥಿನಿಯರು ಈ ಪೇಲೋಡ್ಗಳನ್ನು ರೂಪಿಸಿದ್ದಾರೆ.
- ಇಸ್ರೋದ ಭೂ-ಕೇಂದ್ರಗಳಲ್ಲಿ ರೂಪಿಸಿರುವ ‘ಸ್ಪೇಸ್ ಕಿಡ್ಸ್ ಇಂಡಿಯಾ’ (Space Kidz India) ವ್ಯವಸ್ಥೆಯ ಈ ಉಪಗ್ರಹಗಳು ರವಾನಿಸುವ ದತ್ತಾಂಶಗಳನ್ನು ಸ್ವೀಕರಿಸಲಿದೆ. ಈ ಸಣ್ಣ ಉಪಗ್ರಹಗಳಲ್ಲಿ ದೂರದ ಸಿಗ್ನಲ್ಗಳನ್ನು ಗ್ರಹಿಸುವ / ರವಾನಿಸುವ ಪ್ರಬಲ ಟ್ರಾನ್ಸ್ಪಾಂಡರ್ ಮತ್ತು ಸೆಲ್ಫಿ ಕ್ಯಾಮೆರಾಗಳಿವೆ.
- ಇದೇ ಎಸ್ಎಸ್ಎಲ್ವಿಯಲ್ಲಿ EOS-02 ಭೂ ನಿಗಾ ಉಪಗ್ರಹವೂ ಇದೆ. ಇದು ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆಗೆ ನೆರವಾಗಲಿದೆ.
- ಇಸ್ರೋದ ಈ ಪ್ರಯತ್ನ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಸಂಸ್ಥೆಯು 10ರಿಂದ 500 ಕೆಜಿ ತೂಗುವ ಮಿನಿ, ನ್ಯಾನೊ ಮತ್ತು ಮೈಕ್ರೊ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಪ್ರಯತ್ನಗಳನ್ನು ಆರಂಭಿಸಲಿದೆ. ಆರ್ಥಿಕವಾಗಿಯೂ ಇದು ಲಾಭದಾಯಕವಾಗಲಿದೆ.
- ಭೂಮಿಯಿಂದ ಚಿಮ್ಮಿದ ನಂತರ ಕಕ್ಷೆ ಸೇರುವ ಅವಧಿಯು ಕಡಿಮೆ. ಹಲವು ಉಪಗ್ರಹಗಳನ್ನು ಏಕಕಾಲಕ್ಕೆ ಕಕ್ಷೆಗೆ ಸೇರಿಸುವ ಅವಕಾಶ, ಬೇಡಿಕೆಗೆ ತಕ್ಕಂತೆ ಉಡ್ಡಯವನ ಸೌಕರ್ಯ, ಉಡ್ಡಯನಕ್ಕೆ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ಹಲವು ರೀತಿಯ ಅವಕಾಶಗಳನ್ನು ಎಸ್ಎಸ್ಎಲ್ವಿ ಒದಗಿಸುತ್ತದೆ.
- ಈ ಯೋಜನೆಯೊಂದಿಗೆ ಸಣ್ಣ ಉಪಗ್ರಹಗಳ ಮಾರುಕಟ್ಟೆಯಲ್ಲಿ ಇಸ್ರೋ ತನ್ನ ಪಾಲು ಹೆಚ್ಚಿಸಿಕೊಳ್ಳಲು ಮುಂದಾಗಿದೆ.
- ಪಿಎಸ್ಎಲ್ವಿ ಎಂದೇ ಹೆಸರಾದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ಸ್ (Polar Satellite Launch Vehicles – PSLV) ಈವರೆಗೆ ಇಸ್ರೋದ ವಿಶ್ವಾಸಾರ್ಹ ಉಡ್ಡಯನ ವಾಹನವಾಗಿದೆ.
- ಇದು ಈ ವರ್ಷದಲ್ಲಿ ಇಸ್ರೋದ 3ನೇ ಉಡ್ಡಯನವಾಗಿದೆ. ಪಿಎಸ್ಎಲ್ವಿ-ಸಿ53 ಯೋಜನೆಯನ್ನು ಜೂನ್ 30ರಂದು ಯೋಶಸ್ವಿಯಾಗಿ ನಿರ್ವಹಿಸಲಾಗಿತ್ತು. PSLV-C52/EOS-04 ಭೂ ನಿಗಾ ಉಪಗ್ರಹ ಯೋಜನೆಗಳನ್ನು ಫೆಬ್ರುವರಿಯಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿತ್ತು.