ಜೈಪುರದಲ್ಲಿ ರೌಡಿ ಶೀಟರ್​ನ ಬೆನ್ನಟ್ಟಿ ಬರ್ಬರ ಹಲ್ಲೆ, ತಲೆಯಲ್ಲಿ ಕೊಡಲಿ ಸಿಲುಕಿದ ಸ್ಥಿತಿಯಲ್ಲಿ ಪತ್ತೆಯಾಯ್ತು ಮೃತದೇಹ

ರಾಜಸ್ಥಾನದ ಜೈಪುರದಲ್ಲಿ ರೌಡಿ ಶೀಟರ್ ವಿಜಯ್ ಬಾಜಿಯಾನನ್ನು ಮಾರಕಾಸ್ತ್ರಗಳಿಂದ ಬೆನ್ನಟ್ಟಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ದಾಳಿಯಲ್ಲಿ ಆತನ ತಲೆಯಲ್ಲಿ ಕೊಡಲಿ ಸಿಕ್ಕಿಹಾಕಿಕೊಂಡಿತ್ತು. ಹಳೆಯ ದ್ವೇಷ ಅಥವಾ ಗ್ಯಾಂಗ್ ವಾರ್ ಕೊಲೆಗೆ ಕಾರಣವೆಂದು ಶಂಕಿಸಲಾಗಿದೆ. ಈ ಭೀಕರ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಜೈಪುರದಲ್ಲಿ ರೌಡಿ ಶೀಟರ್​ನ ಬೆನ್ನಟ್ಟಿ ಬರ್ಬರ ಹಲ್ಲೆ, ತಲೆಯಲ್ಲಿ ಕೊಡಲಿ ಸಿಲುಕಿದ ಸ್ಥಿತಿಯಲ್ಲಿ ಪತ್ತೆಯಾಯ್ತು ಮೃತದೇಹ
ಕಾರು

Updated on: Nov 12, 2026 | 8:33 AM

ಜೈಪುರ, ನವೆಂಬರ್ 12: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಜಾಬ್ನರ್​ನ ರೌಡಿ ಶೀಟರ್ ವಿಜಯ್ ಬಾಜಿಯಾ ಎಂಬುವವನನ್ನು ಶಸ್ತ್ರಸಜ್ಜಿತ ಗುಂಪೊಂದು ಬೆನ್ನಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಭೀಕರ ಘಟನೆ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಲೆಯಲ್ಲಿ ಕೊಡಲಿ ಸಿಲುಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಏನಿದು ಘಟನೆ?

ಬುಧವಾರ ರಾತ್ರಿ ಸುಮಾರು 8 ಗಂಟೆಗೆ ವಿಜಯ್ ಬಾಜಿಯಾ ಅವರು ಜಾಬ್ನರ್‌ನಿಂದ ಜೈಪುರಕ್ಕೆ ತನ್ನ ಟೊಯೋಟಾ ಫಾರ್ಚೂನರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ. ಈ ವೇಳೆ ಜೈಪುರದ ಕರ್ಧಾನಿ ಪೊಲೀಸ್ ಠಾಣೆ ವ್ಯಾಪ್ತಿಯ ಜಗದಂಬ ನಗರದಲ್ಲಿ ಕ್ಯಾಂಪರ್ ವಾಹನದಲ್ಲಿ ಬಂದ ನಾಲ್ಕರಿಂದ ಆರು ಮಂದಿ ಅವರನ್ನು ಅಡ್ಡಗಟ್ಟಿದ್ದಾರೆ ಎನ್ನಲಾಗಿದೆ.

Loading...

ಮೊದಲು ಕ್ಯಾಂಪರ್ ವಾಹನವನ್ನು ವಿಜಯ್ ಅವರ ಕಾರಿಗೆ ಡಿಕ್ಕಿ ಹೊಡೆದು, ಬಳಿಕ ಕಾರಿನಿಂದ ಅವರನ್ನು ಹೊರಗೆಳೆದು ಕಬ್ಬಿಣದ ರಾಡ್, ಕೋಲು ಹಾಗೂ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ತೀವ್ರ ಗಾಯಗಳಿಂದ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಳೆಯ ದ್ವೇಷವೇ ದಾಳಿಗೆ ಕಾರಣ?

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ವಿಜಯ್ ಮತ್ತು ಆರೋಪಿಗಳ ನಡುವೆ ಹಳೆಯ ಕ್ರಿಮಿನಲ್ ಪ್ರಕರಣವೊಂದಕ್ಕೆ ಸಂಬಂಧಿಸಿದ ವಿವಾದವಿತ್ತು ಎನ್ನಲಾಗಿದೆ. ಇದೇ ದ್ವೇಷದಿಂದ ದಾಳಿ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ದಾಳಿಕೋರರು ಹಲವು ದಿನಗಳಿಂದ ವಿಜಯ್ ಅವರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ.

ಇದನ್ನೂ ಓದಿ:

ರೌಡಿಶೀಟರ್ ಜೊತೆ ಲಿಂಕ್​ ಹೊಂದಿದ್ದ ಸಿಸಿಬಿ ಇನ್ಸ್​ಪೆಕ್ಟರ್ ಅಮಾನತು

ಸ್ಥಳೀಯವಾಗಿ ಈ ಘಟನೆಯನ್ನು ಗ್ಯಾಂಗ್‌ಗಳ ನಡುವಿನ ಸಂಘರ್ಷದ ಭಾಗವೆಂದು ಹೇಳಲಾಗುತ್ತಿದ್ದರೂ, ಹತ್ಯೆಯ ಹಿಂದಿನ ನಿಖರ ಕಾರಣವನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ.

ಪೊಲೀಸರ ತನಿಖೆಯಲ್ಲಿ ಮಹತ್ವದ ಮಾಹಿತಿ

ವಿಜಯ್ ವಿರುದ್ಧ ಈ ಹಿಂದೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು ಎಂದು ವರದಿಗಳು ತಿಳಿಸಿವೆ. ಪಿಟಿಐ ವರದಿ ಪ್ರಕಾರ ಆತನ ವರ್ಷ 25. ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ವಿಜಯ್ ಮತ್ತು ಎದುರಾಳಿ ಗುಂಪಿನ ನಡುವೆ ಹಿಂದಿನಿಂದಲೂ ಪ್ರಕರಣವೊಂದಕ್ಕೆ ಸಂಬಂಧಿಸಿದ ವೈಷಮ್ಯವಿತ್ತು. ಆರೋಪಿಗಳು ಹಲವು ದಿನಗಳಿಂದ ಅವರನ್ನು ಹಿಂಬಾಲಿಸುತ್ತಿದ್ದರು ಎನ್ನಲಾಗಿದೆ. ದಾಳಿ ಸುಮಾರು ಐದು ನಿಮಿಷಗಳ ಕಾಲ ನಡೆದಿದ್ದು, ಬಳಿಕ ಆರೋಪಿಗಳು ಕ್ಯಾಂಪರ್ ವಾಹನದಲ್ಲಿ ಪರಾರಿಯಾಗಿದ್ದಾರೆ.

ವಿಡಿಯೋ

ದಾಳಿ ಮೊಬೈಲ್‌ಗಳಲ್ಲೂ ಸೆರೆಯಾಗಿದೆ

ಘಟನೆಯ ವೇಳೆ ಸ್ಥಳೀಯರು ತಮ್ಮ ಮೊಬೈಲ್‌ಗಳಲ್ಲಿ ದಾಳಿಯ ದೃಶ್ಯಗಳನ್ನು ಚಿತ್ರೀಕರಿಸಿದ್ದಾರೆ. ಕೆಲವು ವರದಿಗಳ ಪ್ರಕಾರ, ಮನೆಯ ಮೇಲ್ಛಾವಣಿಯಿಂದಲೂ ಜನರು ವಿಡಿಯೋ ಮಾಡಿದ್ದಾರೆ. ಮೃತದೇಹದ ಬಳಿ ಕೊಡಲಿ ಸಿಲುಕಿಕೊಂಡಿದ್ದ ದೃಶ್ಯವೂ ವರದಿಯಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೋಗಳು ಪೊಲೀಸರ ತನಿಖೆಗೆ ಪ್ರಮುಖ ಸಾಕ್ಷಿಯಾಗಬಹುದು.

ಜೈಪುರದಲ್ಲಿ ಪೊಲೀಸರಿಂದ ಶೋಧ ಕಾರ್ಯಾಚರಣೆ

ಘಟನೆ ನಡೆದ ಬಳಿಕ ಪೊಲೀಸರು ಜೈಪುರದ ವಿವಿಧ ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ವಾಹನಗಳ ತಪಾಸಣೆ ನಡೆಸಿದ್ದಾರೆ. ಆರೋಪಿಗಳನ್ನು ಪತ್ತೆಹಚ್ಚಲು ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಹತ್ಯೆಯ ಹಿಂದೆ ಹಳೆಯ ದ್ವೇಷವಿದೆಯೇ ಅಥವಾ ಗ್ಯಾಂಗ್‌ಗಳ ನಡುವಿನ ಸಂಘರ್ಷವೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us