
ಕೋಲ್ಕತ್ತಾ, ನವೆಂಬರ್ 11: ಕೋಲ್ಕತ್ತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ವಿಮಾನ ಅಪಹರಣದ ಬೆದರಿಕೆ ಸಂದೇಶ ಪತ್ತೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಮುಂಬೈಗೆ ತೆರಳಲು ಸಿದ್ಧವಾಗಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕೈಬರಹದ ಸಂದೇಶ ಕಂಡುಬಂದಿದೆ. ಇದನ್ನು ಗಮನಿಸಿದ ಪೈಲಟ್ ತಕ್ಷಣವೇ ವಾಯು ಸಂಚಾರ ನಿಯಂತ್ರಣ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ.
ನವೆಂಬರ್ 11ರಂದು ಬೆಳಗ್ಗೆ ಸುಮಾರು 10.20ರ ವೇಳೆಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಏರ್ ಇಂಡಿಯಾ ಎಐ 2772 ವಿಮಾನವು ಕೋಲ್ಕತ್ತಾದಿಂದ ಮುಂಬೈಗೆ ಹೊರಡಲು ಸಿದ್ಧವಾಗಿತ್ತು. ಈ ವೇಳೆ ವಿಮಾನದ ಶೌಚಾಲಯದ ಕನ್ನಡಿಯಲ್ಲಿ ಹೈಜಾಕ್ ಮಾಡುವುದಾಗಿ ಬೆದರಿಕೆ ಹಾಕುವ ಬರಹ ಕಂಡುಬಂದಿದೆ ಎಂದು ವರದಿಯಾಗಿದೆ.
ಪೈಲಟ್ ಎಚ್ಚರಿಕೆ ಬಳಿಕ ಭದ್ರತಾ ತಪಾಸಣೆ
ಬೆದರಿಕೆ ಸಂದೇಶದ ಮಾಹಿತಿ ಸಿಕ್ಕ ತಕ್ಷಣ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಕಾರ್ಯಪ್ರವೃತ್ತರಾದರು. ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಸಾಮಾನ್ಯ ಪಾರ್ಕಿಂಗ್ ಸ್ಥಳದಿಂದ ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಿ ತಪಾಸಣೆಗೆ ಸಿದ್ಧತೆ ನಡೆಸಲಾಯಿತು. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು. ಈ ರೀತಿಯ ಬೆದರಿಕೆ ಸಂದೇಶ ಪತ್ತೆಯಾದಾಗ ವಿಮಾನವನ್ನು ಪ್ರತ್ಯೇಕ ಸ್ಥಳದಲ್ಲಿ ನಿಲ್ಲಿಸಿ, ಭದ್ರತಾ ಸಿಬ್ಬಂದಿ ಮತ್ತು ಬಾಂಬ್ ಪತ್ತೆ ತಂಡದಿಂದ ಪರಿಶೀಲನೆ ನಡೆಸುವುದು ಸಾಮಾನ್ಯ ಕ್ರಮವಾಗಿದೆ.
ಈ ಹಿಂದೆ ಕೂಡ ಕೋಲ್ಕತ್ತಾದಲ್ಲಿ ಬೆದರಿಕೆ ಘಟನೆ
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ನಡೆದಿವೆ. ಅಕ್ಟೋಬರ್ 23ರಂದು ವಿಮಾನ ನಿಲ್ದಾಣದ ಮಹಿಳೆಯರ ಶೌಚಾಲಯದಲ್ಲಿ ಬಾಂಬ್ ಇಟ್ಟಿರುವುದಾಗಿ ಕೈಬರಹದ ಚೀಟಿ ಪತ್ತೆಯಾಗಿತ್ತು. ಇದರಿಂದ ಸಿಐಎಸ್‌ಎಫ್ ಮತ್ತು ಬಾಂಬ್ ಪತ್ತೆ ತಂಡ ಪರಿಶೀಲನೆ ನಡೆಸಿದ್ದವು. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿರಲಿಲ್ಲ.
ಅಕ್ಟೋಬರ್ 24ರಂದು ಫುಕೆಟ್‌ನಿಂದ ಕೋಲ್ಕತ್ತಾಗೆ ಬಂದ ಇಂಡಿಗೋ ವಿಮಾನದ ಶೌಚಾಲಯದ ಕನ್ನಡಿಯಲ್ಲಿ ಬಾಂಬ್ ಬೆದರಿಕೆ ಸಂದೇಶ ಕಂಡುಬಂದಿತ್ತು. ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಸ್ಥಳಾಂತರಿಸಿ ಪ್ರಯಾಣಿಕರನ್ನು ಇಳಿಸಿದ ಬಳಿಕ ತಪಾಸಣೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿಯೂ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿರಲಿಲ್ಲ.
ಇದನ್ನೂ ಓದಿ:ಕಾಕ್ಪಿಟ್ ಜಗಳ, ಪೈಲಟ್‌ಗೆ ಚಾಕು ಇರಿತ; ಫ್ಲೈದುಬೈ ವಿಮಾನದ ಹೈಜಾಕ್ ಕುರಿತು ಹೊಸ ಸಂಗತಿ ಬಯಲು
ಬೆದರಿಕೆ ಸಂದೇಶ ಬಂದರೆ ಏನು ಮಾಡಲಾಗುತ್ತದೆ?
ವಿಮಾನದಲ್ಲಿ ಅಪಹರಣ ಅಥವಾ ಬಾಂಬ್ ಬೆದರಿಕೆ ಸಂದೇಶ ಪತ್ತೆಯಾದರೆ ಅದನ್ನು ಗಂಭೀರ ಭದ್ರತಾ ಎಚ್ಚರಿಕೆಯಾಗಿ ಪರಿಗಣಿಸಲಾಗುತ್ತದೆ. ಪೈಲಟ್ ತಕ್ಷಣ ಎಟಿಸಿಗೆ ಮಾಹಿತಿ ನೀಡುತ್ತಾರೆ. ನಂತರ ವಿಮಾನ ನಿಲ್ದಾಣದ ಭದ್ರತಾ ಸಂಸ್ಥೆಗಳು ವಿಮಾನವನ್ನು ಪ್ರತ್ಯೇಕ ಸ್ಥಳದಲ್ಲಿ ನಿಲ್ಲಿಸಿ ಪರಿಶೀಲನೆ ನಡೆಸುತ್ತವೆ. ಪ್ರಯಾಣಿಕರ ಸುರಕ್ಷತೆ, ವಿಮಾನದ ಸಂಪೂರ್ಣ ತಪಾಸಣೆ ಮತ್ತು ಸಂದೇಶ ಬರೆದವರ ಪತ್ತೆಗೆ ತನಿಖೆ ನಡೆಸಲಾಗುತ್ತದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ