ಕೋಲ್ಕತ್ತಾದ ಹೋಟೆಲ್​ನಲ್ಲಿ ಅಗ್ನಿ ಅವಘಡ, ಮಗು ಸೇರಿ 9 ಮಂದಿ ಸಾವು

ಕೋಲ್ಕತ್ತಾದ ಹೋಟೆಲ್ ಒಂದರಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಮಗು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಶಂಕಿಸಲಾಗಿದೆ. ದಟ್ಟ ಹೊಗೆಯಿಂದ ಉಸಿರುಗಟ್ಟಿ ಹೆಚ್ಚು ಸಾವುಗಳಾಗಿವೆ. ಇತ್ತೀಚೆಗೆ ತಾರಾಪೀಠದಲ್ಲೂ ಇದೇ ರೀತಿಯ ದುರಂತ ನಡೆದಿತ್ತು. ಪಶ್ಚಿಮ ಬಂಗಾಳದ ಹೋಟೆಲ್‌ಗಳಲ್ಲಿ ಅಗ್ನಿ ಸುರಕ್ಷತಾ ನಿಯಮಗಳ ನಿರ್ಲಕ್ಷ್ಯವೇ ಇಂತಹ ಸರಣಿ ಅವಘಡಗಳಿಗೆ ಕಾರಣವಾಗುತ್ತಿದ್ದು, ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

ಕೋಲ್ಕತ್ತಾದ ಹೋಟೆಲ್​ನಲ್ಲಿ ಅಗ್ನಿ ಅವಘಡ, ಮಗು ಸೇರಿ 9 ಮಂದಿ ಸಾವು
ಅಗ್ನಿ ಅವಘಡ

Updated on: Aug 19, 2026 | 8:10 AM

ಕೋಲ್ಕತ್ತಾ, ಆಗಸ್ಟ್​ 19: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಹೃದಯಭಾಗದಲ್ಲಿರುವ ಹೋಟೆಲ್‌ ಒಂದರಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಬೆಂಕಿ ಅವಘಡ(Fire Accident)ದಲ್ಲಿ ಮಗು ಸೇರಿದಂತೆ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಹಾಗೂ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಾರಾಪೀಠದ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 9 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ, ಕೋಲ್ಕತ್ತಾದ ಮಿರ್ಜಾ ಗಾಲಿಬ್ ಸ್ಟ್ರೀಟ್ ಬಳಿಯ ‘ಹೋಟೆಲ್ ಶಿಖಾ’ದಲ್ಲಿ ಈ ದುರ್ಘಟನೆ ನಡೆದಿದೆ.

ಮುಂಜಾನೆ 1.45ಕ್ಕೆ ಹೊತ್ತಿಕೊಂಡ ಬೆಂಕಿ , ಕೆಲವರು ಉಸಿರುಗಟ್ಟಿ ಸಾವು
ದಟ್ಟ ಹೊಗೆ ಹಾಗೂ ಉಸಿರುಗಟ್ಟುವಿಕೆ: ಬೆಳಗಿನ ಜಾವ ಸುಮಾರು 1.45 ರ ಸುಮಾರಿಗೆ ಹೋಟೆಲ್‌ನಿಂದ ದಟ್ಟ ಹೊಗೆ ಹೊರಬರಲು ಆರಂಭಿಸಿತು. ಗಾಢವಾದ ಹೊಗೆ ಕೋಣೆಗಳ ಒಳಗೆ ಆವರಿಸಿದ್ದರಿಂದ ಹೆಚ್ಚಿನ ಜನರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳದ ಸಮೀಪದಲ್ಲೇ ಅಗ್ನಿಶಾಮಕ ಕೇಂದ್ರದ ಪ್ರಧಾನ ಕಚೇರಿ ಇದ್ದ ಕಾರಣ, ನಾಲ್ಕು ಅಗ್ನಿಶಾಮಕ ವಾಹನಗಳು ಹಾಗೂ ವಿಪತ್ತು ನಿರ್ವಹಣಾ ಪಡೆಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿ ನಿಯಂತ್ರಣಕ್ಕೆ ತಂದವು. ಪ್ರಾಥಮಿಕ ತನಿಖೆಯ ಪ್ರಕಾರ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಈ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ.

ತಾರಾಪೀಠದಲ್ಲೂ ಭೀಕರ ದುರಂತ , ಮಾಲೀಕ ಮತ್ತು ಮಗನ ಬಂಧನ
ಮೇಘಾಲಯ ಕುಟುಂಬ ಸೇರಿ 9 ಬಲಿ: ಇದಕ್ಕೂ ಮುನ್ನ ಬಿರ್ಭುಮ್ ಜಿಲ್ಲೆಯ ಪ್ರಸಿದ್ಧ ತಾರಾಪೀಠ ದೇವಾಲಯದ ಸಮೀಪದ 5 ಅಂತಸ್ತಿನ ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿಯಲ್ಲಿ ಮೇಘಾಲಯದ ಒಂದೇ ಕುಟುಂಬದ ಐವರು ಹಾಗೂ ಅಲಿಪುರ್‌ದೂರ್‌ನ ಮೂವರು ಯಾತ್ರಿಕರು ಸೇರಿ 9 ಮಂದಿ ಮೃತಪಟ್ಟಿದ್ದರು.

ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಮತ್ತೊಂದು ದೊಡ್ಡ ಬೆಂಕಿ ಅವಘಡ: ಇಡ್ಲಿ ಸ್ಟೀಮರ್​​ನಿಂದ ಇಡೀ ಹೋಟೆಲ್ ಭಸ್ಮ

ತಾರಾಪೀಠದ ಹೋಟೆಲ್‌ನಲ್ಲಿ ಬೆಂಕಿ ಹೊತ್ತಿಕೊಂಡಾಗ ತುರ್ತು ನಿರ್ಗಮನ ದ್ವಾರಗಳು ಮತ್ತು ತಾರಸಿಯ ಬಾಗಿಲು ಲಾಕ್ ಆಗಿದ್ದವು. ಹೊಗೆಯಿಂದ ತಪ್ಪಿಸಿಕೊಳ್ಳಲು ಕೆಲವರು ಪಕ್ಕದ ಕೊಳಕ್ಕೆ ಹಾರಿದ್ದರು. ಈ ಪ್ರಕರಣದಲ್ಲಿ ಹೋಟೆಲ್ ಮಾಲೀಕ ಹಾಗೂ ಆತನ ಮಗನನ್ನು ಪೊಲೀಸರು ಬಂಧಿಸಿದ್ದಾರೆ.

ಪಶ್ಚಿಮ ಬಂಗಾಳದ ಹೋಟೆಲ್‌ಗಳಲ್ಲಿ ಅಗ್ನಿ ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ಸರಣಿ ದುರಂತಗಳಿಗೆ ಕಾರಣವಾಗುತ್ತಿದೆ. ಈ ಹಿಂದೆ ಮೆಚುವಾ ಪ್ರದೇಶದ ಹೋಟೆಲ್‌ನಲ್ಲಿ ನಡೆದ ಬೆಂಕಿ ಅವಘಡದಲ್ಲಿ 14 ಜನರು ಮೃತಪಟ್ಟಿದ್ದರು. ಹೋಟೆಲ್‌ಗಳಲ್ಲಿ ಅಲಂಕಾರಕ್ಕಾಗಿ ಬಳಸುವ ಜ್ವಲನಶೀಲ ಫೈಬರ್ ಮತ್ತು ಆಪ್ಟಿಕ್ ಸಾಮಗ್ರಿಗಳು ಬೆಂಕಿ ಕ್ಷಣಮಾತ್ರದಲ್ಲಿ ಇಡೀ ಕಟ್ಟಡಕ್ಕೆ ವ್ಯಾಪಿಸಲು ಮುಖ್ಯ ಕಾರಣವಾಗುತ್ತಿದ್ದು, ಈ ಕುರಿತು ಅಗ್ನಿಶಾಮಕ ಇಲಾಖೆ ಕಟ್ಟುನಿಟ್ಟಿನ ತಪಾಸಣೆಗೆ ಆದೇಶಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:09 am, Wed, 19 August 26

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us