ಸಿಸಿಟಿವಿ ದೃಶ್ಯ, ನಾಪತ್ತೆ ದೂರು, ಕುಲ್ಗಾಮ್ ದಾಳಿಯ ಶಂಕಿತರನ್ನು ಪತ್ತೆಹಚ್ಚಿದ್ದು ಹೇಗೆ?

ಕುಲ್ಗಾಮ್ ದಾಳಿಯ ತನಿಖೆಯಲ್ಲಿ ಸಿಸಿಟಿವಿ ದೃಶ್ಯಗಳು, ನಾಪತ್ತೆ ದೂರು ಮತ್ತು ಸ್ಥಳೀಯ ಬೆಂಬಲ ಜಾಲ ಪ್ರಮುಖ ಪಾತ್ರ ವಹಿಸಿವೆ. ಸಿಆರ್‌ಪಿಎಫ್ ಚೆಕ್‌ಪಾಯಿಂಟ್ ಮೇಲೆ ನಡೆದ ದಾಳಿಯ ಶಂಕಿತರಾದ ಉಮರ್ ದಾರ್ ಮತ್ತು ಲತೀಫ್ ಭಟ್‌ರನ್ನು ಸಿಸಿಟಿವಿ ಹಾಗೂ ದಾರ್‌ನ ನಾಪತ್ತೆ ದೂರಿನಿಂದ ಗುರುತಿಸಲಾಯಿತು. ನಂತರದ ಕಾರ್ಯಾಚರಣೆಯಲ್ಲಿ ದಾರ್ ಹತನಾಗಿದ್ದು, ಭಟ್ ತಪ್ಪಿಸಿಕೊಂಡಿದ್ದಾನೆ. ಸ್ಥಳೀಯ ಬೆಂಬಲ ಜಾಲದ ಬಗ್ಗೆಯೂ ತನಿಖೆ ಮುಂದುವರಿದಿದೆ.

ಸಿಸಿಟಿವಿ ದೃಶ್ಯ, ನಾಪತ್ತೆ ದೂರು, ಕುಲ್ಗಾಮ್ ದಾಳಿಯ ಶಂಕಿತರನ್ನು ಪತ್ತೆಹಚ್ಚಿದ್ದು ಹೇಗೆ?
ಉಗ್ರ

Updated on: Nov 17, 2026 | 1:46 PM

ಕುಲ್ಗಾಮ್, ನವೆಂಬರ್ 17: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ಸಿಆರ್‌ಪಿಎಫ್ ಚೆಕ್‌ಪಾಯಿಂಟ್ ಮೇಲೆ ನಡೆದ ಗುಂಡಿನ ದಾಳಿಯ ತನಿಖೆಯಲ್ಲಿ ಸಿಸಿಟಿವಿ ದೃಶ್ಯಗಳು, ನಾಪತ್ತೆ ದೂರು ಮತ್ತು ಸ್ಥಳೀಯರ ಸಂಪರ್ಕಗಳು ಪ್ರಮುಖ ಸುಳಿವುಗಳಾಗಿವೆ. ನವೆಂಬರ್ 11ರಂದು ನಡೆದ ದಾಳಿಯ ಹಿಂದೆ ಉಮರ್ ನಿಸಾರ್ ದಾರ್ ಮತ್ತು ಲಷ್ಕರ್-ಎ-ತೊಯ್ಬಾ ಕಮಾಂಡರ್ ಲತೀಫ್ ಭಟ್ ಇದ್ದಾರೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಈ ಸುಳಿವುಗಳ ಆಧಾರದಲ್ಲಿ ನವೆಂಬರ್ 16ರಂದು ಲಾರೂನಲ್ಲಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ್ದು, ದಾರ್ ಮತ್ತು ಲತೀಫ್​ ಭಟ್​ನನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಭಟ್ ಮೃತದೇಹ ಇನ್ನೂ ಸಿಕ್ಕಿಲ್ಲ.

 

Loading...

ದಾಳಿಕೋರರ ಸುಳಿವು ನೀಡಿದ ಸಿಸಿಟಿವಿ ದೃಶ್ಯಗಳು
ತನಿಖಾಧಿಕಾರಿಗಳ ಪ್ರಕಾರ, ನವೆಂಬರ್ 10ರಂದು ದಾರ್ ಮತ್ತು ಲತೀಫ್ ಭಟ್ ಕುಲ್ಗಾಮ್ ಜಿಲ್ಲೆಯ ಮೀರ್ ಬಜಾರ್, ಅಖ್ರಾನ್, ಹಬ್ಲಿಷ್ ಮತ್ತು ಕಿಲಾಮ್ ಪ್ರದೇಶಗಳಲ್ಲಿ ಓಡಾಡಿದ್ದರು. ಈ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಇಬ್ಬರ ಚಲನವಲನಗಳು ದಾಖಲಾಗಿದ್ದವು. ಭದ್ರತಾ ಪಡೆಗಳ ಚೆಕ್‌ಪಾಯಿಂಟ್‌ಗಳನ್ನು ಗಮನಿಸಿ, ದಾಳಿಗೆ ಸೂಕ್ತ ಸ್ಥಳಗಳನ್ನು ಗುರುತಿಸಲು ಅವರು ಈ ಪ್ರದೇಶಗಳಲ್ಲಿ ಸುತ್ತಾಡಿದ್ದರು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

ನವೆಂಬರ್ 11ರಂದು ಮಧ್ಯಾಹ್ನ ಸುಮಾರು 2.15ಕ್ಕೆ ಅಖ್ರಾನ್‌ನಲ್ಲಿದ್ದ ಸಿಆರ್‌ಪಿಎಫ್‌ನ 46ನೇ ಬೆಟಾಲಿಯನ್ ಸಿಬ್ಬಂದಿಯ ಚೆಕ್‌ಪಾಯಿಂಟ್ ಮೇಲೆ ಗುಂಡಿನ ದಾಳಿ ನಡೆಯಿತು. ದಾಳಿಯಲ್ಲಿ ಹೆಡ್ ಕಾನ್‌ಸ್ಟೆಬಲ್ ಸೋಮವೀರ್ ಸಿಂಗ್, ಕಾನ್‌ಸ್ಟೆಬಲ್ ರಾಕೇಶ್ ದಾಸ್ ಮತ್ತು ಕಾನ್‌ಸ್ಟೆಬಲ್ ಸಂತೋಷ್ ಚಂದ್ರು ಗಾಯಗೊಂಡಿದ್ದರು.

ಇದನ್ನೂ ಓದಿ:

ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಸಿಆರ್‌ಪಿಎಫ್ ಶಿಬಿರದ ಮೇಲೆ ಉಗ್ರರ ದಾಳಿ, ಮೂವರು ಸಿಬ್ಬಂದಿಗೆ ಗಾಯ

 

ಕೇವಲ 15 ಸೆಕೆಂಡ್‌ಗಳಲ್ಲಿ 30 ಸುತ್ತು ಗುಂಡು
ತನಿಖೆಯ ವೇಳೆ ಲಭ್ಯವಾದ ಸಿಸಿಟಿವಿ ದೃಶ್ಯಗಳ ವಿಶ್ಲೇಷಣೆಯಲ್ಲಿ, ಸುಮಾರು 15 ಸೆಕೆಂಡ್‌ಗಳಲ್ಲಿ 30 ಸುತ್ತು ಗುಂಡು ಹಾರಿಸಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ. ದಾಳಿಕೋರರು ಚೆಕ್‌ಪಾಯಿಂಟ್‌ನಿಂದ ಸುಮಾರು 50 ಮೀಟರ್ ದೂರದಲ್ಲಿದ್ದ ಜೌಗು ಪ್ರದೇಶ ಮತ್ತು ಮರಗಿಡಗಳ ಮರೆಯಲ್ಲಿ ನಿಂತು ಗುಂಡು ಹಾರಿಸಿ, ಅದೇ ಪ್ರದೇಶದ ಮೂಲಕ ಪರಾರಿಯಾಗಿರಬಹುದು ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ.

ಗಾಯಗೊಂಡ ಮೂವರು ಸಿಬ್ಬಂದಿಯನ್ನು ಮೊದಲು ಅನಂತನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಅವರಲ್ಲಿ ಒಬ್ಬರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಗರದ ಸೇನೆಯ 92 ಬೇಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ನಾಪತ್ತೆ ದೂರು ತನಿಖೆಗೆ ಹೊಸ ತಿರುವು
ದಾಳಿಯ ಬಳಿಕ ಉಮರ್ ನಿಸಾರ್ ದಾರ್ ಮನೆಗೆ ಮರಳದಿದ್ದಾಗ, ಆತನ ಕುಟುಂಬದವರು ಕುಲ್ಗಾಮ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಆರಂಭದಲ್ಲಿ ಇದು ನಾಪತ್ತೆಯಾದ ವ್ಯಕ್ತಿಯ ಪ್ರಕರಣವಾಗಿದ್ದರೂ, ದಾಳಿಯ ತನಿಖೆ ಮುಂದುವರಿದಂತೆ ದಾರ್‌ನ ಚಲನವಲನಗಳ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತು.

ತನಿಖಾಧಿಕಾರಿಗಳ ಪ್ರಕಾರ, ದಾರ್ ಕಳೆದ ಐದರಿಂದ ಆರು ತಿಂಗಳಿನಿಂದ ಲಷ್ಕರ್-ಎ-ತೊಯ್ಬಾ ಕಮಾಂಡರ್ ಲತೀಫ್ ಭಟ್‌ಗೆ ಆಶ್ರಯ ಮತ್ತು ಇತರ ಸಹಾಯ ಒದಗಿಸುತ್ತಿದ್ದ. ದಾಳಿಯ ನಂತರ ದಾರ್ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಸಂಘಟನೆಗೆ ಸೇರಿದ್ದಾನೆ ಎಂಬ ಮಾಹಿತಿಯೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ

ಈ ವೇಳೆ ಇಬ್ಬರು ಸಮೀಪದ ಶಾಲೆಗಳತ್ತ ಓಡಿಹೋದರು. ಆ ಶಾಲೆಗಳಲ್ಲಿ ಮಕ್ಕಳು ಇದ್ದ ಕಾರಣ, ಮೊದಲು ಅವರನ್ನು ಸುರಕ್ಷಿತವಾಗಿ ಹೊರಗೆ ಕರೆತರಲು ಭದ್ರತಾ ಪಡೆಗಳು ಕ್ರಮ ಕೈಗೊಂಡವು. ಮಕ್ಕಳನ್ನು ಸ್ಥಳಾಂತರಿಸಿದ ಬಳಿಕ ಕಾರ್ಯಾಚರಣೆ ಮುಂದುವರೆದು ಗುಂಡಿನ ಚಕಮಕಿ ನಡೆಯಿತು. ಇದರಲ್ಲಿ ಉಮರ್ ನಿಸಾರ್ ದಾರ್ ಹತನಾದರೆ, ಲತೀಫ್ ಭಟ್ ತಪ್ಪಿಸಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಟ್‌ಗೆ ಗುಂಡೇಟು ತಗುಲಿರಬಹುದು ಎಂದು ಭದ್ರತಾ ಪಡೆಗಳು ಶಂಕಿಸಿವೆ. ಆದರೆ ಆತ ಇನ್ನೂ ಪತ್ತೆಯಾಗಿಲ್ಲ. ಆತನಿಗಾಗಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಸ್ಥಳೀಯ ಬೆಂಬಲ ಜಾಲದ ಬಗ್ಗೆಯೂ ತನಿಖೆ
ಈ ದಾಳಿಯ ಹಿಂದೆ ಸ್ಥಳೀಯರಿಂದ ನೆರವು ಸಿಕ್ಕಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಭಯೋತ್ಪಾದಕ ಸಂಘಟನೆಗಳಿಗೆ ನೇರವಾಗಿ ಸೇರದೆ, ಅವರಿಗೆ ಆಶ್ರಯ, ಆಹಾರ, ಸಂಚಾರ ವ್ಯವಸ್ಥೆ ಅಥವಾ ಮಾಹಿತಿ ಒದಗಿಸುವವರನ್ನು ಓವರ್‌ಗ್ರೌಂಡ್ ವರ್ಕರ್ಸ್‌ (OGW) ಎಂದು ಕರೆಯಲಾಗುತ್ತದೆ.

ನವೆಂಬರ್ 14ರಂದು ಪ್ರಕಟವಾದ ವರದಿಯ ಪ್ರಕಾರ, ದಾಳಿಯ ತನಿಖೆಯ ಭಾಗವಾಗಿ 500ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಲಾಗಿತ್ತು. ಅವರಲ್ಲಿ ಕನಿಷ್ಠ 20 ಮಂದಿಯನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು. ಲಷ್ಕರ್ ಸಂಘಟನೆಯ ಕೆಲವು ಸ್ಥಳೀಯ ಸಹಾಯಕರ ಪಾತ್ರದ ಬಗ್ಗೆಯೂ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us