
ಕುಲ್ಗಾಮ್, ನವೆಂಬರ್ 18: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ(ಎಲ್‌ಇಟಿ) ಸಂಘಟನೆಯ ಉನ್ನತ ಕಮಾಂಡರ್ ಲತೀಫ್ ಭಟ್ ಸಾವನ್ನಪ್ಪಿದ್ದಾನೆ. ಬುಧವಾರ ಜಂಗಲ್‌ಪೋರಾ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯ ವೇಳೆ ಭದ್ರತಾ ಸಿಬ್ಬಂದಿ ವಿಡಿಯೋ ಕರೆ ಮೂಲಕ ಆತನನ್ನು ಸಂಪರ್ಕಿಸಿ ಶರಣಾಗುವಂತೆ ಮನವಿ ಮಾಡಿದ್ದರು. ಆದರೆ ಆತ ಶರಣಾಗಲು ನಿರಾಕರಿಸಿದ್ದಾನೆ ಎನ್ನಲಾಗಿದೆ.
ಈ ಕಾರ್ಯಾಚರಣೆ ನವೆಂಬರ್ 11ರಂದು ಕುಲ್ಗಾಮ್‌ನಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ನಡೆದ ಗುಂಡಿನ ದಾಳಿಯ ತನಿಖೆಯ ಭಾಗವಾಗಿತ್ತು. ಆ ದಾಳಿಯಲ್ಲಿ ಮೂವರು ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದರು. ಘಟನೆಯ ಬಳಿಕ ಪರಾರಿಯಾಗಿದ್ದ ಲತೀಫ್ ಭಟ್‌ಗಾಗಿ ಭದ್ರತಾ ಪಡೆಗಳು ನಿರಂತರ ಶೋಧ ನಡೆಸುತ್ತಿದ್ದವು.
ವಿಡಿಯೋ ಕಾಲ್‌ನಲ್ಲಿ ಶರಣಾಗುವಂತೆ ಮನವಿ
ಕಾರ್ಯಾಚರಣೆಯ ವೇಳೆ ಪೊಲೀಸರು ಮತ್ತು ಸೇನಾ ಅಧಿಕಾರಿಗಳು ವಿಡಿಯೋ ಕರೆ ಮೂಲಕ ಲತೀಫ್ ಭಟ್‌ನನ್ನು ಸಂಪರ್ಕಿಸಿದ್ದರು. ಆತನಿಗೆ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗುವಂತೆ ಮನವಿ ಮಾಡಿದ್ದರು. “ನಾವು ನಿಮ್ಮೊಂದಿಗಿದ್ದೇವೆ, ಈ ಮಾರ್ಗವನ್ನು ಏಕೆ ಆರಿಸಿಕೊಂಡಿದ್ದೀರಿ? ಶರಣಾಗಿ” ಎಂದು ಅಧಿಕಾರಿಗಳು ಮನವೊಲಿಸಲು ಪ್ರಯತ್ನಿಸಿದ್ದರು. ಆದರೆ ಭಟ್, “ನಾನು ಅಲ್ಲಾಹನನ್ನು ಭೇಟಿಯಾಗಲು ಹೊರಟಿದ್ದೇನೆ. ನನಗೆ ಅಲ್ಲಾಹನೇ ಸಾಕು” ಎಂದು ಹೇಳಿ ಶರಣಾಗಲು ನಿರಾಕರಿಸಿದ್ದಾನೆ ಎಂದು ವರದಿಯಾಗಿದೆ. ಈ ಸಂಭಾಷಣೆಯ ವಿಡಿಯೋ ಕೂಡ ಹೊರಬಂದಿದೆ.
ಇದನ್ನೂ ಓದಿ: ಸಿಸಿಟಿವಿ ದೃಶ್ಯ, ನಾಪತ್ತೆ ದೂರು, ಕುಲ್ಗಾಮ್ ದಾಳಿಯ ಶಂಕಿತರನ್ನು ಪತ್ತೆಹಚ್ಚಿದ್ದು ಹೇಗೆ?
ಸೋಮವಾರ ತಪ್ಪಿಸಿಕೊಂಡಿದ್ದ ಭಟ್
ನವೆಂಬರ್ 16ರಂದು ಕುಲ್ಗಾಮ್‌ನ ಲಾರೂ ಬೈಪಾಸ್ ಬಳಿ ನಡೆದ ಎನ್‌ಕೌಂಟರ್‌ನಲ್ಲಿ ಉಮರ್ ನಿಸಾರ್ ದಾರ್ ಸಾವನ್ನಪ್ಪಿದ್ದ. ಆದರೆ ಆತನ ಸಹಚರ ಎನ್ನಲಾದ ಲತೀಫ್ ಭಟ್ ಭದ್ರತಾ ಪಡೆಗಳ ಸುತ್ತುವರಿಕೆಯಿಂದ ತಪ್ಪಿಸಿಕೊಂಡಿದ್ದ. ಅಂದಿನಿಂದ ಆತನಿಗಾಗಿ ಹುಡುಕಾಟ ನಡೆಯುತ್ತಿತ್ತು. ಪೊಲೀಸರ ಪ್ರಕಾರ, ಉಮರ್ ದಾರ್ ಸುಮಾರು ಆರು ತಿಂಗಳ ಕಾಲ ಭಟ್‌ಗೆ ಆಶ್ರಯ ಮತ್ತು ಇತರ ನೆರವು ನೀಡಿದ್ದ ಎನ್ನಲಾಗಿದೆ.
ಸಿಆರ್‌ಪಿಎಫ್ ದಾಳಿಗೆ ಸಂಬಂಧಿಸಿದ ಆರೋಪ
ನವೆಂಬರ್ 11ರಂದು ಕುಲ್ಗಾಮ್‌ನ ಅಖ್ರಾನ್ ಪ್ರದೇಶದ ಸಿಆರ್‌ಪಿಎಫ್ ಚೆಕ್‌ಪೋಸ್ಟ್ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಿಬ್ಬಂದಿ ಗಾಯಗೊಂಡಿದ್ದರು. ಈ ದಾಳಿಗೂ ಮುನ್ನ ಲತೀಫ್ ಭಟ್ ಮತ್ತು ಉಮರ್ ದಾರ್ ಹಲವು ಪ್ರದೇಶಗಳಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೀರ್ ಬಜಾರ್, ಅಖ್ರಾನ್, ಹಬ್ಲಿಶ್ ಮತ್ತು ಕಿಲಾಮ್ ಪ್ರದೇಶಗಳ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರ ಚಲನವಲನಗಳು ಸೆರೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ. ಈ ದೃಶ್ಯಗಳನ್ನು ಆಧರಿಸಿ ತನಿಖೆ ಮುಂದುವರೆದಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ