
ಐಜ್ವಾಲ್ ,ಅಕ್ಟೋಬರ್ 20: ಈಶಾನ್ಯ ಭಾರತದಲ್ಲಿ ಗಡಿಯಾಚೆಗಿನ ಅಕ್ರಮ ತಂಬಾಕು ಕಳ್ಳಸಾಗಣೆ ಜಾಲಕ್ಕೆ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಭರ್ಜರಿ ಹೊಡೆತ ನೀಡಿದೆ. ಮಿಜೋರಾಂನಲ್ಲಿ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಬರೋಬ್ಬರಿ 8.64 ಕೋಟಿ ರೂ. ಮೌಲ್ಯದ 43.2 ಲಕ್ಷ ವಿದೇಶಿ ಮೂಲದ ಸಿಗರೇಟ್‌ಗಳನ್ನು ಡಿಆರ್‌ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಲಾರಿ ಚಾಲಕನನ್ನು ಬಂಧಿಸಿದ್ದಾರೆ.
ಮ್ಯಾನ್ಮಾರ್ ಗಡಿಯಿಂದ ರಾಜಧಾನಿ ಐಜ್ವಾಲ್‌ಗೆ ಬೃಹತ್ ಪ್ರಮಾಣದಲ್ಲಿ ವಿದೇಶಿ ಸರಕು ಸಾಗಣೆಯಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ. ಡಿಆರ್‌ಐ ಐಜ್ವಾಲ್ ಪ್ರಾದೇಶಿಕ ಘಟಕದ ಅಧಿಕಾರಿಗಳು ಚಂಫೈ-ಐಜ್ವಾಲ್ ಹೆದ್ದಾರಿಯ ಉದ್ದಕ್ಕೂ ನಿಗಾ ಇರಿಸಿ, ತುಯಿರಿಯಲ್ ಗ್ರಾಮದ ಬಳಿ ಶಂಕಿತ ಟ್ರಕ್ ಅನ್ನು ಅಡ್ಡಗಟ್ಟಿದ್ದಾರೆ.
432 ಬಾಕ್ಸ್‌ಗಳಲ್ಲಿದ್ದ ಸಿಗರೇಟ್: ಲಾರಿಯನ್ನು ಕೂಲಂಕಷವಾಗಿ ತಪಾಸಣೆ ನಡೆಸಿದಾಗ ಪ್ಯಾಟ್ರನ್ ಬ್ರ್ಯಾಂಡ್‌ನ 43,20,000 ವಿದೇಶಿ ಸಿಗರೇಟ್ ಕಡ್ಡಿಗಳಿದ್ದ ಒಟ್ಟು 432 ಬೃಹತ್ ಬಾಕ್ಸ್‌ಗಳು ಪತ್ತೆಯಾಗಿವೆ. ಭಾರತೀಯ ತಂಬಾಕು ನಿಯಂತ್ರಣ ಕಾಯ್ದೆ (COTPA 2003) ಅಡಿಯಲ್ಲಿ ಕಡ್ಡಾಯವಾಗಿರಬೇಕಾದ ಚಿತ್ರಾತ್ಮಕ ಆರೋಗ್ಯ ಎಚ್ಚರಿಕೆಗಳು ಈ ಪ್ಯಾಕೆಟ್‌ಗಳಲ್ಲಿ ಇರಲಿಲ್ಲ.
ಕಸ್ಟಮ್ಸ್ ಕಾಯ್ದೆಯಡಿ ಪ್ರಕರಣ: 1962 ರ ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 110 ರ ಅಡಿಯಲ್ಲಿ 8.64 ಕೋಟಿ ರೂ. ಮೌಲ್ಯದ ಸಿಗರೇಟ್ ಹಾಗೂ ಸಾಗಣೆಗೆ ಬಳಸಿದ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ಚಾಲಕನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಗೋಲ್ಡ್ ಸ್ಮಗ್ಲಿಂಗ್: ಚೆನ್ನೈ ಗ್ಯಾಂಗ್ ಬಂಧನ!
ಮ್ಯಾನ್ಮಾರ್ ಗಡಿ ಮಾರ್ಗದ ದುರ್ಬಳಕೆ:
ಪ್ರಾಥಮಿಕ ತನಿಖೆಯ ಪ್ರಕಾರ, ಈ ಸಿಗರೇಟ್‌ಗಳನ್ನು ಮ್ಯಾನ್ಮಾರ್‌ನಿಂದ ಭಾರತ-ಮ್ಯಾನ್ಮಾರ್ ಗಡಿಯ ಝೋಖಾವ್ತಾರ್ ವಲಯದ ಮೂಲಕ ಕಳ್ಳಸಾಗಣೆ ಮಾಡಲಾಗಿತ್ತು. ಮ್ಯಾನ್ಮಾರ್‌ನಲ್ಲಿನ ಅಸ್ಥಿರತೆಯ ಲಾಭ ಪಡೆದುಕೊಂಡು ಕಳ್ಳಸಾಗಣೆದಾರರು ಗುಡ್ಡಗಾಡು ಪ್ರದೇಶಗಳ ಮೂಲಕ ಭಾರತದ ಮಾರುಕಟ್ಟೆಗೆ ತೆರಿಗೆ ರಹಿತ ತಂಬಾಕು ಉತ್ಪನ್ನಗಳನ್ನು ನುಗ್ಗಿಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪೋಸ್ಟ್
ಭಾರತ ಸರ್ಕಾರದ ಬೊಕ್ಕಸಕ್ಕೆ ನಷ್ಟ: ವಿದೇಶಿ ಸಿಗರೇಟ್‌ಗಳನ್ನು ಅಕ್ರಮವಾಗಿ ಭಾರತಕ್ಕೆ ತರುವುದರಿಂದ ಕೇಂದ್ರ ಸರ್ಕಾರಕ್ಕೆ ಜಿಎಸ್‌ಟಿ (GST) ಮತ್ತು ಕಸ್ಟಮ್ಸ್ ಸುಂಕದ ರೂಪದಲ್ಲಿ ಕೋಟ್ಯಂತರ ರೂಪಾಯಿಗಳ ಆದಾಯ ನಷ್ಟವಾಗುತ್ತದೆ. ಯಾವುದೇ ಗುಣಮಟ್ಟ ತಪಾಸಣೆ ಇಲ್ಲದೆ ಕಳ್ಳಸಾಗಣೆ ಮೂಲಕ ಬರುವ ಇಂತಹ ಸಿಗರೇಟ್‌ಗಳಲ್ಲಿ ಅನುಮತಿಗಿಂತ ಹೆಚ್ಚು ನಿಕೋಟಿನ್ ಮತ್ತು ಅಪಾಯಕಾರಿ ರಾಸಾಯನಿಕಗಳಿರುತ್ತವೆ. ಜೊತೆಗೆ ಭಾರತದಲ್ಲಿ ಪ್ರಚಲಿತದಲ್ಲಿರುವ ಶಾಸನಬದ್ಧ ಕ್ಯಾನ್ಸರ್ ಎಚ್ಚರಿಕೆಗಳೂ ಇವುಗಳ ಮೇಲಿರುವುದಿಲ್ಲ.
ಡಿಆರ್‌ಐ ಕಣ್ಗಾವಲು ಚುರುಕು: ಈಶಾನ್ಯ ಗಡಿ ಭಾಗಗಳಲ್ಲಿ ವಿದೇಶಿ ಸಿಗರೇಟ್, ಮಾದಕವಸ್ತು (ಡ್ರಗ್ಸ್) ಹಾಗೂ ಚಿನ್ನದ ಕಳ್ಳಸಾಗಣೆ ತಡೆಯಲು ಭದ್ರತಾ ಪಡೆಗಳು ಮತ್ತು ಡಿಆರ್‌ಐ ಜಂಟಿ ಗಸ್ತು ಹಾಗೂ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಿವೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ