ಆಸಿಯಾನ್ ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ಫಿಲಿಪೈನ್ಸ್​ಗೆ ಪ್ರಯಾಣ: ಕಡಲ ಭದ್ರತೆ, ವ್ಯಾಪಾರ ವೃದ್ಧಿಗೆ ಒತ್ತು

ಪ್ರಧಾನಿ ಮೋದಿ ಅವರು ಫಿಲಿಪೈನ್ಸ್‌ಗೆ ಭೇಟಿ ನೀಡಿ ಆಸಿಯಾನ್ ಹಾಗೂ ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಈ ಭೇಟಿಯಲ್ಲಿ ಕಡಲ ಭದ್ರತೆ, ವ್ಯಾಪಾರ ವೃದ್ಧಿ ಮತ್ತು ಇಂಡೋ-ಪೆಸಿಫಿಕ್ ಸ್ಥಿರತೆ ಕುರಿತು ಮಹತ್ವದ ಮಾತುಕತೆ ನಡೆಯಲಿದೆ. 2026-2030ರ ಸಹಕಾರ ಯೋಜನೆ ಹಾಗೂ ಭಾರತದ 'ಆಕ್ಟ್ ಈಸ್ಟ್' ನೀತಿಗೆ ಅನುಗುಣವಾಗಿ ಆಸಿಯಾನ್ ರಾಷ್ಟ್ರಗಳೊಂದಿಗೆ ಬಾಂಧವ್ಯ ಬಲಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಆಸಿಯಾನ್ ಶೃಂಗಸಭೆಯಲ್ಲಿ ಭಾಗಿಯಾಗಲು ಪ್ರಧಾನಿ ಮೋದಿ ಫಿಲಿಪೈನ್ಸ್​ಗೆ  ಪ್ರಯಾಣ: ಕಡಲ ಭದ್ರತೆ, ವ್ಯಾಪಾರ ವೃದ್ಧಿಗೆ ಒತ್ತು
ನರೇಂದ್ರ ಮೋದಿ
Image Credit source: PTI

Updated on: Nov 16, 2026 | 7:52 AM

ನವದೆಹಲಿ, ನವೆಂಬರ್ 16: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಪ್ರಮುಖ ಪ್ರಾದೇಶಿಕ ಶೃಂಗಸಭೆಗಳಲ್ಲಿ ಭಾಗವಹಿಸಲು ಸೋಮವಾರದಿಂದ ಫಿಲಿಪೈನ್ಸ್ ರಾಜಧಾನಿ ಮನಿಲಾ ಪ್ರವಾಸ ಕೈಗೊಳ್ಳಲಿದ್ದಾರೆ. ನವೆಂಬರ್ 16ರಿಂದ 18ರವರೆಗೆ ನಡೆಯಲಿರುವ ಈ ಭೇಟಿಯಲ್ಲಿ 23ನೇ ಭಾರತ-ಆಸಿಯಾನ್ ಶೃಂಗಸಭೆ ಮತ್ತು 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.

ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ ಮೋದಿ ಈ ಪ್ರವಾಸ ಕೈಗೊಳ್ಳುತ್ತಿದ್ದಾರೆ. ನವೆಂಬರ್ 17ರಂದು ನಡೆಯಲಿರುವ ಶೃಂಗಸಭೆಗಳಲ್ಲಿ ಕಡಲ ಭದ್ರತೆ, ವ್ಯಾಪಾರ, ಹೂಡಿಕೆ ಮತ್ತು ಪ್ರಾದೇಶಿಕ ಸ್ಥಿರತೆ ಪ್ರಮುಖ ಚರ್ಚೆಯ ವಿಷಯಗಳಾಗಿವೆ. ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದು ಈ ಭೇಟಿಯ ಪ್ರಮುಖ ಉದ್ದೇಶವಾಗಿದೆ. ವಿಶೇಷವಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಭದ್ರತಾ ಸಹಕಾರ ಹೆಚ್ಚಿಸುವುದು ಮತ್ತು ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವ ಬಗ್ಗೆ ನಾಯಕರು ಚರ್ಚಿಸಲಿದ್ದಾರೆ.

Loading...

2026–2030ರ ಸಹಕಾರ ಯೋಜನೆ ಪರಿಶೀಲನೆ

ಭಾರತ-ಆಸಿಯಾನ್ ಶೃಂಗಸಭೆಯಲ್ಲಿ ಉಭಯ ಪಕ್ಷಗಳ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಯನ್ನು ಪರಿಶೀಲಿಸಲಾಗುತ್ತದೆ. 2026ರಿಂದ 2030ರವರೆಗಿನ ಭಾರತ-ಆಸಿಯಾನ್ ಕ್ರಿಯಾ ಯೋಜನೆಯ ಅನುಷ್ಠಾನವೂ ಚರ್ಚೆಯಾಗಲಿದೆ. ವ್ಯಾಪಾರ, ಹೂಡಿಕೆ, ತಂತ್ರಜ್ಞಾನ, ಸಂಪರ್ಕ ವ್ಯವಸ್ಥೆ, ಶಿಕ್ಷಣ, ಆರೋಗ್ಯ ಮತ್ತು ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂದಿನ ಐದು ವರ್ಷಗಳ ಸಹಕಾರದ ದಿಕ್ಕನ್ನು ರೂಪಿಸುವ ನಿರೀಕ್ಷೆಯಿದೆ.

ವಿದೇಶಾಂಗ ಸಚಿವಾಲಯದ ಪ್ರಕಾರ, ಭಾರತ-ಆಸಿಯಾನ್ ಸಂಬಂಧಗಳು ಭಾರತದ ‘ಆಕ್ಟ್ ಈಸ್ಟ್’ ನೀತಿ ಮತ್ತು ಇಂಡೋ-ಪೆಸಿಫಿಕ್ ದೃಷ್ಟಿಕೋನದ ಪ್ರಮುಖ ಭಾಗವಾಗಿವೆ.

ಇದನ್ನೂ ಓದಿ: “ಬೆಂಗಳೂರಿನ ರಸ್ತೆಗಳಿಗೆ ಡಾಂಬರ್ ಆಗಬೇಕಾದ್ರೆ ಮೋದಿಯವರೇ ಬರಬೇಕಾಯಿತು”: ಜಿಬಿಎ, ಬಿಎಂಆರ್‌ಸಿಎಲ್ ವಿರುದ್ಧ ಜನರ ಆಕ್ರೋಶ

 

ಕಡಲ ಭದ್ರತೆಗೆ ವಿಶೇಷ ಆದ್ಯತೆ

2026ನೇ ವರ್ಷವನ್ನು ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ‘ಕಡಲ ಸಹಕಾರ ವರ್ಷ’ ಎಂದು ಆಚರಿಸುತ್ತಿವೆ. ಸಮುದ್ರ ಮಾರ್ಗಗಳ ಸುರಕ್ಷತೆ, ನೌಕಾಪಡೆಗಳ ಸಹಕಾರ, ಕಡಲ ವ್ಯಾಪಾರ ಮತ್ತು ವಿಪತ್ತು ನಿರ್ವಹಣೆಯಲ್ಲಿ ಪರಸ್ಪರ ನೆರವು ನೀಡುವ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ.

ಭಾರತ ಮತ್ತು ಆಸಿಯಾನ್ ರಾಷ್ಟ್ರಗಳ ನಡುವಿನ ಒಟ್ಟು ವ್ಯಾಪಾರ ಸುಮಾರು 122 ಶತಕೋಟಿ ಡಾಲರ್‌ಗಳಷ್ಟಿದೆ ಎಂದು ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ವ್ಯಾಪಾರವನ್ನು ಇನ್ನಷ್ಟು ಹೆಚ್ಚಿಸುವುದು, ಹೂಡಿಕೆಗೆ ಅವಕಾಶ ಕಲ್ಪಿಸುವುದು ಮತ್ತು ಪೂರೈಕೆ ಸರಪಳಿಯನ್ನು ಬಲಪಡಿಸುವುದು ಕೂಡ ಚರ್ಚೆಯ ಭಾಗವಾಗಲಿದೆ.

ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಏನು ಚರ್ಚೆ?

ಭಾರತ-ಆಸಿಯಾನ್ ಶೃಂಗಸಭೆಯ ಜೊತೆಗೆ ಪ್ರಧಾನಿ ಮೋದಿ 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲೂ ಭಾಗವಹಿಸಲಿದ್ದಾರೆ. ಈ ವೇದಿಕೆಯಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ಭದ್ರತೆ, ರಕ್ಷಣಾ ಸಹಕಾರ, ರಾಜಕೀಯ ಬೆಳವಣಿಗೆಗಳು ಮತ್ತು ಆರ್ಥಿಕ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ.

ಆಸಿಯಾನ್ ರಾಷ್ಟ್ರಗಳ ಜೊತೆಗೆ ಭಾರತ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಅಮೆರಿಕ ಮತ್ತು ರಷ್ಯಾ ಈ ಶೃಂಗಸಭೆಯ ಭಾಗವಾಗಿವೆ. 2005ರಲ್ಲಿ ಆರಂಭವಾದ ಈ ವೇದಿಕೆ ಏಷ್ಯಾ-ಪೆಸಿಫಿಕ್ ಪ್ರದೇಶದ ಪ್ರಮುಖ ಭದ್ರತಾ ಮತ್ತು ರಾಜತಾಂತ್ರಿಕ ಚರ್ಚೆಗಳ ವೇದಿಕೆಯಾಗಿದೆ.

ಭಾರತೀಯ ಸಮುದಾಯದ ಭೇಟಿಗೂ ಪ್ರಯತ್ನ

ಮನಿಲಾದಲ್ಲಿರುವ ಭಾರತೀಯ ಸಮುದಾಯದವರು ಪ್ರಧಾನಿ ಮೋದಿಯನ್ನು ಭೇಟಿಯಾಗಲು ಆಸಕ್ತಿ ತೋರಿದ್ದಾರೆ. ಈ ಬಗ್ಗೆ ಮಾತನಾಡಿರುವ ವಿದೇಶಾಂಗ ಸಚಿವಾಲಯದ ಪೂರ್ವ ಕಾರ್ಯದರ್ಶಿ ರುದ್ರೇಂದ್ರ ಟಂಡನ್, ಭಾರತೀಯ ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಧಾನಿಯವರ ವೇಳಾಪಟ್ಟಿಯಲ್ಲಿ ಈ ಭೇಟಿಗೆ ಅವಕಾಶ ಕಲ್ಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ

ಆಸಿಯಾನ್ (ASEAN) ಎಂದರೆ ಅಸೋಸಿಯೇಷನ್ ಆಫ್ ಸೌತ್ ಈಸ್ಟ್​ ಏಷ್ಯನ್ ನೇಷನ್ಸ್​, ಇದು ಆಗ್ನೇಯ ಏಷ್ಯಾದ ರಾಷ್ಟ್ರಗಳ ಪ್ರಾದೇಶಿಕ ಸಂಘಟನೆ. 1967ರಲ್ಲಿ ಸ್ಥಾಪನೆಯಾದ ಈ ಸಂಘಟನೆಯಲ್ಲಿ ಈಗ 11 ರಾಷ್ಟ್ರಗಳಿವೆ.
– ಇಂಡೋನೇಷ್ಯಾ
– ಮಲೇಷ್ಯಾ
– ಸಿಂಗಾಪುರ
– ಥಾಯ್ಲೆಂಡ್
– ಫಿಲಿಪೈನ್ಸ್
– ವಿಯೆಟ್ನಾಂ
– ಬ್ರೂನೈ
– ಲಾವೋಸ್
– ಮ್ಯಾನ್ಮಾರ್
– ಕಾಂಬೋಡಿಯಾ
– ಟಿಮೋರ್-ಲೆಸ್ಟೆ
ಈ ರಾಷ್ಟ್ರಗಳು ವ್ಯಾಪಾರ, ಹೂಡಿಕೆ, ಭದ್ರತೆ, ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಅಭಿವೃದ್ಧಿಯಲ್ಲಿ ಪರಸ್ಪರ ಸಹಕಾರ ನೀಡುತ್ತವೆ.

ಭಾರತದ ಪಾಲಿಗೆ ಆಸಿಯಾನ್ ಏಕೆ ಮುಖ್ಯ?
– ವ್ಯಾಪಾರ: ಆಗ್ನೇಯ ಏಷ್ಯಾದ ದೊಡ್ಡ ಮಾರುಕಟ್ಟೆಗಳೊಂದಿಗೆ ಭಾರತದ ವ್ಯಾಪಾರ ಸಂಬಂಧ ಬಲಪಡಿಸಲು ನೆರವಾಗುತ್ತದೆ.
– ಕಡಲ ಭದ್ರತೆ: ಹಿಂದೂ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಮುದ್ರದ ಪ್ರಮುಖ ಸಮುದ್ರ ಮಾರ್ಗಗಳ ಸುರಕ್ಷತೆಗೆ ಸಹಕಾರ ಮುಖ್ಯ.
– ಚೀನಾ ಪ್ರಭಾವ: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ ಮತ್ತು ಸಮತೋಲನ ಕಾಪಾಡಲು ಭಾರತ-ಆಸಿಯಾನ್ ಸಹಭಾಗಿತ್ವ ಮಹತ್ವದ್ದಾಗಿದೆ.
– ಆಕ್ಟ್ ಈಸ್ಟ್ ನೀತಿ: ಆಗ್ನೇಯ ಏಷ್ಯಾದ ರಾಷ್ಟ್ರಗಳೊಂದಿಗೆ ಆರ್ಥಿಕ, ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ಸಂಬಂಧ ವೃದ್ಧಿಸುವುದು ಭಾರತದ ಈ ನೀತಿಯ ಉದ್ದೇಶ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us