1988ರಿಂದ 1990ರ ಅವಧಿಯಲ್ಲಿ ‘ವಾಗ್ಲೆ ಕಿ ದುನಿಯಾ’ ಎಂಬ ಧಾರಾವಾಹಿ ಪ್ರಸಾರವಾಗಿತ್ತು, ಜನ ಅಚ್ಚುಮೆಚ್ಚಿನಿಂದ ಅದನ್ನು ವೀಕ್ಷಿಸಿದ್ದರು. ಈಗ ಜನ ವಾಗ್ಲೆಯ ಬದಲಿಗೆ ವಾಜೆಯ ದುನಿಯಾವನ್ನು ನೋಡುತ್ತಿದ್ದಾರೆ. ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ನಿಲ್ಲುವ ಭಾರತದ ಹೆಸರು ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆಯಾದ ಹಿಂದೆ ಸಚಿನ್ ವಾಜೆ ಎಂಬ ಪೊಲೀಸ್ ಅಧಿಕಾರಿಯ ಕಿತಾಪತಿ ಇದೆ ಎಂದು ಆರೋಪ ಕೇಳಿತ್ತು. ಸಚಿನ್ ವಾಜೆಯನ್ನು ಅಮಾನತು ಮಾಡಲಾಗಿತ್ತು. ಅಮಾನತು ಎಂಬ ಶಿಸ್ತುಕ್ರಮ ಸಚಿನ್ ವಾಜೆ ಎಂಬ ಮುಂಬೈ ಪೊಲೀಸ್ಗೆ ಹೊಸದೇನೂ ಅಲ್ಲ, ಬಹುಶಃ ಇದು ಕೊನೆಯದ್ದೂ ಅಲ್ಲ. ಅಂತಹ ಬಗೆದಷ್ಟೂ ಮುಗಿಯದ ಸಚಿನ್ ವಾಜೆ ಎಂಬ ಕುತೂಹಲಕರ ವ್ಯಕ್ತಿತ್ವದ ನೋಟ ಇಲ್ಲಿದೆ.
ಸಚಿನ್ ವಾಜೆ ಕೇವಲ ಪೊಲೀಸ್ ಇಲಾಖೆಗೆ ಸೀಮಿತವಾದವರಲ್ಲ. ಮೂಲತಃ ಮಹಾರಾಷ್ಟ್ರದ ಕೊಲ್ಲಾಪುರದವರಾದ ವಾಜೆ ಮುಂದೆ ಎನ್ಕೌಂಟರ್ ಸ್ಪೆಷಲಿಸ್ಟ್ ಎಂದು ಪ್ರಸಿದ್ಧರಾಗುತ್ತಾರೆ. ಒಂದಲ್ಲ ಎರಡಲ್ಲ, ಬರೋಬ್ಬರಿ 63 ಎನ್ಕೌಂಟರ್ಗಳು ಅವರ ತುಪಾಕಿಯಿಂದ ನಡೆದಿವೆ. ಖ್ವಾಜಾ ಯೂನಸ್ ಎಂಬಾತ ಕಸ್ಟಡಿಯಲ್ಲೇ ಮೃತಪಟ್ಟ ಪರಕರಣದಲ್ಲಿ ಸಚಿನ್ ವಾಜೆ ಒಟ್ಟು 17 ವರ್ಷ ಅಮಾನತಿನಲ್ಲಿದ್ದರು. ಇಷ್ಟು ದೀರ್ಘಾವಧಿಯ ಕಾಲ ಸೇವೆಯಿಂದ ಹೊರಗಿದ್ದರೂ ಮತ್ತೆ ಸೇವೆಗೆ ನಿಯುಕ್ತಿಗೊಳ್ಳುವ ಆಸೆಯನ್ನು ಸಾಮಾನ್ಯವಾಗಿ ತ್ಯಜಿಸಿರುತ್ತಾರೆ. ಆದರೆ ಮಹಾರಾಷ್ಟ್ರ ಪೊಲೀಸ್ ಇಲಾಖೆ ವಾಜೆಯನ್ನು 2020ರ ಜೂನ್ನಲ್ಲಿ ಮತ್ತೆ ಸೇವೆಗೆ ನೇಮಕ ಮಾಡಿಕೊಂಡಿತು.
ಮಹಾರಾಷ್ಟ್ರ ಪೊಲೀಸ್ ಸೇವೆಗೆ 1990 ರಲ್ಲಿ ಸೇರಿದ ಸಚಿನ್ ವಾಜೆಯನ್ನು ಮೊದಲ ದಿನಗಳಿಂದಲೂ ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸಲು ನಿಯುಕ್ತಿಗೊಳಿಸಲಾಯಿತು. ಉಗ್ರರ ಮತ್ತು ನಕ್ಸಲರ ಉಪಟಳ ಹೆಚ್ಚಿರುವ ಗಡ್ ಚಿರೊಲಿಯಲ್ಲಿ ವಾಜೆ ತಮ್ಮ ಸೇವೆಯ ಮೊದಲ ದಿನಗಳನ್ನು ಕಳೆದರು. ಅಲ್ಲಿ ಅವರಿಗೆ ಮಹತ್ವದ ಪ್ರಕರಣಗಳನ್ನು ಪರಿಹರಿಸುವ ಅವಕಾಶಗಳು ದೊರೆಯಿತು. ಇದು ಮುಂದೆ ಸಚಿನ್ ವಾಜೆ ಎಂಬ ಹೆಸರು ಪ್ರಭಾವಿಯಾಗಿ ಬೆಳೆಯಲು ಕಾರಣವಾಯಿತು.
ಹಿಂದೂ ಮುಸ್ಲಿಂ ಸಾಮರಸ್ಯ ಮೂಡಿಸಿದ್ದರು
ಮುಸ್ಲಿಂ ಸಮುದಾಯದ ದಟ್ಟಣೆ ಇರುವ ಮುಂಬ್ರಾ ಪ್ರದೇಶಕ್ಕೆ ಅವರು ವರ್ಗವಾದರು. ಅಲ್ಲಿ ಹಿಂದೂ ಮುಸ್ಲಿಮರ ನಡುವೆ ಸಾಮರಸ್ಯ ಮೂಡಿಸಿದ ಅವರು, ಮುಂದೆ ಠಾಣೆಯ ಕ್ರೈಂ ಬ್ರಾಂಚಿನ ವಿಶೇಷ ದಳದ ಮುಖ್ಯಸ್ಥರಾಗಿ ಪದೋನ್ನತಿ ಹೊಂದಿದರು. ಇದೇ ಹುದ್ದೆಯಲ್ಲಿ ಇರುವಾಗಲೇ ಅವರ ವ್ಯಕ್ತಿತ್ವಕ್ಕೆ ಎನ್ ಕೌಂಟರ್ ಸ್ಪೆಷಲಿಸ್ಟ್ ಎಂಬ ವಿಶೇಷಣ ಅಂಟಿಕೊಂಡಿತು.ಮುಂದೆ ಅವರಿಗೆ ಎದುರಾಗಿದ್ದೇ ನಕಲಿ ನೋಟುಗಳ ಜಾಲ, ಜತೆಗೆ ಜತೆಗೆ ಚಿತ್ರರಂಗದ ಹೈ ಫ್ರೊಫೈಲ್ ವ್ಯಕ್ತಿಗಳ ಪ್ರಕರಣಗಳು.ಇವುಗಳನ್ನು ಸಮರ್ಥವಾಗಿ ಬಗೆಹರಿಸಿದ ಬಗೆಯಿಂದ ಮಹಾರಾಷ್ಟ್ರದಾದ್ಯಂತ, ದೇಶಮಟ್ಟದಲ್ಲೂ ಸುದ್ದಿಯಾಗಿದ್ದರು ವಾಜೆ.
ಮುಂಬೈ ಪೊಲೀಸ್ನಲ್ಲಿ ಸೈಬರ್ ಕ್ರೈಂ ಪ್ರಕರಣಗಳನ್ನು ಬಗೆಹರಿಸಲು ಆಧುನಿಕ ತಂತ್ರಜ್ಞಾನಗಳನ್ನು ಬಳಸಿದ ಮೊದಲಿಗ ಸಚಿನ್ ವಾಜೆ ಎನ್ನುತ್ತಾರೆ. ಅವರಿಗೆ ತಾಂತ್ರಿಕ ವಿಷಯಗಳಲ್ಲಿದ್ದ ಪರಿಣತಿ ಇಡೀ ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಪ್ರಸಿದ್ಧವಾಗಿತ್ತು. 1997ರಲ್ಲಿ ಅಂತರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಮೋಸಜಾಲವೊಂದನ್ನು ಪತ್ತೆಹಚ್ಚಿದ್ದರು ಸಚಿನ್ ವಾಜೆ. ಇದು ಇಡೀ ಏಷ್ಯಾ ಖಂಡದಲ್ಲೇ ಪೊಲೀಸರು ಪತ್ತೆಹಚ್ಚಿದ ಮೊದಲ ಕ್ರೆಡಿಟ್ ಕಾರ್ಡ್ ಮೋಸಜಾಲ ಎಂದು ಪ್ರಸಿದ್ಧವಾಗಿತ್ತು.
ಅಮಾನತಿನ ಹಿಂದಿನ ಕಾರಣವೇನು?
ಘಾಟ್ಕೋಪರ್ ಬಾಂಬ್ ಸ್ಫೋಟದ ಆರೋಪಿ ಖ್ವಾಜಾ ಯೂನಸ್ ವಿಚಾರಣೆಯಲ್ಲಿರುವಾಗ ಕಸ್ಟಡಿಯಲ್ಲೇ ಮೃತಪಟ್ಟ. ಈ ಕಾರಣಕ್ಕೆ ಸಚಿನ್ ವಾಜೆ ಮತ್ತು 14 ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಯಿತು. ಮುಂದೆ ಸಚಿನ್ ವಾಜೆ ತಮ್ಮನ್ನು ಸೇವೆಗೆ ಮರು ನೇಮಕಮಾಡಿಕೊಳ್ಳುವಂತೆ ಮನವಿ ನೀಡಿದರೂ ನಿರಾಕರಿಸಲಾಯಿತು. ಹೀಗಾಗಿ ಅವರು 2007 ರ ನವೆಂಬರ್ 30 ರಂದು ಮಹಾರಾಷ್ಟ್ರ ಪೊಲೀಸ್ ಸೇವೆಗೆ ರಾಜೀನಾಮೆ ನೀಡಿದರು.
ಪೊಲೀಸ್ ಕೆಲಸ ಒಂದೇ ಅಲ್ಲ, ಸಚಿನ್ ವಾಜೆ ಬಹು ಕುಶಲ ವ್ಯಕ್ತಿ. ತಾಂತ್ರಿಕ ಕೌಶಲ್ಯ ಹೊಂದಿದ್ದ ಅವರು ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ ಒಂದೇ ವರ್ಷಕ್ಕೆ MobiCID ಎಂಬ ಆ್ಯಪ್ ಬಿಡುಗಡೆಗೊಳಿಸಿದರು. ಇದು ಮುಂದೆ ಹಲವು ಮಾಧ್ಯಮ ಸಂಸ್ಥೆಗಳಿಂದಲೂ ಮೆಚ್ಚುಗೆ ಗಳಿಸಿತ್ತು. ಇಷ್ಟಕ್ಕೇ ನಿಲ್ಲದೇ, ಮೊದಲಿಂದಲು ಶಿವಸೇನೆಯ ಆಪ್ತನಾಗಿ ಗುರುತಿಸಿಕೊಂಡಿದ್ದ ಅವರು, 2008 ರಲ್ಲಿ ಅಧಿಕೃತವಾಗಿ ಶಿವಸೇನೆಗೆ ಸೇರ್ಪಡೆಯಾದರು.
ಪೊಲೀಸ್ ಸೇವೆಯಲ್ಲಿದ್ದಾಗಲೂ ಅವರು ಇತರ ಕ್ಷೇತ್ರಗಳಲ್ಲಿ ಕೈಯಾಡಿಸಿದ್ದರು. ಅವರ ಹಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಟಿವಿ ವಾಹಿನಿಗಳ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದ ವಾಜೆಯ ಮುಖ ಜನರಿಗೆ ಚಿರಪರಿಚಿತವಾಗಿತ್ತು. ಮುಂಬೈ ಮೂಲದ ಹಲವು ಪತ್ರಿಕೆ, ಟಿವಿ ಮತ್ತು ಆನ್ಲೈನ್ ಸುದ್ದಿಮಾಧ್ಯಮಗಳಿಗೆ ಸಲಹೆಗಾರನಾಗಿಯೂ ಕೆಲಸ ಮಾಡಿದ್ದಾರೆ ಸಚಿನ್ ವಾಜೆ. ಅಲ್ಲದೆ ಸ್ವತಃ ಲೇಖಕರಾಗಿಯೂ ಗುರುತಿಸಿಕೊಂಡಿರುವ ಅವರು ಪಾಕಿಸ್ತಾನಿ ಮೂಲದ ಅಮೆರಿಕಾದ ಉಗ್ರ ಡೇವಿಡ್ ಹೆಡ್ಲಿ ಕುರಿತು ‘ ದಿ ಸ್ಕೌಟ್’ ಎಂಬ ಪುಸ್ತಕವನ್ನೂ ಬರೆದರು. ಈ ಪುಸ್ತಕ ಮಾರುಕಟ್ಟೆಯಲ್ಲಿ ಬಿಸಿದೋಸೆಯಂತೆ ಬಿಕರಿಯಾಗಿ ಜನಪ್ರಿಯತೆ ಗಳಿಸಿತ್ತು.
ಮತ್ತೆ ಪೊಲೀಸ್ ಇಲಾಖೆಗೆ ಕರೆಸಿಕೊಂಡಿತು ಮಹಾರಾಷ್ಟ್ರ ಸರ್ಕಾರ
ಇನ್ನೇನು ಸಚಿನ್ ವಾಜೆ ಪೊಲೀಸ್ ಇಲಾಖೆಯಲ್ಲಿದ್ದರು ಎಂಬುದು ಇತಿಹಾಸದಲ್ಲಿ ಸೇರಿಹೋಗಿದೆ ಎಂಬಾಗಲೇ ಬರೋಬ್ಬರಿ 17 ವರ್ಷಗಳ ನಂತರ ಮಹಾರಾಷ್ಟ್ರ ಪೊಲೀಸ್ ಇಲಾಖೆಗೆ ಸಚಿನ್ ವಾಜೆ ಮರು ನೇಮಕಗೊಂಡರು. ಮಹಾರಾಷ್ಟ್ರದ ಶಿವಸೇನೆ- ಎನ್ ಸಿಪಿ- ಕಾಂಗ್ರೆಸ್ ಗಳ ಮೈತ್ರಿ ಸರ್ಕಾರಕ್ಕೆ ಕೊರೊನಾ ಸೋಂಕು ವ್ಯಾಪಿಸತೊಡಗಿದಾಗ ಸಚಿನ್ ವಾಜೆ ನೆನಪಾದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಕ್ಷಣವೇ ಬಹುಮುಖ್ಯ ಜಾವಾಬ್ದಾರಿ ನೀಡಿ ವಾಜೆಯನ್ನು ಮರು ನೇಮಕ ಮಾಡಿದರು. ಇದು ಕೊರೊನಾ ಲಾಕ್ ಡೌನ್ ಸಂಕಟಗಳ ನಡುವೆ ಎಲ್ಲರ ಗಮನಕ್ಕೆ ಬರದಿದ್ದರೂ ಮಹಾರಾಷ್ಟ್ರ ರಾಜಕೀಯದಲ್ಲಿ ಅಪಸ್ವರ ಹುಟ್ಟುಹಾಕಿತ್ತು.
ಮರು ನೇಮವಾದ ಮೇಲೂ ಸಚಿನ್ ವಾಜೆಗೆ ದೊರೆಕಿದ್ದು ವಿವಾದಿತ ಪ್ರಕರಣಗಳೇ. ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯನ್ನು ಟಿಆರ್ಪಿ ತಿರುಚಿದ ಪ್ರಕರಣದಲ್ಲಿ ಬಂಧಿಸಿದ ತಂಡದ ಮುಖ್ಯಸ್ಥರಾಗಿದ್ದು ಸಚಿನ್ ವಾಜೆ. ಶಿವಸೇನೆಗೆ ಪೂರಕವಾಗಬಲ್ಲ ಪ್ರಕರಣಗಳನ್ನು ನಿರ್ವಹಿಸುತ್ತಿದ್ದರು ಎಂಬ ಆರೋಪಗಳೂ ಸಚಿನ್ ವಾಜೆ ಮೇಲಿವೆ.
ಎಲ್ಲ ಸರಿ ಹೋಯಿತು, ಸಚಿನ್ ವಾಜೆ ಇನ್ನು ಯಾವ ವಿವಾದವೂ ಇಲ್ಲದೇ ನಿವೃತ್ತರಾಗುತ್ತಾರೆ ಎಂದು ಅಂದುಕೊಂಡಿತ್ತು ಮುಂಬೈ. ಆದರೆ ಫೆಬ್ರವರಿ 25ರಂದು ಮುಕೇಶ್ ಅಂಬಾನಿ ಮನೆ ಮುಂದೆ ಜಿಲೆಟಿನ್ ಕಡ್ಡಿಗಳನ್ನು ಹೊತ್ತ ಕಾರೊಂದು ಪತ್ತೆಯಾಯಿತು. ಇದರ ಬೆನ್ನುಬಿದ್ದ ಎನ್ಐಎ ಸಚಿನ್ ವಾಜೆಯವರ ಸ್ಥಾನಕ್ಕೆ ಉರುಳು ಬಿಗಿಯಿತು. ಸ್ಫೋಟಕ ಹೊತ್ತಿದ್ದ ಕಾರಿನ ಮಾಲೀಕ ಎನ್ನಲಾದ ಮನ್ಸುಖ್ ಹಿರೇನ್ ಎಂಬ ವ್ಯಕ್ತಿ ಕೆಲ ದಿನಗಳಲ್ಲಿ ಶವವಾಗಿ ಪತ್ತೆಯಾದರು. ಅವರ ಸಾವಿನ ಹಿಂದೆ ಮತ್ತು ಸ್ಫೋಟಕ ಇಟ್ಟಿದ್ದ ತಂಡದಲ್ಲಿ ಸಚಿನ್ ವಾಜೆ ಕೂಡ ಭಾಗಿಯಾಗಿದ್ದು ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ತಪ್ಪೊಪ್ಪಿಗೆ ಹೇಳಿಕೆ ನೀಡಿದರು.
ಸಚಿನ್ ವಾಜೆಯನ್ನು ಅಮಾನತು ಮಾಡಲಾಗಿದೆ. ಶಿವಸೇನೆಯ ರಾಜಕೀಯ ದಾಳವಾಗಿ ಸಚಿನ್ ವಾಜೆ ಬಳಕೆಯಾದ ಬಗ್ಗೆ ಭಯಂಕರ ಅನುಮಾನಗಳಿವೆ. ವೈವಿಧ್ಯಮಯ ವ್ಯಕ್ತಿತ್ವವೇ ಅವರಿಗೆ ಪೂರಕವೂ ಮಾರಕವೂ ಆಗಿದೆ ಎಂದು ಅವರ ಜೀವನದ ವಿವಿಧ ಮಜಲುಗಳನ್ನು ಗಮನಿಸಿದರೆ ಅನಿಸುತ್ತದೆ. ಸ್ಫೋಟಕ ಪತ್ತೆಯಿಂದ ಆರಂಭವಾದ ಪ್ರಕರಣ, ಮನ್ಸುಖ್ ಹಿರೇನ್ ಸಾವು, ಗೃಹ ಸಚಿವ ಅನಿಲ್ ದೇಶ್ಮುಖ್ 100 ಕೋಟಿ ಭೃಷ್ಟಾಚಾರ ಆರೋಪಗಳಿಂದ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ದೋಸ್ತಿ ಸರ್ಕಾರಕ್ಕೆ ಕುತ್ತು ತರುವಷ್ಟು ಬೆಳೆದಿದೆ. ಈ ಎಲ್ಲದರ ಕೇಂದ್ರಬಿಂದು ಸಚಿನ್ ವಾಜೆ ಮುಂದೆ ಏನುಮಾಡಲಿದ್ದಾರೆ? ಕುತೂಹಲದಿಂದ ಕಾದುನೋಡೋಣ.
ಇದನ್ನೂ ಓದಿ: ಮುಂಬೈ ಪೊಲೀಸ್ ಕಮಿಷನರ್ ಹುದ್ದೆ ಕಳೆದುಕೊಂಡ ಪರಮ್ವೀರ್ ಸಿಂಗ್ ಮೈಮೇಲೆ ಎಳೆದುಕೊಂಡಿದ್ದ ವಿವಾದಗಳು ಒಂದೆರೆಡಲ್ಲ..
Published On - 10:59 pm, Mon, 22 March 21