ಗೃಹ ಸಚಿವ ಅನಿಲ್ ದೇಶ್​ಮುಖ್ ಪ್ರತಿ ತಿಂಗಳು 100 ಕೋಟಿ ಸಂಗ್ರಹಿಸಲು ಸಚಿನ್ ವಾಜೆ ಮೇಲೆ ಒತ್ತಡ ಹೇರಿದ್ದರು; ಉದ್ಧವ್ ಠಾಕ್ರೆಗೆ ಪತ್ರ ಬರೆದ ಪರಮ್​ವೀರ್ ಸಿಂಗ್

Mukesh Ambani threat case: ಮುಂಬೈನ ಖಾಸಗಿ ಹೊಟೇಲ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂಸದ ಮೋಹನ್ ದೇಲ್ಕರ್ ಸಾವಿಗೂ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್ ಹೆಸರು ಥಳುಕುಹಾಕಿಕೊಂಡಿದೆ.

ಗೃಹ ಸಚಿವ ಅನಿಲ್ ದೇಶ್​ಮುಖ್ ಪ್ರತಿ ತಿಂಗಳು 100 ಕೋಟಿ ಸಂಗ್ರಹಿಸಲು ಸಚಿನ್ ವಾಜೆ ಮೇಲೆ ಒತ್ತಡ ಹೇರಿದ್ದರು; ಉದ್ಧವ್ ಠಾಕ್ರೆಗೆ ಪತ್ರ ಬರೆದ ಪರಮ್​ವೀರ್ ಸಿಂಗ್
ಪರಮ್​ವೀರ್ ಸಿಂಗ್ ಮತ್ತು ಗೃಹ ಸಚಿವ ಅನಿಲ್ ದೇಶ್​ಮುಖ್
Follow us
guruganesh bhat
| Updated By: preethi shettigar

Updated on:Mar 20, 2021 | 8:44 PM

ಮುಂಬೈ: ಮುಕೇಶ್ ಅಂಬಾನಿ ಮನೆ ಮುಂದೆ ಸ್ಪೋಟಕ ಹೊತ್ತಿದ್ದ ಕಾರು ಪತ್ತೆ ಪ್ರಕರಣ ರೋಚಕ ತಿರುವು ಪಡೆದಿದೆ. ಸಸ್ಪೆಂಡ್ ಆಗಿರುವ ಎಎಸ್ಐ​ ಸಚಿನ್ ವಾಜೆ ಬಳಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್, ಬಾರ್ ಮತ್ತು ರೆಸ್ಟೊರೆಂಟ್​​ಗಳಿಂದ ಪ್ರತಿ ತಿಂಗಳು 100 ಕೋಟಿ ಹಣ ವಸೂಲಿ ಮಾಡುವಂತೆ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್​ವೀರ್ ಸಿಂಗ್ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಇಂದು ಪತ್ರ ಬರೆದಿದ್ದಾರೆ. ಈ ಗಂಭೀರ ಆರೋಪದಿಂದ ಮಹಾರಾಷ್ಟ್ರ ಶಿವಸೇನೆ-ಎನ್​ಸಿಪಿ ಮೈತ್ರಿಕೂಟದ ಸರ್ಕಾರಕ್ಕೆ ಭಾರೀ ಮುಖಭಂಗ ಎದುರಾಗಿದೆ.

ಶಿವಸೇನೆಯ ಉದ್ಧವ್ ಠಾಕ್ರೆ  ಮಹಾರಾಷ್ಟ್ರದ ಮುಖ್ಯಮಂತ್ರಿಯಾದರೂ ಮೈತ್ರಿಕೂಟದ ಎನ್​ಸಿಪಿ ಪಕ್ಷದ ಅನಿಲ್ ದೇಶ್​ಮುಖ್ ಗೃಹ ಸಚಿವರಾಗಿದ್ದಾರೆ.  ಸರ್ಕಾರದ ಚುಕ್ಕಾಣಿಯಲ್ಲಿ ಕುಳಿತಿರುವ ಇಬ್ಬರ ನಡುವೆ ಅಭಿಪ್ರಾಯ ಬೇಧ, ಸಣ್ಣಪುಟ್ಟ ವೈಮನಸ್ಸು ಉದ್ಭವಿಸಿದ ಉದಾಹರಣೆಗಳಿವೆ. ಗೃಹ ಸಚಿವ ಅನಿಲ್ ದೇಶ್​ಮುಖ್ ಮೇಲೆ ಪರಮ್​ವೀರ್ ಸಿಂಗ್ ಮಾಡಿರುವ ಪ್ರತಿ ತಿಂಗಳು 100 ಕೋಟಿ ಸಂಗ್ರಹಿಸುವ ಆರೋಪ ಮಹಾರಾಷ್ಟ್ರ ಸರ್ಕಾರಕ್ಕೆ ಕುತ್ತು ತರುವ ಶಕ್ತಿ ಹೊಂದಿದೆ. ಪರಮ್​ವೀರ್ ಸಿಂಗ್ ಗೃಹ ಸಚಿವರ ಮೇಲೇ ಆರೋಪ ಮಾಡಿರುವುದು ಶಿವಸೇನೆ-ಎನ್​ಸಿಪಿಯ ದೋಸ್ತಿ ಸರ್ಕಾರದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.

ಗೃಹ ಸಚಿವ ಅನಿಲ್ ದೇಶ್​ಮುಖ್ ಅವರ ಮೇಲೆ ಇನ್ನೂ ಗಂಭೀರ ಆರೋಪ ಮಾಡಿದ್ದಾರೆ. ಮುಂಬೈನ ಖಾಸಗಿ ಹೊಟೇಲ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂಸದ ಮೋಹನ್ ದೇಲ್ಕರ್ ಸಾವಿಗೂ ಅನಿಲ್ ದೇಶ್​ಮುಖ್ ಹೆಸರು ಥಳುಕುಹಾಕಿಕೊಂಡಿದೆ. ‘ಹಿರಿಯ ಅಧಿಕಾರಿಗಳ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ’ ಎಂದು ಆತ್ಮಹತ್ಯಾ ಪತ್ರ ಬರೆದಿದ್ದ ಸಂಸದ ಮೋಹನ್ ದೇಲ್ಕರ್ ಬರೆದುಕೊಂಡಿದ್ದರಂತೆ. ಆದರೆ ಮೋಹನ್ ದೇಲ್ಕರ್ ಅವರ ಸಾವನ್ನು ಆತ್ಮಹತ್ಯೆ ಎಂದೇ ಪ್ರಕರಣ ದಾಖಲಿಸುವಂತೆ ಗೃಹ ಸಚಿವ ಅನಿಲ್ ದೇಶ್​ಮುಖ್ ಒತ್ತಡ ಹೇರಿದ್ದರು ಎಂದು ಪರಮ್​ವೀರ್  ಸಿಂಗ್ ಆರೋಪಿಸಿದ್ದಾರೆ.

ಅನಿಲ ದೇಶ್​ಮುಖ್​ಗೆ ನನ್ನ ಮೇಲೆ ಅತ್ಯಂತ ಸಿಟ್ಟಿತ್ತು. ಮೋಹನ್ ದೇಲ್ಕರ್ ಸಾವನ್ನು SIT ಗೆ ನಿಡುವುದಾಗಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ದೇಶ್​ಮುಖ್ ತಿಳಿಸಿದ್ದರು ಎಂದು ಪರಮ್​ವೀರ್  ಸಿಂಗ್ ಪತ್ರದಲ್ಲಿ ದೂರಿದ್ದಾರೆ.

ಪತ್ರದ ಸಂಪೂರ್ಣ ವಿವರವನ್ನು ಟಿವಿ9 ಕನ್ನಡ ಡಿಜಿಟಲ್ ನಿಮಗಾಗಿ ತೆರೆದಿಟ್ಟಿದೆ

ಪರಮ್​ವೀರ್ ಸಿಂಗ್ (IPS) 15ನೇ ಮಹಡಿ, ನೀಲಿಮಾ, ಬಿ.ಜಿ. ಖೇರ್ ಮಾರ್ಗ್, ಮಲಬಾರ್ ಹಿಲ್, ಮುಂಬೈ – 400 006

20 ಮಾರ್ಚ್ 2021

ಇವರಿಗೆ, ಮಾನ್ಯ ಮುಖ್ಯಮಂತ್ರಿಗಳು ಮಹಾರಾಷ್ಟ್ರ ಮುಂಬೈ

ವಿಷಯ: ಮಹಾರಾಷ್ಟ್ರ ರಾಜ್ಯ ಪೊಲೀಸ್ ಕಮಿಷನರ್, ಮುಂಬೈ ಹುದ್ದೆಯಿಂದ ಐಪಿಎಸ್ ಕಮಾಂಡೆಂಟ್ ಜನರಲ್ ಆಫ್ ಹೋಮ್ ಗಾರ್ಡ್ಸ್ ಆಗಿ ವರ್ಗಾವಣೆ ಹೊಂದಿರುವ ಬಗ್ಗೆ ಮಹಾರಾಷ್ಟ್ರ ಮಾನ್ಯ ಗೃಹ ಮಂತ್ರಿಗಳು ಸತ್ಯಕ್ಕೆ ದೂರವಾದ ಹೇಳಿಕೆಗಳನ್ನು ನೀಡಿರುವ ಕುರಿತು

1. ದೇಶದ ನಾಗರಿಕನಾಗಿ, ಮಾತಿಗೆ ತಪ್ಪದೆ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ ಪೊಲೀಸ್ ಅಧಿಕಾರಿಯಾಗಿ, ಕೆಳಗೆ ಗುರುತಿಸಿರುವ ಅಂಶಗಳ ಬಗ್ಗೆ ಗಮನ ಹರಿಸಬೇಕು, ಸಾಂವಿಧಾನಿಕ ಮೌಲ್ಯಗಳ ಪರವಾಗಿ ನಿಲ್ಲಬೇಕು ಎಂದು ಕೇಳಿಕೊಳ್ಳುತ್ತೇನೆ.

2. ಮಾರ್ಚ್ 17, 2021ರಂದು ಮಹಾರಾಷ್ಟ್ರ ಸರ್ಕಾರದ ಗೃಹ ಇಲಾಖೆ ನೀಡಿದ ವರ್ಗಾವಣೆ ಆದೇಶ ಪತ್ರಕ್ಕೆ ಸಂಬಂಧಿಸಿ, ಮಹಾರಾಷ್ಟ್ರ ಸರ್ಕಾರದ ಕಮಾಂಡೆಂಟ್ ಜನರಲ್ ಆಫ್ ಹೋಮ್ ಗಾರ್ಡ್ಸ್ ಆಗಿ ಮಾರ್ಚ್ 18, 2021ರಂದೇ ಅಧಿಕಾರ ವಹಿಸಿದ್ದೇನೆ. ಅದಕ್ಕೂ ಮುನ್ನ, ಮುಂಬೈ ಪೊಲೀಸ್ ಕಮಿಷನರ್​ಗೆ ಅಧಿಕಾರ ಹಸ್ತಾಂತರಿಸಿದ್ದೇನೆ.

3. ನನ್ನ ವರ್ಗಾವಣೆಯು ಮಹಾರಾಷ್ಟ್ರ ಪೊಲೀಸ್ ಆಕ್ಟ್ 1951ರ ಸೆಕ್ಷನ್ 22N(2) ಅನ್ವಯ ಆಡಳಿತಾತ್ಮಕ ಅಗತ್ಯತೆಗಳ ಕಾರಣದಿಂದ ಊರ್ಜಿತಗೊಂಡಿರುತ್ತದೆ. ಸರ್ಕಾರ ಸೂಚಿಸಿರುವ ವರ್ಗಾವಣೆಯ ಕಾರಣವು ಅಂಟೀಲಿಯಾ ಘಟನೆಯ (ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಘಟನೆ) ನ್ಯಾಯೋಚಿತ ತನಿಖೆಗಾಗಿ ಎಂದು ನಾನು ನಂಬುತ್ತೇನೆ.

4. ಫೆಬ್ರವರಿ 25, 2021ರಂದು ಕೇಸ್ ನಂಬರ್ 35/ 2021 ಪ್ರಕರಣವು ಗಾಮ್​ದೇವಿ ಪೊಲೀಸ್ ಠಾಣೆಯಲ್ಲಿ ದಾಖಲಾಯಿತು. ಅಂಟೀಲಿಯಾದ ಅಲ್ಟಾಮೌಂಟ್ ರಸ್ತೆ, ಮುಕೇಶ್ ಅಂಬಾನಿ ನಿವಾಸದ ಬಳಿ ಕಾರ್​ನಲ್ಲಿ ಸ್ಫೋಟಕಗಳು ಪತ್ತೆಯಾದ ಕಾರಣ ಪ್ರಕರಣ ದಾಖಲಾಯಿತು. ಆ ಬಳಿಕ ಪ್ರಕರಣವನ್ನು ATS ಹಾಗೂ NIA ತನಿಖೆ ನಡೆಸುತ್ತಿದೆ. ಘಟನೆಗೆ ಸಂಬಂಧಿಸಿ ನ್ಯಾಯೋಚಿತ ತನಿಖೆಗೆ ಬೇಕಾದ ಎಲ್ಲಾ ಸಹಾಯ, ಸಹಕಾರವನ್ನು ನನ್ನ ಕಚೇರಿ ಮತ್ತು ಅಧಿಕಾರಿಗಳು ನೀಡಿದ್ದಾರೆ.

5. ಮಹಾರಾಷ್ಟ್ರ ಸರ್ಕಾರದ ಗೌರವಾನ್ವಿತ ಗೃಹ ಸಚಿವ ಶ್ರೀ ಅನಿಲ್ ದೇಶ್​ಮುಖ್ ಅವರು ಮಾರ್ಚ್ 18, 2021ರಂದು ನಡೆದಿದೆ ಎನ್ನಲಾದ ಸಂದರ್ಶನದಲ್ಲಿ ಮೂರು ಅಂಶಗಳನ್ನು ಹೇಳಿದ್ದಾರೆ. a) ಅಂಟೀಲಿಯಾ ಘಟನೆಯ ತನಿಖೆಗೆ ಮುಂಬೈ ಪೊಲೀಸ್ ಹಾಗೂ ನನ್ನಿಂದ (ಪರಮ್​ಬೀರ್ ಸಿಂಗ್) ಬಹಳ ಪ್ರಮಾದ ಉಂಟಾಗಿದೆ. b) ನನ್ನ (ಪರಮ್​ಬೀರ್ ಸಿಂಗ್) ಗಂಭೀರ ಪ್ರಮಾದವು ಕ್ಷಮೆಗೆ ಅರ್ಹವಲ್ಲ c) ನನ್ನ ವರ್ಗಾವಣೆ ಆಡಳಿತಾತ್ಮಕ ಕಾರಣಕ್ಕೆ ಆಗಿಲ್ಲ ಎಂದು ತಿಳಿಸಿದ್ದಾರೆ.

6. 2021 ಮಾರ್ಚ್ ತಿಂಗಳ ಮಧ್ಯೆ, ಅಂಟೀಲಿಯಾ ಘಟನೆಯ ಆರಂಭದ ದಿನಗಳಲ್ಲಿ, ವರ್ಷಾದಲ್ಲಿ ನಡೆದ ಒಂದು ಸಂಕ್ಷಿಪ್ತ ವಿವರಣೆಯಲ್ಲಿ, ಮಾನ್ಯ ಗೃಹ ಸಚಿವರಿಂದ ಪ್ರಕರಣಕ್ಕೆ ಸಂಬಂಧಿಸಿ ಹಲವು ತಪ್ಪು ಮಾಹಿತಿಗಳು ಹಾಗೂ ದುಷ್ಕೃತ್ಯಗಳು ನಡೆಯುತ್ತಿರುವುದನ್ನು ತಿಳಿಸಿದ್ದೆ. ಮಹಾರಾಷ್ಟ್ರದ ಮಾನ್ಯ ಉಪ ಮುಖ್ಯಮಂತ್ರಿಗಳಿಗೆ, ಎನ್​ಸಿಪಿ ಅಧ್ಯಕ್ಷ ಶರದ್ ಪವಾರ್ ಹಾಗೂ ಇತರ ಹಿರಿಯ ಸಚಿವರಿಗೂ ಇದೇ ರೀತಿ ವಿವರಣೆ ನೀಡಿದ್ದೇನೆ. ಮಾತುಕತೆಯಲ್ಲಿ ನಾನು ಗಮನಿಸಿದಂತೆ, ಕೆಲವು ಸಚಿವರಿಗೆ ನಾನು ಹೇಳುತ್ತಿರುವ ಕೆಲವು ಅಂಶಗಳ ಬಗ್ಗೆ ಆ ಮೊದಲೇ ಅರಿವಿತ್ತು.

7. ಮೇಲೆ ಹೇಳಿದ ಅಂಶಗಳಿಗೆ ಸಂಬಂಧಿಸಿ, ಮುಂಬೈ ಪೊಲೀಸ್​ನ ಕ್ರೈಂ ಬ್ರಾಂಚ್, ಕ್ರೈಂ ಇಂಟೆಲಿಜೆನ್ಸ್ ಯುನಿಟ್​ನ ನೇತೃತ್ವ ವಹಿಸಿದ್ದ ಶ್ರೀ ಸಚಿನ್ ವಾಜೆ ಅವರನ್ನು ಮಾನ್ಯ ಗೃಹ ಸಚಿವ ಶ್ರೀ ಅನಿಲ್ ದೇಶ್​ಮುಖ್, ತಮ್ಮ ಅಧಿಕೃತ ನಿವಾಸ ದ್ಯಾನೇಶ್ವರ್​ಗೆ ಕಳೆದ ಕೆಲವು ತಿಂಗಳಲ್ಲಿ ಹಲವು ಬಾರಿ ಕರೆದಿದ್ದರು. ಮಾನ್ಯ ಗೃಹ ಸಚಿವರಿಗೆ ನಿಧಿ ಸಂಗ್ರಹಿಸಲು ಸಹಾಯ ಮಾಡುವಂತೆ ಸೂಚನೆ ನೀಡುತ್ತಿದ್ದರು. ಫೆಬ್ರವರಿಯ ಮಧ್ಯಭಾಗ ಹಾಗೂ ನಂತರದ ದಿನಗಳಲ್ಲಿ ಮಾನ್ಯ ಗೃಹ ಸಚಿವರು ಶ್ರೀ ವಾಜೆ ಅವರನ್ನು ಅಧಿಕೃತ ನಿವಾಸಕ್ಕೆ ಕರೆಸಿಕೊಂಡಿದ್ದಾರೆ. ಆ ವೇಳೆ, ಮಾನ್ಯ ಗೃಹ ಸಚಿವರ ಆಪ್ತ ಕಾರ್ಯದರ್ಶಿ ಪಾಲಂಡೆ ಸಹಿತ ಒಬ್ಬ ಅಥವಾ ಇಬ್ಬರು ಸಿಬ್ಬಂದಿಗಳು ಕೂಡ ಹಾಜರಿದ್ದರು. ಮಾನ್ಯ ಗೃಹ ಸಚಿವರು ಶ್ರೀ ವಾಜೆ ಅವರ ಬಳಿ ತಿಂಗಳಿಗೆ 100 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಇದೆ ಎಂದು ತಿಳಿಸಿದ್ದರು. ಈ ಗುರಿ ತಲುಪಲು, ಮುಂಬೈನಲ್ಲಿ ಸುಮಾರು 1,750 ಬಾರ್, ರೆಸ್ಟೋರೆಂಟ್​ಗಳಿವೆ. ಪ್ರತೀ ಕಡೆಯಿಂದ ಒಟ್ಟು 2ರಿಂದ 3 ಲಕ್ಷದಷ್ಟು ಹಣ ಸಂಗ್ರಹವಾದರೆ ತಿಂಗಳಿಗೆ 40-50 ಕೋಟಿ ಒಟ್ಟುಮಾಡಬಹುದು. ಉಳಿದ ಮೊತ್ತವನ್ನು ಇತರ ಮೂಲಗಳಿಂದ ಸಂಗ್ರಹಿಸಬಹುದು ಎಂದು ಮಾನ್ಯ ಗೃಹ ಸಚಿವರು ಹೇಳಿದ್ದರು. ತಿಂಗಳಿಗೆ ರೂ. 40-50 ಕೋಟಿ ಗುರಿ ತಲುಪಬಹುದು. ಉಳಿದ ಹಣವನ್ನು ಬೇರೆ ಮೂಲಗಳಿಂದ ಸಂಗ್ರಹಿಸಬಹುದು ಎಂದು ಗೃಹ ಮಂತ್ರಿಯವರು ಹೇಳಿದರು.

8. ವಾಜೆ ಅದೇ ದಿನ ನಿನ್ನ ಕಚೇರಿಗೆ ಬಂದು ಈ ಕುರಿತು ತಿಳಿಸಿದರು. ನನಗೆ ಶಾಕ್ ಆಯ್ತು ಮತ್ತು ನನಗೆ ಇದನ್ನು ಹೇಗೆ ನಿರ್ವಹಣೆ ಮಾಡಬೇಕು ಎಂದು ವಿಚಾರ ಮಾಡಿದೆ.

9. ಕೆಲವು ದಿನಗಳ ನಂತರ, ಸಂಜಯ್ ಪಾಟೀಲ್, ಎಸಿಪಿ ಸಾಮಾಜಿಕ ಸೇವಾ ವಿಭಾಗ ಇವರನ್ನು ಗೃಹ ಮಂತ್ರಿಗಳ ಮನೆಗೆ ಕರೆದು ಮುಂಬೈನ ಹುಕ್ಕಾ ಬಾರ್ ಕುರಿತು ಚರ್ಚಿಸಿದರು. ಎರಡು ದಿನಗಳ ನಂತರ ಪಾಟೀಲ್ ಮತ್ತು ಡಿಸಿಪಿ ಭುಜಬಲ್ ಅವರು ಗೃಹ ಮಂತ್ರಿಗಳ ಮನೆಗೆ ಹೋದರು. ಆದರೆ, ಅವರನ್ನು ಹೊರಗೆ ನಿಲ್ಲಿಸಲಾಗಿತ್ತು. ಸ್ವಲ್ಪ ಹೊತ್ತಿನ ನಂತರ ಗೃಹ ಸಚಿವರ ಪಿಎ ಒಳಗೆ ಹೋಗಿ ಹೊರಗೆ ಬಂದರು. 1750 ಬಾರ್, ರೆಸ್ಟೋರೆಂಟ್ ಮೂಲಕ ಸುಮಾರು ರೂ. 40-50 ಕೋಟಿ ಸಂಗ್ರಹಿಸಬಹುದು ಎಂದು ಗೃಹ ಮಂತ್ರಿಗಳು ಹೇಳಿದ್ದಾರೆ ಎಂದು ಹೇಳಿದ. ಎಸಿಪಿ ಪಾಟೀಲ್ ಮಾರ್ಚ್ 16ರಂದು ನನಗೆ ಮೆಸೇಜ್ ಕಳಿಸಿ ಈ ಕುರಿತು ತಿಳಿಸಿದ್ದರು.

10. ನಾನು ಅವರಿಗೆ ವಿವರ ತಿಳಿಸಲು ಕೇಳಿದೆ. ಫೆಬ್ರುವರಿ ತಿಂಗಳಿನಲ್ಲಿ ಭೇಟಿ ಮಾಡಿದಾಗಲೇ ಎಚ್ಎಮ್ ಹೇಳಿದ್ದಾರೆ: ಪ್ರತಿ ಬಾರ್​ನಿಂದ ಮೂರು ಲಕ್ಷದ ಅಂದಾಜಿನಂತೆ, ಪ್ರತಿ ತಿಂಗಳು ರೂ. 50 ಕೋಟಿ ಸಂಗ್ರಹ ಆಗಬೇಕೆಂದು ಹೇಳಿದ್ದಾರೆ.

ನಾನು: ಇದಕ್ಕಿಂತ ಮೊದಲು ನೀನು ಎಚ್ಎಮ್ ಸರ್ ಭೇಟಿ ಮಾಡಿದ್ಯಾ? ಎಸಿಪಿ ಪಾಟೀಲ್: ನಾಲ್ಕು ದಿನ ಮೊದಲು, ಹುಕ್ಕಾ ಬಾರ್ ಕುರಿತಾಗಿ ನಾನು: ವಾಜೆ ಭೇಟಿ ಮಾಡಿದ ದಿನ ಯಾವುದು? ಎಸಿಪಿ ಪಾಟೀಲ್: ಯಾವ ದಿನ ಎಂಬುದು ನನಗೆ ನೆನಪಿಲ್ಲ ಸರ್ ನಾನು: ನೀನು ಕೆಲವು ದಿನ ಮೊದಲು ಎಂದೆ? ಎಸಿಪಿ ಪಾಟೀಲ್: ಹೌದು. ಆದರೆ, ಫೆಬ್ರುವರಿ ಕೊನೆಯಲ್ಲಿ ಅಲ್ಲ. ನಾನು: ಪಾಟೀಲ್, ನನಗೆ ಇನ್ನು ಜಾಸ್ತಿ ಮಾಹಿತಿ ಬೇಕು. ಗೃಹ ಸಚಿವರನ್ನು ಭೇಟಿ ಮಾಡಿದ ಮೇಲೆ ವಾಜೆ ನಿನ್ನನ್ನು ಭೇಟಿ ಮಾಡಿದ್ನಾ? ಎಸಿಪಿ ಪಾಟೀಲ್: ಹೌದು ಸರ್. ವಾಜೆ ಗೃಹ ಸಚಿವರನ್ನು ಭೇಟಿ ಮಾಡಿದ ನಂತರ ನನ್ನನ್ನು ಭೇಟಿ ಮಾಡಿದ್ದ. ಗೃಹ ಸಚಿವರು ಅವನನ್ನು ಯಾಕೆ ಕರೆಸಿದ್ದರು ಎನ್ನುವ ಕುರಿತು ಅವನು ನಿನಗೆ ಹೇಳಿದ್ನಾ? ಎಸಿಪಿ ಪಾಟೀಲ್: ಮೀಟೀಂಗ್ ಉದ್ದೇಶ: 1750 ಬಾರ್ ಆಂಡ್ ರೆಸ್ಟೋರೆಂಟ್​ಗಳಿಂದ ರೂ 40-50 ಕೋಟಿ ಪ್ರತಿ ತಿಂಗಳು ಸಂಗ್ರಹಿಸಬೇಕು. ನಾನು: ಗೃಹ ಮಂತ್ರಿಗಳು ನಿನಗೆ ಹೇಳಿದ್ದನ್ನೇ ಅವನಿಗೂ ಹೇಳಿದ್ದಾರೆ ಎಂದಾಯಿತು ಅಲ್ಲವೇ? ಎಸಿಪಿ ಪಾಟೀಲ್: ಮಾರ್ಚ್​ 4 ಕ್ಕೆ ಗೃಹ ಸಚಿವರ ಪಿಎ ಕೂಡ ನನಗೆ ಇದನ್ನೇ ಹೇಳಿದ್ದ. ನಾನು: ಹಾಗಾದರೆ, ನೀನು ಪಲಾಂಡೆಯನ್ನ ಮಾರ್ಚ್​ 4ಕ್ಕೆ ಭೇಟಿ ಮಾಡಿದ್ದೆ ಅಲ್ಲವೇ? ಎಸಿಪಿ ಪಾಟೀಲ್: ಹೌದು. ನನ್ನನ್ನು ಕರೆದಿದ್ದರಿಂದ ನಾನು ಅವರನ್ನು ಭೇಟಿ ಮಾಡಿದ್ದೆ. ಗೃಹ ಮಂತ್ರಿಗಳ ಭೇಟಿ ನಂತರ, ವಾಜೆ ನನ್ನ ಜೊತೆ ಗೃಹ ಮಂತ್ರಿಗಳು ಕೊಟ್ಟ ಸೂಚನೆಯನ್ನು ಜಾರಿಗೆ ತರುವುದು ಹೇಗೆ ಎಂದು ತಲೆಕೆಡಿಸಿಕೊಂಡೆವು. ಗೃಹ ಮಂತ್ರಿಗಳು ನನ್ನನ್ನು ಬಿಟ್ಟು ನನಗಿಂತ ಕೆಳಗಿನ ಮತ್ತು ಮೇಲಿನ ಅಧಿಕಾರಿಗಳನ್ನು ತಮ್ಮ ಮನೆಗೆ ಕರೆದು ಚರ್ಚೆ ಮಾಡುತ್ತಿದ್ದರು. ಅವರೇ ಖುದ್ದಾಗಿ ಹಣಕಾಸಿನ ವ್ಯವಹಾರದ ಕುರಿತು ಅಧಿಕಾರಿಗಳಿಗೆ ಸೂಚನೆ ಕೊಡುತ್ತಿದ್ದರು. ಈ ಹಂತದಲ್ಲಿ ಇನ್ನೊಂದು ವಿಚಾರವನ್ನು ಹೇಳಬಯಸುತ್ತೇನೆ. ಫೆಬ್ರುವರಿ 22 ರಂದು ಮೋಹನ್ ದಾಲ್ಕರ್, ದಾದರಾ ನಗರ್ ಹವೇಲಿ ಎಂಪಿ ಹೋಟೆಲ್ ಸೀ ಗಾರ್ಡನ್ನಲ್ಲಿ ಸತ್ತಿದ್ದರು. ನಮ್ಮ ತನಿಖೆಯಲ್ಲಿ ಒಂದು ಸೂಸೈಡ್ ನೋಟ್ ಸಿಕ್ಕಿತ್ತು. ಅದರಲ್ಲಿ, ಅವರು ದಾದ್ರಾ ನಗರ್ ಹವೇಲಿಯ ಹಿರಿಯ ಅಧಿಕಾರಿಗಳು ದೇಲ್ಕರ್ ಅವರ ಮೇಲೆ ತುಂಬಾ ಹಿಂಸೆ ನೀಡಿದ್ದರು ಎಂಬ ಅಂಶ ಇತ್ತು.

11. ಮಾನ್ಯ ಗೃಹ ಸಚಿವರನ್ನು ಶ್ರೀ ವಾಜೆ ಅವರು ಭೇಟಿಯಾದ ಬಳಿಕ, ಮಾನ್ಯ ಗೃಹ ಸಚಿವರು ನೀಡಿರುವ ಸೂಚನೆಯ ಬಗ್ಗೆ ಶ್ರೀ ಪಾಟೀಲ್ ಅವರ ಬಳಿ ಚರ್ಚೆ ನಡೆಸಿದ್ದಾರೆ. ನಂತರ, ತಮ್ಮ ಪರಿಸ್ಥಿತಿಯ ಬಗ್ಗೆ ಹೇಳಲು ಇಬ್ಬರು ಕೂಡ ನನ್ನನ್ನು ಭೇಟಿ ಮಾಡಿದ್ದಾರೆ.

12. ಗೌರವಾನ್ವಿತ ಗೃಹ ಮಂತ್ರಿಗಳು ನನ್ನ ಸಿಬ್ಬಂದಿಗಳಿಗೆ ನಿರಂತರವಾಗಿ ಕರೆ ಮಾಡಿ ಸೂಚನೆಗಳನ್ನು ನೀಡುತ್ತಿದ್ದರು. ನನ್ನ ಸಹೋದ್ಯೋಗಿ ಅಧಿಕಾರಿಗಳನ್ನು ಮತ್ತು ಹಿರಿಯ ಅಧಿಕಾರಿಗಳನ್ನು ತಮ್ಮ ಅಧಿಕೃತ ನಿವಾಸಕ್ಕೆ ಕರೆಸಿಕೊಳ್ಳುತ್ತಿದ್ದರು. ಅವರ ನಿವಾಸಕ್ಕೆ ಭೇಟಿ ಕೊಡುತ್ತಿದ್ದ ಅಧಿಕಾರಿಗಳಲ್ಲಿ ಗೌರವಾನ್ವಿತ ಪೊಲೀಸ್ ಅಧಿಕಾರಿಗಳು ಸಹ ಇದ್ದರು. ಈ ಅಧಿಕಾರಿಗಳ ಬಳಿ ಗೃಹ ಮಂತ್ರಿಗಳು ನಿಯಮಿತವಾಗಿ ಹಣ ಸಂಗ್ರಹಿಸಬೇಕೆಂದು ಟಾರ್ಗೆಟ್ ನೀಡುತ್ತಿದ್ದರು. ನನ್ನ ಸಹೋದ್ಯೋಗಿಗಳು ಈ ದುಷ್ಕೃತ್ಯದ ಕುರಿತು ನನ್ನ ಗಮನ ಸೆಳೆದಿದ್ದರು.

13. ಸದ್ಯದ ಸನ್ನಿವೇಶದ ಹಿನ್ನೆಲೆಯಲ್ಲಿ, ನಾನಿದನ್ನು ಸೇರಿಸಬಹುದು. ದಾದ್ರಾ ನಗರ್ ಹವೇಲಿಯ ಸಂಸದ ಮೋಹನ್ ದೇಳ್ಕರ್ ಫೆಬ್ರವರಿ 22, 2021ರಂದು ಹೋಟೆಲ್ ಸೀ ಗ್ರೀನ್​ನಲ್ಲಿ ಶವವಾಗಿ ಪತ್ತೆಯಾದರು. ಆತ್ಮಹತ್ಯೆಗೆ ಸಂಬಂಧಿಸಿದಂತೆ ಮರೀನ್ ಡ್ರೈವ್ ಪೊಲೀಸ್ ಠಾಣೆಯಲ್ಲಿ ಎಡಿಆರ್ ಸಂಖ್ಯೆ 5/21 ದಾಖಲಾಯಿತು. ವಿಚಾರಣೆ ಹಂತದಲ್ಲಿ ಸೂಸೈಡ್ ನೋಟ್ ಸಿಕ್ಕಿತು. ಆ ಸೂಸೈಡ್ ನೋಟ್​ನಲ್ಲಿ ದಾದ್ರಾ ನಗರ್ ಹವೇಲಿಯ ಹಿರಿಯ ಅಧಿಕಾರಿಗಳ ಬಗ್ಗೆ ನಿಂದಿಸಲಾಗಿತ್ತು. ಅವರಿಂದ ಆದ ಸಮಸ್ಯೆಯು ಶ್ರೀ ದೇಳ್ಕರ್ ಅವರ ಆತ್ಮಹತ್ಯೆಗೆ ಕಾರಣವಾಗಿತ್ತು. ಮೇಲೆ ಹೇಳಿದ ಎಡಿಆರ್​ಗೆ ಸಂಬಂಧಿಸಿದಂತೆ ಮರೀನ್​ಡ್ರೈವ್ ಪೊಲೀಸರು ತನಿಖೆ ಕೈಗೊಂಡರು.

14. ಆದರೆ, ಮೊದಲ ದಿನದಿಂದ ಗೌರವಾನ್ವಿತ ಗೃಹ ಸಚಿವರು ಮುಂಬೈನಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಬೇಕು ಎಂದು ಬಯಸಿದ್ದರು. ಸೂಕ್ತ ಕಾನೂನು ಸಲಹೆಗಳನ್ನು ಪಡೆದ ಮೇಲೆ ನನ್ನ ವೃತ್ತಿಪರ ದೃಷ್ಟಿಕೋನ ಏನಾಗಿತ್ತೆಂದರೆ, ಆತ್ಮಹತ್ಯೆಯು ಮುಂಬೈನಲ್ಲಿ ಆಗಿದ್ದರೂ, ಆತ್ಮಹತ್ಯೆ ಪ್ರಚೋದನೆಯ ಆರೋಪದ ಎಲ್ಲ ಕೃತ್ಯಗಳು ದಾದ್ರಾ ಮತ್ತು ನಗರ್ ಹವೇಲಿಯಲ್ಲಿ ಆಗಿತ್ತು. ಆದ್ದರಿಂದ ಆತ್ಮಹತ್ಯೆಗೆ ಪ್ರಚೋದನೆ ಆಗಿದ್ದಲ್ಲಿ ದಾದ್ರಾ ಮತ್ತು ನಗರ್ ಹವೇಲಿಗೆ ಸಂಬಂಧಿಸಿದ ಪೊಲೀಸರಿಂದ ತನಿಖೆ ಆಗಬೇಕು. ಏಕೆಂದರೆ ಇದು ಅದೇ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ. ಆ ಘಟನೆ ಆದ ನಂತರ ವರ್ಷಾದಲ್ಲಿ ಗೌರವಾನ್ವಿತ ಸಚಿವರು ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲೇ ನೀಡಿದ ವಿವರಣೆಯನ್ನು ನೆನಪಿಸಿಕೊಳ್ಳಿ. ಸಂಬಂಧಪಟ್ಟ ಎಲ್ಲರಿಗೂ ನನ್ನ ದೃಷ್ಟಿಕೋನದ ಬಗ್ಗೆ ಗಮನ ಸೆಳೆದೆ, ಅಲ್ಲಿ ಸಾಮಾನ್ಯ ತಿಳಿವಳಿಕೆ ಏನಾಗಿತ್ತು ಅಂದರೆ, ಆತ್ಮಹತ್ಯೆ ಪ್ರಚೋದನೆ ಆರೋಪದ ಬಗ್ಗೆ ತನಿಖೆ ಮಾಡುವಂತಿದ್ದರೆ ಅದು ದಾದ್ರಾ ಮತ್ತು ನಗರ್ ಹವೇಲಿ ಪೊಲೀಸರಿಂದ ಮಾತ್ರ ಎಂದಾಗಿತ್ತು.

15. ಕರ್ತವ್ಯಕ್ಕೆ ಬದ್ಧನಾಗಿ ನಾನು ಏನು ಮಾಡಬೇಕಿತ್ತೋ, ಕಾನೂನು ಪರಿಣತರು ಸಲಹೆ ಮಾಡಿದಂತೆ ನನ್ನ ವೃತ್ತಿಪರ ದೃಷ್ಟಿಕೋನದಂತೆ ನಡೆದುಕೊಂಡೆ. ಈ ಸಂಬಂಧವಾಗಿ ಕಾನೂನು ಪರಿಣತರ ಅಭಿಪ್ರಾಯವನ್ನು ತಿಳಿಸಿದ ಮೇಲೂ ಗೌರವಾನ್ವಿತ ಸಚಿವರು ಸೂಚನೆ ನೀಡುತ್ತಲೇ ಇದ್ದರು. ನನ್ನ ವಿರೋಧದ ಕಾರಣಕ್ಕೆ ಗೌರವಾನ್ವಿತ ಸಚಿವರು ನನ್ನ ಬಗ್ಗೆ ಅಸಂತುಷ್ಟರಾದರು. ಸಂಸದ ಶ್ರೀ ಮೋಹನ್ ದೇಳ್ಕರ್ ಆತ್ಮಹತ್ಯೆ ಪ್ರಚೋದನೆ ಪ್ರಕರಣವನ್ನು ಮುಂಬೈನಲ್ಲಿ ದಾಖಲಿಸುವ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳಲು ಅವರು ಬಯಸಿದ್ದರು. ಹೀಗಾಗಿ ನಾವು ದಾದ್ರಾ ನಗರ್ ಹವೇಲಿಯ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗಲಿಲ್ಲ.

16. ಕಾನೂನು ಪರಿಣತರ ಅಭಿಪ್ರಾಯದ ಬಗ್ಗೆ ಪೂರ್ತಿಯಾಗಿ ಗೊತ್ತಿದ್ದರೂ ಸಾಮಾನ್ಯ ಅಭಿಪ್ರಾಯ ಹಾಗೂ ಅದರ ಹಿಂದಿನ ಕಾರಣಗಳ ಹೊರತಾಗಿಯೂ ಗೌರವಾನ್ವಿತ ಗೃಹ ಸಚಿವರು ವಿಶೇಷ ತನಿಖಾ ತಂಡ (SIT) ರಚಿಸುವುದಾಗಿ ಮತ್ತು ದಾದ್ರಾ ನಗರ್ ಹವೇಲಿಯ ಸಂಸದ ಮೋಹನ್ ದೇಳ್ಕರ್ ಅವರ ಆತ್ಮಹತ್ಯೆ ಪ್ರಚೋದನೆಯ ಎಫ್​​ಐಆರ್ ಅನ್ನು ದಾಖಲಿಸುವುದಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಮಾರ್ಚ್ 9, 2021ರಂದು ಘೋಷಿಸಿದರು.

17. ಕಳೆದ ಒಂದು ವರ್ಷಕ್ಕೂ ಹೆಚ್ಚು ಸಮಯ ಮುಂಬೈ ಪೊಲೀಸ್ ಕಮಿಷನರ್ ಆಗಿ ನನ್ನ ಅನುಭವದಲ್ಲಿ ಹೇಳುವುದಾದರೆ ಗೌರವಾನ್ವಿತ ಗೃಹ ಸಚಿವರು ಹಲವಾರು ಬಾರಿ ಮುಂಬೈ ಪೊಲೀಸ್​ನ ಹಲವು ಅಧಿಕಾರಿಗಳನ್ನು ತಮ್ಮ ಅಧಿಕೃತ ನಿವಾಸ ದ್ಯಾನೇಶ್ವರಕ್ಕೆ ಕರೆಸಿಕೊಂಡು, ಪೊಲೀಸರ ತನಿಖೆಯಲ್ಲಿ ಹೀಗೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಈ ರೀತಿಯ ರಾಜಕೀಯ ಹಸ್ತಕ್ಷೇಪಗಳು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಮತ್ತು ಸುಪ್ರೀಂ ಕೋರ್ಟ್ ಸೇರಿದಂತೆ ಹಲವು ಕೋರ್ಟ್​ಗಳು ಪೊಲೀಸರ ವಿಚಾರಣೆಯಲ್ಲಿ ಇಂಥ ರಾಜಕೀಯ ಹಸ್ತಕ್ಷೇಪಗಳ ಬಗ್ಗೆ ಚಾಟಿ ಬೀಸಿವೆ. ಗೌರವಾನ್ವಿತ ಸಚಿವರ ಮಧ್ಯಪ್ರವೇಶದ ವಿರುದ್ಧ ನನ್ನ ಅಭಿಪ್ರಾಯಗಳು ಹಾಗೂ ಈ ಸಂಬಂಧವಾಗಿ ನನ್ನ ವಿರೋಧ, ಗೌರವಾನ್ವಿತ ಗೃಹ ಸಚಿವರಿಗೆ ನನ್ನ ಅಭಿಪ್ರಾಯಗಳು ಹಾಗೂ ವಿರೋಧ ಬೇಕಾಗಿರಲಿಲ್ಲ.

18. ನನ್ನ ಪೊಲೀಸ್ ಪಡೆಯ ಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ವಿನಯಪೂರ್ವಕವಾಗಿ ನಾನು ಹೇಳಬಹುದಿತ್ತು ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಹಸ್ತಕ್ಷೇಪದ ಉದಾಹರಣೆಗಳು ತಪ್ಪು ಕೆಲಸಗಳ ಜವಾಬ್ದಾರಿ ಬೇರೆಲ್ಲೋ ಕರೆದುಕೊಂಡು ಹೋಗಿ ನಿಲ್ಲಿಸುತ್ತದೆ ಎಂಬುದನ್ನು ಸ್ಪಷ್ಟಗೊಳಿಸಿದ್ದವು. ಎಲ್ಲಿಗೆ ಎಂದರೆ ತಪ್ಪಾದ ವ್ಯಕ್ತಿಗಳ ಮನೆ ಬಾಗಿಲಲ್ಲಿ ನಿಲ್ಲಿಸುತ್ತದೆ.

19. ಒಟ್ಟಾರೆಯಾಗಿ ಘಟನೆಗಳ ಬಗ್ಗೆ ಅಳೆದು ನೋಡಿದಾಗ ಏನು ಗೊತ್ತಾಗುತ್ತದೆ ಅಂದರೆ, ನಿಜವಾಗಲೂ ಯಾರು ತಪ್ಪು ಮಾಡಿದರೋ ಅವರಿಂದ ಬೇರೆ ಕಡೆ ಗಮನ ಸೆಳೆಯುವುದಕ್ಕೆ ನನ್ನನ್ನು ಬಲಿಪಶು ಮಾಡಲಾಗಿದೆ.

20. ಇದು ಇಲ್ಲಿ ಪ್ರಸ್ತಾವ ಮಾಡದಿರುವಂಥ ವಿಚಾರ ಏನಲ್ಲ, ನನ್ನ ವಿರುದ್ಧ ಯಾವುದೇ ವಿಷಯ ಅಥವಾ ಆಧಾರ- ಸಾಕ್ಷ್ಯಗಳು ಏನೂ ಇಲ್ಲ. ಕೆಲವು ಊಹೆ, ವೃಥಾರೋಪ, ಆಕ್ಷೇಪಗಳನ್ನು ಹೊರತುಪಡಿಸಿ ನನ್ನ ವಿರುದ್ಧ ಯಾವುದೇ ಮಾಹಿತಿಯೂ ಯಾರಿಗೂ ಕಂಡುಬಂದಿಲ್ಲ. ನನ್ನ ಆರೋಪಗಳ ಬಗ್ಗೆ ಪರೀಕ್ಷೆ ಮಾಡಬೇಕು ಎಂದಾದಲ್ಲಿ ಶ್ರೀ ಸಚಿನ್ ವಾಜೆ ಕಾಲ್ ರೆಕಾರ್ಡ್​​ಗಳು ಮತ್ತು ಫೋನ್ ದಾಖಲೆಗಳು ಪರಿಶೀಲಿಸಬೇಕು ಹಾಗೂ ಆತನ ನಿಜವಾದ ಬಣ್ಣ ಗೊತ್ತಾಗಬೇಕು ಎಂದಾದಲ್ಲಿ ರಾಜಕೀಯ ವ್ಯಕ್ತಿಗಳ ನಂಟಿನ ಸತ್ಯ ಹೊರಬೀಳಬೇಕು.

21. ಈಗಿನ ಸನ್ನಿವೇಶದಲ್ಲಿ, ಗೌರವಾನ್ವಿತ ಗೃಹ ಸಚಿವರು ಹೇಳುತ್ತಿರುವಂತೆ ನನ್ನ ವರ್ಗಾವಣೆಯೂ ಯಾವುದೇ ಆಡಳಿತಾತ್ಮಕ ಹಾಗೂ ಮಾಮೂಲಿ ಕಾರಣಗಳಿಗೆ ಆಗಿಲ್ಲ. ನಾನು ಗಂಭೀರವಾದ ಕರ್ತವ್ಯಲೋಪ ಮಾಡಿದ್ದೇನೆ, ಕ್ಷಮಿಸಲಾಗದಂಥ ತಪ್ಪು ಎಸಗಿದ್ದೇನೆ ಎಂಬಂಥ ಹೇಳಿಕೆಗಳೆಲ್ಲ ಸತ್ಯಕ್ಕೆ ದೂರವಾದದ್ದು ಮತ್ತು ಹೊರಗಿನ ಹಾಗೂ ಬಾಹ್ಯ ಕಾರಣಗಳಷ್ಟೇ.

22. ಸರ್ಕಾರಿ ನೌಕರನಾಗಿ ದೇಶಕ್ಕೆ ಮತ್ತು ರಾಜ್ಯಕ್ಕೆ, ಮುಂಬೈ ಜನರಿಗೆ ಮತ್ತು ಪೊಲೀಸ್ ಇಲಾಖೆಗೆ 32 ವರ್ಷಗಳಿಗಿಂತ ಹೆಚ್ಚು ಸಮಯದಿಂದ ಸೇವೆ ಸಲ್ಲಿಸುತ್ತಿದ್ದೇನೆ. ಖಡ್ತರ್ ಸೇವಾ ಪದಕ- ನಕ್ಸಲೈಟ್ ಪ್ರದೇಶ, ಡಿಜಿಪಿ ಇನ್​ಸಿಗ್ನಿಯಾ- 2004, ವಿಶೇಷ ಸೇವಾ ಪದಕ- 2006 ಮತ್ತು ಗಮನಾರ್ಹ ಸೇವೆಗಾಗಿ ಪೊಲೀಸ್ ಪದಕದಂಥ ಪ್ರತಿಷ್ಠಿತ ಬಹುಮಾನಗಳನ್ನು ಪಡೆದಿದ್ದೇನೆ.

23. ಸೂಕ್ತ ಕ್ರಮ ತೆಗೆದುಕೊಳ್ಳಲಿ ಎಂಬ ಕಾರಣಕ್ಕೆ ನಿಜವಾದ ಚಿತ್ರಣ ಏನು ಎಂಬ ಬಗ್ಗೆ ನಿಮ್ಮ ಗಮನಕ್ಕೆ ವಿನಯಪೂರ್ವಕವಾಗಿ ತಂದಿದ್ದೇನೆ ಮತ್ತು ನಿಜವಾದ ಸ್ಥಿತಿಯನ್ನು ದಾಖಲಿಸಿದರೆ ನನ್ನ ವಿರುದ್ಧ ಏನು ಪ್ರತೀಕಾರ ತೆಗೆದುಕೊಳ್ಳಬಹುದು ಎಂಬ ಅರಿವು ನನಗಿದೆ.

ವಿಶ್ವಾಸಪೂರ್ವಕವಾಗಿ, ಪರಮ್​ವೀರ್ ಸಿಂಗ್ ಐಪಿಎಸ್ ಕಮ್ಯಾಂಡೆಂಟ್ ಜನರಲ್ ಆಫ್ ಹೋಮ್ ಗಾರ್ಡ್ಸ್

ಇದನ್ನೂ ಓದಿ: ಮುಂಬೈ ಪೊಲೀಸ್ ಕಮಿಷನರ್ ಹುದ್ದೆ ಕಳೆದುಕೊಂಡ ಪರಮ್​ವೀರ್ ಸಿಂಗ್​ ಮೈಮೇಲೆ ಎಳೆದುಕೊಂಡಿದ್ದ ವಿವಾದಗಳು ಒಂದೆರೆಡಲ್ಲ..

ಸಚಿನ್ ವಾಜೆ ಮರುನೇಮಕಕ್ಕೆ ಹಿಂದಿನಿಂದಲೂ ಉದ್ಧವ್ ಠಾಕ್ರೆ ಒತ್ತಾಯವಿತ್ತು: ದೇವೇಂದ್ರ ಫಡ್ನವಿಸ್

Published On - 7:45 pm, Sat, 20 March 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್