AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿನ್ ವಾಜೆ ಮರುನೇಮಕಕ್ಕೆ ಹಿಂದಿನಿಂದಲೂ ಉದ್ಧವ್ ಠಾಕ್ರೆ ಒತ್ತಾಯವಿತ್ತು: ದೇವೇಂದ್ರ ಫಡ್ನವಿಸ್

2018ರಲ್ಲಿ ನಾನು ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆಗೆ ಗೃಹ ಸಚಿವನೂ ಆಗಿದ್ದೆ. ಆ ವೇಳೆ ಅಮಾನತುಗೊಂಡಿದ್ದ ಸಚಿನ್ ವಾಜೆಯನ್ನು ಮರುನೇಮಕಗೊಳಿಸುವಂತೆ ಉದ್ಧವ್ ಠಾಕ್ರೆ ಬೇಡಿಕೆ ಇಟ್ಟಿದ್ದರು.

ಸಚಿನ್ ವಾಜೆ ಮರುನೇಮಕಕ್ಕೆ ಹಿಂದಿನಿಂದಲೂ ಉದ್ಧವ್ ಠಾಕ್ರೆ ಒತ್ತಾಯವಿತ್ತು: ದೇವೇಂದ್ರ ಫಡ್ನವಿಸ್
ದೇವೇಂದ್ರ ಫಡ್ನವಿಸ್
TV9 Web
| Updated By: ganapathi bhat|

Updated on:Apr 06, 2022 | 6:59 PM

Share

ದೆಹಲಿ: ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿದ್ದಾಗ ಅಮಾನತಾಗಿದ್ದ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಮತ್ತೆ ಕೆಲಸಕ್ಕೆ ನೇಮಿಸುವಂತೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಕೇಳಿಕೊಂಡಿದ್ದರು ಎಂದು ಬಿಜೆಪಿ ಮುಖಂಡ, ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಇಂದು (ಮಾರ್ಚ್ 17) ಆರೋಪಿಸಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಗೆ ವಾಜೆಯನ್ನು ಮರುನೇಮಕಗೊಳಿಸಬೇಕು ಎಂದು ಠಾಕ್ರೆ 2018ರಲ್ಲಿ ಒತ್ತಾಯಿಸಿದ್ದರು. ಈ ಬಗ್ಗೆ ಶಿವಸೇನೆಯೂ ಬಹಳಷ್ಟು ಒತ್ತಡ ಹೇರಿತ್ತು ಎಂದು ಫಡ್ನವಿಸ್ ಹೇಳಿದ್ದಾರೆ.

ಪ್ರಸ್ತುತ, ಮುಕೇಶ್ ಅಂಬಾನಿ ಮುಂಬೈ ನಿವಾಸದ ಮುಂಭಾಗದಲ್ಲಿ ಫೆಬ್ರವರಿ 25ರಂದು ಜಿಲೆಟಿನ್ ಪತ್ತೆಯಾಗಿರುವ ಪ್ರಕರಣ, ಎಸ್​ಯುವಿ ಕಾರ್ ಪತ್ತೆ ಹಾಗೂ ಉದ್ಯಮಿ ಮನ್​ಸುಖ್ ಹಿರೇನ್ ಸಾವಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (NIA) ತನಿಖೆ ನಡೆಸುತ್ತಿದೆ. ಸದರಿ ಪ್ರಕರಣದಲ್ಲಿ ಮುಂಬೈ ನಗರದ ಕ್ರೈಂ ಇಂಟೆಲಿಜೆನ್ಸ್ ಯುನಿಟ್ (CIU) ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹೆಸರು ಕೂಡ ಕೇಳಿಬಂದಿದೆ. ಮಾರ್ಚ್ 13ರಂದು ವಾಜೆ ಅರೆಸ್ಟ್ ಆಗಿದ್ದಾರೆ.

ಶಿವಸೇನೆಯೊಂದಿಗೆ ಸಚಿನ್ ವಾಜೆ ಉತ್ತಮ ಸಂಬಂಧ ಹೊಂದಿದ್ದಾರೆ ಹಾಗೂ ವಾಜೆಯನ್ನು ರಕ್ಷಿಸಲು ಶಿವಸೇನೆ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಘಟನೆಯಿಂದ ಮಹಾವಿಕಾಸ್ ಅಘಡಿ (MVA)ಗೆ ಮುಜುಗರ ಉಂಟಾಗಿದೆ ಎಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್ ಅಸಮಾಧಾನ ಹೊರಹಾಕಿದ್ದರು.

ಎಲ್ಲಾ ಬೆಳವಣಿಗೆಗಳ ಬಳಿಕ ಇಂದು, ದೆಹಲಿಯಲ್ಲಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ‘2018ರಲ್ಲಿ ನಾನು ಮಹಾರಾಷ್ಟ್ರ ಮುಖ್ಯಮಂತ್ರಿ ಜೊತೆಗೆ ಗೃಹ ಸಚಿವನೂ ಆಗಿದ್ದೆ. ಆ ವೇಳೆ ಅಮಾನತುಗೊಂಡಿದ್ದ ಸಚಿನ್ ವಾಜೆಯನ್ನು ಮರುನೇಮಕಗೊಳಿಸುವಂತೆ ಉದ್ಧವ್ ಠಾಕ್ರೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ಶಿವಸೇನೆ ಕೂಡ ಈ ಬಗ್ಗೆ ಒತ್ತಡ ಹೇರಿತ್ತು’ ಎಂದು ಹೇಳಿದ್ದಾರೆ.

‘ಸಚಿನ್ ವಾಜೆ ಮರುನೇಮಕಗೊಳಿಸಬೇಕು ಎಂದಾಗ ಆ ಬಗ್ಗೆ ಅಡ್ವೊಕೇಟ್ ಜನರಲ್ ಬಳಿ ಮೌಖಿಕವಾಗಿ ಕಾನೂನು ಸಲಹೆ ಕೇಳಿದ್ದೆ. ವಾಜೆ, ಬಾಂಬೆ ಹೈಕೋರ್ಟ್​ನ ಆದೇಶದ ಬಳಿಕ ಸಸ್ಪೆಂಡ್ ಆಗಿದ್ದರು ಎಂದು ತಿಳಿಯಿತು. ಹಾಗಾಗಿ, ಅವರನ್ನು ಇಲಾಖೆಗೆ ಮರುನಿಯೋಜಿಸುವ ನಿರ್ಧಾರ ಕೈಬಿಟ್ಟೆ’ ಎಂದು ಫಡ್ನವಿಸ್ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ 2014ರಿಂದ 2019ರ ಅವಧಿಯಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿತ್ತು. 2019ರ ವಿಧಾನಸಭಾ ಚುನಾವಣೆಯ ಬಳಿಕ ಮುಖ್ಯಮಂತ್ರಿ ಗಾಧಿಗೆ ನಡೆದ ಪೈಪೋಟಿಯಿಂದ ಶಿವಸೇನೆಯು ಬಿಜೆಪಿ ಮೈತ್ರಿಯನ್ನು ತೊರೆಯಿತು. ಹಾಗೂ ಎನ್​ಸಿಪಿ ಮತ್ತು ಕಾಂಗ್ರೆಸ್ ಜೊತೆಯಾಗಿತ್ತು. ಸದ್ಯ, ಉದ್ಧವ್ ಠಾಕ್ರೆ ಶಿವಸೇನೆ, ಕಾಂಗ್ರೆಸ್ ಮತ್ತು ಎನ್​ಸಿಪಿಯ ಮಹಾ ವಿಕಾಸ್ ಅಘಡಿ ಸರ್ಕಾರವನ್ನು ನಡೆಸುತ್ತಿದ್ದಾರೆ.

ಸಚಿನ್ ವಾಜೆ, 1900ನೇ ಬ್ಯಾಚ್ ಮಹಾರಾಷ್ಟ್ರ ಕೇಡರ್​ನ ಪೊಲೀಸ್ ಅಧಿಕಾರಿಯಾಗಿದ್ದಾರೆ. 2002ರ ಘಾಟ್ಕೋಪರ್ ಸ್ಫೋಟದ ಆರೋಪಿ ಖ್ವಾಜಾ ಯೂನುಸ್ ಪೊಲೀಸ್ ಕಸ್ಟಡಿಯಲ್ಲಿ ಮರಣಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ 2004ರಲ್ಲಿ ವಾಜೆ ಸಸ್ಪೆಂಡ್ ಆಗಿದ್ದರು. ಎನ್​ಕೌಂಟರ್ ಸ್ಪೆಷಲಿಸ್ಟ್ ಆಗಿಯೂ ಹೆಸರು ಗಳಿಸಿರುವ ಸಚಿನ್ ವಾಜೆ 63 ಎನ್​ಕೌಂಟರ್​ಗಳನ್ನು ಮಾಡಿದ್ದಾರೆ.

ಇದನ್ನೂ ಓದಿ: ಸಚಿನ್ ವಾಜೆ ಪ್ರಕರಣದ ವಾದ-ಪ್ರತಿವಾದದಲ್ಲಿ ಪ್ರತಿಧ್ವನಿಸಿದ ಸಿಸಿಟಿವಿ ಕಾರ್ಯನಿರ್ವಹಣೆ

ಸಚಿನ್ ವಾಜೆ ಅಮಾನತು ಪ್ರಕರಣ: ಸರ್ಕಾರಕ್ಕೆ ಮುಜುಗರ ತಪ್ಪಿಸಲು ಶರದ್ ಪವಾರ್-ಉದ್ಧವ್ ಠಾಕ್ರೆ ಮಾತುಕತೆ

Published On - 8:34 pm, Wed, 17 March 21