Explainer | ಸೇನೆಯಲ್ಲಿ ನೇಮಕಾತಿ ಹಗರಣ; ಇದರಲ್ಲಿ ಆಘಾತ-ಅಚ್ಚರಿಯ ಜೊತೆಗೆ ಒಂದು ಮೇಲ್ಪಂಕ್ತಿಯೂ ಇದೆ
ಎಷ್ಟೇ ಕಟ್ಟುನಿಟ್ಟಿನ ವ್ಯವಸ್ಥೆ ರೂಪಿಸಿದ್ದರೂ ಅಲ್ಲಿರುವ ಕೆಲವರು ಭ್ರಷ್ಟರಾದಾಗ ವ್ಯವಸ್ಥೆ ಹಳಿತಪ್ಪುತ್ತದೆ. ಆದರೆ ಉನ್ನತ ಹಂತದಲ್ಲಿರುವವರು ಇಂಥ ಪರಿಸ್ಥಿತಿಯನ್ನು ಹೇಗೆ ನಿರ್ಭಾವುಕವಾಗಿ ನಿಭಾಯಿಸಬೇಕು ಎನ್ನುವುದಕ್ಕೂ ಸೇನೆಯು ಈ ಹಗರಣವನ್ನು ನಿರ್ವಹಿಸುತ್ತಿರುವ ರೀತಿಯಿಂದಲೇ ಒಂದು ಮೇಲ್ಪಂಕ್ತಿ ಹಾಕಿಕೊಟ್ಟಿದೆ.
ಭಾರತೀಯರು ಅತಿಹೆಚ್ಚು ವಿಶ್ವಾಸವಿರಿಸಿರುವ ಸಂಸ್ಥೆ ಸೇನೆ. ಹಲವು ಸಮೀಕ್ಷೆಗಳಲ್ಲಿ ವ್ಯಕ್ತವಾಗಿರುವ ಅಂಶ ಇದು. ಯಾವುದೇ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಗಿಂತಲೂ ದೇಶದ ಜನರು ಸೇನೆಯ ಮೇಲೆ ಒಂದು ತೂಕ ಹೆಚ್ಚಿನ ವಿಶ್ವಾಸ ಇರಿಸಿದ್ದಾರೆ. ಮಾತ್ರವಲ್ಲ, ‘ನಮ್ಮ ಸೇನೆ ನನ್ನ ಹೆಮ್ಮೆ’ ಎಂದು ಭಾರತೀಯರು ಮನದಾಳದಿಂದ ನಂಬುತ್ತಾರೆ. ಸೈನಿಕರನ್ನು ಕಂಡರೆ ನೀಡುವ ಗೌರವ ಮತ್ತು ತೋರಿಸುವ ಆದರದಲ್ಲಿ ಅದನ್ನು ವ್ಯಕ್ತಪಡಿಸುತ್ತಾರೆ. ಈ ವಿಶ್ವಾಸಕ್ಕೆ ಧಕ್ಕೆಯಾಗಿದೆಯೇ ಎಂಬುದು ನಿನ್ನೆಯಿಂದೀಚೆಗೆ ಸಾಮಾಜಿಕ ಮಾಧ್ಯಮಗಳನ್ನು ಇಣುಕಿದಾಗ ಮನಸ್ಸು ಕೇಳಿಕೊಳ್ಳುವ ಪ್ರಶ್ನೆ. ತಲೆಗೆ ಒಬ್ಬೊಬ್ಬರು ಒಂದೊಂದು ರೀತಿಯ ವಿಶ್ಲೇಷಣೆಗಳನ್ನು ಬರೆಯುತ್ತಿರುವುದನ್ನು ಓದಿದಾಗ ಸೇನೆಯ ಬಗ್ಗೆ ದೇಶದ ಜನರು ಇರಿಸಿರುವ ಆ ಪರಿಯ ವಿಶ್ವಾಸಕ್ಕೆ ಈ ಸಂಸ್ಥೆ ಅರ್ಹವೇ ಎಂಬ ಪ್ರಶ್ನೆಯೂ ಮೂಡದಿರದು. ಆದರೆ ಲೋಪವನ್ನು ಸ್ವತಃ ಪತ್ತೆ ಹಚ್ಚಿ, ತಪ್ಪಾಗಿದೆ ಎಂದು ಗೊತ್ತಾದ ತಕ್ಷಣ ಅದನ್ನು ಸರ್ಕಾರದ ಇತರ ಇಲಾಖೆಗಳಂತೆ ಮುಚ್ಚಿಹಾಕಲು ಯತ್ನಿಸದೇ ಮುಕ್ತವಾಗಿ ಒಪ್ಪಿಕೊಂಡು, ಸ್ವತಃ ಆಂತರಿಕ ತನಿಖೆ ನಡೆಸಿ, ಹಗರಣದ ಭಾಗೀದಾರರ ವ್ಯಾಪ್ತಿ ದೊಡ್ಡದು ಎಂದು ಮನವರಿಕೆಯಾದ ನಂತರ ಸ್ವಯಂಪ್ರೇರಣೆಯಿಂದ ಸಿಬಿಐ ತನಿಖೆಗೆ ಒಪ್ಪಿಸಿರುವುದು ಸೇನೆಯ ಬಗ್ಗೆ ನಮಗಿರುವ ಹೆಮ್ಮೆ ಹೆಚ್ಚಾಗಬೇಕಾದ ವಿಷಯ.
ಎಷ್ಟೇ ಕಟ್ಟುನಿಟ್ಟಿನ ವ್ಯವಸ್ಥೆ ರೂಪಿಸಿದ್ದರೂ ಅಲ್ಲಿರುವ ಕೆಲವರು ಭ್ರಷ್ಟರಾದಾಗ ವ್ಯವಸ್ಥೆ ಹಳಿತಪ್ಪುತ್ತದೆ. ಆದರೆ ಉನ್ನತ ಹಂತದಲ್ಲಿರುವವರು ಇಂಥ ಪರಿಸ್ಥಿತಿಯನ್ನು ಹೇಗೆ ನಿರ್ಭಾವುಕವಾಗಿ ನಿಭಾಯಿಸಬೇಕು ಎನ್ನುವುದಕ್ಕೂ ಸೇನೆಯು ಈ ಹಗರಣವನ್ನು ನಿರ್ವಹಿಸುತ್ತಿರುವ ರೀತಿಯಿಂದಲೇ ಒಂದು ಮೇಲ್ಪಂಕ್ತಿ ಹಾಕಿಕೊಟ್ಟಿದೆ.
ಏನಿದು ಸೇನಾ ನೇಮಕಾತಿ ಹಗರಣ? ಸೇನೆಯ ನೇಮಕಾತಿಯು ಸರ್ವೀಸ್ ಸೆಲೆಕ್ಷನ್ ಬೋರ್ಡ್ (ಎಸ್ಎಸ್ಬಿ) ಮೂಲಕ ನಡೆಯುತ್ತದೆ. ಹುದ್ದೆಯ ಆಕಾಂಕ್ಷಿಗಳು ಐದು ದಿನ ವಿವಿಧ ಪರೀಕ್ಷೆಗಳನ್ನು ಎದುರಿಸಿ ಬೌದ್ಧಿಕ, ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ನಿರೂಪಿಸಬೇಕು. ಅನಂತರವೇ ಅವರಿಗೆ ಸೇನೆಯೊಳಗೆ ತರಬೇತಿ ಪಡೆಯಲು ಅವಕಾಶ ಸಿಗುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ನಂತರ ಕಮಿಷನ್ (ಸೇವಾ ನಿಯೋಜನೆ) ಸಿಗುತ್ತದೆ. ವಿವಿಧ ಹಂತದ ನೂರಾರು ಅಧಿಕಾರಿಗಳ ನಿಗಾವಣೆಯಲ್ಲಿ ನಡೆಯುವ ಅತ್ಯಂತ ಸಂಕೀರ್ಣ ಮತ್ತು ಅಕ್ರಮ ಎಸಗಲು ಅಸಾಧ್ಯ ಎನ್ನುವಂಥ ಕಟ್ಟುನಿಟ್ಟಿನ ವ್ಯವಸ್ಥೆಯನ್ನು ಸೇನೆ ರೂಪಿಸಿಕೊಂಡಿದೆ. ಆದರೆ ಇಂಥ ವ್ಯವಸ್ಥೆಯಲ್ಲಿ ಬೇಲಿಯಾಗಬೇಕಿದ್ದ ಕೆಲ ಅಧಿಕಾರಿಗಳೇ ಇಲಿಗಳಾಗಿ ಭ್ರಷ್ಟಾಚಾರ ಮಾಡಿ, ಕೆಲವರಿಗೆ ಕೆಲಸ ಸಿಗುವಂತೆ ಮಾಡಿದರು ಎನ್ನುವುದು ಹಗರಣದ ಮೂಲ ವಿಚಾರ.
ಎಸ್ಎಸ್ಬಿ ಪರೀಕ್ಷೆಯ ಅಂತಿಮ ಹಂತದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ವಿಫಲರಾದವರಿಗೆ ಮತ್ತೊಂದು ಅವಕಾಶ ನೀಡಲು ನಿಯಮಗಳು ಅನುಕೂಲ ಕಲ್ಪಿಸುತ್ತವೆ. ಈ ನಿಯಮವನ್ನೇ ದಾಳವಾಗಿಸಿಕೊಂಡು ಕೆಲ ಸೇನಾಧಿಕಾರಿಗಳು ಹಣ ಸಂಪಾದನೆಗೆ ಇಳಿದರು. ವಿವಿಧ ಹಂತಗಳ ಎಸ್ಎಸ್ಬಿ ಪರೀಕ್ಷೆಗಳನ್ನು ಅಕ್ರಮ ಮಾರ್ಗದಲ್ಲಿ ಪೂರೈಸಿದ ಇಬ್ಬರು ಅಭ್ಯರ್ಥಿಗಳು ಚೆನ್ನೈನ ಪ್ರತಿಷ್ಠಿತ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (ಒಟಿಎ) ಮತ್ತು ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ (ಎನ್ಡಿಎ) ಪ್ರವೇಶ ಪಡೆದಿದ್ದರು. ಈ ಪೈಕಿ ಒಬ್ಬರು ‘ಲೆಫ್ಟಿನೆಂಟ್’ ಆಗಿ ಸೇವಾ ನಿಯೋಜನೆಯನ್ನೂ ಪಡೆದುಕೊಂಡಿದ್ದರು. ಈ ಬೆಳವಣಿಗೆ ಸೇನೆಗೆ ಆಘಾತ ಉಂಟು ಮಾಡಿತ್ತು.
ಹಗರಣ ಬೆಳಕಿಗೆ ಬಂದಿದ್ದು ಹೇಗೆ? ಭ್ರಷ್ಟ ಮಾರ್ಗದಲ್ಲಿ ಸೇನೆಯೊಳಗೆ ಪ್ರವೇಶ ಪಡೆದುಕೊಂಡ ವ್ಯಕ್ತಿಯೊಬ್ಬ ತನ್ನ ಸಂಬಂಧಿಕರ ಮೂಲಕ ಸೇನಾಧಿಕಾರಿಯೊಬ್ಬರ ಸಂಬಂಧಿಕರಿಗೆ ₹ 10 ಲಕ್ಷ ಪಾವತಿಸಿದ ಮಾಹಿತಿ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ನಂತರ ಸೇನಾಧಿಕಾರಿಯ ಸಂಬಂಧಿಕರೊಬ್ಬರು ಅಭ್ಯರ್ಥಿಯೊಬ್ಬರ ಸಂಬಂಧಿಕರಿಂದ ಪಾರ್ಸೆಲ್ ವಿನಿಮಯ ಮಾಡಿಕೊಂಡ ವಿಡಿಯೊ ತುಣುಕು ಸೇನೆಯ ಗುಪ್ತಚರ ವಿಭಾಗದ (ಮಿಲಿಟರಿ ಇಂಟೆಲಿಜೆನ್ಸ್) ಅಧಿಕಾರಿಯೊಬ್ಬರಿ ಸಿಕ್ಕಿತ್ತು. ಈ ವಿಚಾರವನ್ನು ಅವರು ತಕ್ಷಣ ಸೇನಾ ಮುಖ್ಯಸ್ಥರ ಗಮನಕ್ಕೆ ತಂದರು. ಸೇನಾ ಮುಖ್ಯಸ್ಥರಿಗೆ ನೇಮಕಾತಿಯಲ್ಲಿ ಏನೋ ನಡೆಯಬಾರದ್ದು ನಡೆಯುತ್ತಿದೆ ಎಂಬ ವಾಸನೆ ಬಡಿಯಿತು. ತಕ್ಷಣ ಅವರು ಸೇನಾ ಗುಪ್ತಚರ ವಿಭಾಗಕ್ಕೆ ವಿಸ್ತೃತ ಮತ್ತು ಗೌಪ್ಯ ಆಂತರಿಕ ತನಿಖೆ ನಡೆಸುವಂತೆ ಸೂಚಿಸಿದರು. ತನಿಖೆಯ ವೇಳೆ ಲೆಫ್ಟಿನೆಂಟ್ ಕರ್ನಲ್ ದರ್ಜೆಯ ಹತ್ತಾರು ಅಧಿಕಾರಿಗಳು ಮತ್ತು ನಾಗರಿಕರು ಹಗರಣದಲ್ಲಿ ಪಾಲ್ಗೊಂಡಿರುವುದು ಪತ್ತೆಯಾಯಿತು.
ಇದನ್ನೂ ಓದಿ: ಸೇನಾ ನೇಮಕಾತಿಯಲ್ಲಿ ಭ್ರಷ್ಟಾಚಾರ: 23 ಆರೋಪಿಗಳಲ್ಲಿ 7 ಮಂದಿ ಸೇನಾಧಿಕಾರಿಗಳು
ತನಿಖೆಯನ್ನು ಸೇನೆಯೇ ನಿರ್ವಹಿಸದೆ ಸಿಬಿಐಗೆ ವಹಿಸಿದ್ದು ಏಕೆ? ಮೊದಲೇ ಹೇಳಿದಂತೆ ಲೆಫ್ಟಿನೆಂಟ್ ಕರ್ನಲ್ ದರ್ಜೆಯ ಸುಮಾರು ಆರು ಅಧಿಕಾರಿಗಳು ಮತ್ತು ನಾಗರಿಕರು ಕೈಕೈ ಮಿಲಾಯಿಸಿ ನಡೆಸಿದ ಅಕ್ರಮ ಇದು. ಪ್ರಕರಣದ ವ್ಯಾಪ್ತಿ ಸೇನೆಯ ಆಂತರಿಕ ತನಿಖೆಯ ಮಿತಿಯನ್ನೂ ಮೀರಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಸೇನಾ ಮುಖ್ಯ ಮನೋಜ್ ಮುಕುಂದ್ ನರವಾಣೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ‘ಸೇನೆಯಲ್ಲಿ ಭ್ರಷ್ಟಾಚಾರ ಮಾಡಿದ್ರೆ ಏನಾಗುತ್ತೆ ಅಂತ ಈ ಸಲ ತೋರಿಸಬೇಕು’ ಎನ್ನುವ ಕಟು ಧೋರಣೆ ತಳೆದರು. ಇತರ ಲೆಫ್ಟಿನೆಂಟ್ ಜನರಲ್ಗಳೂ ಇದೇ ಅಭಿಪ್ರಾಯಕ್ಕೆ ಬಂದಿದ್ದರು. ಹೀಗಾಗಿ ತಕ್ಷಣವೇ ಸೇನೆ ಸ್ವಪ್ರೇರಣೆಯಿಂದ ತನಿಖೆಯನ್ನು ಸಿಬಿಐಗೆ ಒಪ್ಪಿಸಿತು. ಮಾತ್ರವಲ್ಲ, ಸೇನಾ ಗುಪ್ತಚರ ವಿಭಾಗ ಸಂಗ್ರಹಿಸಿದ್ದ ಮಾಹಿತಿಯನ್ನು ಸಿಬಿಐಗೆ ಹಸ್ತಾಂತರಿಸಿ, ಮುಂದಿನ ದಿನಗಳಲ್ಲಿಯೂ ಸೇನಾ ಗುಪ್ತಚರ ವಿಭಾಗದೊಂದಿಗೆ ಸಹಯೋಗದಲ್ಲಿ ತನಿಖೆ ನಡೆಸುವಂತೆ ವಿನಂತಿಸಿತು.
ಹಗರಣದ ಸೂತ್ರಧಾರ ಯಾರು? ಈವರೆಗೆ ತನಿಖೆ ಎಷ್ಟು ಪ್ರಗತಿ ಸಾಧಿಸಿದೆ? ಸೇನೆಯ ಆಂತರಿಕ ತನಿಖೆಯ ವೇಳೆಯೇ ಭೂಸೇನೆಯ ಏರ್ ಡಿಫೆನ್ಸ್ ಕಮಾಂಡ್ನ ಲೆಫ್ಟಿನೆಂಟ್ ಕರ್ನಲ್ ಎಂವಿಎಸ್ಎನ್ಎ ಭಗವಾನ್ ಈ ಹಗರಣದ ಸೂತ್ರಧಾರಿ ಎಂಬುದು ಬಹಿರಂಗವಾಗಿತ್ತು. ಅವರ ಜೊತೆಗೆ ಬೆಂಗಳೂರಿನ ಗ್ರೂಪ್ ಟೆಸ್ಟಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ವಿನಯ್ ಸೇರಿದಂತೆ 6 ಲೆಫ್ಟಿನೆಂಟ್ ಕರ್ನಲ್ ದರ್ಜೆಯ ಅಧಿಕಾರಿಗಳು ಮತ್ತು ಓರ್ವ ಮೇಜರ್ ಭಾಗಿಯಾಗಿರುವುದು ಪತ್ತೆಯಾಗಿತ್ತು. ಸೇನೆಯು ಸಿಬಿಐಗೆ ನೀಡಿರುವ ವಿವರಗಳಲ್ಲಿ ಎಲ್ಲರ ಹೆಸರುಗಳನ್ನೂ ನಮೂದಿಸಿದೆ. ಸೇನೆಯು 14 ಸಿಬ್ಬಂದಿಯನ್ನು ಹಗರಣದಲ್ಲಿ ಭಾಗಿದಾರರು ಎಂದು ಗುರುತಿಸಿತ್ತು. ಆದರೆ ಸಿಬಿಐ ತನಿಖೆ ವೇಳೆ 17 ಸಿಬ್ಬಂದಿ ವಿರುದ್ಧ ಆರೋಪ ಕೇಳಿ ಬಂದಿತ್ತು. ಹಲವು ಸೇನಾ ಸಿಬ್ಬಂದಿಯ ತಂದೆ-ತಾಯಿ, ಬಾವ-ಬಾಮೈದ ಸಹ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ. ಅಚ್ಚರಿಯ ವಿಷಯವೆಂದರೆ ಮೂರ್ಖತನದಲ್ಲಿ ಹಣದ ವಹಿವಾಟು ನಡೆದಿದೆ. ಕೆಲವರು ಯುಪಿಐ ಮೂಲಕ ತಮ್ಮ ಅಕೌಂಟ್ಗಳಿಗೆ ಲಂಚದ ಹಣ ಹಾಕಿಸಿಕೊಂಡು ಸಿಕ್ಕಿಬಿದ್ದಿದ್ದಾರೆ.
ಅಕ್ರಮ ಮಾರ್ಗದಲ್ಲಿ ಸೇನೆಯೊಳಗೆ ನುಸುಳಿ ಸೇನಾ ನಿಯೋಜನೆ ಪಡೆದಾತನನ್ನು ಲೆಫ್ಟಿನೆಂಟ್ ನವ್ಜೋತ್ ಸಿಂಗ್ ಕನ್ವಾರ್ (12 ಗ್ರೆನೇಡಿಯರ್ಸ್) ಮತ್ತು ಒಟಿಎಗೆ ಪ್ರವೇಶ ಪಡೆದವರನ್ನು ಹೇಮಂತ್ ಡಾಗರ್ ಮತ್ತು ಇಂದ್ರಜೀತ್ ಎಂದು ಪತ್ತೆಹಚ್ಚಲಾಗಿದೆ.
ಈ ಹಗರಣದಿಂದ ಸೇನೆಯ ಮೇಲಿನ ಜನರ ವಿಶ್ವಾಸ ಕಡಿಮೆಯಾಗಿದೆಯೇ? ಭೂಸೇನೆ ಎಂಬುದು 10 ಲಕ್ಷಕ್ಕೂ ಹೆಚ್ಚು ಸಿಬ್ಬಂದಿ ಇರುವ ದೊಡ್ಡ ವ್ಯವಸ್ಥೆ. ಸೂಕ್ತ ಅಭ್ಯರ್ಥಿ ಸಿಗದಿದ್ದರೆ ಅಧಿಕಾರಿ ಹುದ್ದೆಯನ್ನು ಖಾಲಿಯಿಟ್ಟುಕೊಳ್ಳುತ್ತಾರೆಯೇ ಹೊರತು ಅಸಮರ್ಥರಿಗೆ ಕೊಡುವುದಿಲ್ಲ. ಕಾರ್ಯಾಚರಣೆಯ ವೇಳೆ ಸೇನೆಯ ಅಧಿಕಾರಿಯೊಬ್ಬ ತೆಗೆದುಕೊಳ್ಳುವ ಒಂದು ಸಣ್ಣ ತೀರ್ಮಾನವೂ ಅವನ ಅಧೀನದಲ್ಲಿರುವ ಸೈನಿಕರ ಸಾವುನೋವಿಗೆ ಕಾರಣವಾಗುತ್ತೆ. ಯಾರದೋ ಮನೆಯಲ್ಲಿ ಮಹಿಳೆಯೊಬ್ಬಳು ವಿಧವೆಯಾಗುತ್ತಾಳೆ, ಮಕ್ಕಳು ಅನಾಥರಾಗುತ್ತಾರೆ. ಹೀಗಾಗಿಯೇ ಅಧಿಕಾರಿ ಹುದ್ದೆ ಭರ್ತಿಯ ಪ್ರಕ್ರಿಯೆ ಮತ್ತು ತರಬೇತಿ ಅಷ್ಟು ಕಠಿಣವಾಗಿ ನಡೆಯುತ್ತದೆ. ಈ ಕಠಿಣ ಪ್ರಕ್ರಿಯೆ ದಾಟಿ ಸೇನೆಯಲ್ಲಿ ಅಧಿಕಾರಿಗಳಾದವರ ವರ್ತನೆ, ನಡವಳಿಕೆ ಉನ್ನತ ಹಂತದಲ್ಲಿರುವುದರಿಂದ ಸೇನೆಯ ಮೇಲೆ ಸಮಾಜಕ್ಕೆ ಅಷ್ಟು ಗೌರವ ಮತ್ತು ಹೆಮ್ಮೆಯಿದೆ.
ಈಗ ನಡೆದಿರುವ ಹಗರಣದಿಂದ ಈ ಪ್ರತಿಷ್ಠೆಗೆ ತಾತ್ಕಾಲಿಕವಾಗಿ ತುಸು ಧಕ್ಕೆ ಬರಬಹುದು. ಆದರೆ ಅಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆಯುತ್ತಿದ್ದ ಅಕ್ರಮವನ್ನು ಪತ್ತೆ ಹಚ್ಚಿ, ಆಂತರಿಕ ತನಿಖೆ ನಡೆಸಿ, ಅದರ ವ್ಯಾಪ್ತಿ ಗಮನಿಸಿ ಸಿಬಿಐಗೆ ತನಿಖೆ ಹೊಣೆ ಒಪ್ಪಿಸಿದ್ದು ಸಹ ಸೇನೆ ಎಂಬ ದೊಡ್ಡ ಸಂಸ್ಥೆಯೇ ಎನ್ನುವುದು ಗಮನಾರ್ಹ. ಇತರ ಸರ್ಕಾರಿ ಸಂಸ್ಥೆಗಳಲ್ಲಿ ಆಗುವಂತೆ ಯಾವುದೋ ಸಚಿವರೋ, ಪ್ರಧಾನ ಮಂತ್ರಿಯೋ, ನ್ಯಾಯಾಲಯವೋ ಮಧ್ಯಪ್ರವೇಶಿಸಿದ ನಂತರ ಸಿಬಿಐ ವ್ಯಾಪ್ತಿಗೆ ಈ ತನಿಖೆ ಹೋಗಿಲ್ಲ. ಸಿಬಿಐಗೆ ತನಿಖೆ ಹೊಣೆ ಒಪ್ಪಿಸುವಾಗಲೂ ಸೇನೆ ಅತ್ಯಂತ ಪಾರದರ್ಶಕವಾಗಿ ಆಂತರಿಕ ತನಿಖೆಯಿಂದ ಪತ್ತೆಹಚ್ಚಿದ ಮಾಹಿತಿಯನ್ನು ಹಸ್ತಾಂತರಿಸಿದೆ. ಮುಂದಿನ ದಿನಗಳಲ್ಲಿಯೂ ತನ್ನ ಸೇನಾ ಗುಪ್ತಚರ ವ್ಯವಸ್ಥೆಯ ಮೂಲಕ ಸಿಬಿಐ ಅಧಿಕಾರಿಗಳಿಗೆ ಸಹಕರಿಸುವುದಾಗಿ ಹೇಳಿದೆ. ‘ಸೇನೆಯಲ್ಲಿ ಭ್ರಷ್ಟಾಚಾರ ಮಾಡಿದ್ರೆ ಏನಾಗುತ್ತೆ ಅಂತ ತೋರಿಸ್ತೀವಿ’ ಎನ್ನುವ ಜನರಲ್ ಮತ್ತು ಲೆಫ್ಟಿನೆಂಟ್ ಜನರಲ್ ಹಂತದ ಅಧಿಕಾರಿಗಳ ಹಟವನ್ನೂ ಈ ಬೆಳವಣಿಗೆಯಲ್ಲಿ ಗಮನಿಸಬೇಕು. ಈ ಎಲ್ಲ ಹಿನ್ನೆಲೆಯಿಂದ ವಿಶ್ಲೇಷಿಸಿದರೆ ಸಮಾಜದಲ್ಲಿ ಸೇನೆಯ ಬಗ್ಗೆ ಇರುವ ಗೌರವ ಈ ಪ್ರಕರಣದ ನಂತರವೂ ಕಡಿಮೆಯಾಗುವುದಿಲ್ಲ ಎನಿಸುತ್ತದೆ.
ಇದನ್ನೂ ಓದಿ: ಭಾರತೀಯ ಸೇನೆ ನಂತರ ಈಗ ವಾಯುಸೇನೆ ಸೇರಿಕೊಂಡ ಮುಧೋಳ ನಾಯಿಗಳು
ಇದನ್ನೂ ಓದಿ: Explainer | Arjun Mark 1A Tank: ಭೂಸೇನೆಗೆ ಅರ್ಜುನ್ ಟ್ಯಾಂಕ್ ಸೇರ್ಪಡೆ: ಏನು ವೈಶಿಷ್ಟ್ಯ? ಏಕೆ ಮುಖ್ಯ?
Published On - 5:23 pm, Wed, 17 March 21