ಭಾರತೀಯ ಸೇನೆ ನಂತರ ಈಗ ವಾಯುಸೇನೆ ಸೇರಿಕೊಂಡ ಮುಧೋಳ ನಾಯಿಗಳು
ವಾಯುಸೇನೆ ಕ್ಯಾಂಪ್ಗಳಲ್ಲಿ ವಿಮಾನಗಳು ನಿಲ್ಲುವ ಜಾಗದಲ್ಲಿ ಯಾವುದೇ ಪ್ರಾಣಿಗಳು, ಪಕ್ಷಿಗಳು ಬಾರದಂತೆ ತಡೆಯುವುದು, ಸೆಕ್ಯುರಿಟಿಗಾಗಿ, ವಾಸನೆ ಗ್ರಹಿಕೆ, ಬೇಹುಗಾರಿಕೆಗಾಗಿ ಈ ಮುಧೋಳ ಶ್ವಾನಗಳನ್ನು ಬಳಸಲಾಗುತ್ತದೆ.
ಬಾಗಲಕೋಟೆ: ಮುಧೋಳ ನಾಯಿ ಯಾರಿಗೆ ಗೊತ್ತಿಲ್ಲ ಹೇಳಿ. ಸಣಕಲು ದೇಹದ ದೇಶಿ ತಳಿ ಮುಧೋಳ ನಾಯಿ ಎಂದರೆ ಎಲ್ಲರಿಗೂ ಪ್ರೀತಿ. ಪಕ್ಕಾ ಬೇಟೆ ನಾಯಿಯಾಗಿರುವ ಮುಧೋಳ ನಾಯಿ ಸಾಕುವುದು ಒಂದು ಪ್ರತಿಷ್ಠೆ. ಈ ಪ್ರತಿಷ್ಠೆಗೆ ಈಗ ಇನ್ನೊಂದು ಗರಿ ಮೂಡಿದೆ. ಈ ಮುಧೋಳ ನಾಯಿ ಈಗ ದೇಶದ ವಾಯುಸೇನೆಗೂ ಪಾದಾರ್ಪಣೆ ಮಾಡಿದೆ. ಸಣಕಲು ದೇಹ ಉದ್ದನೆಯ ಮೂಗು. ಬೇಟೆಯ ಬೆನ್ನತ್ತಿದರೆ ಮಿಸ್ ಆಗುವುದಕ್ಕೆ ಅವಕಾಶವೇ ಇಲ್ಲ.
ಮೊದಲು ಮುಧೋಳ ತಳಿಯ 3 ಗಂಡು ಮತ್ತು 3 ಹೆಣ್ಣು ಸೇರಿ ಒಟ್ಟು 6 ನಾಯಿಗಳನ್ನು ಭಾರತೀಯ ಸೇನೆಗೆ ನೀಡಲಾಗಿತ್ತು. ಉತ್ತರ ಪ್ರದೇಶದಲ್ಲಿರುವ ಮೀರತ್‌ನ ಸೈನಿಕ ಪಶುವೈದ್ಯಕೀಯ ತರಬೇತಿ ಕೇಂದ್ರಕ್ಕೆ 6 ಮುಧೋಳ ಶ್ವಾನಗಳನ್ನು ನೀಡಲಾಗಿತ್ತು. ಅಲ್ಲಿ ಮುಧೋಳ ನಾಯಿಗಳಿಗೆ ಬಾಂಬ್ ಪತ್ತೆ ಹಚ್ಚುವಿಕೆ, ಪತ್ತೇದಾರಿ ಚಟುವಟಿಕೆ, ರಕ್ಷಣೆ ನೀಡುವಿಕೆ, ಅಪರಾಧ ಪತ್ತೆ ಹಚ್ಚುವಿಕೆ, ಭಯೋತ್ಪಾದನೆ ಮೆಟ್ಟಿ ನಿಲ್ಲಲು ಹಾಗೂ ಸೈನ್ಯದ ವಿವಿಧ ಚಟುವಟಿಕೆಗಳ ಬಗ್ಗೆ ತರಬೇತಿ ನೀಡಿ ಭಾರತೀಯ ಸೈನ್ಯದಲ್ಲಿ ಬಳಸಲಾಗುತ್ತಿದೆ. ಇದಾದ ಮೇಲೆ ಈಗ ಅಧಿಕೃತವಾಗಿ ಒಂದು ತಿಂಗಳ 2 ಗಂಡು, 2 ಹೆಣ್ಣು ಮುಧೋಳ ಶ್ವಾನಮರಿಗಳನ್ನು ವಾಯುಸೇನೆಗೆ ನೀಡಲಾಗಿದೆ. ಉಪಮುಖ್ಯಮಂತ್ರಿ ಹಾಗೂ ಮುಧೋಳ ಶಾಸಕ ಗೋವಿಂದ ಕಾರಜೋಳ ವಾಯುಸೇನೆ ಅಧಿಕಾರಿಗಳಿಗೆ ಮುಧೋಳ ಶ್ವಾನಗಳನ್ನ ಹಸ್ತಾಂತರ ಮಾಡಿದ್ದಾರೆ.
ವಾಯುಸೇನೆಯಿಂದ ಒಟ್ಟು 7 ಜೋಡಿ ಶ್ವಾನಗಳಿಗೆ ಬೇಡಿಕೆ ಇದೆ. ಸದ್ಯ ಮುಧೋಳ ತಾಲ್ಲೂಕಿನ ತಿಮ್ಮಾಪುರದ ಮುಧೋಳ ಶ್ವಾನ ಸಂವರ್ಧನಾ ಕೇಂದ್ರದ ಅಧಿಕಾರಿಗಳು 2 ಜೋಡಿ ಶ್ವಾನಗಳನ್ನ ನೀಡಿದ್ದಾರೆ. ಅಷ್ಟಕ್ಕೂ ವಾಯುಸೇನೆಯಲ್ಲಿ ಶ್ವಾನಕ್ಕೆ ಕೆಲಸ ಏನು ಎಂದರೆ, ವೈಮಾನಿಕ ತರಬೇತಿ ವೇಳೆ ವಿಮಾನಗಳಿಗೆ ಯಾವುದೇ ಪಕ್ಷಿಗಳು ಅಡ್ಡಬಾರದಂತೆ ತಡೆಯುವಲ್ಲಿ ಬಳಸಿಕೊಳ್ಳುತ್ತಾರೆ. ವಾಯುಸೇನೆ ಕ್ಯಾಂಪ್ಗಳಲ್ಲಿ ವಿಮಾನಗಳು ನಿಲ್ಲುವ ಜಾಗದಲ್ಲಿ ಯಾವುದೇ ಪ್ರಾಣಿಗಳು, ಪಕ್ಷಿಗಳು ಬಾರದಂತೆ ತಡೆಯುವುದು, ಸೆಕ್ಯುರಿಟಿಗಾಗಿ, ವಾಸನೆ ಗ್ರಹಿಕೆ, ಬೇಹುಗಾರಿಕೆಗಾಗಿ ಈ ನಾಯಿಗಳನ್ನು ಬಳಸಲಾಗುತ್ತದೆ. ಇನ್ನು ವಾಯುಸೇನೆಗೆ ಮುಧೋಳ ಶ್ವಾನಗಳು ಪಾದಾರ್ಪಣೆ ಮಾಡಿದ್ದು ಸ್ಥಳೀಯರಿಗೆ ಬಾರೀ ಖುಷಿ ತಂದಿದೆ.
ಒಟ್ಟಾರೆ ಈ ಹಿಂದೆ ಹಲಗಲಿ ಬೇಡರ ಜೊತೆ ಸ್ವಾತಂತ್ರ್ಯ ಹೋರಾಟ, ಶಿವಾಜಿ ಮಹಾರಾಜರ ಕಾಲ, ಮುಧೋಳ ಮಹಾರಾಜರ ಕಾಲದಲ್ಲಿಯೂ ಸೇನೆ ಹಾಗೂ ಆಸ್ತಿ ಕಾಯಲು ಪ್ರಸಿದ್ಧವಾಗಿದ್ದ ಈ ಮುಧೋಳ ಶ್ವಾನಗಳು. ಈಗ ದೇಶದ ರಕ್ಷಣೆಗಾಗಿ ವಾಯುಸೇನೆಗೆ ಸೇರ್ಪಡೆಗೊಳ್ಳುತ್ತಿರುವುದು ಈ ಭಾಗದ ಜನರಲ್ಲಿ ಭಾರೀ ಹರ್ಷವನ್ನು ಉಂಟುಮಾಡಿದೆ.
ಇದನ್ನೂ ಓದಿ: Mudhol Hound joins IAF: ಭಾರತೀಯ ವಾಯುಸೇನೆ ಸೇರಿದ ಮುಧೋಳ ಶ್ವಾನ