ಮುಂದುವರೆಯಲಿದೆ ‘ಕೇಸರಿ’ ಸರಣಿ: ಅಕ್ಷಯ್ ಬಿಟ್ಟು ಬೇರಾರಿಗೂ ಇಲ್ಲ ಜಾಗ
Kesari movie series: ಅಕ್ಷಯ್ ಕುಮಾರ್ ನಟನೆಯ ‘ಕೇಸರಿ ಚಾಪ್ಟರ್ 2’ ಕಳೆದ ವಾರವಷ್ಟೆ ಬಿಡುಗಡೆ ಆಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ‘ಕೇಸರಿ’ ಹೆಸರನ್ನು ದೇಶಭಕ್ತಿ ಸಿನಿಮಾಗಳಿಗೆ ಬ್ರ್ಯಾಂಡ್ ಆಗಿ ಪರಿವರ್ತಿಸುವ ಯೋಜನೆ ನಿರ್ಮಾಣ ಸಂಸ್ಥೆಗಳಿಗೆ ಇದ್ದು, ‘ಕೇಸರಿ’ ಹೆಸರಿನಲ್ಲಿ ನಿರ್ಮಾಣವಾಗು ಎಲ್ಲ ಸಿನಿಮಾಗಳಿಗೂ ಅಕ್ಷಯ್ ಕುಮಾರ್ ಅವರೇ ನಾಯಕರಾಗಿ ಇರಲಿದ್ದಾರಂತೆ.

ಸರಣಿ ಸಿನಿಮಾಗಳಿಗೆ ಭಾರತದಲ್ಲಿ ಈಗ ಬಲು ಬೇಡಿಕೆ ಇದೆ. ಆಕ್ಷನ್ ಸಿನಿಮಾಗಳನ್ನು, ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳನ್ನು ಸರಣಿಯಾಗಿ ಮಾಡುವುದು ರೂಢಿ. ಇತ್ತೀಚೆಗಷ್ಟೆ ‘ಕೇಸರಿ 2’ (Kesari 2) ಸಿನಿಮಾ ಬಿಡುಗಡೆ ಆಗಿದೆ. ‘ಕೇಸರಿ’ ಸಿನಿಮಾ ಭಾರತದ ಇತರೆ ಸಿನಿಮಾ ಸರಣಿಗಳಿಗಿಂತಲೂ ಭಿನ್ನ. ‘ಕೇಸರಿ’ ಸಿನಿಮಾ ಸರಣಿಯ ಮೂಲಕ ದೇಶಪ್ರೇಮದ ಕತೆಗಳನ್ನು ಹೇಳಲಾಗುತ್ತಿದೆ. 2019 ರಲ್ಲಿ ಬಿಡುಗಡೆ ಆದ ‘ಕೇಸರಿ’ ಸಿನಿಮಾನಲ್ಲಿ 1857ರ ಸರಗರಿ ಯುದ್ಧದ ಬಗೆಗಿನ ಕತೆಯನ್ನು ಹೇಳಲಾಗಿತ್ತು. ಹೇಗೆ 21 ಸಿಖ್ ಯೋಧರು ಸಾವಿರಾರು ಅಫ್ರಿದಿ, ಒರಾಜ್ಕಾಯ್ ಸೈನಿಕರ ವಿರುದ್ಧ ಹೋರಾಡಿದರು ಎಂಬ ಕತೆಯನ್ನು ಈ ಸಿನಿಮಾ ಒಳಗೊಂಡಿತ್ತು.
ಕಳೆದ ವಾರ ‘ಕೇಸರಿ 2’ ಸಿನಿಮಾ ಬಿಡುಗಡೆ ಆಗಿದ್ದು ಈ ಸಿನಿಮಾ ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ತನಿಖೆ ಮತ್ತು ಅದರ ನ್ಯಾಯಾಲಯದ ವಿಚಾರಣೆಯ ಕತೆಯನ್ನು ಒಳಗೊಂಡಿದೆ. 2019ರ ‘ಕೇಸರಿ’ ಸಿನಿಮಾಕ್ಕೂ ಈಗ ಬಿಡುಗಡೆ ಆಗಿರುವ ‘ಕೇಸರಿ ಚಾಪ್ಟರ್ 2’ ಸಿನಿಮಾಕ್ಕೆ ಕತೆಯ ವಿಷಯದಲ್ಲಿ ನೇರ ಸಂಬಂಧ ಇಲ್ಲವಾದರೂ ಎರಡೂ ಕತೆಯ ಥೀಮ್ ದೇಶಪ್ರೇಮವೇ ಆಗಿದೆ.
ಇದನ್ನೂ ಓದಿ:ಮೊದಲ ದಿನ ‘ಕೇಸರಿ 2’ ಗಳಿಸಿದ್ದೆಷ್ಟು? ಗೆದ್ದರಾ ಅಕ್ಷಯ್ ಕುಮಾರ್
ಇನ್ನು ಮುಂದೆಯೂ ಸಹ ‘ಕೇಸರಿ’ ಸಿನಿಮಾ ಸರಣಿ ಮುಂದುವರೆಯಲಿದ್ದು, ದೇಶದ ಬಹುತೇಕ ಜನರಿಗೆ ತಿಳಿದಿಲ್ಲದ ದೇಶದ ವೀರ ನಾಯಕರ ಕತೆಗಳನ್ನು ‘ಕೇಸರಿ’ ಹೆಸರಿನ ಅಡಿಯಲ್ಲಿ ಸಿನಿಮಾ ಮಾಡಲು ನಿರ್ಮಾಪಕರು ಮುಂದಾಗಿದ್ದು, ‘ಕೇಸರಿ’ ಹೆಸರನ್ನು ದೇಶಪ್ರೇಮದ ಸಿನಿಮಾಗಳ ಬ್ರ್ಯಾಂಡ್ ಆಗಿ ಬದಲಾಯಿಸಲು ಮುಂದಾಗಿದ್ದಾರೆ. ಮತ್ತೊಂದು ವಿಶೇಷತೆಯೆಂದರೆ ‘ಕೇಸರಿ’ ಹೆಸರಿನಲ್ಲಿ ಬರುವ ಪ್ರತಿಯೊಂದು ಸಿನಿಮಾದಲ್ಲಿಯೂ ಅಕ್ಷಯ್ ಕುಮಾರ್ ಅವರೇ ನಾಯಕನಾಗಿ ಇರಲಿದ್ದಾರಂತೆ. ಈ ಬಗ್ಗೆ ‘ಕೇಸರಿ 2’ ನಿರ್ದೇಶಕ ಕರಣ್ ಸಿಂಗ್ ತ್ಯಾಗಿ ಹೇಳಿದ್ದಾರೆ.
2019ರ ‘ಕೇಸರಿ’ ಸಿನಿಮಾವನ್ನು ಕರಣ್ ಜೋಹರ್ ತಮ್ಮ ಧರ್ಮಾ ಪ್ರೊಡಕ್ಷನ್ ಇಂದ ನಿರ್ಮಿಸಿದ್ದರು. ಕೇಪ್ ಆಫ್ ಗುಡ್ ಹೋಪ್ ಸಂಸ್ಥೆ ಸಹ ನಿರ್ಮಾಣ ಮಾಡಿತ್ತು. ವಿತರಣೆಯನ್ನು ಧರ್ಮಾ ಪ್ರೊಡಕ್ಷನ್ ಮಾಡಿತ್ತು. ‘ಕೇಸರಿ 2’ ಸಿನಿಮಾಗೂ ಸಹ ಧರ್ಮಾ ಪ್ರೊಡಕ್ಷನ್, ಕೇಪ್ ಆಫ್ ಗುಡ್ ಹೋಪ್ ನಿರ್ಮಾಣ ಮಾಡಿದ್ದು, ಜೀ ಸ್ಟುಡಿಯೋಸ್ ವಿತರಣೆ ಮಾಡಿದೆ. ಧರ್ಮಾ ಪ್ರೊಡಕ್ಷನ್ನಲ್ಲಿ ಪಾಲುದಾರಿಕೆ ಖರೀದಿಸಿರುವ ಆಧಾರ್ ಪೂನಾವಾಲ ಅವರು ಸಹ ನಿರ್ಮಾಪಕ ಆಗಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ