ಮೊದಲ ದಿನ ‘ಕೇಸರಿ 2’ ಗಳಿಸಿದ್ದೆಷ್ಟು? ಗೆದ್ದರಾ ಅಕ್ಷಯ್ ಕುಮಾರ್
Kesari 2 box office collection: ಅಕ್ಷಯ್ ಕುಮಾರ್ ನಟನೆಯ ‘ಕೇಸರಿ 2’ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾ ದೇಶಪ್ರೇಮದ ಕತೆ ಹೊಂದಿದೆ. ಸಿನಿಮಾ ನೋಡಿದ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಕೇಸರಿ 2’ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ನಲ್ಲಿ ಗಳಿಸಿದ ಹಣವೆಷ್ಟು? ಅಕ್ಷಯ್ ಕುಮಾರ್ ಗೆದ್ದರಾ? ಇಲ್ಲಿದೆ ಮಾಹಿತಿ...

ಸತತ ಸೋಲುಗಳನ್ನೇ ಕಾಣುತ್ತಿರುವ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಕೇಸರಿ 2’ (Kesari 2) ಸಿನಿಮಾ ನಿನ್ನೆ (ಏಪ್ರಿಲ್ 19) ಬಿಡುಗಡೆ ಆಗಿದೆ. ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ನ್ಯಾಯಾಲಯ ವಿಚಾರಣೆಯನ್ನು ಆಧರಿಸಿ ನಿರ್ಮಾಣಗೊಂಡಿರುವ ಸಿನಿಮಾ ಇದಾಗಿದೆ. ಸಿನಿಮಾನಲ್ಲಿ ಚೆತ್ತೂರು ಶಂಕರ ನಾಯರ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ನಿವಿಲೆ ಮೆಕಿನ್ಲೆ ಪಾತ್ರದಲ್ಲಿ ಆರ್ ಮಾಧವನ್ ನಟಿಸಿದ್ದಾರೆ. ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಮೊದಲ ದಿನ ಸಿನಿಮಾ ಮಾಡಿರುವ ಕಲೆಕ್ಷನ್ ಎಷ್ಟು? ಮಾಹಿತಿ ಇಲ್ಲಿದೆ…
‘ಕೇಸರಿ 2’ ಸಿನಿಮಾ ಮೊದಲ ದಿನ ಸಾಧಾರಣ ಮೊತ್ತ ಕಲೆಕ್ಷನ್ ಮಾಡಿದೆ. ಬಿಡುಗಡೆ ಆದ ಮೊದಲ ದಿನ ಈ ಸಿನಿಮಾ ಗಳಿಸಿರುವುದು 7.50 ಕೋಟಿ ರೂಪಾಯಿ. ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ನಿಂದ ಸುಮಾರು 1.50 ಕೋಟಿ ಹಣ ಗಳಿಕೆಯಾಗಿತ್ತು. ಎಲ್ಲವೂ ಸೇರಿ ಮೊದಲ ದಿನಕ್ಕೆ ಕೇವಲ 7.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಆ ಮೂಲಕ ಅಕ್ಷಯ್ ಕುಮಾರ್ ಮತ್ತೊಂದು ಸಾಧಾರಣ ಓಪನಿಂಗ್ ಅನ್ನು ಪಡೆದುಕೊಂಡಿದೆ. ಇತ್ತೀಚೆಗೆ ಬಿಡುಗಡೆ ಆಗಿದ್ದ ಸನ್ನಿ ಡಿಯೋಲ್ರ ಜಾಟ್ ಸಿನಿಮಾ ಮೊದಲ ದಿನ 7.40 ಕೋಟಿ ರೂಪಾಯಿ ಗಳಿಕೆ ಕಂಡಿತ್ತು.
ಶುಕ್ರವಾರ ಗುಡ್ ಫ್ರೈಡೆ ರಜೆ ಇತ್ತು. ಹಾಗಿದ್ದರೂ ಸಹ ಜನ ಅಕ್ಷಯ್ ಕುಮಾರ್ ಅವರ ಸಿನಿಮಾ ನೋಡಲು ಆಸಕ್ತಿ ತೋರಿಸಿಲ್ಲ. ಮೊದಲ ದಿನ 7.50 ಕೋಟಿ ಸಾಧಾರಣ ಮೊತ್ತವಾದರೂ ನಿರಾಶಾದಾಯಕ ಮೊತ್ತವಲ್ಲ. ‘ಜಾಟ್’ ಸಿನಿಮಾ ರೀತಿ ಇದೇ ಸರಾಸರಿಯನ್ನು ಮುಂದುವರೆಸಿಕೊಂಡು ಹೋದಲ್ಲಿ ‘ಕೇಸರಿ 2’ ಸಿನಿಮಾ 50-60 ಕೋಟಿ ಕಲೆಕ್ಷನ್ ಅನ್ನು ಸುಲಭವಾಗಿ ದಾಟಿಕೊಳ್ಳಲಿದೆ.
ಇದನ್ನೂ ಓದಿ:‘ಕೇಸರಿ 2’ ಸಿನಿಮಾ ನೋಡಿದ ನೆಟ್ಟಿಗರು ಹೇಳಿದ್ದೇನು? ಸಿನಿಮಾ ಹೇಗಿದೆ?
ಇದೇ ವರ್ಷ ಜನವರಿಯಲ್ಲಿ ಬಿಡುಗಡೆ ಆಗಿದ್ದ ಅಕ್ಷಯ್ ಕುಮಾರ್ ನಟನೆಯ ‘ಸ್ಕೈ ಫೋರ್ಸ್’ ಸಿನಿಮಾ ಮೊದಲ ದಿನ 11 ಕೋಟಿಗೂ ಹೆಚ್ಚಿನ ಮೊತ್ತ ಗಳಿಕೆ ಮಾಡಿತ್ತು. ಸಿನಿಮಾ ಒಟ್ಟು ಕಲೆಕ್ಷನ್ ಸಹ ಉತ್ತಮವಾಗಿಯೇ ಇತ್ತು. ಇದೀಗ ಲಾಂಗ್ ವೀಕೆಂಡ್ ನಡೆಯುತ್ತಿದ್ದು ‘ಕೇಸರಿ 2’ ಸಿನಿಮಾದ ಕಲೆಕ್ಷನ್ ವೀಕೆಂಡ್ನಲ್ಲಿ ಉತ್ತಮಗೊಳ್ಳುವ ನಿರೀಕ್ಷೆ ಇದೆ. ಅಲ್ಲದೆ ಸಿನಿಮಾ ನೋಡಿದ ಜನರೂ ಸಹ ಸಿನಿಮಾ ಬಗ್ಗೆ ಧನಾತ್ಮಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು ಇದು ಸಹ ಸಿನಿಮಾದ ಕಲೆಕ್ಷನ್ ಉತ್ತಮಗೊಳ್ಳಲು ಸಹಕಾರಿ ಆಗಬಹುದು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ