‘ಕೇಸರಿ: ಚಾಪ್ಟರ್ 2’ ಸಿನಿಮಾಗೆ ದೊಡ್ಡ ಪೆಟ್ಟು; ಬಿಡುಗಡೆಯಾಗಿ ಕೆಲವೇ ಗಂಟೆಯಲ್ಲಿ ಪೈರಸಿ
ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ‘ಕೇಸರಿ: ಚಾಪ್ಟರ್ 2’ ಸಿನಿಮಾ ಲೀಕ್ ಆಗಿದೆ. ಇದರಿಂದ ಚಿತ್ರದ ಕಲೆಕ್ಷನ್ಗೆ ತೊಂದರೆ ಆಗಲಿದೆ. ಹಲವು ಪೈರಸಿ ವೆಬ್ಸೈಟ್ಗಳಲ್ಲಿ ಈ ಸಿನಿಮಾವನ್ನು ಹರಿಬಿಡಲಾಗಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ. ಕೆಲವೇ ದಿನಗಳ ಹಿಂದೆ ‘ಸಿಕಂದರ್’, ‘ಛಾವ’ ಮುಂತಾದ ಚಿತ್ರಗಳಿಗೆ ಕೂಡ ಪೈರಸಿ ಸಮಸ್ಯೆ ಎದುರಾಗಿತ್ತು.

ನಟ ಅಕ್ಷಯ್ ಕುಮಾರ್ ಅವರು ಬಹಳ ಶ್ರದ್ಧೆಯಿಂದ ‘ಕೇಸರಿ: ಚಾಪ್ಟರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ದೇಶಭಕ್ತಿಯ ಕಥೆ ಇದೆ. ಈ ಸಿನಿಮಾವನ್ನು ಪ್ರೇಕ್ಷಕರು ಗಮನವಿಟ್ಟು ನೋಡಬೇಕು ಎಂದು ಅಕ್ಷಯ್ ಕುಮಾರ್ (Akshay Kumar) ಅವರು ಮನವಿ ಮಾಡಿದ್ದಾರೆ. ಆದರೆ ಆರಂಭದಲ್ಲಿಯೇ ಈ ಚಿತ್ರಕ್ಕೆ ವಿಘ್ನ ಎದುರಾಗಿದೆ. ವರದಿಗಳ ಪ್ರಕಾರ, ‘ಕೇಸರಿ: ಚಾಪ್ಟರ್ 2’ ಸಿನಿಮಾದ ಪೈರಸಿ (Kesari Chapter 2 Piracy) ಕಾಪಿ ಲೀಕ್ ಆಗಿದೆ. ಏಪ್ರಿಲ್ 18ರಂದು ಈ ಚಿತ್ರ ಬಿಡುಗಡೆ ಆಗಿದ್ದು, ಆನ್ಲೈನ್ನಲ್ಲಿ ಪೈರಸಿ ಹಾವಳಿ ಶುರುವಾಗಿದೆ. ಇದರಿಂದ ಸಿನಿಮಾ ತಂಡಕ್ಕೆ ತಲೆ ಬಿಸಿ ಶುರುವಾಗಿದೆ.
ಅಕ್ಷಯ್ ಕುಮಾರ್ ಅವರಿಗೆ ಒಂದು ದೊಡ್ಡ ಗೆಲುವಿನ ಅಗತ್ಯವಿದೆ. ‘ಕೇಸರಿ: ಚಾಪ್ಟರ್ 2’ ಸಿನಿಮಾದ ಮೂಲಕ ಆ ಗೆಲುವು ಸಿಗಲಿದೆ ಎಂದು ಅನೇಕರು ನಿರೀಕ್ಷಿಸಿದ್ದಾರೆ. ಮೊದಲ ದಿನ ಪ್ರೇಕ್ಷಕರಿಂದ ಉತ್ತಮ ವಿಮರ್ಶೆ ಸಿಕ್ಕಿದೆ. ಇನ್ನೇನು ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರ ಉತ್ತಮವಾಗಿ ಗಳಿಕೆ ಮಾಡುತ್ತದೆ ಎಂದುಕೊಳ್ಳುವಾಗಲೇ ಪೈರಸಿ ಕಾಟ ಆರಂಭ ಆಗಿದೆ.
ಸ್ಟಾರ್ ಸಿನಿಮಾಗಳನ್ನು ಟಾರ್ಗೆಟ್ ಮಾಡಿ ಪೈರಸಿ ಮಾಡುವ ದೊಡ್ಡ ಜಾಲ ಸಕ್ರಿಯವಾಗಿದೆ. ಅದಕ್ಕಾಗಿಯೇ ಅನೇಕ ವೆಬ್ಸೈಟ್ಗಳು ಹುಟ್ಟಿಕೊಂಡಿವೆ. ಅಂಥ ಸೈಟ್ಗಳಲ್ಲಿ ಈಗಾಗಲೇ ‘ಕೇಸರಿ: ಚಾಪ್ಟರ್ 2’ ಸಿನಿಮಾದ ಪೈರಸಿ ಕಾಪಿ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೂ ಕೂಡ ಚಿತ್ರತಂಡದವರು ಇನ್ನೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಕ್ರಮ ಕೈಗೊಂಡ ಬಗ್ಗೆಯೂ ಸದ್ಯಕ್ಕೆ ವರದಿ ಆಗಿಲ್ಲ.
ಈ ವರ್ಷ ಬಿಡುಗಡೆ ಆದ ‘ಛಾವ’, ‘ಸಿಕಂದರ್’ ಮುಂತಾದ ಸಿನಿಮಾಗಳು ಕೂಡ ಪೈರಸಿ ಹಾವಳಿಗೆ ಒಳಗಾಗಿದ್ದವು. ‘ಛಾವ’ ಸಿನಿಮಾವನ್ನು ಪೈರಸಿ ಮಾಡಲು ತಮ್ಮದೇ ಆ್ಯಪ್ ನಿರ್ಮಿಸಿಕೊಂಡಿದ್ದ ವ್ಯಕ್ತಿಯೊಬ್ಬನನ್ನು ಮುಂಬೈನ ಸೈಬರ್ ಪೊಲೀಸರು ಬಂಧಿಸಿದ್ದರು. ಈಗ ‘ಕೇಸರಿ 2’ ಸಿನಿಮಾ ಕೂಡ ಪೈರಸಿ ಹೊಡೆತಕ್ಕೆ ಸಿಕ್ಕಿದೆ. ಇದರಿಂದ ಅಕ್ಷಯ್ ಕುಮಾರ್ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ.
ಇದನ್ನೂ ಓದಿ: ‘ಕೇಸರಿ 2’ ಸಿನಿಮಾ ನೋಡಿದ ನೆಟ್ಟಿಗರು ಹೇಳಿದ್ದೇನು? ಸಿನಿಮಾ ಹೇಗಿದೆ?
ಕರಣ್ ಸಿಂಗ್ ತ್ಯಾಗಿ ಅವರು ‘ಕೇಸರಿ: ಚಾಪ್ಟರ್ 2’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಕುರಿತು ಈ ಸಿನಿಮಾ ಸಿದ್ಧವಾಗಿದೆ. ಅಕ್ಷಯ್ ಕುಮಾರ್, ಅನನ್ಯಾ ಪಾಂಡೆ, ಆರ್. ಮಾಧವನ್ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.