ಬ್ರಾಹ್ಮಣರ ಬಗ್ಗೆ ಹೇಳಿಕೆ, ಕ್ಷಮೆ ಕೇಳಿದ ಅನುರಾಗ್ ಕಶ್ಯಪ್
Anurag Kashyap: ‘ಫುಲೆ’ ಸಿನಿಮಾಕ್ಕೆ ಬ್ಯಾಹ್ಮಣರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡುತ್ತಿರುವ ಬಗ್ಗೆ ಖ್ಯಾತ ಸಿನಿಮಾ ನಿರ್ದೇಶಕ ಅನುರಾಗ್ ಕಶ್ಯಪ್ ಅಸಮಾಧಾನ ಹೊರಹಾಕಿದ್ದು ಬ್ರಾಹ್ಮಣರ ಬಗ್ಗೆ ಪೋಸ್ಟ್ ಹಾಕಿದ್ದರು. ಇದೀಗ ಅವರು ಸಮುದಾಯದ ಕ್ಷಮೆ ಕೇಳಿದ್ದಾರೆ.

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ಇತ್ತೀಚೆಗಿನ ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಸಿಬಿಎಫ್ಸಿ ಮತ್ತು ಬ್ರಾಹ್ಮಣ ಸಮುದಾಯದ ಮೇಲೆ ಕೆಂಡ ಕಾರಿದ್ದರು. ಜೋತಿಬಾ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ ಜೀವನ ಆಧರಿಸಿದ ‘ಫುಲೆ’ ಸಿನಿಮಾಕ್ಕೆ ಬ್ರಾಹ್ಮಣ ಸಮುದಾಯ ವಿರೋಧ ವ್ಯಕ್ತಪಡಿಸಿದೆ. ಇದೇ ಕಾರಣಕ್ಕೆ ಸಿಬಿಎಫ್ಸಿ ಪ್ರಮಾಣ ಪತ್ರ ನೀಡಲು ವಿಳಂಬ ಮಾಡಿದ್ದು ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿದೆ. ಇದೇ ಕಾರಣಕ್ಕೆ ಅನುರಾಗ್ ಕಶ್ಯಪ್ ಸಿಟ್ಟಾಗಿದ್ದು ಸಿಬಿಎಫ್ಸಿ ವಿರುದ್ಧ ಹರಿಹಾಯ್ದಿದ್ದಾರೆ.
‘ಪಂಜಾಬ್ 95, ತೀಸ್, ಧಡಕ್ 2 ಈಗ ಫುಲೆ ಒಂದರ ಹಿಂದೊಂದು ಸಿನಿಮಾಗಳಿಗೆ ತಡೆ ಒಡ್ಡಲಾಗುತ್ತಿದೆ. ಜಾತೀವಾದಿ, ಧರ್ಮವಾದಿ, ಜನಾಂಗೀಯವಾದಿ ಸರ್ಕಾರ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲು ಹೆದರುತ್ತಿದೆ. ಅವರಿಗೆ ಯಾವುದು ಸಮಸ್ಯೆ ಎಂದು ಬಹಿರಂಗವಾಗಿ ಹೇಳಲು ಸಹ ಅವರಿಂದ ಸಾಧ್ಯವಾಗುತ್ತಿಲ್ಲ’ ಎಂದಿದ್ದರು ಅನುರಾಗ್ ಕಶ್ಯಪ್.
ಪ್ರಧಾನಿ ಮೋದಿ ಅವರು ಹೇಳಿರುವಂತೆ ಭಾರತದಲ್ಲಿ ಜಾತಿ ವ್ಯವಸ್ಥೆಯೇ ಇಲ್ಲ, ಹಾಗಿದ್ದ ಮೇಲೆ ‘ಫುಲೆ’ ಸಿನಿಮಾ ಬಿಡುಗಡೆ ಮಾಡಲು ಸಮಸ್ಯೆ ಏನು? ಜಾತಿ ವ್ಯವಸ್ಥೆ ಇಲ್ಲ ಎಂದಾದಮೇಲೆ ನಿಮಗೇಕೆ ಉರಿಯುತ್ತಿದೆ ಎಂದು ‘ಫುಲೆ’ ಸಿನಿಮಾ ವಿರೋಧಿಸಿದ್ದ ಬ್ರಾಹ್ಮಣ ಸಮುದಾಯವನ್ನು ಪ್ರಶ್ನೆ ಮಾಡಿದ್ದರು. ಅಲ್ಲದೆ ‘ಫುಲೆ’ ಸಿನಿಮಾ ಬಿಡುಗಡೆಗೆ ಮುಂಚೆಯೇ ಅವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದಾದ ಮೇಲೆ ಅವರು ಸಿನಿಮಾ ನೋಡಿದ್ದು ಹೇಗೆ? ಸಿಬಿಎಫ್ಸಿಯವರೇ ಸಿನಿಮಾ ಲೀಕ್ ಮಾಡಿದ್ದಾರಾ ಎಂದು ಸಹ ಪ್ರಶ್ನೆ ಮಾಡಿದ್ದರು. ಅಲ್ಲದೆ ಅವರ ಪೋಸ್ಟ್ಗೆ ಬಂದ ಕಮೆಂಟ್ ಒಂದಕ್ಕೆ ‘ಬ್ರಾಹ್ಮಣರ ಮೇಲೆ ಮೂತ್ರ ಮಾಡುತ್ತೀನಿ’ ಎಂದು ಪ್ರತಿಕ್ರಿಯೆ ನೀಡಿದ್ದರು.
ಇದನ್ನೂ ಓದಿ:ಒಂದೇ ಸಿನಿಮಾದಿಂದ ನೂರು ಕೋಟಿ ರೂಪಾಯಿ ಕಳೆದಿದ್ದ ಅನುರಾಗ್ ಕಶ್ಯಪ್
ಇದೀಗ ತಮ್ಮ ಪೋಸ್ಟ್ಗೆ ಕ್ಷಮೆ ಕೇಳಿರುವ ಅನುರಾಗ್ ಕಶ್ಯಪ್, ‘ಇದು ನನ್ನ ಕ್ಷಮಾಪಣೆ, ನಾನು ಹೇಳಿದ ಮಾತುಗಳಿಗೆ ಅಲ್ಲ ಬದಲಿಗೆ ನನ್ನ ಪೋಸ್ಟ್ನಲ್ಲಿರುವ ಒಂದು ಸಾಲನ್ನು ಮಾತ್ರ ಎತ್ತಿಕೊಂಡು ಅದನ್ನು ದ್ವೇಷ ಪ್ರಸರಣಕ್ಕೆ ಬಳಸಿಕೊಳ್ಳುತ್ತಿರುವ ಕಾರಣಕ್ಕೆ. ಭಾರಿ ಸಂಸ್ಕಾರವಂತರು ಎನಿಸಿಕೊಂಡ ಸಮುದಾಯದವರು ಹೆಂಡತಿ, ಮಗಳು, ಗೆಳೆಯರ ಅತ್ಯಾಚಾರ, ಕೊಲೆಯ ಬೆದರಿಕೆ ಹಾಕುತ್ತಿದ್ದಾರೆ. ಆದರೆ ಯಾವ ಹೇಳಿಕೆಯೂ ಈ ರೀತಿಯ ಬೆದರಿಕೆಗಳಿಗೆ ಅರ್ಹವಲ್ಲ. ಹೇಳಿರುವ ಮಾತುಗಳನ್ನು ವಾಪಸ್ ಪಡೆಯಲು ಆಗುವುದಿಲ್ಲ, ಅದನ್ನು ನಾನು ಪಡೆಯುವುದೂ ಇಲ್ಲ’ ಎಂದಿದ್ದಾರೆ.
‘ನಾನು ಹೇಳಿರುವ ಮಾತಿಗೆ ಬೇಕಾದರೆ ನನ್ನ ಬೈಯ್ಯಿರಿ ಆದರೆ ಕುಟುಂಬದವರನ್ನು ಏಕೆ ಎಳೆದು ತರುತ್ತೀರಿ. ಬ್ರಾಹ್ಮಣರೇ, ಪಾಪ ಮಹಿಳೆಯರನ್ನು ಬಿಟ್ಟುಬಿಡಿ, ಇಷ್ಟು ಸಂಸ್ಕಾರ ಶಾಸ್ತ್ರಗಳಲ್ಲಿಯೂ ಇದೆ. ಕೇವಲ ಮನುವಾದದಲ್ಲಿ ಇಲ್ಲ ಅಷ್ಟೆ. ನೀವು ಎಂಥಹಾ ಬ್ರಾಹ್ಮಣರು ನೀವೇ ನಿರ್ಧರಿಸಿಕೊಳ್ಳಿ. ಉಳಿದಂತೆ ನನ್ನ ಕಡೆಯಿಂದ ಕ್ಷಮೆ ಇರಲಿ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ