ರಾಜಮೌಳಿ ಅಂಥ ನಿರ್ದೇಶಕರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರಾ ಅಕ್ಷಯ್ ಕುಮಾರ್?
ಅಕ್ಷಯ್ ಕುಮಾರ್ ಅವರು ಬಾಲಿವುಡ್ ಸಿನಿಮಾಗಳ ಸತತ ವೈಫಲ್ಯದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾಗಳ ರಹಸ್ಯವನ್ನು ಬಹಿರಂಗಪಡಿಸುವುದರಿಂದ ಮ್ಯಾಜಿಕ್ ಕಳೆದುಹೋಗುತ್ತದೆ ಎಂದು ಅವರು ಹೇಳಿದ್ದಾರೆ. ಅತಿಯಾದ ಪಬ್ಲಿಸಿಟಿ ಮತ್ತು ಪ್ರೇಕ್ಷಕರಲ್ಲಿ ನಿರೀಕ್ಷೆಗಳನ್ನು ಹೆಚ್ಚಿಸುವುದರಿಂದಲೂ ಸಿನಿಮಾಗಳ ಸೋಲು ಉಂಟಾಗುತ್ತಿದೆ ಎಂದು ಅವರು ಭಾವಿಸುತ್ತಾರೆ.
ಅಕ್ಷಯ್ ಕುಮಾರ್ ಅವರ ಸಿನಿಮಾಗಳು ಸಾಲು ಸಾಲು ಸೋಲು ಕಾಣುತ್ತಿವೆ. ಇದಕ್ಕೆ ಅಭಿಮಾನಿಗಳು ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ. ಹಾಗಂತ ಅಕ್ಷಯ್ ಕುಮಾರ್ ಅವರು ಕೈ ಕಟ್ಟಿ ಕುಳಿತಿಲ್ಲ. ತಮಗೆ ಬಂದ ಆಫರ್ಗಳೆಲ್ಲವನ್ನೂ ಒಪ್ಪಿ ಸಿನಿಮಾ ಮಾಡುತ್ತಿದ್ದಾರೆ. ಅವರು ವಾರದ ದಿನಗಳಲ್ಲಿ ಮಾತ್ರ ಶೂಟ್ ಮಾಡಯತ್ತಾರೆ, ವಾರಾಂತ್ಯದಲ್ಲಿ ಕುಟುಂಬದ ಜೊತೆ ಸಮಯ ಕಳೆಯುತ್ತಾರೆ. ಈಗ ಅವರು ಪರೋಕ್ಷವಾಗಿ ರಾಜಮೌಳಿ ರೀತಿಯ ನಿರ್ದೇಶಕರ ಬಗ್ಗೆ ಮಾತನಾಡಿದರೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.
ಬಾಲಿವುಡ್ ಸಿನಿಮಾಗಳು ಸೋಲಲು ಕಾರಣ ಏನು ಎನ್ನುವ ಪ್ರಶ್ನೆ ಅನೇಕರಲ್ಲಿ ಇದೆ. ಇದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯ ಕಾರಣ ನೀಡುತ್ತಾರೆ. ಅಕ್ಷಯ್ ಕುಮಾರ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದಾರೆ. ಸಿನಿಮಾನ ಮ್ಯಾಜಿಕ್ಗೆ ಹೋಲಿಕೆ ಮಾಡಿರೋ ಅವರು, ‘ತೆರೆ ಹಿಂದೆ ಏನಾಯಿತು ಎಂಬದನ್ನು ಹೇಳಬಾರದು’ ಎಂದಿದ್ದಾರೆ.
‘ಎಲ್ಲಿಯೂ ಮ್ಯಾಜಿಕ್ ಉಳಿದಿಲ್ಲ. ಸಿನಿಮಾ ಮೇಕಿಂಗ್ನ ಜನಕ್ಕೆ ಏಕೆ ತೋರಿಸಬೇಕು? ನಾವು ಮ್ಯಾಜಿಕ್ ನೋಡೋಕೆ ಹೋಗುತ್ತೇವೆ. ಈ ಮ್ಯಾಜಿಕ್ನ ಹೇಗೆ ಮಾಡಿದರು ಎಂದು ಯಾರಾದರೂ ತೋರಿಸಿದರೆ ಮ್ಯಾಜಿಕ್ನಲ್ಲಿ ಏನಾದರೂ ಎಗ್ಸೈಟ್ಮೆಂಟ್ ಇರುತ್ತದೆಯೇ? ಇದನ್ನು ಹೇಗೆ ಮಾಡಿದರು ಎಂದು ನನಗೆ ಗೊತ್ತಿದೆ ಎಂದು ಹೇಳುತ್ತಾರೆ’ ಎಂದಿದ್ದಾರೆ ಅಕ್ಷಯ್ ಕುಮಾರ್.
‘ಓರ್ವ ಹೀರೋ ಒಂದು ಕಡೆಯಿಂದ ಮತ್ತೊಂದು ಕಡೆಗೆ ಜಂಪ್ ಮಾಡಿದ್ದನ್ನು ತೋರಿಸಲು ನೀವು ವಿಎಫ್ಎಕ್ಸ್ ಮಾಡಿರಬಹುದು ಅಥವಾ ಏನೇ ಟ್ರಿಕ್ ಮಾಡಿರಬಹುದು. ಆದರೆ, ಅದನ್ನು ತೋರಿಸಿದಾಗ ಎಲ್ಲವೂ ಹಾಳಾಗುತ್ತದೆ. ನಾವು ಸಾಕಷ್ಟು ವಿಚಾರಗಳನ್ನು ಜನರಿಗೆ ತೋರಿಸಿದ್ದೇವೆ. ಈಗ ಯಾವುದೇ ಮ್ಯಾಜಿಕ್ ಉಳಿದಿಲ್ಲ. ಇದು ಸಿನಿಮಾ ಸೋಲಲು ಪ್ರಮುಖ ಕಾರಣ’ ಎಂದು ಅಕ್ಷಯ್ ಕಯಮಾರ್ ಹೇಳಿದ್ದಾರೆ.
‘ಮೊದಲು ಅಮಿತಾಭ್ನ ನೋಡಿದೆ ಎಂದು ಎಗ್ಸೈಟ್ ಆಗುತ್ತಿದ್ದರು. ಆದರೆ, ಈಗ ಅಕ್ಷಯ್ ಕುಮಾರ್ ಅವರನ್ನು ಕಂಡರೆ ಯಾರಿಗೂ ಎಗ್ಸೈಟ್ ಆಗುವುದಿಲ್ಲ. ಪಿಆರ್ ಪಬ್ಲಿಸಿಟಿಯಿಂದ ನಾವು ಎಲ್ಲವನ್ನೂ ಹಾಳು ಮಾಡಿದ್ದೇವೆ’ ಎಂದು ಅಕ್ಷಯ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ರಾಜಮೌಳಿಯನ್ನೇ ಬ್ಯಾನ್ ಮಾಡಿತ್ತು ತೆಲುಗು ಚಿತ್ರರಂಗ, ಕಾರಣ ಏನು ಗೊತ್ತೆ?
ರಾಜಮೌಳಿ ಅವರು ಇತ್ತೀಚೆಗೆ ‘ಆರ್ಆರ್ಆರ್’ ಸಿನಿಮಾದ ಮೇಕಿಂಗ್ನ ಡಾಕ್ಯುಮೆಂಟರಿ ಮಾಡಿ ಬಿಟ್ಟಿದ್ದರು. ಅನೇಕ ನಿರ್ದೇಶಕರು ಈ ಕೆಲಸ ಮಾಡಿದ್ದರು. ರಾಜಮೌಳಿ ಅಸಮಾಧಾನ ಹೊರಹಾಕಿದ್ದು ಇದೇ ರೀತಿಯ ಫೂಟೇಜ್ ತೋರಿಸುವವರ ಬಗ್ಗೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.