‘ಅವರು ಮುಸ್ಲಿಮರಲ್ಲ, ಉಗ್ರರರು, ಇಸ್ಲಾಂ ಇದನ್ನು ಕಲಿಸಲ್ಲ’; ಗಾಯಕ ಸಲೀಂ ನೇರ ಮಾತು
Pahalgam attack: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಖ್ಯಾತ ಬಾಲಿವುಡ್ ಗಾಯಕ ಸಲೀಂ ಮರ್ಚೆಂಟ್ ವಿಡಿಯೋ ಪೋಸ್ಟ್ ಮಾಡಿ, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನ ಬೈಸ್ರಾನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ದೇಶಾದ್ಯಂತ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಖ್ಯಾತ ಬಾಲಿವುಡ್ (Bollywood) ಗಾಯಕ ಸಲೀಂ ಮರ್ಚೆಂಟ್ ವಿಡಿಯೋ ಪೋಸ್ಟ್ ಮಾಡಿ, ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬೈಸ್ರಾನ್ ಕಣಿವೆಯ ಬೆಟ್ಟದಿಂದ ಇಳಿದ ಭಯೋತ್ಪಾದಕರು ಪ್ರವಾಸಿಗರ ಮೇಲೆ ಮನಬಂದಂತೆ ಗುಂಡು ಹಾರಿಸಿದರು. ಅವರು ಸುತ್ತುವರೆದು 40 ಪ್ರವಾಸಿಗರನ್ನು ಗುರಿಯಾಗಿಸಿಕೊಂಡರು. ಈ ಬಾರಿ ಅವರು ಪ್ರವಾಸಿಗರನ್ನು ಅವರ ಧರ್ಮದ ಬಗ್ಗೆ ಕೇಳಿ ಅವರ ಮೇಲೆ ಗುಂಡು ಹಾರಿಸಿದರು. ಈ ಬಗ್ಗೆ ಸಲೀಂ ಅಸಮಾಧಾನ ಹೊರಹಾಕಿದ್ದಾರೆ.
‘ಪಹ್ಲಗಾಮ್‌ನಲ್ಲಿ ಅಮಾಯಕ ಜನರನ್ನು ಕೊಲ್ಲಲಾಯಿತು. ಏಕೆಂದರೆ ಅವರು ಹಿಂದೂಗಳಾಗಿದ್ದರು, ಮುಸ್ಲಿಮರಲ್ಲ. ಹಾಗಾದರೆ ಭಯೋತ್ಪಾದಕರು ಮುಸ್ಲಿಮರೇ? ಇಲ್ಲ, ಅವರು ಭಯೋತ್ಪಾದಕರು. ಏಕೆಂದರೆ ಇಸ್ಲಾಂ ಇದನ್ನು ಕಲಿಸುವುದಿಲ್ಲ. ಕುರಾನ್ ಷರೀಫ್‌ನ ಸೂರಾ ಅಲ್-ಬಕಾರಾದ 256 ನೇ ಶ್ಲೋಕದಲ್ಲಿ, ಧರ್ಮದಲ್ಲಿ ಯಾವುದೇ ಬಲವಂತವಿಲ್ಲ ಎಂದು ಹೇಳಲಾಗಿದೆ. ಇದನ್ನು ಕುರಾನ್ ಷರೀಫ್‌ನಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ:ಕಾಶ್ಮೀರದ ಜೊತೆ ಬಾಲಿವುಡ್ ನಂಟು; ದಾಳಿ ಬಳಿಕ ಎಲ್ಲದಕ್ಕೂ ಬ್ರೇಕ್?
‘ಒಬ್ಬ ಮುಸ್ಲಿಂ ಆಗಿ, ಇದನ್ನೆಲ್ಲಾ ನೋಡಿ ನನಗೆ ನಾಚಿಕೆಯಾಗುತ್ತಿದೆ. ಹಿಂದೂಗಳು ಎಂಬ ಕಾರಣಕ್ಕಾಗಿ ಮುಗ್ಧ ಹಿಂದೂ ಸಹೋದರ ಸಹೋದರಿಯರನ್ನು ನಿರ್ದಯವಾಗಿ ಕೊಲ್ಲಲಾಯಿತು. ಇದೆಲ್ಲ ಯಾವಾಗ ಕೊನೆಗೊಳ್ಳುತ್ತದೆ? ಕಾಶ್ಮೀರದ ಜನರು ಕಳೆದ ಎರಡು-ಮೂರು ವರ್ಷಗಳಿಂದ ತುಂಬಾ ಚೆನ್ನಾಗಿ ಬದುಕುತ್ತಿದ್ದರು. ಈಗ ಅವರು ಮತ್ತೆ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಇದರ ಬಗ್ಗೆ ನನ್ನ ದುಃಖ ಮತ್ತು ಕೋಪವನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿದಿಲ್’ ಎಂದು ಅವರು ಹೇಳಿದರು.
ಹಾಸ್ಯನಟ ಮುನವ್ವರ್ ಫಾರೂಕಿ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಲೀಂ ಮರ್ಚೆಂಟ್ ಅವರ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ‘ತಲೆಬಾಗಿ ಪ್ರಾಣ ಕಳೆದುಕೊಂಡ ಮುಗ್ಧ ಜನರಿಗಾಗಿ ನಾನು ಪ್ರಾರ್ಥಿಸುತ್ತೇನೆ. ದೇವರು ಅವರಿಗೆ ಮತ್ತು ಅವರ ಕುಟುಂಬಗಳಿಗೆ ಶಕ್ತಿ ನೀಡಲಿ’ ಎಂದು ಬರೆದಿದ್ದಾರೆ. ಕಲಾ ಕ್ಷೇತ್ರದ ಇತರ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿ, ಭಯೋತ್ಪಾದಕರನ್ನು ಹಿಡಿದು ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂಬ ಬೇಡಿಕೆ ಕೇಳಿಬಂದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ