ಕಾಶ್ಮೀರದ ಜೊತೆ ಬಾಲಿವುಡ್ ನಂಟು; ದಾಳಿ ಬಳಿಕ ಎಲ್ಲದಕ್ಕೂ ಬ್ರೇಕ್?
ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಿಂದ ಕಾಶ್ಮೀರದ ಪ್ರವಾಸೋದ್ಯಮ ಹಾಗೂ ಚಿತ್ರರಂಗ ಬಹಳವಾಗಿ ಬಾಧಿತವಾಗಿದೆ. ಬಾಲಿವುಡ್‌ನ ಅನೇಕ ಚಿತ್ರಗಳು ಪಹಲ್ಗಾಮ್‌ನಲ್ಲಿ ಚಿತ್ರೀಕರಿಸಲ್ಪಟ್ಟಿದ್ದು, ಈ ಘಟನೆಯಿಂದ ಭವಿಷ್ಯದ ಚಿತ್ರೀಕರಣಗಳ ಮೇಲೆ ಪ್ರತಿಕೂಲ ಪರಿಣಾಮ ಬೀಳುವ ಸಾಧ್ಯತೆಯಿದೆ. ಕನ್ನಡ ಚಿತ್ರರಂಗವು ಕೂಡ ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸಿದೆ, ಆದರೆ ಬಾಲಿವುಡ್‌ನಷ್ಟು ಸಕ್ರಿಯವಾಗಿಲ್ಲ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Attack) ಉಗ್ರರರ ದಾಳಿಗೆ ಎಲ್ಲ ಕಡೆಗಳಿಂದ ಖಂಡನೆ ವ್ಯಕ್ತವಾಗಿದೆ. ಚಿತ್ರರಂಗದವರು ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ಪಹಲ್ಗಾಮ್ ಭಾರತದ ಮಿನಿ ಸ್ವಿಜರ್ಲೆಂಡ್ ಎನ್ನುವ ಖ್ಯಾತಿ ಪಡೆದಿತ್ತು. ಆದರೆ, ಪ್ರವಾಸಿಗರ ರಕ್ತವು ಈ ನೆಲಕ್ಕೆ ತಾಕಿದೆ. ಕಾಶ್ಮೀರ ಬಾಲಿವುಡ್ ಮಂದಿಯ ಫೇವರಿಟ್ ಶೂಟಿಂಗ್ ಸ್ಪಾಟ್ ಎನಿಸಿಕೊಂಡಿತ್ತು. ಪಹಲ್ಗಾಮ್ನಲ್ಲೂ ಅನೇಕ ಸಿನಿಮಾಗಳ ಚಿತ್ರೀಕರಣ ನಡೆದಿದೆ. ಮುಂದಿನ ದಿನಗಳಲ್ಲಿ ಇದಕ್ಕೆ ಬ್ರೇಕ್ ಬೀಳೋ ಸಾಧ್ಯತೆ ಟ್ಟವಾಗಿದೆ.
‘ಅರ್ಜೂ’ (1965), ‘ಜಬ್ ಜಬ್ ಫೂಲ್ ಖಿಲೆ’ (1965), ‘ಕಭಿ ಕಭಿ’ (1976) ರೀತಿಯ ಸಿನಿಮಾಗಳಲ್ಲಿ ಕಾಶ್ಮೀರದ ಸೌಂದರ್ಯವನ್ನು ತೋರಿಸಲಾಯಿತು. 1983ರಲ್ಲಿ ‘ಬೇತಾಬ್’ ಸಿನಿಮಾ ರಿಲೀಸ್ ಆಯಿತು. ಸನ್ನಿ ಡಿಯೋಲ್ ಹಾಗೂ ಅಮೃತಾ ಸಿಂಗ್ ಇದರಲ್ಲಿ ನಟಿಸಿದ್ದರು. ಕಾಶ್ಮೀರವನ್ನು ಈ ಚಿತ್ರದಲ್ಲಿ ತುಂಬಾನೇ ಸುಂದರವಾಗಿ ಚಿತ್ರೀಕರಿಸಲಾಗಿತ್ತು. ಇದರಿಂದ ಕಾಶ್ಮೀರದ ಪ್ರವಾಸೋದ್ಯಮ ಏಳ್ಗೆ ಕಂಡಿತು. ಈ ಸಿನಿಮಾ ಶೂಟ್ ಆದ ಜಾಗವು ‘ಬೇತಾಬ್ ಕಣಿವೆ’ ಎಂಬ ಹೆಸರನ್ನು ಪಡೆಯಿತು. ಬಿಗ್ ಬಜೆಟ್ ಸಿನಿಮಾಗಳು ಇಲ್ಲಿ ಬಂದು ಸಿನಿಮಾ ಶೂಟ್ ಮಾಡಲು ಆರಂಭಿಸಿದವು.
90ರ ದಶಕದಲ್ಲಿ ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳು ಹೆಚ್ಚಿದ್ದವು. ಈ ಕಾರಣಕ್ಕೆ ಇಲ್ಲಿ ಸಿನಿಮಾ ಶೂಟ್ ಮಾಡೋದು ನಿಲ್ಲಿಸಲಾಯಿತು. ರಿಸ್ಕ್ ತೆಗೆದುಕೊಂಡು ಯಾರೂ ಶೂಟ್ ಮಾಡಲು ಮುಂದೆ ಬರಲೇ ಇಲ್ಲ. ಮತ್ತೆ 2000 ಸಮಯದಲ್ಲಿ ಶೂಟಿಂಗ್ ಆರಂಭ ಆಯಿತು. 2011ರ ‘ರಾಕ್ಸ್ಟಾರ್’ ಚಿತ್ರವನ್ನು ಬೇತಾಬ್ ಕಣಿವೆಯಲ್ಲೇ ಶೂಟ್ ಮಾಡಲಾಯಿತು.
ಶಾರುಖ್ ನಟನೆಯ ‘ಜಬ್ ತಕ್ ಹೇ ಜಾನ್’, ‘ಯೇ ಜವಾನಿ ಹೇ ದಿವಾನಿ’, ಆಲಿಯಾ ಭಟ್ ನಟನೆಯ ‘ಹೈ ವೇ’, ಸಲ್ಮಾನ್ ಖಾನ್ ನಟನೆಯ ‘ಭಜರಂಗಿ ಭಾಯಿಜಾನ್’ ಸಿನಿಮಾಗಳು ಪಹಲ್ಗಾಮ್‌ನಲ್ಲಿ ಶೂಟ್ ಆಗಿವೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾದ ಶೂಟ್ ಪಹಲ್ಗಾಮ್, ಗುಲ್ಮಾರ್ಗ್ ಹಾಗೂ ಶ್ರೀನಗರದಲ್ಲಿ ನಡೆದಿತ್ತು.
ಈಗ ದಾಳಿಯಿಂದ ಮತ್ತೆ ಎಲ್ಲವೂ ಅಲ್ಲೋಲ ಕಲ್ಲೋಲ ಆಗಿದೆ. ಇನ್ನೂ ಕೆಲ ಸಮಯ ಕಣಿವೆ ರಾಜ್ಯವು ಸಂಕಷ್ಟ ಅನುಭವಿಸುವ ಸಾಧ್ಯತೆ ಇದೆ. ಈ ಕಾರಣಕ್ಕೆ ಈ ಭಾಗದಲ್ಲಿ ಶೂಟಿಂಗ್ ನಡೆಸೋದು ಅನುಮಾನ ಎನ್ನುವ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: ಪಹಲ್ಗಾಮ್ ಹತ್ಯಾಕಾಂಡ ಖಂಡಿಸಿದ ಶಾರುಖ್ ಖಾನ್; ಉಗ್ರರ ದಾಳಿಗೆ ಬಾಲಿವುಡ್ ಪ್ರತಿಕ್ರಿಯೆ
ರಾಜ್ಕುಮಾರ್ ಸೇರಿದಂತೆ ಈಗಿನ ಹೀರೋಗಳವರೆಗೆ ಕನ್ನಡದ ಕೆಲ ಚಿತ್ರಗಳು ಇಲ್ಲಿ ಶೂಟ್ ಮಾಡಲ್ಪಟ್ಟಿವೆ. ಆದರೆ, ಕಾಶ್ಮೀರದ ಬಗ್ಗೆ ಬಾಲಿವುಡ್ ಮಂದಿಯಯಷ್ಟು ಗೀಳು ನಮ್ಮವರಿಗೆ ಇಲ್ಲ ಎನ್ನಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.