ಪಹಲ್ಗಾಮ್ ಹತ್ಯಾಕಾಂಡ ಖಂಡಿಸಿದ ಶಾರುಖ್ ಖಾನ್; ಉಗ್ರರ ದಾಳಿಗೆ ಬಾಲಿವುಡ್ ಪ್ರತಿಕ್ರಿಯೆ
ನಟ ಶಾರುಖ್ ಖಾನ್ ಅವರು ಪಹಲ್ಗಾಮ್ ದುರಂತದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಉಗ್ರರ ದಾಳಿಯನ್ನು ಅವರು ಖಂಡಿಸಿದ್ದಾರೆ. ಒಂದು ರಾಷ್ಟ್ರವಾಗಿ ನಾವು ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ಅವರು ಹೇಳಿದ್ದಾರೆ. ಶಾರುಖ್ ಖಾನ್ ಮಾತ್ರವಲ್ಲದೇ ಅನುಷ್ಕಾ ಶರ್ಮಾ, ಕಿಯಾರಾ ಅಡ್ವಾಣಿ, ಅಕ್ಷಯ್ ಕುಮಾರ್ ಮುಂತಾದವರು ಕೂಡ ಪ್ರತಿಕ್ರಿಯಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ (Pahalgam) ನಡೆದ ಉಗ್ರರ ದಾಳಿಯಿಂದ 28 ಮಂದಿ ಜೀವ ಕಳೆದುಕೊಂಡಿದ್ದಾರೆ. ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದವರನ್ನೇ ಟಾರ್ಗೆಟ್ ಮಾಡಿ ಹತ್ಯಾಕಾಂಡ ನಡೆಸಲಾಗಿದೆ. ಈ ಘಟನೆಯಲ್ಲಿ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಉಗ್ರರ ದಾಳಿಗೆ (Pahalgam Terror Attack) ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಪಹಲ್ಗಾಮ್ ಹತ್ಯಾಕಾಂಡವನ್ನು ಖಂಡಿಸಿದ್ದಾರೆ. ಶಾರುಖ್ ಖಾನ್ (Shah Rukh Khan), ಅನುಷ್ಕಾ ಶರ್ಮಾ, ಕಿಯಾರಾ ಅಡ್ವಾಣಿ, ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ಶಾರುಖ್ ಖಾನ್ ಅವರು ಪ್ರತಿಕ್ರಿಯಿಸಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿ ಹಾಗೂ ಎಕ್ಸ್ ಖಾತೆಯಲ್ಲಿ ಅವರು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ‘ಪಹಲ್ಗಾಮ್‌ನಲ್ಲಿ ನಡೆದಿರುವ ವಿಶ್ವಾಸಘಾತುಕ ಕೃತ್ಯ ಮತ್ತು ಅಮಾನವೀಯ ಹಿಂಸಾಚಾರದ ಬಗ್ಗೆ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಲು ಪದಗಳು ಸಾಲದು. ಇಂತಹ ಸಮಯದಲ್ಲಿ, ನಾವು ದೇವರ ಕಡೆಗೆ ನೋಡಿ, ಸಂತ್ರಸ್ತ ಕುಟುಂಬಗಳಿಗಾಗಿ ಪ್ರಾರ್ಥಿಸಬಹುದು ಮತ್ತು ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸಬಹುದು. ಒಂದು ರಾಷ್ಟ್ರವಾಗಿ ನಾವು ಒಗ್ಗಟ್ಟಿನಿಂದ ಬಲವಾಗಿ ನಿಂತು ಈ ಘೋರ ಕೃತ್ಯದ ವಿರುದ್ಧ ನ್ಯಾಯವನ್ನು ಪಡೆಯೋಣ’ ಎಂದು ಶಾರುಖ್ ಖಾನ್ ಬರೆದುಕೊಂಡಿದ್ದಾರೆ.
Words fail to express the sadness and anger at the treachery and inhumane act of violence that has occurred in Pahalgam. In times like these, one can only turn to God and say a prayer for the families that suffered and express my deepest condolences. May we as a Nation, stand…
— Shah Rukh Khan (@iamsrk) April 23, 2025
ನಟ ಅಕ್ಷಯ್ ಕುಮಾರ್ ಕೂಡ ಈ ಘಟನೆ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಗ್ಗೆ ತಿಳಿದು ಆತಂಕವಾಯಿತು. ಈ ರೀತಿ ಮುಗ್ಧ ಜನರನ್ನು ಕೊಲ್ಲುವುದು ಘೋರ ದುಷ್ಟತನ. ಮೃತರ ಕುಟುಂಬಗಳಿಗಾಗಿ ಪ್ರಾರ್ಥನೆಗಳು’ ಎಂದು ಅಕ್ಷಯ್ ಕುಮಾರ್ ಅವರು ಬರೆದುಕೊಂಡಿದ್ದಾರೆ.
‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕರ ಮೇಲೆ ನಡೆದ ಭೀಕರ ಭಯೋತ್ಪಾದಕ ದಾಳಿಯ ಬಗ್ಗೆ ಕೇಳಿ ಹೃದಯ ಛಿದ್ರವಾಗಿದೆ. ಅವರ ಕುಟುಂಬಗಳಿಗೆ ಹೃದಯಪೂರ್ವಕ ಪ್ರಾರ್ಥನೆ ಮತ್ತು ಸಂತಾಪಗಳು. ಇದು ಎಂದಿಗೂ ಮರೆಯಲಾಗದ ಘೋರ ದಾಳಿ’ ಎಂದು ಅನುಷ್ಕಾ ಶರ್ಮಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಭಯೋತ್ಪಾದಕರ ಗುಂಡಿಗೆ ಬಲಿಯಾಗಿರುವ ಶಿವಮೊಗ್ಗದ ಮಂಜುನಾಥ್ ಅವರ ತಾಯಿಗೆ ವಿಷಯವಿನ್ನೂ ಗೊತ್ತಿಲ್ಲ
‘ಈ ಸುದ್ದಿ ತಿಳಿದು ನನ್ನ ಹೃದಯ ಒಡೆಯಿತು’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ‘ಇದು ತುಂಬ ಕ್ರೂರ ಘಟನೆ. ಮೃತರ ಕುಟುಂಬಗಳಿಗಾಗಿ ನಮ್ಮ ಹೃದಯ ಮಿಡಿಯುತ್ತದೆ. ಅವರಿಗಾಗಿ ನಾನು ಪ್ರಾರ್ಥಿಸುತ್ತೇನೆ. ನಾವು ನಿಮ್ಮೊಂದಿಗೆ ಇದ್ದೇವೆ. ಭಯೋತ್ಪಾದನೆ ವಿರುದ್ಧ ನಾವು ಒಟ್ಟಾಗಿ ನಿಲ್ಲುತ್ತೇವೆ’ ಎಂದು ಕಿಯಾರಾ ಅಡ್ವಾಣಿ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.