ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ ಪಾಕ್ ಸೇನೆಗೆ ಶುರುವಾಯ್ತು ನಡುಕ: ಉಪಗ್ರಹ ಚಿತ್ರಗಳಿಂದ ಬಹಿರಂಗವಾಯ್ತು ಗಡಿಯಾಚೆಗಿನ ರಹಸ್ಯ
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಪಾಕಿಸ್ತಾನದಲ್ಲಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಬಹುದೆಂಬ ಭಯದ ವಾತಾವರಣ ವ್ಯಕ್ತವಾಗಿದೆಯಂತೆ. ಹೀಗಾಗಿ ವಾಯುನೆಲೆಗಳಲ್ಲಿ ಭದ್ರತೆ ಹೆಚ್ಚಸುತ್ತಿರುವ ಪಾಕ್ ಸೇನೆ, ಭಯೋತ್ಪಾದಕರ ಅಡಗುದಾಣಗಳನ್ನು ಬದಲಾಯಿಸಲು ಮುಂದಾಗಿರುವುದು ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನವದೆಹಲಿ, ಏಪ್ರಿಲ್ 23: ಈ ಹಿಂದೆ ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ಉಗ್ರ ದಾಳಿಯ ನಂತರ ಕಠಿಣ ಕ್ರಮ ಕೈಗೊಂಡಿದ್ದ ಭಾರತೀಯ ಸೇನೆ ಗಡಿಯಾಚೆಗಿನ, ಪಾಕಿಸ್ತಾನದ ಹಿಡಿತದಲ್ಲಿರುವ ಉಗ್ರರ ಅಡಗುದಾಣಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಇದೀಗ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ (Pahalgam Terror Attack) ನಡೆಸಿ 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿದ ಬೆನ್ನಲ್ಲೇ ಭಾರತೀಯ ಸೇನೆ (Indian Army) ಮತ್ತೆ ಅಲರ್ಟ್ ಆಗಿದೆ. ಇದು ಪಾಕಿಸ್ತಾನ ಸೇನೆಯನ್ನು (Pakistan Army) ಚಿಂತೆಗೀಡು ಮಾಡಿದೆಯಂತೆ. ಪಾಕಿಸ್ತಾನದ ವಾಯುನೆಲೆಗಳಲ್ಲಿ ಭದ್ರತೆ ಹೆಚ್ಚಿಸಲಾಗುತ್ತಿದ್ದು, ಉಗ್ರರನ್ನು ಈಗಿರುವ ಅಡಗುದಾಣಗಳಿಂದ ಬೇರೆಡೆಗೆ ಸ್ಥಳಾಂತರಿಸಲು ಅಲ್ಲಿನ ಸೇನೆ ಮುಂದಾಗಿರುವುದು ಉಪಗ್ರಹ ಚಿತ್ರಗಳಿಂದ ತಿಳಿದುಬಂದಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನ ಹಿರಿಯ ಸೇನಾ ಅಧಿಕಾರಿಗಳು ಮಂಗಳವಾರ ರಾತ್ರಿ ವಾಯುನೆಲೆಯ ಮೇಲ್ವಿಚಾರಣೆಯಲ್ಲಿ ನಿರತರಾಗಿದ್ದರು. ಗಡಿಯಾಚೆಗಿನ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಭಾರತ ಯಾವುದೇ ಸಮಯದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಬಹುದು ಎಂದು ಪಾಕಿಸ್ತಾನ ಭಯಪಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ರಾವಲ್ಪಿಂಡಿ, ಲಾಹೋರ್‌ನಲ್ಲಿ ಪಾಕ್ ಯುದ್ಧವಿಮಾನ ಹಾರಾಟ
ಫ್ಲೈಟ್ ರಾಡಾರ್ 24 ರಲ್ಲಿ ದಾಖಲಾದ ಮಾಹಿತಿಯ ಪ್ರಕಾರ, ಪಹಲ್ಗಾಮ್ ದಾಳಿಯ ನಂತರ ಎರಡು ಸೇನಾ ಯುದ್ಧ ವಿಮಾನಗಳು ರಾವಲ್ಪಿಂಡಿ ಮತ್ತು ಲಾಹೋರ್‌ನಿಂದ ಹಾರಾಡಿರುವುದು ಕಂಡುಬಂದಿದೆ. ಎಲ್‌ಒಸಿಯ ಸುತ್ತಲೂ ಯುದ್ಧ ವಿಮಾನವೊಂದು ಸುತ್ತುತ್ತಿತ್ತು. ಪಾಕಿಸ್ತಾನದ ಯುದ್ಧ ವಿಮಾನ ಕೊನೆಯ ಬಾರಿಗೆ ಅಹ್ಮದ್‌ಪುರ ಪೂರ್ವದ ಬಳಿ ಹಾರುತ್ತಿರುವುದು ಕಂಡುಬಂದಿತ್ತು ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನಿ ಸೇನೆಯ ಗಸ್ತು ಹೆಚ್ಚಳ
ಗಡಿಯಲ್ಲಿ ಹಾರಾಡುತ್ತಿರುವ ಪಾಕಿಸ್ತಾನಿ ವಾಯುಪಡೆಯ ವಿಮಾನಗಳಲ್ಲಿ PAF198 ಮತ್ತು PAF101 ಸಂಖ್ಯೆಯ ವಿಮಾನಗಳು ಸೇರಿವೆ. ಪಾಕಿಸ್ತಾನ ವಾಯುಪಡೆಯು ಗುಪ್ತಚರ ಕಾರ್ಯಾಚರಣೆಗಾಗಿ ಎರಡೂ ವಿಮಾನಗಳನ್ನು ಹೆಚ್ಚಾಗಿ ಬಳಸಿಕೊಂಡಿದೆ ಎನ್ನಲಾಗಿದೆ.
ಮತ್ತೊಂದೆಡೆ, ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೇ ಆದರೆ ಭಯೋತ್ಪಾದಕರು ಹತರಾಗುವುದನ್ನು ತಪ್ಪಿಸಲು ಪಾಕಿಸ್ತಾನ ಸೇನೆ ಈಗಾಗಲೇ ಕ್ರಮ ಆರಂಭಿಸಿದೆ. ಗಡಿ ಪ್ರದೇಶದ ಡೇರೆಗಳಲ್ಲಿ ಕುಳಿತಿರುವ ಭಯೋತ್ಪಾದಕರನ್ನು ಪಾಕಿಸ್ತಾನ ಸೇನೆ ಸ್ಥಳಾಂತರಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಒಬ್ಬನ್ನೇ ಒಬ್ಬ ಉಗ್ರನನ್ನೂ ಬಿಡುವುದಿಲ್ಲ: ಅಮಿತ್ ಶಾ ಶಪಥ
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಗೃಹ ಸಚಿವ ಅಮಿತ್ ಶಾ ಕಾಶ್ಮೀರಕ್ಕೆ ಭೇಟಿ ನೀಡಿದ್ದು, ಒಬ್ಬನೇ ಒಬ್ಬ ಭಯೋತ್ಪಾದಕನನ್ನೂ ಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಇದರ ಬೆನ್ನಲ್ಲೇ ಪಾಕಿಸ್ತಾನಿ ಸೇನೆಯ ಆತಂಕ ಹೆಚ್ಚಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿ: ಕನ್ನಡಿಗರ ರಕ್ಷಣೆಗಾಗಿ ಕರ್ನಾಟಕದಿಂದ ಸಹಾಯವಾಣಿ ಆರಂಭ, ಇಲ್ಲಿದೆ ವಿವರ
2019 ರಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರು ಪುಲ್ವಾಮಾದಲ್ಲಿ ಸೇನಾ ವಾಹನದ ಮೇಲೆ ದಾಳಿ ನಡೆಸಿ ಸುಮಾರು 40 ಮಂದಿ ಸೇನಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು. ನಂತರ ಭಾರತವು ಪಿಒಕೆ ಪ್ರದೇಶದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಸುಮಾರು 300 ಭಯೋತ್ಪಾದಕರನ್ನು ಹತ್ಯೆ ಮಾಡಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ