Amit Shah
ಭಾರತದ ಇತ್ತೀಚಿನ ರಾಜಕೀಯದಲ್ಲಿ ಅಮಿತ್ ಷಾ ಅತ್ಯಂತ ಪ್ರಭಾವಿ ಹಾಗೂ ಚುರುಕಿನ ವ್ಯಕ್ತಿ. ಭಾರತ ಸರ್ಕಾರದ ಗೃಹ ಹಾಗೂ ಸಹಕಾರ ಸಚಿವರಾಗಿರುವ ಅಮಿತ್ ಷಾ, ಮೂಲತಃ ಗುಜರಾತ್‌ನವರು. ಅಹಮದಾಬಾದ್ ರಾಜಕಾರಣದಿಂದ ದೆಹಲಿ ರಾಜಕೀಯದವರೆಗೂ ನರೇಂದ್ರ ಮೋದಿ ಜತೆಗೆ ಪ್ರತಿ ಹಂತದಲ್ಲಿ ನಿಂತವರು ಅಮಿತ್ ಷಾ. ಗುಜರಾತ್‌ನಲ್ಲಿ ಮೋದಿ ಮುಖ್ಯಮಂತ್ರಿ ಆಗುವಾಗಲೂ ಷಾ ಪ್ರಮುಖ ಪಾತ್ರವಹಿಸಿದ್ದರು. ಇದಾದ ಬಳಿಕ 2014ರಲ್ಲಿ ಉತ್ತರ ಪ್ರದೇಶ ಲೋಕಸಭಾ ಚುನಾವಣೆಯ ಉಸ್ತುವಾರಿ ತೆಗೆದುಕೊಂಡ ಅಮಿತ್ ಷಾ, ತಾವೇಕೆ ರಾಜಕೀಯ ಚಾಣಾಕ್ಷ ಹಾಗೂ ಚಾಣಾಕ್ಯ ಎನ್ನುವುದನ್ನು ಫಲಿತಾಂಶದ ಮೂಲಕ ಸಾಬೀತು ಮಾಡಿದರು. ಇದರ ಪರಿಣಾಮವಾಗಿಯೇ ಮೋದಿ ಪ್ರಧಾನಿಯಾದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವೂ ದೊರೆಯಿತು. 2019ರ ಲೋಕಸಭಾ ಚುನಾವಣೆಯ ಗೆಲುವಿನ ಬಳಿಕ ಅಧ್ಯಕ್ಷ ಸ್ಥಾನವನ್ನು ತೊರೆದ ಅಮಿತ್ ಷಾ, ಕೇಂದ್ರ ಸರ್ಕಾರದಲ್ಲಿ ಸಚಿವರಾದರು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು, ಸಿಎಎ ಕಾಯ್ದೆ, ಐಪಿಸಿ, ಸಿಆರ್‌ಪಿಸಿಗೆ ಭಾರತೀಯ ರೂಪ ನೀಡುವಲ್ಲಿ ಅಮಿತ್ ಷಾ ಪಾತ್ರ ದೊಡ್ಡದಿದೆ. ಹಾಗೆಯೇ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತಕ್ಕೆ ಬರುವಂತೆ ನೋಡಿಕೊಳ್ಳುವಲ್ಲಿಯೂ ಷಾ ಪಾತ್ರ ದೊಡ್ಡದಿದೆ.