Pahalgam Terrorist Attack: ಮೆಹಂದಿ ಮಾಸುವ ಮುನ್ನವೇ ನೌಕಾಪಡೆ ಅಧಿಕಾರಿ ಪತ್ನಿಯ ಕುಂಕುಮ ಅಳಿಸಿದ ಉಗ್ರರು
ಜಮ್ಮು ಕಾಶ್ಮೀರದ ಅನಂತ್ನಾಗ್ನ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಮದುವೆಯಾಗಿ ಕೇವಲ 7 ದಿನಗಳಷ್ಟೇ ಆಗಿತ್ತು. ಹನಿಮೂನ್ಗೆಂದು ಪತ್ನಿ ಜತೆ ಬಂದಿದ್ದ ವಿನಯ್ ಸಾವಿನ ಕದ ತಟ್ಟಿದ್ದಾರೆ. ಕೊಚ್ಚಿಯಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ರಜೆಯಲ್ಲಿದ್ದರು. ಏಪ್ರಿಲ್ 16ರಂದು ವಿವಾಹವಾಗಿದ್ದರು. ಹೈದರಾಬಾದ್‌ನಲ್ಲಿ ನಿಯೋಜಿತವಾಗಿದ್ದ ಐಬಿ ಸೆಕ್ಷನ್ ಅಧಿಕಾರಿ ಮನೀಶ್ ರಂಜನ್ ಕೂಡ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.

ಶ್ರೀನಗರ, ಏಪ್ರಿಲ್ 23: ಮಕ್ಕಳಿಗೆ ಮದುವೆ(Marriage) ಮಾಡಿ ಖುಷಿ ಖುಷಿಯಾಗಿ ಹನಿಮೂನ್ಗೆ ಕಳುಹಿಸಿಕೊಟ್ಟ ಪೋಷಕರು ಕಣ್ಣೀರಿಡುವಂತಾಗಿದೆ. ಮೆಹಂದಿ ಮಾಸುವ ಮುನ್ನವೇ ಉಗ್ರರು ಮಹಿಳೆಯ ಕುಂಕುಮ ಅಳಿಸಿದ್ದಾರೆ. ಪತಿ ಜತೆಗೆ ಹನಿಮೂನ್ಗೆಂದು ಕೈ ಹಿಡಿದು ಬಂದಿದ್ದ ಮಹಿಳೆ ಇದೀಗ ಒಬ್ಬಂಟಿಯಾಗಿ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಮ್ಮು ಕಾಶ್ಮೀರದ ಅನಂತ್ನಾಗ್ನ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯಲ್ಲಿ ಭಾರತೀಯ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಮದುವೆಯಾಗಿ ಕೇವಲ 7 ದಿನಗಳಷ್ಟೇ ಆಗಿತ್ತು. ಹನಿಮೂನ್ಗೆಂದು ಪತ್ನಿ ಜತೆ ಬಂದಿದ್ದ ವಿನಯ್ ಉಗ್ರರ ದಾಳಿಗೆ ಬಲಿಯಾಗಿದ್ದಾರೆ.
ಕೊಚ್ಚಿಯಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ರಜೆಯಲ್ಲಿದ್ದರು. ಏಪ್ರಿಲ್ 16ರಂದು ವಿವಾಹವಾಗಿದ್ದರು. ಹೈದರಾಬಾದ್‌ನಲ್ಲಿ ನಿಯೋಜಿತವಾಗಿದ್ದ ಐಬಿ ಸೆಕ್ಷನ್ ಅಧಿಕಾರಿ ಮನೀಶ್ ರಂಜನ್ ಕೂಡ ಭಯೋತ್ಪಾದಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ವಿನಯ್ ನರ್ವಾಲ್ ಮೂಲತಃ ಕರ್ನಾಲ್ ಜಿಲ್ಲೆಯ ಭುಸ್ಲಿ ಗ್ರಾಮದ ನಿವಾಸಿ. ಅವರ ಕುಟುಂಬ ಸೆಕ್ಟರ್ -7 ರಲ್ಲಿ ವಾಸಿಸುತ್ತಿದೆ. ಬಿ.ಟೆಕ್ ಮಾಡಿದ ನಂತರ, ಅವರು ಭಾರತೀಯ ನೌಕಾಪಡೆಗೆ ಸೇರಿದರು. ಅವರು 3 ವರ್ಷಗಳ ಹಿಂದೆ ಲೆಫ್ಟಿನೆಂಟ್ ಆಗಿ ನೌಕಾಪಡೆಗೆ ಸೇರಿದರು. ಕೊಚ್ಚಿಯಲ್ಲಿ ಕರ್ತವ್ಯವಿತ್ತು. ವಿನಯ್ ಅವರ ತಂದೆ ಪಾಣಿಪತ್‌ನ ಕಸ್ಟಮ್ಸ್ ಇಲಾಖೆಯಲ್ಲಿ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡಿದ್ದಾರೆ. ಅಜ್ಜ ಹವಾ ಸಿಂಗ್ ಹರಿಯಾಣ ಪೊಲೀಸರಲ್ಲಿದ್ದರು.
ವಿಡಿಯೋ ಕೂಡ ಹೊರಬಿದ್ದಿದ್ದು, ಅದರಲ್ಲಿ ವಿನಯ್ ಪತ್ನಿ ಹಿಮಾಂಶಿಯವರು ಮಾತನಾಡಿದ್ದು, ಪತಿಯೊಂದಿಗೆ ಬೇಲ್ಪುರಿ ತಿನ್ನುತ್ತಿದ್ದೆ, ಒಬ್ಬ ವ್ಯಕ್ತಿ ಬಂದು ನೀನು ಮುಸ್ಲಿಂ ಅಲ್ಲ ಎಂದು ಹೇಳುತ್ತಾ ಗುಂಡು ಹಾರಿಸಿದ್ದಾನೆ ಎಂದು ಹೇಳಿ ಅಳಲು ತೋಡಿಕೊಂಡಿದ್ದಾಳೆ. ವಿನಯ್ ಕುಟುಂಬ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದೆ.
ಮತ್ತಷ್ಟು ಓದಿ: Pahalgam Terrorist Attack: ಪಹಲ್ಗಾಮ್ ದಾಳಿ: ಅಜಿತ್ ದೋವಲ್, ಜೈಶಂಕರ್ ಭೇಟಿಯಾದ ಪ್ರಧಾನಿ ಮೋದಿ
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಕಾಶ್ಮೀರದಲ್ಲಿನ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರಕ್ಕೆ ಆಗಮಿಸಿದ್ದಾರೆ. ಪ್ರವಾಸಿಗರ ಮೇಲೆ ದಾಳಿ ನಡೆದ ಕೆಲವು ಗಂಟೆಗಳ ನಂತರ ಶಾ ಶ್ರೀನಗರ ತಲುಪಿದರು ಮತ್ತು ವಿಮಾನ ನಿಲ್ದಾಣದಿಂದ ನೇರವಾಗಿ ರಾಜಭವನಕ್ಕೆ ಹೋದರು.
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ನಳಿನ್ ಪ್ರಭಾತ್ ಅವರು ಗೃಹ ಸಚಿವರು ಸ್ಥಳಕ್ಕೆ ಆಗಮಿಸಿದಾಗ ಘಟನೆಯ ಬಗ್ಗೆ ಅವರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕೇಂದ್ರ ಗೃಹ ಕಾರ್ಯದರ್ಶಿ ಗೋವಿಂದ ಮೋಹನ್ ಮತ್ತು ಗುಪ್ತಚರ ಬ್ಯೂರೋ ನಿರ್ದೇಶಕ ತಪನ್ ದೇಕಾ ಉಪಸ್ಥಿತರಿದ್ದರು.
ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಪ್ರಸಿದ್ಧ ಮೈದಾನದಲ್ಲಿ ಮಂಗಳವಾರ ಮಧ್ಯಾಹ್ನ ಭಯೋತ್ಪಾದಕರು ಗುಂಡು ಹಾರಿಸಿ 26 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಈ ದಾಳಿಯನ್ನು 2019 ರ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಮಾರಕ ದಾಳಿ ಎಂದು ಬಣ್ಣಿಸಲಾಗುತ್ತಿದೆ. ಮೃತರಲ್ಲಿ ಇಬ್ಬರು ವಿದೇಶಿಯರು ಮತ್ತು ಇಬ್ಬರು ಸ್ಥಳೀಯರು ಸೇರಿದ್ದಾರೆ.
ಮಿನಿ ಸ್ವಿಟ್ಜರ್ಲೆಂಡ್” ಎಂದು ಕರೆಯಲ್ಪಡುವ ಹುಲ್ಲುಗಾವಲಿಗೆ ಶಸ್ತ್ರಸಜ್ಜಿತ ಉಗ್ರಗಾಮಿಗಳು ಪ್ರವೇಶಿಸಿ, ರೆಸ್ಟೋರೆಂಟ್‌ಗಳಲ್ಲಿ ಸುತ್ತಾಡುತ್ತಾ, ಕುದುರೆಗಳನ್ನು ಸವಾರಿ ಮಾಡುತ್ತಾ, ಪಿಕ್ನಿಕ್ ಮಾಡುತ್ತಾ ಅಲ್ಲಿನ ಪರಿಸರ ಆನಂದಿಸುತ್ತಿದ್ದ ಪ್ರವಾಸಿಗರ ಮೇಲೆ ಗುಂಡು ಹಾರಿಸಿದ್ದಾರೆ. ಪಾಕಿಸ್ತಾನದಲ್ಲಿ ನೆಲೆಗೊಂಡಿರುವ ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ದಿ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:40 am, Wed, 23 April 25