AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪಾರ್ಟ್​ಮೆಂಟೇ ಡ್ರಗ್ಸ್ ಸ್ಟೋರ್, ದೇವರ ಫೋಟೊಗಳ ಫ್ರೇಮ್​ನಲ್ಲಿಟ್ಟು ಮಾರಾಟ: ಬಯಲಾಯ್ತು ಜೋಡಿಯ ಮೋಜು-ಮಸ್ತಿ ರಹಸ್ಯ

ಅಪಾರ್ಟ್​ಮೆಂಟೇ ಡ್ರಗ್ಸ್ ಸ್ಟೋರ್, ದೇವರ ಫೋಟೊಗಳ ಫ್ರೇಮ್​ನಲ್ಲಿಟ್ಟು ಮಾರಾಟ: ಬಯಲಾಯ್ತು ಜೋಡಿಯ ಮೋಜು-ಮಸ್ತಿ ರಹಸ್ಯ

ಗಣಪತಿ ಶರ್ಮಾ
|

Updated on: Mar 05, 2026 | 7:19 AM

Share

ಐಷಾರಾಮಿ ಜೀವನ ನಡೆಸುತ್ತಿದ್ದ ಅಂತಾರಾಜ್ಯ ಡ್ರಗ್ ಪೆಡ್ಲರ್‌ಗಳಾದ ಅಶ್ವಿನ್ ಮತ್ತು ಮೊಬೀನಾ ಇತ್ತೀಚೆಗೆ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಇವರು ದೇವರ ಫೋಟೋ ಫ್ರೇಮ್‌ನಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ಮಾಡುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ, ಡ್ರಗ್ಸ್ ಮಾರಾಟ ದಂಧೆ ನಡೆಸುತ್ತಿದ್ದರು. ಸಿಸಿಬಿ ನಾರ್ಕೋಟಿಕ್ಸ್ ತಂಡವು ಇಬ್ಬರನ್ನೂ ಬಂಧಿಸಿದ ಬೆನ್ನಲ್ಲೇ ರಹಸ್ಯಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ.

ಬೆಂಗಳೂರು, ಮಾರ್ಚ್ 5: ಅಂತಾರಾಜ್ಯ ಡ್ರಗ್ ಪೆಡ್ಲರ್ ಜೋಡಿ ಅಶ್ವಿನ್ ಮತ್ತು ಮೊಬೀನಾರನ್ನು ಸಿಸಿಬಿ ನಾರ್ಕೋಟಿಕ್ಸ್ ತಂಡವು ಬಂಧಿಸಿದ್ದು, ಇದರ ಬೆನ್ನಲ್ಲೇ ಒಂದೊಂದೇ ರೋಚಕ ರಹಸ್ಯಗಳು ಹೊರಬರತೊಡಗಿವೆ. ಈ ಜೋಡಿ ಐಷಾರಾಮಿ ಜೀವನ ನಡೆಸುತ್ತಿದ್ದು, ಪದೇ ಪದೇ ವಿಮಾನದಲ್ಲಿ ಪ್ರಯಾಣಿಸುತ್ತಾ ಮೋಜು-ಮಸ್ತಿಯಲ್ಲಿ ತೊಡಗಿರುತ್ತಿದ್ದರು. ಇದೀಗ ಇವರ ಶೋಕಿ ಜೀವನವನ್ನು ಸಿಸಿಬಿ ಬಯಲು ಮಾಡಿದೆ. ಕೇರಳದ ಅಶ್ವಿನ್ ಮತ್ತು ಮೊಬೀನಾ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಓದಿದ್ದರು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇವರು, ಕಳೆದ ವರ್ಷ ಥೈಲ್ಯಾಂಡ್‌ನ ವಿನ್ಸೆಂಟ್ ಪರಿಚಯದ ನಂತರ ತಮ್ಮ ದಂಧೆಯನ್ನು ವಿಸ್ತರಿಸಿದ್ದರು. ವಿನ್ಸೆಂಟ್ ಆಮಿಷವೊಡ್ಡಿ ಹೆಚ್ಚಿನ ಹಣಕ್ಕಾಗಿ ಕಾಸ್ಟ್ಲಿ ಡ್ರಗ್ ಪೆಡ್ಲಿಂಗ್ ಮಾಡಲು ಪ್ರೇರೇಪಿಸಿದ್ದ. ಥೈಲ್ಯಾಂಡ್‌ನಿಂದ ಕೇರಳ ಪ್ರವಾಸಿಗರ ಮೂಲಕ ಡ್ರಗ್ಸ್ ಪಾರ್ಸೆಲ್‌ಗಳನ್ನು ಬೆಂಗಳೂರಿಗೆ ತರಿಸಿಕೊಳ್ಳುತ್ತಿದ್ದರು.

ಅಪಾರ್ಟ್‌ಮೆಂಟ್ ಅನ್ನು ಡ್ರಗ್ಸ್ ಸಂಗ್ರಹಣಾ ಕೇಂದ್ರವನ್ನಾಗಿ ಮಾಡಿಕೊಂಡಿದ್ದ ಈ ಜೋಡಿ, ಡ್ರಗ್ಸ್ ವಾಸನೆ ಹೊರಗೆ ಬರದಂತೆ ನಾಯಿಗಳ ಮೂತ್ರವನ್ನು ಸ್ವಚ್ಛಗೊಳಿಸುತ್ತಿರಲಿಲ್ಲ ಎಂಬ ವಿಚಿತ್ರ ಸಂಗತಿ ಬೆಳಕಿಗೆ ಬಂದಿದೆ. ದೇವರ ಫೋಟೋ ಫ್ರೇಮ್‌ಗಳಲ್ಲಿ ಡ್ರಗ್ಸ್ ಅಡಗಿಸಿಟ್ಟು ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾರಾಟ ಮಾಡುತ್ತಿದ್ದರು. ಸುಮಾರು ಎರಡು ತಿಂಗಳುಗಳ ಕಾಲ ಇವರ ಚಟುವಟಿಕೆಗಳನ್ನು ಗಮನಿಸುತ್ತಿದ್ದ ಸಿಸಿಬಿ ನಾರ್ಕೋಟಿಕ್ಸ್ ತಂಡವು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 10 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸಮೇತ ಅಶ್ವಿನ್ ಮತ್ತು ಮೊಬೀನಾರನ್ನು ಬಂಧಿಸಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us