ಮಾರ್ಚ್ 6ರಂದು ರಿಲೀಸ್ ಆಗಲಿದೆ ಮಕ್ಕಳ ಸಿನಿಮಾ ‘ಪಂಚ ರತ್ನಗಳು’
ಮಕ್ಕಳ ಕಥೆ ಇರುವ ‘ಪಂಚ ರತ್ನಗಳು’ ಸಿನಿಮಾ ಈ ವಾರ (ಮಾರ್ಚ್ 6) ರಿಲೀಸ್ ಆಗುತ್ತಿದೆ. ಪ್ರಥಮ್, ಯಶಸ್, ವಿಹಾನ್, ತನ್ವಿ ಹಾಗೂ ಆಧ್ಯ ಈ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದಾರೆ. ಪಂಚಭೂತಗಳ ಥೀಮ್ನಲ್ಲಿ 5 ಪಾತ್ರಗಳನ್ನು ಈ ಸಿನಿಮಾದಲ್ಲಿ ನಿರ್ದೇಶಕರು ತೋರಿಸಲಿದ್ದಾರೆ.

ಮಾಸ್, ಕಮರ್ಷಿಯಲ್ ಸಿನಿಮಾಗಳ ನಡುವೆ ಅಲ್ಲೊಂದು ಇಲ್ಲೊಂದು ಮಕ್ಕಳ ಚಿತ್ರಗಳು (Children Movie) ಬರುತ್ತವೆ. ಕನ್ನಡದಲ್ಲಿ ಈಗ ‘ಪಂಚ ರತ್ನಗಳು’ ಎಂಬ ಮಕ್ಕಳ ಸಿನಿಮಾ ತಯಾರಾಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ನಡೆಯಿತು. ಪ್ರದರ್ಶಕ ಹಾಗೂ ವಿತರಕ ಜಿ.ಆರ್. ನಾರಾಯಣ ಗೌಡ ಅವರು ‘ಶ್ರೀ ಕ್ಯಾಲಮ್ಮ ದೇವಿ ಫಿಲ್ಮ್ಸ್’ ಬ್ಯಾನರ್ ಮೂಲಕ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಮಾರ್ಚ್ 6ರಂದು ‘ಪಂಚ ರತ್ನಗಳು’ (Pancha Ratnagalu) ಸಿನಿಮಾ ರಿಲೀಸ್ ಆಗಲಿದೆ.
ಒಂದಷ್ಟು ಸಿನಿಮಾಗಳಲ್ಲಿ ನಟನೆ ಮಾಡಿರುವ ಮೈಸೂರು ಮೂಲದ ಗಾಯಕ ಗೌತಮ್ ಆರ್. ಅವರು ‘ಪಂಚ ರತ್ನಗಳು’ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಮೂರು ಹಾಡುಗಳಿಗೆ ಸಾಹಿತ್ಯ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಈ ಸಿನಿಮಾದ ಪಾತ್ರವರ್ಗದಲ್ಲಿ ಬಾಲ ಕಲಾವಿದರಾದ ಪ್ರಥಮ್, ಯಶಸ್, ವಿಹಾನ್, ತನ್ವಿ, ಆಧ್ಯ ಪ್ರಥಮ್ ನಟಿಸಿದ್ದಾರೆ.
ತಾಯಿ ಪಾತ್ರದಲ್ಲಿ ಬಿಂದೂ ಆಚಾರ್ಯ, ಶಿಕ್ಷಣ ಸಚಿವರ ಪಾತ್ರದಲ್ಲಿ ಆನಂದ್ ನಗರ್ಕರ್ ಅವರು ಅಭಿನಯಿಸಿದ್ದಾರೆ. ಪ್ರಣವ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅನಿಲ್ ಕಶ್ಯಪ್ ಅವರ ಛಾಯಾಗ್ರಹಣ , ಅಭಿಷೇಕ್ ಅವರ ಸಂಕಲನ ಈ ಸಿನಿಮಾಗಿದೆ. ಅಜಿತ್ ಅವರು ಸಿಂಕ್ ಸೌಂಡ್ ಕಾರ್ಯ ನಿರ್ವಹಿಸಿದ್ದಾರೆ. ವೆಂಕಟ್ ಗೌಡ ಅವರು ಸುಮಾರು 60 ಚಿತ್ರಮಂದಿರಗಳಲ್ಲಿ ಈ ಸಿನಿಮಾ ರಿಲೀಸ್ ಮಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಗೌತಮ್ ಆರ್. ಅವರು ಮಾತನಾಡಿದರು. ‘ಇಂದಿನ ಸಮಾಜದ ದೈನಂದಿಕ ಸಮಸ್ಯೆಗಳನ್ನು ದೊಡ್ಡವರು ಗಮನಕ್ಕೆ ತೆಗೆದುಕೊಳ್ಳದೇ ಇರುವುದರಿಂದ, ವಿಷಯವು ಸರ್ಕಾರಕ್ಕೆ ತಲುಪದೇ ಇರುವುದರಿಂದ ಯಾರನ್ನು ದೂರುವುದರಿಂದ ಪ್ರಯೋಜನವಿಲ್ಲ. ಇದನ್ನು ಅರಿತ ಐದು ಮಕ್ಕಳು ನಾವೇ ಮುಂದಾಗಿ ಸರಿಪಡಿಸುವ ತೀರ್ಮಾನಕ್ಕೆ ಬರುತ್ತಾರೆ’ ಎಂದು ಕಥೆಯ ಎಳೆಯನ್ನು ಅವರು ವಿವರಿಸಿದರು.
ಇದನ್ನೂ ಓದಿ: ಮಾರ್ಚ್ 19ಕ್ಕೆ ‘ಟಾಕ್ಸಿಕ್’ ಬದಲು ರಿಲೀಸ್ ಆಗಲಿದೆ ‘ಲವ್ ಮಾಕ್ಟೇಲ್ 3’ ಸಿನಿಮಾ
‘ಪ್ರಾರಂಭದಲ್ಲಿ ಪಂಚಭೂತಗಳು ಎಂದು ಟೈಟಲ್ ಇಡಲಾಗಿತ್ತು. ವಿತರಕ ವೆಂಕಟ್ ಗೌಡ ಅವರ ಸಲಹೆ ಮೇರೆಗೆ ಪಂಚ ರತ್ನಗಳು ಎಂದು ಶೀರ್ಷಿಕೆ ಬದಲಾಯಿಸಿದೆವು. ಪ್ರಕೃತಿಯ ಅಂಶಗಳಾದ ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಇವುಗಳನ್ನು ಭುವನ್, ಜೀವಿತಾ, ಜ್ಯೋತಿ, ಅನಿಲ್ ಹಾಗೂ ಆಕಾಶ್ ಪಾತ್ರದ ಹೆಸರಿನಲ್ಲಿ ಬಿಂಬಿಸಲಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ’ ಎಂದು ನಿರ್ದೇಶಕರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




