ಪಾಕ್ ನಟನ ಬಾಲಿವುಡ್ ಸಿನಿಮಾ ಬಿಡುಗಡೆಗೆ ಅವಕಾಶ ನಿರಾಕರಣೆ
Abir Gulaal movie: ಪಹಲ್ಗಾಮ್ ದಾಳಿಯ ಬೆನ್ನಲ್ಲೆ ಕೇಂದ್ರ ಸರ್ಕಾರವು ಪಾಕಿಸ್ತಾನದ ವಿರುದ್ಧ ಕೆಲ ರಾಜತಾಂತ್ರಿಕ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. ಕೆಲ ನಿಷೇಧಗಳನ್ನು, ನಿರ್ಬಂಧಗಳನ್ನು ಹೇರಲು ಮುಂದಾಗಿದೆ. ಅದರ ಭಾಗವಾಗಿ, ಪಾಕಿಸ್ತಾನದ ಜನಪ್ರಿಯ ನಟ ಫಹಾದ್ ಖಾನ್ ನಟಿಸಿದ್ದ ಬಾಲಿವುಡ್ ಸಿನಿಮಾ ಒಂದರ ಬಿಡುಗಡೆಗೆ ಅವಕಾಶ ನಿರಾಕರಿಸಲಾಗಿದೆ.

ಪಾಕಿಸ್ತಾನ (Pakistan) ಕೃಪಾಪೋಷಿತ ಉಗ್ರರು ಇತ್ತೀಚೆಗಷ್ಟೆ ಕಾಶ್ಮೀರ್ ಪಹಲ್ಗಾಮ್ (Pahalgam) ನಲ್ಲಿ ನಡೆಸಿರುವ ಹೇಡಿ ಕೃತ್ಯದಲ್ಲಿ 26 ಮಂದಿ ಜೀವ ಕಳೆದುಕೊಂಡಿದ್ದಾರೆ. ಕರ್ನಾಟಕದ ಇಬ್ಬರು ಈ ದಾಳಿಯಲ್ಲಿ ನಿಧನ ಹೊಂದಿದ್ದಾರೆ. ಈ ಆಘಾತದ ಬಳಿಕ ಕೇಂದ್ರ ಸರ್ಕಾರವು ಪಾಕಿಸ್ತಾನದ ವಿರುದ್ಧ ಕೆಲ ರಾಜತಾಂತ್ರಿಕ ದಿಟ್ಟ ಹೆಜ್ಜೆಗಳನ್ನು ತೆಗೆದುಕೊಳ್ಳಲು ಮುಂದಾಗಿದೆ. ತೆರೆಮರೆಯಲ್ಲಿ, ಪಾಕ್ಗೆ ದಿಟ್ಟ ಸಶಸ್ತ್ರ ಪ್ರತ್ಯುತ್ತರದ ತಯಾರಿ ನಡೆದಿರುವ ಸುದ್ದಿಗಳೂ ಇವೆ. ಭಾರತದಲ್ಲಿ ಬಿಡುಗಡೆ ಆಗಲಿದ್ದ ಪಾಕಿಸ್ತಾನದ ನಟನ ಸಿನಿಮಾ ಒಂದಕ್ಕೆ ಇದೀಗ ಅವಕಾಶ ನಿರಾಕರಿಸಲಾಗಿದೆ.
ಈ ಹಿಂದೆ ಕೆಲ ಬಾಲಿವಡ್ ಸಿನಿಮಾಗಳಲ್ಲಿ ನಟಿಸಿರುವ ಪಾಕಿಸ್ತಾನದ ಖ್ಯಾತ ನಟ ಫಹಾದ್ ಖಾನ್ ನಟನೆಯ ಹಿಂದಿ ಸಿನಿಮಾ ‘ಅಬಿರ್ ಗುಲಾಲ್’ ಮೇ 9ರಂದು ಬಿಡುಗಡೆ ಆಗಲಿಕ್ಕಿತ್ತು. ಈ ಸಿನಿಮಾನಲ್ಲಿ ವಾಣಿ ಕಪೂರ್ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಇದೀಗ ಈ ಸಿನಿಮಾ ಭಾರತದಲ್ಲಿ ಬಿಡುಗಡೆಗೆ ಅವಕಾಶವನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆ ನಿರಾಕರಿಸಿದೆ ಎನ್ನಲಾಗುತ್ತಿದೆ.
ಫಹಾದ್ ಖಾನ್ ಪಾಕಿಸ್ತಾನ ಮೂಲದ ನಟರಾಗಿದ್ದು, ಇವರು ‘ಅಬಿರ್ ಗುಲಾಲ್’ ಸಿನಿಮಾನಲ್ಲಿ ನಾಯಕರಾಗಿ ನಟಿಸಿದ್ದಾರೆ. ಈ ಹಿಂದೆ ಇವರು ರಣ್ಬೀರ್ ಕಪೂರ್, ಅನುಷ್ಕಾ ಶರ್ಮಾ ನಟನೆಯ ‘ಏ ದಿಲ್ ಹೇ ಮುಷ್ಕಿಲ್’, ಸೋನಂ ಕಪೂರ್ ನಟನೆಯ ‘ಖೂಬ್ಸೂರತ್’, ಕರೀನಾ ನಟನೆಯ ‘ಕಪೂರ್ ಆಂಡ್ ಸನ್ಸ್’ ಇನ್ನೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. 2016ರ ಬಳಿಕ ಪಾಕಿಸ್ತಾನದ ನಟರು ಭಾರತದ ಸಿನಿಮಾಗಳಲ್ಲಿ ನಟಿಸದಂತೆ ನಿಷೇಧ ಹೇರಲಾಗಿತ್ತು. ಆದರೆ ಇತ್ತೀಚೆಗೆ ಈ ತೆರವಿಗೆ ತಡೆ ಸಿಕ್ಕಿತ್ತು, ಹಾಗಾಗಿ ಫಹಾದ್ ಖಾನ್ ‘ಅಬಿರ್ ಗುಲಾಲ್’ ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದರು.
ಇದನ್ನೂ ಓದಿ:30 ವರ್ಷದ ಬಳಿಕ ‘ಕೂಲಿ’ ಸಿನಿಮಾಗಾಗಿ ಒಂದಾದ ಆಮಿರ್ ಖಾನ್-ರಜನಿಕಾಂತ್?
ಆದರೆ ಇತ್ತೀಚೆಗೆ ನಡೆದ ಪುಹಲ್ಗಾಮ್ ದಾಳಿಯ ಬೆನ್ನಲ್ಲೆ ಪಾಕಿಸ್ತಾನ ನಟ ನಟಿಸಿರುವ ಕಾರಣಕ್ಕೆ ‘ಅಬಿರ್ ಗುಲಾಲ್’ ಸಿನಿಮಾ ಬಿಡುಗಡೆಗೆ ಅವಕಾಶ ನಿರಾಕರಿಸಲಾಗಿದೆ. ಫಹಾದ್ ಹೊರತಾಗಿ ಸಿನಿಮಾದಲ್ಲಿ ಕೆಲಸ ಮಾಡಿರುವ ಬಹುತೇಕ ಎಲ್ಲರೂ ಭಾರತೀಯರೇ ಆಗಿದ್ದಾರೆ. ಸಿನಿಮಾದ ನಾಯಕಿ ವಾಣಿ ಕಪೂರ್, ಬಾಲಿವುಡ್ನ ‘ಬೇಫಿಕ್ರೆ’, ‘ವಾರ್’, ತಮಿಳಿನ ‘ಆಹಾ ಕಲ್ಯಾಣಂ’, ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ವಿವಾದಕ್ಕೆ ಸಿಲುಕಿರುವ ‘ಅಬಿರ್ ಗುಲಾಲ್’ ಸಿನಿಮಾವನ್ನು ಆರತಿ ಎಸ್ ಬಾಗ್ಡಿ ನಿರ್ದೇಶನ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆಯಷ್ಟೆ ಪಾಕಿಸ್ತಾನದಲ್ಲೇ ನಿರ್ಮಾಣವಾಗಿದ್ದ ‘ಮೌಲಾ ಜಟ್’ ಸಿನಿಮಾ ಭಾರತದಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾನಲ್ಲಿ ಫಹಾದ್ ಖಾನ್ ಮತ್ತು ಮಹೀರಾ ಖಾನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಹಲವು ವರ್ಷಗಳ ಬಳಿಕ ಭಾರತದಲ್ಲಿ ಬಿಡುಗಡೆ ಆದ ಸಿನಿಮಾ ಎಂಬ ಹೆಗ್ಗಳಿಕೆಯನ್ನು ‘ಮೌಲಾ ಜಟ್’ ಸಿನಿಮಾ ಗಳಿಸಿಕೊಂಡಿತು. ಪಂಜಾಬ್ ಪ್ರಾಂತ್ಯದಲ್ಲಿ ಈ ಸಿನಿಮಾ ತುಸು ಹಣ ಗಳಿಕೆಯನ್ನು ಮಾಡಿತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ